ಮುಕೇಶ್ ಅಂಬಾನಿಗೆ ‘ರಶ್ಯದಿಂದ ತೈಲ ಖರೀದಿಸುತ್ತಿಲ್ಲ’ ಎಂದು ಹೇಳಿಕೆ ನೀಡಬೇಕಾದ ಸ್ಥಿತಿ ಯಾಕೆ ಬಂದಿದೆ?
ರಿಲಯನ್ಸ್ ಇಂಡಸ್ಟ್ರೀಸ್ ದೀರ್ಘ ಹೇಳಿಕೆ ಬಿಡುಗಡೆ ಮಾಡಿದೆ.
ಮಾಧ್ಯಮ ವರದಿಯೊಂದು ಅದು ರಶ್ಯದಿಂದ ತೈಲ ಖರೀದಿಸುತ್ತಿದೆ ಎಂದು ಹೇಳಿರುವುದನ್ನು ಸಂಪೂರ್ಣ ಸುಳ್ಳು ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಒಂದು ಖಾಸಗಿ ಸಮೂಹವಾಗಿದ್ದು, ಭಾರತ ಸರಕಾರದ ಘಟಕವಲ್ಲ.ಹಾಗಿರುವಾಗಲೂ, ರಿಲಯನ್ಸ್ ಇಂಡಸ್ಟ್ರೀಸ್‌ನ ಈ ಹೇಳಿಕೆ ಬಿಜೆಪಿ ಸರಕಾರದ ಆಜ್ಞೆಯ ಮೇರೆಗೆ ಟ್ರಂಪ್‌ಗೆ ಸಂದೇಶ ರವಾನಿಸುವುದಕ್ಕಾಗಿ ಬಂದಿದೆ ಎಂಬುದು ಸ್ಪಷ್ಟ ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಅಭಿಸಾರ ಶರ್ಮಾ.
‘ನಾವು ರಶ್ಯದಿಂದ ತೈಲ ಖರೀದಿಸುತ್ತಿಲ್ಲ. ನಾವು ನಿಮ್ಮನ್ನು ಅಸಮಾಧಾನಗೊಳಿಸುವುದಿಲ್ಲ. ನಾವು ಎಂದಿಗೂ ಅಂಥ ತಪ್ಪು ಮಾಡುವುದಿಲ್ಲ’ ಎಂದು ಹೇಳಿಕೆ ನೀಡಿದಂತಿದೆ ಎನ್ನುತ್ತಾರೆ ಅಭಿಸಾರ ಶರ್ಮಾ.
ಅಂದರೆ, ಭಾರತ ಅಮೆರಿಕವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ, ಟ್ರಂಪ್‌ಗೆ ಕೋಪ ಬರಿಸುವ ತಪ್ಪನ್ನು ಮಾಡುವುದಿಲ್ಲ ಎಂಬ ಟ್ರಂಪ್ ಹೇಳಿಕೆ ನಿಜನಾ?
ರಿಲಯನ್ಸ್ ಇಂಡಸ್ಟ್ರೀಸ್‌ನ ಈ ಹೇಳಿಕೆ ಕೆಲವು ರೀತಿಯಲ್ಲಿ ಟ್ರಂಪ್ ಹೇಳಿಕೆ ನಿಜವೆಂದು ಸಾಬೀತುಪಡಿಸಿದೆ.
ಅತ್ಯಂತ ದೊಡ್ಡ ವಿಷಯವೆಂದರೆ, ಮುಕೇಶ್ ಅಂಬಾನಿಗೆ ಇಂದು ರಶ್ಯದಿಂದ ತೈಲ ಖರೀದಿಸುವ ಬಗ್ಗೆ ತುಂಬಾ ಭಯ ಏಕೆ ಇದೆ?
ಅವರು 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೇವರ ಅವತಾರ ಎಂದು ಕರೆದಿದ್ದರು.
ಹಾಗಾದರೆ, ಈಗ ಏಕೆ ಈ ಭಯ ಶುರುವಾಗಿದೆ?
ರಶ್ಯದ ತೈಲ ತುಂಬಿದ ಮೂರು ಹಡಗುಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಾಮ್‌ನಗರ ಸಂಸ್ಕರಣಾಗಾರದ ಕಡೆಗೆ ಹೋಗುತ್ತಿವೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.
ಈ ವರದಿಯನ್ನು ರಿಲಯನ್ಸ್ ಸಂಸ್ಥೆ ನಿರಾಕರಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಜಾಮ್‌ನಗರ ಸಂಸ್ಕರಣಾಗಾರ ಕಳೆದ ಮೂರು ವಾರಗಳಲ್ಲಿ ರಶ್ಯದ ತೈಲದ ಯಾವುದೇ ಕಾರ್ಗೋ ಸ್ವೀಕರಿಸಿಲ್ಲ ಮತ್ತು ಜನವರಿಯಲ್ಲಿಯೂ ರಶ್ಯದ ಕಚ್ಚಾ ತೈಲದ ಯಾವುದೇ ಡೆಲಿವರಿ ನಿಗದಿಯಾಗಿಲ್ಲ ಎಂದು ರಿಲಯನ್ಸ್ ಹೇಳಿದೆ.
ಜನವರಿಯಲ್ಲಿ ರಶ್ಯದ ತೈಲ ಖರೀದಿಸಲು ನಿರಾಕರಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯನ್ನು ನಿರ್ಲಕ್ಷಿಸಿ, ನಮ್ಮ ಇಮೇಜ್‌ಗೆ ಹಾನಿ ಮಾಡುವ ಸುಳ್ಳು ವರದಿಗಳನ್ನು ಪ್ರಕಟಿಸಲಾಗಿದೆ ಎಂದು ಅದು ಹೇಳಿದೆ.
ಜಾಮ್‌ನಗರದಲ್ಲಿರುವ ತನ್ನ ರಫ್ತು ಆಧಾರಿತ ವಿಶೇಷ ಆರ್ಥಿಕ ವಲಯ ಘಟಕಕ್ಕಾಗಿ ರಶ್ಯದ ತೈಲ ಆಮದನ್ನು ನಿಲ್ಲಿಸಿರುವುದಾಗಿ ನವೆಂಬರ್ 20, 2025ರಂದು ಕಂಪೆನಿ ಘೋಷಿಸಿದ ನಂತರ ಈ ಹೇಳಿಕೆ ಬಂದಿದೆ.
ರಶ್ಯದ ತೈಲ ಸಾಗಣೆಗಳು ಜಾಮ್‌ನಗರ ಸಂಸ್ಕರಣಾಗಾರವನ್ನು ಸಮೀಪಿಸುತ್ತಿವೆ ಎಂದು ಆರೋಪಿಸಲಾದ ವರದಿಗೆ ಕಂಪೆನಿ ಈ ಪ್ರತಿಕ್ರಿಯೆ ನೀಡಿದೆ.
ಭಾರತದ ಎರಡು ಖಾಸಗಿ ವಲಯದ ಸಂಸ್ಕರಣಾಗಾರಗಳೆಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ. ಇವೆರಡೂ ಭಾರತದಲ್ಲಿ ರಶ್ಯದ ತೈಲದ ಅತಿದೊಡ್ಡ ಆಮದುದಾರ ಕಂಪೆನಿಗಳಾಗಿದ್ದವು.
ಟ್ರಂಪ್ ಆಗಸ್ಟ್ 2025ರಲ್ಲಿ ರಶ್ಯದ ತೈಲ ಆಮದು ಕಾರಣದಿಂದಾಗಿ ಭಾರತದಿಂದ ಆಮದುಗಳ ಮೇಲೆ ಶೇ. 25 ಸುಂಕಗಳನ್ನು ವಿಧಿಸಿದ್ದರಿಂದ ರಶ್ಯದ ತೈಲ ಆಮದುಗಳ ವಿಷಯ ಹೆಚ್ಚು ಸೂಕ್ಷ್ಮವಾಯಿತು ಮತ್ತು ರಿಲಯನ್ಸ್ ಹೇಳಿಕೆ ಟ್ರಂಪ್ ಹೇಳಿಕೆಯ ಎರಡು ದಿನಗಳ ನಂತರ ಬಂತು.
ತಮ್ಮನ್ನು ಸಂತೋಷಪಡಿಸಲು ಮತ್ತು ಯುಎಸ್ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಇತ್ತೀಚಿನ ತಿಂಗಳುಗಳಲ್ಲಿ ರಶ್ಯದಿಂದ ತೈಲ ಆಮದುಗಳನ್ನು ಕಡಿತಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 4ರಂದು ಹೇಳಿದ್ದರು.
ಭಾರತ ರಶ್ಯದಿಂದ ತೈಲ ಆಮದು ಮುಂದುವರಿಸಿದರೆ ಹೆಚ್ಚಿನ ಸುಂಕಗಳನ್ನು ಹಾಕುವ ಬೆದರಿಕೆಯನ್ನೂ ಅವರು ಮತ್ತೆ ಒಡ್ಡಿದ್ದರು. ಇದಾದ ಎರಡು ದಿನಗಳ ನಂತರ ರಿಲಯನ್ಸ್ ಹೇಳಿಕೆ ಬಂದಿದೆ.
ಟ್ರಂಪ್, ರಶ್ಯದಿಂದ ತೈಲ ಖರೀದಿಸಬೇಡಿ ಎಂದು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ.
ಟ್ರಂಪ್ ಅವರ ನಿರಂತರ ಬೆದರಿಕೆಗಳ ಬಗ್ಗೆ ಪ್ರಧಾನಿ ಮೋದಿ ಯಾವುದೇ ಹೇಳಿಕೆ ನೀಡಿಲ್ಲ. ಎಸ್. ಜೈಶಂಕರ್ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾದರೆ ಟ್ರಂಪ್ ಅವರ ಮಾತುಗಳ ಬಗ್ಗೆ ಅವರಿಗೆ ನಿಜವಾಗಿಯೂ ಭಯವಿದೆಯೇ?
ಆದರೆ ಯಾವ ನಿಗೂಢ ಕಾರಣಗಳಿಗಾಗಿ ಈ ಭಯ ಎಂಬುದೇ ಪ್ರಶ್ನೆ.
ಭಾರತ ನನ್ನನ್ನು ಸಮಾಧಾನಪಡಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ನಾನು ಕೋಪಗೊಂಡರೆ ಭಾರತಕ್ಕೆ ಕಷ್ಟಕರವಾಗಿರುತ್ತದೆ ಎನ್ನುತ್ತಾರೆ. ಆದರೆ, ಭಾರತ ಈ ವಿಷಯದ ಬಗ್ಗೆ ಸಂಪೂರ್ಣ ಮೌನವಾಗಿದೆ. ಈಗ, ರಿಲಯನ್ಸ್ ಹೇಳಿಕೆ ಟ್ರಂಪ್ ಅವರ ಮಾತು ನಿಜವೆಂದು ಸಾಬೀತುಪಡಿಸುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯಿಂದ ವಾಸ್ತವ ಸ್ಪಷ್ಟವಾಗಿದೆ.
ಮಡಿಲ ಮಾಧ್ಯಮ ಈ ಯಾವುದೇ ಚರ್ಚೆಯನ್ನು ಎತ್ತುವುದಿಲ್ಲ. ಆದರೆ ಅದೇ ಮಡಿಲ ಮಾಧ್ಯಮ ನರೇಂದ್ರ ಮೋದಿಯವರನ್ನು ವೈಭವೀಕರಿಸಲು ಏನು ಬೇಕಾದರೂ ಮಾಡುತ್ತದೆ.
ಅತ್ತ ಟ್ರಂಪ್ ಹೇಳಿರುವುದು, ಇತ್ತ ರಿಲಯನ್ಸ್ ಹೇಳಿಕೆ ಇವನ್ನೆಲ್ಲ ನೋಡಿದರೆ, ಟ್ರಂಪ್ ಕೋಪಗೊಳ್ಳದಂತೆ ನೋಡಿಕೊಳ್ಳಲು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಿಗಿಡಲಾಗಿದೆ. ದೊಡ್ಡ ಪ್ರಶ್ನೆಯೆಂದರೆ, ಟ್ರಂಪ್ ಕೋಪದ ಬಗ್ಗೆ ಅವರು ಏಕೆ ಅಷ್ಟೊಂದು ಚಿಂತೆಗೀಡಾಗಿದ್ದಾರೆ ಎಂಬುದು.
ಮೋದಿಯವರ ಬಿಜೆಪಿ ಸರಕಾರ ಟ್ರಂಪ್‌ಗೆ ಏಕೆ ತಿರುಗೇಟು ಕೊಡುತ್ತಿಲ್ಲ? ಯಾಕೆ ಅದು ಇಷ್ಟೊಂದು ಮೌನವಾಗಿದೆ ?
ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತದ ಅತ್ಯಂತ ದುರ್ಬಲ ಕ್ಷಣವಾಗಿದೆ ಎಂದು ಪತ್ರಕರ್ತ ಅಭಿಸಾರ್ ಶರ್ಮಾ ಹೇಳುತ್ತಾರೆ.
ವಿದೇಶಾಂಗ ನೀತಿಯ ದೃಷ್ಟಿಕೋನದಿಂದ, ಕಾರ್ಯತಂತ್ರದ ದೃಷ್ಟಿಕೋನದಿಂದ ಇದು ದುರ್ಬಲ ಘಳಿಗೆಯಾಗಿದೆ ಎನ್ನುತ್ತಾರೆ.
ದೇಶವನ್ನು ವಿಶ್ವ ನಾಯಕನನ್ನಾಗಿ ಮಾಡದೆ, ತಮ್ಮನ್ನು ವಿಶ್ವ ನಾಯಕನನ್ನಾಗಿ ಮಾಡಿಕೊಳ್ಳಲು ಹೊರಟಾಗ ಹೀಗಾಗುತ್ತದೆ.
ಸಂಪೂರ್ಣ ಗಮನ ಒಬ್ಬ ವ್ಯಕ್ತಿಯನ್ನು, ನರೇಂದ್ರ ಮೋದಿಯವರನ್ನು ವೈಭವೀಕರಿಸುವುದರ ಮೇಲೆ ಇದ್ದಾಗ, ರಾಷ್ಟ್ರೀಯ ಹಿತಾಸಕ್ತಿ ಹಿಂದೆ ಉಳಿಯುತ್ತದೆ.
ವಿದೇಶಾಂಗ ಸಚಿವ ಜೈಶಂಕರ್ ಸಂದರ್ಶನವೊಂದರಲ್ಲಿ ತಮ್ಮನ್ನು ಪ್ರಧಾನಿಯ ಹನುಮಾನ್ ಎಂದು ಕರೆದುಕೊಂಡಿದ್ದರು. ಅದೆಲ್ಲ ಸರಿ. ಆದರೆ ಅವರು ವಿದೇಶಾಂಗ ಸಚಿವರಾಗಿ ಭಾರತದ ರಾಜತಾಂತ್ರಿಕತೆಯನ್ನು ಬಲಪಡಿಸಿದ ಯಾವುದೇ ಕುರುಹು ಕಾಣುತ್ತಲೇ ಇಲ್ಲ ಯಾಕೆ ಎಂಬುದೇ ಈಗಿರುವ ಯಕ್ಷ ಪ್ರಶ್ನೆ.