ಜಾತಿ ಜನಗಣತಿ ವಿಷಯದಲ್ಲಿ ಬಿಜೆಪಿಯನ್ನು ಏಕೆ ನಂಬಲು ಸಾಧ್ಯವಿಲ್ಲ?
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂಬರುವ ಜನಗಣತಿಯ ಜೊತೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿದೆ. ಸಾಮಾನ್ಯ ಜನಗಣತಿಯೇ ಈಗಾಗಲೇ ನಾಲ್ಕು ವರ್ಷ ತಡವಾಗಿದೆ ಎಂಬುದು ಬೇರೆ ಮಾತು.
ರಾಹುಲ್ ಗಾಂಧಿಯವರು ಜಾತಿ ಗಣತಿಯ ಬಗ್ಗೆ ಪ್ರಸ್ತಾಪಿಸಿದಾಗ ಮತ್ತು ಆ ವಿಷಯವಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿರಂತರ ಒತ್ತಡ ಹೇರಿದಾಗ, ಇದೇ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು ಮತ್ತು ಅಪಹಾಸ್ಯ ಮಾಡಿತ್ತು. ಜಾತಿ ಗಣತಿಗೆ ಆಗ್ರಹಿಸುವವರು ದೇಶ ವಿರೋಧಿಗಳು, ದೇಶ ಒಡೆಯಲು ಬಯಸುವವರು ಎಂದೆಲ್ಲ ಬೊಬ್ಬೆ ಹಾಕಿತು. ಆದರೆ ಅಂತಹ ಬಿಜೆಪಿ ದಿಢೀರನೆ ಯೂಟರ್ನ್ ತೆಗೆದುಕೊಂಡಿತು.
ರಾಹುಲ್ ಗಾಂಧಿಯವರ ‘ಜಿತ್ನಿ ಅಬಾದಿ ಉತ್ನಾ ಹಕ್’ ಘೋಷಣೆಯೇ ಬಿಜೆಪಿಯಲ್ಲಿ ಭಯ ಹುಟ್ಟಿಸಿದ ಹಾಗಿದೆ. ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾಗಿ ಸೇರಬೇಕಾದದ್ದು ಇದೇ, ಮತ್ತದು ಅವರಿಗೆ ಸೇರಬೇಕು ಎಂಬ ಜಾಗೃತಿಯನ್ನು ರಾಹುಲ್ ಅವರ ಈ ಘೋಷಣೆ ತಂದಿದೆ. ಜನರ ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪನ್ಮೂಲಗಳ ನ್ಯಾಯಯುತ ವಿತರಣೆ ಆಗಬೇಕೆಂಬ ನಿಟ್ಟಿನ ಒಂದು ಚಳವಳಿಯನ್ನೇ ರಾಹುಲ್ ಅವರ ಈ ಘೋಷಣೆ ಹುಟ್ಟುಹಾಕಿದೆ.
ಅಂಚಿನಲ್ಲಿರುವ ಸಮುದಾಯಗಳಲ್ಲಿ, ವಿಶೇಷವಾಗಿ ಒಬಿಸಿಗಳಲ್ಲಿ ಸಂಪನ್ಮೂಲಗಳ ಸಮಾನ ಹಂಚಿಕೆ ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜಾತಿ ಜನಗಣತಿಗೆ ರಾಹುಲ್ ಗಾಂಧಿ ತೀವ್ರವಾಗಿ ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್‌ಗೆ ನಿಜವಾಗಿಯೂ ಹಿಂದುಳಿದ ವರ್ಗಗಳಿಗೆ ಅವರ ಹಕ್ಕುಗಳನ್ನು ನೀಡುವ ಮನಸ್ಸಿದೆಯೆ? ಇದು ಈಗಲೂ ಬಗೆಹರಿಯದ ಅನುಮಾನವಾಗಿಯೇ ಉಳಿಯುತ್ತದೆ.
ಇತ್ತೀಚಿನ ವರ್ಷಗಳಲ್ಲಂತೂ ಬಿಜೆಪಿ ಒಬಿಸಿಗಳನ್ನು ತನಗೆ ಲಾಭ ತರಬಲ್ಲ ಒಂದು ಮತಬ್ಯಾಂಕ್ ಎಂಬಂತೆ ನೋಡುತ್ತಿದೆ ಮತ್ತು ಅದಕ್ಕಾಗಿ ಒಬಿಸಿಯನ್ನು ಅಧಿಕಾರಕ್ಕೇರಿಸುತ್ತಿದೆ. ಹಾಗಾದರೆ, ಬಿಜೆಪಿ ಹಿಂದುಳಿದ ಜಾತಿಗಳ ಮತಗಳನ್ನು ಒಡೆಯುವ ಮೂಲಕ ಚುನಾವಣಾ ಲಾಭ ಪಡೆಯಲು ಪ್ರಯತ್ನಿಸುತ್ತಿದೆಯೆ?
ರಾಜಕೀಯದಲ್ಲಿ ಮೇಲ್ಜಾತಿ ಪ್ರಾಬಲ್ಯದ ವಿರುದ್ಧ ನೇರವಾಗಿ ನಿಲುವು ತೆಗೆದುಕೊಳ್ಳುವ ಮೂಲಕ ಹಿಂದುಳಿದ ವರ್ಗಗಳ ಧ್ವನಿಯಾಗಿ ಹೊರಹೊಮ್ಮಿರುವ ಪಕ್ಷಗಳಿವೆ. ಅಂತಹ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳಿರುವ ಯುಪಿ ಮತ್ತು ಬಿಹಾರದಲ್ಲಿ ಹಿಂದುಳಿದ ಜಾತಿಗಳ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿ ಚುನಾವಣಾ ಲಾಭ ಪಡೆಯಲು ನೋಡುತ್ತಿದೆ.
ಎಸ್‌ಸಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಬಳಸಿಕೊಳ್ಳುವ ಮೂಲಕ ಪರಿಶಿಷ್ಟ ಜಾತಿಗಳನ್ನು ಒಡೆದಂತೆ, ಬಿಜೆಪಿ ಉದ್ದೇಶಪೂರ್ವಕವಾಗಿ ಒಬಿಸಿಯನ್ನು ಕೂಡ ಒಡೆಯಲು ಪ್ರಯತ್ನಿಸುತ್ತಿದೆ.ಒಬಿಸಿಗಳನ್ನು ಒಳ ಜಾತಿಗಳ ನೆಪದಲ್ಲಿ ಒಡೆಯುವುದಕ್ಕೆ ಕೂಡ ಬಿಜೆಪಿ ಅದೇ ತಂತ್ರ ಬಳಸುತ್ತಿದೆ.
ಸಂಖ್ಯೆಯಲ್ಲಿ ದೊಡ್ಡ ಮತ್ತು ಸಣ್ಣ ಒಬಿಸಿ ಗುಂಪುಗಳ ನಡುವೆ ಒಡಕು ಉಂಟುಮಾಡುವ ಮೂಲಕ, ಅವರೊಳಗೇ ಪೈಪೋಟಿ ಸೃಷ್ಟಿಸುತ್ತಿರುವುದು ಬಿಜೆಪಿ ಮಾಡುತ್ತಿರುವ ನಾಟಕ. ಹೀಗೆ ಮಾಡುವ ಮೂಲಕ, ಅವರೆಲ್ಲ ಒಗ್ಗಟ್ಟಾಗಿ ನಿಲ್ಲುವುದನ್ನು, ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗಾಗಿ ಕೇಳುವುದನ್ನು ತಪ್ಪಿಸಲು ಬಿಜೆಪಿ ಈ ತಂತ್ರ ಬಳಸಿಕೊಳ್ಳುತ್ತಿದೆ. ಈ ವಿಭಜಕ ರಾಜಕೀಯ, ಜಾತಿ ಜನಗಣತಿ ಮತ್ತು ನಿಜವಾದ ಪ್ರಾತಿನಿಧ್ಯಕ್ಕಾಗಿ ಒಗ್ಗಟ್ಟಿನ ಆಗ್ರಹವನ್ನು ದುರ್ಬಲಗೊಳಿಸುವ ಉದ್ದೇಶದ್ದಾಗಿದೆ.
ಪೂರ್ಣ ಮತ್ತು ಪಾರದರ್ಶಕ ಜಾತಿ ಜನಗಣತಿಯಿಂದ ಮಾತ್ರವೇ ಪ್ರತಿಯೊಂದು ಜಾತಿ ತನ್ನ ನ್ಯಾಯಸಮ್ಮತ ಪಾಲನ್ನು ಪಡೆಯುವುದು ಸಾಧ್ಯ. ನಿಜವಾದ ಪ್ರಾತಿನಿಧ್ಯ ಎಲ್ಲಾ ಒಬಿಸಿಗಳ ಸಬಲೀಕರಣಕ್ಕೆ ದಾರಿಯಾಗುತ್ತದೆ.ಆಗ ಅವರು ಪರಸ್ಪರ ಪೈಪೋಟಿಗೆ ಬೀಳುವುದಿಲ್ಲ. ಪರಸ್ಪರ ವಿರುದ್ಧವಾಗಿ ಹೋರಾಡುವುದಿಲ್ಲ. ಹಾಗೆ ಅವರೊಳಗೆ ಒಡಕೇ ಇಲ್ಲದಿದ್ದರೆ, ಅವರೆಲ್ಲ ಒಂದಾಗಿಬಿಟ್ಟರೆ ಅದು ತನಗೆ ಅಪಾಯಕಾರಿ ಎಂಬುದು ಬಿಜೆಪಿಯ ಯೋಚನೆ. ಅದಕ್ಕಾಗಿಯೇ ಬಿಜೆಪಿ ಜಾತಿ ಜನಗಣತಿಗೆ ಹೆದರುತ್ತದೆ.
ಜಾತಿ ಗಣತಿಯಿಂದಾಗಿ, ತಾನು ಅಧಿಕಾರದ ಮೇಲಿನ ಹಿಡಿತ ಕಳೆದುಕೊಳ್ಳುವುದರ ಬಗೆಗಿನ ಭಯ ಬಿಜೆಪಿಯನ್ನು ಕಾಡುತ್ತಿದೆ.
ಬಿಜೆಪಿ ಸೇರಿದಂತೆ ಇಡೀ ಸಂಘ ಪರಿವಾರ ಮಂಡಲ್ ರಾಜಕೀಯವನ್ನು ವಿರೋಧಿಸುತ್ತದೆ. ಒಬಿಸಿ ಗುರುತನ್ನು ಅದು ನಿರಾಕರಿಸುತ್ತದೆ. ಜಾತಿ ಆಧಾರಿತ ಮೀಸಲಾತಿಗಳನ್ನು ವಿರೋಧಿಸುವ ದೀರ್ಘ ಇತಿಹಾಸವೇ ಅದಕ್ಕಿದೆ.
ವಿ.ಪಿ. ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರಕಾರ ಒಬಿಸಿ ಮೀಸಲಾತಿ ಕುರಿತು ಮಂಡಲ್ ಸಮಿತಿ ಶಿಫಾರಸುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಇದೇ ಸಂಘ ಪರಿವಾರ ವಿರೋಧಿಸಿತ್ತು. ಅಲ್ಲಿಂದ ಹಿಡಿದು, ಕಡೆಗೆ ಬೆಂಬಲ ಹಿಂದೆಗೆದುಕೊಳ್ಳುವವರೆಗೆ ಅದು ರಾಜಕೀಯ ಮಾಡಿತು. ಹಿಂದುತ್ವದ ಕೋಮು ರಾಜಕೀಯದ ಮೂಲಕ ಮಂಡಲ್‌ಗೆ ವಿರುದ್ಧವಾಗಿ ಅದು ಮಂದಿರ ರಾಜಕೀಯವನ್ನು ತನ್ನ ಅಜೆಂಡಾ ಆಗಿ ಬಳಸಿತು. ಹೀಗೆ, ಹಿಂದುಳಿದ ವರ್ಗಗಳು ತಮ್ಮ ಹಕ್ಕನ್ನು ಪಡೆಯುವುದನ್ನು ಬಿಜೆಪಿ ಯಾವಾಗಲೂ ವಿರೋಧಿಸುತ್ತಲೇ ಬಂದಿದೆ.
1994ರಲ್ಲಿ ಆಗಿನ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮಧ್ಯಪ್ರದೇಶದಲ್ಲಿ ಒಬಿಸಿಗಳಿಗೆ ಶೇ. 14 ಮೀಸಲಾತಿಯನ್ನು ಜಾರಿಗೆ ತಂದರು. 2002-2003ರಲ್ಲಿ ಅವರ ಕಾಂಗ್ರೆಸ್ ನೇತೃತ್ವದ ಸರಕಾರ ಒಬಿಸಿ ಮೀಸಲಾತಿಯನ್ನು ಶೇ. 27ಕ್ಕೆ ಹೆಚ್ಚಿಸಲು ಪ್ರಯತ್ನಿಸಿತು. ಆದರೆ ಕಾನೂನಾತ್ಮಕ ಅಡಚನೆಗಳಿಂದಾಗಿ ಅದು ಕೈಗೂಡದೆ, ಆ ಪ್ರಸ್ತಾವ ಹಾಗೆಯೇ ಸ್ಥಗಿತಗೊಂಡಿತು.
2003ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಸತತವಾಗಿ ಅಲ್ಲಿನ ಸರಕಾರಗಳು ಪೂರ್ಣವಾಗಿ ಶೇ. 27 ಕೋಟಾ ಜಾರಿಗೆ ತರುವಲ್ಲಿ ವಿಫಲವಾಗಿವೆ. ಈ ವಿಷಯ ಈಗ ನ್ಯಾಯಾಂಗ ಪರಿಶೀಲನೆಯಲ್ಲಿದೆ. ವಿಚಾರಣೆಗಳ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಿಜೆಪಿ ನೇತೃತ್ವದ ಸರಕಾರದ ನಿರಂತರ ವಿಳಂಬದ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಲೇ ಇದೆ.
ಸ್ಪಷ್ಟವಾದ ಸಾಂವಿಧಾನಿಕ ಬೆಂಬಲ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಒಬಿಸಿಗಳ ಕಡಿಮೆ ಪ್ರಾತಿನಿಧ್ಯದ ಬಗ್ಗೆ ಗಣನೀಯ ಪುರಾವೆಗಳಿವೆ. ಅದರ ಹೊರತಾಗಿಯೂ, ಬಿಜೆಪಿ ಸರಕಾರ ಒಬಿಸಿಗಳಿಗೆ ಉದ್ಯೋಗಗಳು ಮತ್ತು ಅವಕಾಶಗಳಲ್ಲಿ ಅವರ ನ್ಯಾಯಯುತ ಮತ್ತು ಕಾನೂನುಬದ್ಧ ಪಾಲನ್ನು ನಿರಾಕರಿಸುತ್ತಲೇ ಇದೆ. ಹೀಗಿರುವಾಗ, ಬಿಜೆಪಿಯ ಈ ದಿಢೀರ್ ಯು ಟರ್ನ್, ಅದು ಹೃದಯಪೂರ್ವಕವಾಗಿ ತೆಗೆದುಕೊಂಡ ನಿರ್ಧಾರವಂತೂ ಅಲ್ಲ ಎಂಬುದು ಸ್ಪಷ್ಟ.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಬಿಜೆಪಿ ಏಕೆ ಹಿಂಜರಿಯುತ್ತದೆ?
ಅದಕ್ಕೆ ಒಂದು ಕಾರಣವೆಂದರೆ, ಬಿಜೆಪಿಯ ಪ್ರಮುಖ ಮತಬ್ಯಾಂಕ್ ಯಾವಾಗಲೂ ಮೇಲ್ಜಾತಿಯಾಗಿತ್ತು. ಮಂಡಲ್ ಸಮಿತಿ ಶಿಫಾರಸುಗಳ ಅನುಷ್ಠಾನದ ವಿರುದ್ಧ ಪ್ರತಿಭಟನೆಗಳಲ್ಲಿ ಕೂಡ ಅದೇ ಮೇಲ್ಜಾತಿಯೇ ಮುಂಚೂಣಿಯಲ್ಲಿತ್ತು.
ಇಲ್ಲಿಯವರೆಗೆ, ಆರೆಸ್ಸೆಸ್‌ನ ಆರು ಸರಸಂಘಚಾಲಕರಲ್ಲಿ ಐದು ಮಂದಿ ಬ್ರಾಹ್ಮಣರು ಮತ್ತು ಒಬ್ಬರು ಕ್ಷತ್ರಿಯ ಸಮುದಾಯದವರು. ಇದು ಸಂಘ ಪರಿವಾರದ ನಿಜವಾದ ಬಣ್ಣ ಏನೆಂಬುದನ್ನು ಬಯಲು ಮಾಡುತ್ತದೆ.ಅದು ಮೇಲ್ಜಾತಿ ಪ್ರಾಬಲ್ಯದ ಸಂಘಟನೆ. ಹಿಂದುಳಿದ ವರ್ಗಗಳನ್ನು ಕೇವಲ ಸಾಂಕೇತಿಕತೆಯ ಭಾಗವಾಗಿ ಅದು ಬಳಸುತ್ತದೆ. ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಮೇಲ್ಜಾತಿಗಳ ಮಂದಿಯೇ ಇರುತ್ತಾರೆ.
ಈ.ಡಿ., ಸಿಬಿಐನಂಥ ಕೇಂದ್ರ ತನಿಖಾ ಏಜೆನ್ಸಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆ. ಅದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಎಲ್ಲವನ್ನೂ ತಿರುಗಿಸಲು ಹೇಗೆಲ್ಲ ನಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹೀಗಿರುವಾಗ, ಜನಗಣತಿಯನ್ನು ನ್ಯಾಯಯುತ ರೀತಿಯಲ್ಲಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ.
ಜಾತಿ ಜನಗಣತಿಯ ಡೇಟಾವನ್ನು ಕೂಡ ತಿರುಚುವ ಆಟ ನಡೆದುಬಿಟ್ಟರೆ, ಒಬಿಸಿ ಸಮುದಾಯ ದೊಡ್ಡ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಎಣಿಕೆ ತಪ್ಪಿಸಿದರೆ, ಶಿಕ್ಷಣ, ಉದ್ಯೋಗಗಳು ಮತ್ತು ಕಲ್ಯಾಣ ಯೋಜನೆಗಳಲ್ಲಿ ಸಂಖ್ಯೆಗೆ ಅನುಗುಣವಾದ ಮೀಸಲಾತಿ ತಪ್ಪಿಹೋಗುತ್ತದೆ. ಹಾಗೆ ನ್ಯಾಯಯುತ ಮೀಸಲಾತಿಯನ್ನು ನಿರಾಕರಿಸಿದಾಗ, ಎಲ್ಲವೂ ಹಳಿ ತಪ್ಪುತ್ತದೆ.
ಬಿಹಾರ ಜಾತಿ ಸಮೀಕ್ಷೆ ಮತ್ತು ಅದರಿಂದ ಹೊರಬಂದ ಅಂಶಗಳು ಪ್ರತೀ ಕ್ಷೇತ್ರದಲ್ಲೂ ಮೇಲ್ಜಾತಿಯ ಅತಿಯಾದ ಪ್ರಾತಿನಿಧ್ಯ ಇರುವುದನ್ನು ಬಯಲು ಮಾಡಿದವು. ಅದು ಬಿಜೆಪಿಯನ್ನು ತೀವ್ರ ಮುಜುಗರಕ್ಕೀಡುಮಾಡಿತು.
ಮೇಲ್ಜಾತಿಗಳು ಬಿಜೆಪಿಯ ಪ್ರಮುಖ ಮತಬ್ಯಾಂಕ್ ಆಗಿರುವುದರಿಂದ, ಜಾತಿ ಜನಗಣತಿ ಮೂಲಕ ಹೊರಬೀಳುವ ಇಂತಹ ಸತ್ಯಗಳನ್ನು ಮರೆಮಾಚಲು, ನಿಗ್ರಹಿಸಲು ಬಿಜೆಪಿ ಪ್ರಯತ್ನಿಸದೇ ಇರಲಾರದು ಎಂಬುದು ಈಗ ವ್ಯಕ್ತವಾಗುತ್ತಿರುವ ಅನುಮಾನ. ಡೇಟಾವನ್ನು ತಿರುಚುವ ಮೂಲಕ ಅದು ಒಬಿಸಿಗಳನ್ನು ಒಡೆಯಲು ನೋಡಬಹುದು. ಒಬಿಸಿಯೊಳಗಿನ ಒಂದು ಗುಂಪನ್ನು ಇನ್ನೊಂದು ಗುಂಪಿನ ವಿರುದ್ಧ ಎತ್ತಿಕಟ್ಟಬಹುದು. ಆ ಮೂಲಕ ಅವುಗಳಲ್ಲಿನ ರಾಜಕೀಯ ಒಗ್ಗಟ್ಟನ್ನು ಮುರಿಯಬಹುದು.
ಇದಕ್ಕಿಂತಲೂ ತೀವ್ರ ಪರಿಣಾಮವೆಂದರೆ, ದೋಷದಿಂದ ಕೂಡಿದ ಡೇಟಾ ಮುಂದಿನ ಎಲ್ಲಾ ಯೋಜನೆಗಳಿಗೂ ಆಧಾರವಾಗಿ ಉಳಿದುಬಿಡುವಂತಾಗುತ್ತದೆ. ಆಗ, ನಿಜವಾದ ಹಿಂದುಳಿದ ಸಮುದಾಯಗಳಿಗೆ ಹಂಚಿಕೆಯಾಗಬೇಕಾದ ಸಂಪನ್ಮೂಲಗಳು ಮತ್ತು ಪ್ರಾತಿನಿಧ್ಯ ಸಿಗದೇ ಹೋಗುತ್ತದೆ. ಒಬಿಸಿಗಳು ಅತಿಯಾದ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಸುಳ್ಳು ನಿರೂಪಣೆಯನ್ನು ಮುಂದೆ ಮಾಡುವುದಕ್ಕೂ ಅಂತಹ ದೋಷಪೂರಿತ ಅಂಕಿಅಂಶಗಳನ್ನು ಅದು ಬಳಸುವ ಅಪಾಯವಿದೆ. ಆ ಮೂಲಕ, ಮೇಲ್ಜಾತಿಯವರು ಹಿಂದಿದ್ದಾರೆ ಎಂದು ಬಿಂಬಿಸಿ, ಮೀಸಲಾತಿ ವಿರೋಧಿ ಭಾವನೆಗಳು ಇನ್ನಷ್ಟು ತೀವ್ರವಾಗುವಂತೆ ಅದು ಮಾಡಬಹುದು.
ಜನಗಣತಿ ಡೇಟಾ ಕ್ಷೇತ್ರ ವಿಂಗಡಣೆ ಮತ್ತು ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಮೇಲೂ ಪ್ರಭಾವ ಬೀರುತ್ತದೆ. ತಿರುಚಿ ಕೊಡಲಾಗುವ ತಪ್ಪು ಅಂಕಿಅಂಶಗಳು ಚುನಾಯಿತ ಸಂಸ್ಥೆಗಳಲ್ಲಿ ಒಬಿಸಿ ಪ್ರಾತಿನಿಧ್ಯ ಕಡಿಮೆಯಾಗಲು ಕಾರಣವಾಗಬಹುದು. ಅದರ ಮೂಲಕ ಒಬಿಸಿಗಳ ಪ್ರಜಾಸತ್ತಾತ್ಮಕ ಧ್ವನಿಯನ್ನು ಅಡಗಿಸುವ ವ್ಯವಸ್ಥಿತ ಯತ್ನ ನಡೆಯಬಹುದು.
ಸರಳವಾಗಿ ಹೇಳುವುದಾದರೆ, ತಪ್ಪು ಜಾತಿ ಜನಗಣತಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಾಂವಿಧಾನಿಕ ದೃಷ್ಟಿಕೋನದ ಮೇಲಿನ ವ್ಯವಸ್ಥಿತ ದಾಳಿಯೇ ಆಗುತ್ತದೆ. ಇಂತಹ ಅಪಾಯಕಾರಿ ಸಾಧ್ಯತೆ ಇರುವುದರಿಂದ, ಜಾತಿ ಗಣತಿಯನ್ನು ಬಿಜೆಪಿ ನ್ಯಾಯಯುತವಾಗಿ ಮತ್ತು ಪ್ರಾಮಾಣಿಕವಾಗಿ ನಡೆಸುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕಿದೆ.
ಈ ವಿಷಯದಲ್ಲಿ ಬಿಜೆಪಿಯನ್ನು ನಂಬಬಹುದೇ?
ಇತಿಹಾಸವನ್ನು ನೋಡಿಕೊಂಡರೆ ಮತ್ತು ಈಗಲೂ ಅದರ ಮನಸ್ಥಿತಿಯನ್ನು ಗಮನಿಸಿದರೆ, ಜಾತಿ ಗಣತಿ ವಿಷಯದಲ್ಲಿ ಬಿಜೆಪಿಯನ್ನು ನಂಬುವುದು ಕಷ್ಟವೆಂದೇ ಕಾಣುತ್ತದೆ.