ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಯಾಕೆ ವಿರೂಪಗೊಳಿಸಲಾಗುತ್ತಿದೆಯೆಂದರೆ...
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಿರುವ ಅಪಮಾನ ಪ್ರಕರಣ ಬಹಳಷ್ಟು ಸ್ಪಷ್ಟವಾದ ಸಂದೇಶ ಮತ್ತು ಎಚ್ಚರಿಕೆಯನ್ನು ಹರಡಿದೆ. ಈ ಹಿಂದೆಯೂ ಗಾಂಧಿ ಪ್ರತಿಮೆ ಧ್ವಂಸ ಮಾಡಿ ಜನರನ್ನು ಕೆರಳಿಸುತ್ತಿದ್ದರು. ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿ ಬಸವಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸುವುದು ವಾಡಿಕೆ ಆಗಿತ್ತು. ಮರಾಠವಾಡ ಭಾಗದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಹಾನಿ ಉಂಟು ಮಾಡುತ್ತಿದ್ದರು. ಇವುಗಳೆಲ್ಲವೂ ಬೇಕಿಲ್ಲದ ಸಾಮಾಜಿಕ ಸಂಘರ್ಷಗಳನ್ನು ಬೀದಿಯಲ್ಲಿ ಬಿಡುವ ಉಪಾಯದ ಭಾಗವಾಗಿದೆ. ಹಾಗಾದರೆ, ಇಂತಹ ಘಟನೆಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬ ಯಕ್ಷ ಪ್ರಶ್ನೆಯೂ ಅಡಗಿದೆ. ಈ ಹುಡುಕಾಟದಲ್ಲಿ ಮುಂದುವರಿಯುತ್ತಾ ಹೋದಾಗ ಸಿಗುವ ಉತ್ತರ ಒಂದೇ. ಸಮಾನತೆ ಬಯಸದ ಯಥಾಸ್ಥಿತಿವಾದಿಗಳು; ಜಡತ್ವವಾದಿಗಳು; ಕರ್ಮಠ ಜಾತಿವಾದಿಗಳೇ ಆಗಿರುತ್ತಾರೆ. ಅವರು ಒಂದೇ ಬಗೆಯ ಮುಖವಾಡ ಧರಿಸದೆ ಯಾರ ಜಪ್ತಿಗೂ ಸಿಗದೆ ಮಾನವ ವ್ಯಾಘ್ರ ಸ್ವರೂಪದ ಕೋಮುವಾದಿಗಳಾಗಿದ್ದಾರೆ.
ಹಾಗಾದರೆ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರನ್ನೇ ಏಕೆ ಗುರಿಯಾಗಿಸಿ ಕೊಂಡಿದ್ದಾರೆ? ಅಂದರೆ ಇಂತಹ ಘಟನೆಗಳು ಹೆಚ್ಚು ನಡೆದಾಗ ಸಹಜವಾಗಿ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಬೀದಿಗೆ ಬಂದು ಆಕ್ರೋಶದಿಂದ ಪ್ರತಿಭಟನೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಈ ಕೋಮುವಾದಿ ಜನರು ಅಲ್ಲಲ್ಲಿ ನಿಂತು ‘‘ನೋಡಿ ನಿಮಗಿಂತ ಕೆಳಮಟ್ಟದವರಾಗಿದ್ದರು ಮತ್ತು ನಿಮ್ಮ ಜೀತದಾಳುಗಳಾಗಿದ್ದವರು ನಿಮ್ಮ ಮುಂದೆ ನಿಂತು ಕೂಗುತ್ತಿದ್ದಾರೆ, ಕಾಲಕೆಟ್ಟೋಗಿದೆ’’ ಎಂದು ಗುಸುಗುಸು ಮಾತನಾಡಿ ಇತರರನ್ನು ಅಂಬೇಡ್ಕರ್‌ವಾದಿಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಾರೆ.
ಆದರೆ ನಾವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿಂದಿನ ಚಾರಿತ್ರಿಕ ಘಟನೆಗಳತ್ತ ಮನಸ್ಸು ಹೊರಳಿಸಿದರೆ, ಅಂಬೇಡ್ಕರ್ ಅವರು ಮಹಾಡ್ ಚೌಡರ ಕೆರೆ ಹೋರಾಟ ಮತ್ತು ಕಾಳರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ಒಂದಷ್ಟು ಸಂಚಲನ ಸೃಷ್ಟಿಸಿದ್ದರು. ಇವುಗಳ ವಿರುದ್ಧ ಹಿಂದೂಗಳ ಸಂಘಟಿತ ಪ್ರಹಾರ ಕಂಡು ತಮ್ಮ ಸಾಮಾಜಿಕ ಚಳವಳಿಯ ದಿಕ್ಕನ್ನೇ ಬದಲಿಸುವ ಮೂಲಕ ಒಂದು ಪ್ರಜಾಸತ್ತಾತ್ಮಕ ಸ್ವರೂಪ ಹೋರಾಟ ಕಟ್ಟಲು ಮುಂದಾದರು. ಅಂದರೆ ಪ್ರತಿಮೆ, ಪುತ್ಥಳಿ, ದೇವಸ್ಥಾನಗಳಲ್ಲಿ ತಮ್ಮನ್ನು ಕಾಣಬೇಕೆಂಬ ಹಂಬಲವನ್ನು ಸಾರಸಗಟಾಗಿ ತಿರಸ್ಕರಿಸಿ, ರಕ್ತರಹಿತ ಹೋರಾಟ ಮೂಲಕ ಪ್ರಜಾ ಮೌಲ್ಯಗಳನ್ನು ಧಾರಣ ಮಾಡುವ ಸಂಕಲ್ಪ ಮಾಡಿದ್ದರು. ಅದರಂತೆಯೇ ಸಂವಿಧಾನ ರಚನಾ ಹೊಣೆಗಾರಿಕೆಗಳನ್ನು ನಿರ್ವಂಚನೆಯಿಂದ ನಿರ್ವಹಿಸಿ, ಭಾರತೀಯರಲ್ಲಿರುವ ಭಿನ್ನ ಭಿನ್ನ ವೈರುಧ್ಯಗಳನ್ನು ಸಾಂಘಿಕವಾಗಿ ಅವುಗಳೆಲ್ಲವನ್ನೂ ಕ್ರೋಡೀಕರಿಸಿ ಭಾರತೀಯತ್ವದಡಿ ಒಂದು ಮಾಡಿರುವ ಉದಾಹರಣೆಗಳಿವೆ.
ಹಾಗಾದರೆ, ಅಂಬೇಡ್ಕರ್ ಅಪಮಾನಿಸುವ ಸಂಕೇತವೇ? ಖಂಡಿತಾ ಇಲ್ಲ. ಅಂದು ಕಾಂಗ್ರೆಸ್ ಮತ್ತು ಸಮಾಜವಾದಿ ಹಾಗೂ ಸಮತಾವಾದಿ ಪಕ್ಷಗಳ ಕಾರ್ಯಕರ್ತರು ಈ ದೇಶವನ್ನು ಮುನ್ನಡೆಸಲು ಬೇಕಾದ ಮಣ್ಣಿನ ಮಕ್ಕಳ ಕಾಯ್ದೆಯ ಅಡಿಯಲ್ಲಿ ಅಭಿವೃದ್ಧಿ ಹೊಂದಲು ಅಭಿಮತಿಸುತ್ತಿದ್ದರು. ಆವಾಗಲೂ ಹಿಂದುತ್ವದ ವಿಷಜಂತುಗಳು ಅಲ್ಲಲ್ಲಿ ಗುಟುರು ಹಾಕುತ್ತಾ ಸಮಯಕ್ಕಾಗಿ ಕಾಯುತ್ತಾ ಬಂದವರು. ಅವರಂತೂ ತಮ್ಮ ತಾತ್ವಿಕ ಬದ್ಧತೆಯನ್ನು ಯಾರಿಗೂ ಮಾರಿಕೊಳ್ಳುವ ದುಸ್ಸಾಹಸಕ್ಕೆ ಹೋಗಲಿಲ್ಲ. ಆದುದರಿಂದ, ಅವರೆಲ್ಲರೂ ಎಲ್ಲಾ ರಂಗಗಳಲ್ಲೂ ನಿಧಾನವಾಗಿ ತೆವಳುತ್ತಾ, ಸಂಘಟಿತರಾಗಿ ಬಲಾಢ್ಯರಾಗಿದ್ದಾರೆ. ಮೊದಲ ಕಾರಣವೆಂದರೆ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ರೈತ, ಕಾರ್ಮಿಕ ಸಂಘಟನೆಗಳು, ಮಹಿಳಾ ಚಳವಳಿಗಳೆಲ್ಲವೂ ತಮ್ಮ ಸ್ವಾರ್ಥಕ್ಕೆ ಬದುಕುತ್ತಾ ವಿಮುಖವಾಗುತ್ತಿವೆ. ಇವುಗಳೆಲ್ಲವೂ ಮುಂದಿನ ತಲೆಮಾರಿನ ಜನರ ಬಗ್ಗೆ ಕಿಂಚಿತ್ತೂ ಯೋಚಿಸದವರ ಫಲಶೃತಿಯಂಬಂತಿವೆ.
ಇಂದು ಅಹಿಂದ ವರ್ಗಗಳಲ್ಲಿ ವಿದ್ಯಾವಂತರು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದ್ದರೂ ಅವರೊಳಗೆ ಈ ಹಿಂದುತ್ವ ರೋಗಿಷ್ಟರು ನುಸುಳಿಕೊಂಡು ಸ್ಥಾನ ಪಡೆದಿದ್ದಾರೆ. ಈ ಕೋಮುವಾದಿ ಮನಸ್ಸುಗಳು ಸಕ್ರಿಯವಾಗಿ ಭಾಗವಹಿಸಿ ಮೋಡಿ ಮಾಡುವ ಮೂಲಕ ಯುವ ಜನತೆಯನ್ನು ಧರ್ಮದ ಅಫೀಮು ತಿನ್ನಿಸಿ ಕುಲಗೆಡಿಸಿದ್ದಾರೆ. ಅವಿದ್ಯಾವಂತರು ತುಂಬಿದ್ದ ಭಾರತದಲ್ಲಿ ಅವರು ಹೆಚ್ಚು ಕಡಿಮೆ ಸೋತಿದ್ದರು. ಆದರೆ ವಿದ್ಯಾವಂತರು ತುಂಬಿರುವ ಭಾರತದಲ್ಲಿ ಮೆರೆದಾಡುತ್ತಿದ್ದಾರೆ. ಪೂನಾ ಒಪ್ಪಂದದ ಸಂದರ್ಭದಲ್ಲಿ ಗಾಂಧಿಯವರ ಜೊತೆ ಭಿನ್ನಾಭಿಪ್ರಾಯ ತಾಳಿದಾಗ ಅಂಬೇಡ್ಕರ್ ಅವರ ದೃಢ ನಿಲುವುಗಳು ಹೀಗಿದ್ದವು:
“It has fallen to my lot to be villain of the piece. But I tell you I shall not be deterred from my pious duty and betray the just and legitimate interests of my people even if you hang me on the nearest lamp-post in the street. You better appeal to Gandhi to postpone his fast about a week and then seek for the solution of the problem” (ಧನಂಜಯ ಖೀರ್:574). ಅಂದರೆ ಶೋಷಿತರಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂಬ ಇಂಗಿತ ಅವರಲ್ಲಿತ್ತು. ಸಂವಿಧಾನ ಕಟ್ಟುವಾಗ ಶೋಷಿತರಿಗೆ ಒಂದಷ್ಟು ಹಕ್ಕು ಬಾಧ್ಯತೆಗಳನ್ನು ನೀಡಿರುವುದನ್ನು ಬಿಟ್ಟರೆ, ಉಳಿದಂತೆ ಜಾಗತಿಕ ಭೂಪಟದಲ್ಲಿ ಸಶಕ್ತ ಭಾರತ ಬೆಳೆಯಲು ಬೇಕಾದ ದೇಶಿಯ ಜೀವಾಮೃತವನ್ನು ಸಂವಿಧಾನದಲ್ಲಿ ತುಂಬಿದ್ದಾರೆ. ಆದರೂ ಜಾತ್ಯಂಧತೆಯ ಬಗಡೆಯಲ್ಲಿ ಅದರ ಹಿರಿಮೆ ಕುಂದದಿರುವುದು ಇಂದಿಗೂ ಸೋಜಿಗ ಮತ್ತು ಆಶ್ಚರ್ಯವನ್ನು ನೀಡುತ್ತಿದೆ.
ದೇಶವಾಸಿ ಡಾ. ಅಂಬೇಡ್ಕರ್ ಅವರಲ್ಲಿ ಅಡಕವಾಗಿದ್ದ ಒಂದು ಅಮೂರ್ತ ಸ್ವರೂಪದ ವ್ಯಕ್ತಿತ್ವದ ಮೇಲೆ ಪ್ರಹಾರ ಮಾಡಿದಾಗ ಸಹಜವಾಗಿ ಅವರ ಅನುಯಾಯಿಗಳು ಕೆರಳುತ್ತಾರೆ. ಕೆರಳಿದ ಜನರ ವಿರುದ್ಧ ಸಂಧಿಗೊಂದಿಯಲ್ಲಿ ಅಪ್ಪುಗೆಯ ಮಾತನಾಡುತ್ತಾ ಹಿಂದುಳಿದ ವರ್ಗಗಳ ಜನರನ್ನು ಮಾನಸಿಕವಾಗಿ ಮತ್ತಷ್ಟು ಕೆರಳಿಸುವುದು ಅವರ ಮೂಲ ಉದ್ದೇಶವಾಗಿದೆ. ಅಲ್ಪಸಂಖ್ಯಾತರ ಮೇಲೆ ಪ್ರಹಾರ ಮಾಡುವಾಗಲೂ ಕೋಮುವಾದಿಗಳು ದಲಿತರನ್ನು ಬಳಸಿಕೊಂಡಿರುವ ಉದಾಹರಣೆಗಳಿವೆ. ಈ ರೀತಿ ಊರು ಕೇರಿಗಳಲ್ಲಿ ಒಳ ಸಂಘರ್ಷ ಹುಟ್ಟಿಸಿ ಬೆಳೆಸಿದಷ್ಟು ಹೆಚ್ಚಿನ ಲಾಭ ಅವರಿಗೆ ಸಿಗುತ್ತದೆ. ಜ್ಯೋತಿಗೌಡನ ಪುರದ ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಭಾವನಾತ್ಮಕವಾಗಿ ನಂಬಿರುವವರನ್ನು ಘಾಸಿಗೊಳಿಸುವ ಹುನ್ನಾರ ನಡೆಸಿದ್ದಾರೆ. ಆದುದರಿಂದ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರವೇಶ ಅತಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಜನರೊಳಗೆ ಆಗಬೇಕಾಗಿದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಪುತ್ಥಳಿ ಅಂಬೇಡ್ಕರ್ ಪರಿಚಯ ಮಾಡಿಸುವ ಬದಲು ಅವರ ಅಮೂರ್ತ ವ್ಯಕ್ತಿತ್ವವನ್ನು ಪರಿಚಯಿಸುವ ಸಾಮಾಜಿಕ ಹೊಂದಾಣಿಕೆ ಜರೂರಾಗಿ ಆಗಬೇಕಾಗಿದೆ.
ಬಹುಶಃ ಜ್ಯೋತಿ ಗೌಡನ ಪುರದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ವಿರೂಪಗೊಳಿಸಿರುವ ಪಾತಕಿಗಳು ಅದರ ಸುತ್ತಮುತ್ತ ಇರುವ ಬ್ರಾಹ್ಮಣ ಸಮುದಾಯದವರಾಗಲು ಸಾಧ್ಯವಿಲ್ಲ(ಊಹೆ). ಅಥವಾ ಅಂತಿಮವೂ ಅಲ್ಲ. ಈ ಪಾತಕಿಗಳು ದಲಿತ ಸಮುದಾಯಗಳ ಮಧ್ಯೆ ಓಡಾಡುವವರು ಹೆಚ್ಚು ಹಿಂದುಳಿದವರೇ ಆಗಿರುತ್ತಾರೆ. ಅಂಬೇಡ್ಕರ್ ಅರಿವಿನ ರಥ ಹಿಂದೆಂದಿಗಿಂತಲೂ ಇಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮನೆಮಠಗಳಲ್ಲಿ ಓಡಾಡಬೇಕಿದೆ. ಆವಾಗ ಈ ಕೋಮುವಾದಿ ಮನಸ್ಸುಗಳು ಸಕ್ರಿಯವಾಗಿ ಸೋಲುತ್ತವೆ.
ಮೊದಲು ಅಂಬೇಡ್ಕರ್ ಅರುವಿನ ಸಾಮಾಜಿಕ ರಥವನ್ನು ಎಳೆಯುವ ಅನುಯಾಯಿಗಳಿಗೆ ನೈಜವಾಗಿ ಅಂಬೇಡ್ಕರ್ ಪರಿಚಯ ಹೀಗೆ ಆಗಬೇಕಾಗಿದೆ. “I have brought this caravan where it is seen today. Let the caravan march on, despite the hurdles that may come in its way. If my lieutenants are not able to take the caravan ahead they should leave it there. But in no circumstance should they allow the caravan to go back.” ಡಾ. ಅಂಬೇಡ್ಕರ್ ಜನಪರ ಸಂಘಟನೆಗಳು ಏಕಕಾಲದಲ್ಲಿ ಹಿಮ್ಮುಖ ಮತ್ತು ಮುಮ್ಮುಖ ಚಲನೆ ಆರಂಭಿಸಿದರೆ ಅದರ ಜಡತ್ವದಲ್ಲಿ ಪರಿವರ್ತನಾ ಹಾದಿಕಾಣದೆಂಬ ಎಚ್ಚರಿಕೆಯ ಸಂದೇಶವೂ ಇದಾಗಿದೆ. ಬಹುಶಃ ಅವರ ಜೀವನದ ಕೊನೆಯಲ್ಲಿ ತಮ್ಮ ಮನದಾಳದ ಪರಿವರ್ತನಾ ರಥವನ್ನು ಮುನ್ನಡೆಸುವವರನ್ನು ಎಚ್ಚರಿಸಿ ನಿಚ್ಚಳವಾಗಿ ಸಂಘಟಿತರಾಗಬೇಕೆಂಬ ಸಂದೇಶವೂ ಇದಾಗಿದೆ. ‘‘ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ಅಂಗದ ಔಷಧಿ ಮತ್ತು ಯಾವಾಗ ಈ ರಾಜಕೀಯ ಅಂಗ ಕಾಯಿಲೆಬೀಳುವುದೋ, ಆವಾಗ ಈ ಔಷಧಿಯನ್ನು ನೀಡಬೇಕು’’- ಎಂಬ ಅಂಬೇಡ್ಕರ್‌ರ ರಾಜ್ಯಾಡಳಿತ ನಿರ್ವಹಣೆ ಮಾದರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೇ ಮೊದಲ ಆದ್ಯತೆ; ಇವುಗಳನ್ನು ಸ್ಥಾಪಿಸಲು ಮಗ್ನವಾಗಿರಬೇಕೆಂಬ ಸಂದೇಶವನ್ನು ಸಾರಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಮುಂದಾಗಬೇಕಿದೆ.