×
Ad

ವರ್ಷಗಳು ಕಳೆದರೂ ಕಡತ ಚಲಿಸುತ್ತಿಲ್ಲವೇಕೆ?

Update: 2025-02-11 09:39 IST

ಸಾಂದರ್ಭಿಕ ಚಿತ್ರ PC: PTI

ಅಭಿವೃದ್ಧಿ ಎಂದರೆ ನೂರಾರು, ಸಾವಿರಾರು ಕೋಟಿ ವೆಚ್ಚ ಮಾಡಿ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ ಅಥವಾ ಇನ್ನಾವುದೇ ನಿರ್ಮಾಣ ಮಾಡುವುದು ಮಾತ್ರವೇ ?. ಅಭಿವೃದ್ಧಿ ಎಂದರೆ ತಾಲ್ಲೂಕು ಕಚೇರಿ, ತಾಲ್ಲೂಕು, ಪಂಚಾಯತಿ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ಜಿಲ್ಲಾಧಿಕಾರಿಗಳ ಕಚೇರಿ, ವಿಧಾನ ಸೌಧ ಅಥವಾ ಸಚಿವಾಲಯದಲ್ಲಿ ಧೂಳು ತಿನ್ನುತ್ತಿರುವ ಕಡತಗಳ ಚಲನೆ ಅಭಿವೃದ್ಧಿ ಅಲ್ಲವೇ ?. ಎಲ್ಲಾ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನಾವು ಚುನಾವಣಾ ಸಮಯದಲ್ಲಿ ಜನತೆಗೆ ಹಲವು ಭರವಸೆ ನೀಡಿ ಚುನಾವಣೆ ಗೆದ್ದಿದ್ದೇವೆ ತಮ್ಮ ಅವಧಿಯ 60 ತಿಂಗಳಲ್ಲಿ ಇಪ್ಪತ್ತು ತಿಂಗಳು ಕಳೆದಿದೆ ಆದರೆ ಅಭಿವೃದ್ಧಿ ಮಾತ್ರ ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡುತ್ತಿದ್ದಾರೆ. ಆದರೆ ಜನಸಾಮಾನ್ಯರ ಮತ್ತು ಸರ್ಕಾರದ ಕಡತ ಚಲಾವಣೆ ಕೂಡ ಬಹುದೊಡ್ಡ ಅಭಿವೃದ್ಧಿ ಎಂದು ಜನಪ್ರತಿನಿಧಿಗಳಿಗೇಕೆ ಅರ್ಥವಾಗುತ್ತಿಲ್ಲ.

ರಸ್ತೆ ಅಭಿವೃದ್ಧಿಗೆ ಹಣ ಇಲ್ಲದಿರುವುದರಿಂದ ಅಭಿವೃದ್ಧಿ ವೇಗ ಪಡೆಯುತ್ತಿಲ್ಲ ಎಂದು ಜನರಿಗೆ ಅರ್ಥವಾಗುತ್ತದೆ. ಆದರೆ ಹಣದ ಅವಶ್ಯಕತೆ ಇಲ್ಲದ ಆದರೆ ಪರೋಕ್ಷವಾಗಿ ಅಭಿವೃದ್ಧಿಯ ವೇಗ ಹೆಚ್ಚಿಸುವ ಕಡತಗಳ ಚಲನೆ ನಿಧಾನಗತಿ ಅಥವಾ ಕೆಲವು ಸಂದರ್ಭಗಳಲ್ಲಿ ಸ್ಥಿಗಿತಗೊಂಡಿರುವುದು ಅತ್ಯಂತ ಶೋಚನೀಯ. ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಹಲವಾರು ರೈತರ ದಾಖಲೆಗಳಲ್ಲಿ ಯಾವುದೇ ತಪ್ಪು ಇಲ್ಲದಿದ್ದರೂ ಪಹಣಿ, ಮ್ಯುಟೇಷನ್ ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ.

ಕೊಪ್ಪ ಉಪ ನೋಂದಾಣಿ ಕಚೇರಿಯಲ್ಲಿ ಪಾವತಿ ಮತ್ತು ಕುಟುಂಬದ ವಿಭಾಗ ಮಾಡಿಕೊಂಡಿರುವ ರೈತರು ನೋಂದಣಿ ಮಾಡಿಕೊಂಡಿದ್ದರೂ ತಾಲ್ಲೂಕು ಕಚೇರಿಯಲ್ಲಿ ನಿಗದಿತ ಸಮಯದಲ್ಲಿ ಖಾತೆ ಆಗುವುದಿಲ್ಲ. ರೈತರು ತಾಲ್ಲೂಕು ಕಚೇರಿ, ಎಸಿ ಕಚೇರಿ, ಉಪ ನೋಂದಣಿ ಕಚೇರಿ ಎಂದು ಅಲೆದರೂ ಪರಿಹಾರ ದೊರೆಯುತ್ತಿಲ್ಲ. ತಾಲ್ಲೂಕು ಕಚೇರಿಯಲ್ಲಿ ಕೇಳಿದರೆ ಉಪ ನೋಂದಣಿ ಕಚೇರಿ ಮತ್ತು ಎ.ಸಿ.ಕಚೇರಿಯತ್ತ ಬೆರಳು ತೋರಿಸುತ್ತಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದರೆ ತಾಲ್ಲೂಕು ಕಚೇರಿಯತ್ತ ಬೆರಳು ತೋರಿಸುತ್ತಾರೆ. ವರ್ಗಾವಣೆಗೊಂಡ ಎ.ಸಿ.ಯವರು ಇಂತಹ ಕಡತ ಎ.ಸಿ.ಕಚೇರಿಗೆ ಕಳುಹಿಸಬೇಡಿ ಎಂದು ತಾಲ್ಲೂಕು ಕಚೇರಿಗೆ ಬರೆಯುತ್ತಾರೆ. ಹೊಸ ಎ.ಸಿ.ಯವರು ಬೆಂಗಳೂರಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರ ಕಚೇರಿಯತ್ತ ಬೆರಳು ತೋರಿಸುತ್ತಾರೆ. ನಮ್ಮ ಮಲೆನಾಡಿನ ರೈತರು ಚಿಕ್ಕಮಗಳೂರು ಕಚೇರಿಯಿಂದ ಮುಂದಕ್ಕೆ ಹೋಗುವ ಆರ್ಥಿಕ ಸ್ಥಿತಿವಂತರಲ್ಲ.ನೋಂದಣಿ ಆದ ಕಡತಗಳು ಪಹಣಿ, ಮ್ಯುಟೇಷನ್ ಅಗದಿದ್ದರೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಬೇಡವೇ ?.

ಈ ಸಮಸ್ಯೆಗೆ ಇತ್ತೀಚೆಗೆ ಬಂದಿರುವ ತಹಶೀಲ್ದಾರ್ ಅಥವಾ ಎ.ಸಿ.ಹೊಣೆ ಅಲ್ಲ. ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳು ಕಾರಣ. ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಕೆ.ಡಿ.ಪಿ.ಸಭೆಗಳಲ್ಲಿ ಧೂಳು ತಿನ್ನುತ್ತಿರುವ ನೂರಾರು ಕಡತಗಳ ಬಗ್ಗೆ ಚರ್ಚೆ ಏಕೆ ನಡೆಯುತ್ತಿಲ್ಲ.ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿರುವ ಇಂತಹ ನೂರಾರು, ಸಾವಿರಾರು ಕಡತಗಳು, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿ ಕಚೇರಿ, ಅರಣ್ಯ ಕಚೇರಿಗಳಲ್ಲಿ, ಸರ್ವೆ ಕಚೇರಿಯಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿದೆ.

ಅರಣ್ಯ ಕಚೇರಿಗಳಲ್ಲಿ ಫಾರಂ 50,53 ಮತ್ತು 94ಸಿ, 94ಸಿಸಿ ಕಡತಗಳು ಸಾವಿರಾರು ಸಂಖ್ಯೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ಅಭಿವೃದ್ಧಿಯ ಅಳತೆಯನ್ನು ಹೆಚ್ಚಿಸುವ ಆಶ್ರಯ ನಿವೇಶನ, ಆಶ್ರಯ ಮನೆಗಳ, ಗ್ರಾಮ ಠಾಣೆ ರಚಿಸುವ ಮಂಜೂರಾತಿ ಕಡತಗಳು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಅರಣ್ಯ ಇಲಾಖೆ, ಸರ್ವೆ ಇಲಾಖೆಯ ಕಚೇರಿಗಳಲ್ಲಿ ಥಂಡಿಯಾಗಿ ಧೂಳು ತಿನ್ನುತ್ತಾ ಬಿದ್ದಿವೆ. ಇವುಗಳಲ್ಲಿ ಅನೇಕ ಕಡತಗಳು ಯಾವುದೇ ಕಾನೂನಾತ್ಮಕ ಸಮಸ್ಯೆ ಇಲ್ಲದಿದ್ದರೂ ಮುಂದಕ್ಕೆ ಚಲಿಸುತ್ತಿಲ್ಲ. ಆಶ್ರಯ ನಿವೇಶನ, ಸರ್ಕಾರದ ಕಟ್ಟಡಗಳ ಭೂ ಮಂಜೂರಾತಿ ಸ್ವತಃ ಸರ್ಕಾರಕ್ಕೆ ಸಂಬಂಧಿಸಿರುವುದು. ಎಲ್ಲಾ ಹಂತದಲ್ಲೂ ಅಧಿಕಾರಿಗಳು ಜವಾಬ್ದಾರಿ ವಹಿಸಿ ಮಂಜೂರಾತಿಗೆ ಸಹಕರಿಸಬೇಕು. ಆದರೆ ಯಾವುದೇ ಅಧಿಕಾರಿಗಳು ಬದ್ಧತೆ ತೋರಿಸದಿರುವುದು ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿ. ಸಮಸ್ಯೆ ಬಗೆಹರಿಸಲು ಅನೇಕ ಸಮಾಜ ಸೇವಕರು, ದಲಿತ ಸಂಘಟನೆಯ ಮುಖಂಡರು ಪ್ರಯತ್ನ ಪಟ್ಟು ಕೈ ಚೆಲ್ಲಿದ್ದಾರೆ. ಕಚೇರಿಗಳಲ್ಲಿರುವ ಕೆಳ ಮಟ್ಟದ ನೌಕರರ ಪ್ರಯತ್ನದಿಂದ ಕೆಲವು ಸಮಸ್ಯೆಗಳು ಬಗೆಹರಿಯುವುದಿಲ್ಲ.

ನನ್ನ ಅನುಭವದಲ್ಲಿ ಕೊಪ್ಪ ತಾಲ್ಲೂಕು ಕಚೇರಿಯ ಅಧಿಕಾರಿಗಳು ತಮ್ಮ ಪ್ರಯತ್ನ ಮಾಡಿದ್ದಾರೆ ಆದರೆ ಸಾಧ್ಯವಾಗುತ್ತಿಲ್ಲ. ಕೊಪ್ಪ ತಾಲ್ಲೂಕು ಕಚೇರಿ ತಲೆ ಮೇಲೆ ಇರುವುದು ಸಬ್ ರಿಜಿಸ್ಟ್ರಾರ್ ಕಚೇರಿ. ಆದರೆ ಉಪ ನೋಂದಣಿ ಕಚೇರಿಯಿಂದ ನೋಂದಣಿ ಆದ ಕಡತದ ಸಾಫ್ಟ್ ಪ್ರತಿ ತಾಂತ್ರಿಕ ಅಡಚಣೆಯಿಂದ ತಾಲ್ಲೂಕು ಕಚೇರಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಇರುವುದು ಬೆಂಗಳೂರಿನ ಕಚೇರಿಯಲ್ಲಿ ಸಮಸ್ಯೆ ಬಗೆಹರಿಸುವವರು ಯಾರು?.

ಪಾವತಿ ಮತ್ತು ಕುಟುಂಬದ ವಿಭಾಗ ಮುಖಾಂತರ ನೋಂದಣಿ ಆಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸರ್ಕಾರದ ನಿಬಂಧನೆ ಇರುವ ಕಡತಗಳ ಪಹಣಿ, ಮ್ಯುಟೇಷನ್ ಮಾಡುವ ಜವಾಬ್ದಾರಿ ಉಪ ವಿಭಾಗಾಧಿಕಾರಿಗಳದ್ದು.ಆದರೆ ಚಿಕ್ಕಮಗಳೂರು ಎ.ಸಿ.ಕಚೇರಿಯಲ್ಲಿ ಖಾತೆ ಬದಲಾವಣೆ ಮಾಡದೆ ತಾಲ್ಲೂಕು ಕಚೇರಿಗೆ ಹಿಂದಕ್ಕೆ ಕಳುಹಿಸುವುದು ಮತ್ತು ಬೆಂಗಳೂರಿನ ನೋಂದಣಿ ಆಯುಕ್ತರ ಕಚೇರಿಗೆ ಕಳುಹಿಸುತ್ತಿದ್ದಾರೆ.

ಸಮಸ್ಯೆ ಬಗೆಹರಿಸುವವರು ಯಾರು ? 

ಈ ರೀತಿಯ ನಿರ್ಲಕ್ಷ್ಯ ಯಾವುದೇ ಸರ್ಕಾರಕ್ಕೂ ಒಳ್ಳೆಯ ಹೆಸರು ತರುವುದಿಲ್ಲ. ಸರ್ಕಾರದ ಕಚೇರಿಗಳಲ್ಲಿ ಇರುವ ಪ್ರತಿಯೊಂದು ಕಡತವೂ ಕೂಡ ಅಭಿವೃದ್ಧಿಗೆ ಪೂರಕ. ಈ ಕಡತಗಳಲ್ಲಿ ಜನರ ರಾಜ್ಯದ, ದೇಶದ ಭವಿಷ್ಯ ಅಡಗಿದೆ.ಪ್ರತಿಯೊಂದು ಕಡತದಲ್ಲಿ ರೈತರ ಆರ್ಥಿಕತೆಯ ಅಭಿವೃದ್ಧಿ ಅಡಗಿರುತ್ತದೆ. ಕಚೇರಿಗಳಲ್ಲಿ ಕಡತಗಳು ಜೀವಂತ ಚಲನೆ ಕಂಡರೆ ದೇಶದ ಆರ್ಥಿಕ ಚಲನೆ ವೇಗ ಪಡೆಯಲಿದೆ. ಜನಪ್ರತಿನಿಧಿಗಳು, ಸಚಿವರು ಕೆ.ಡಿ.ಪಿ.ಸಭೆಗಳಲ್ಲಿ ಜನರ ಗಂಭೀರ ಸಮಸ್ಯೆಗಳ ಬಗ್ಗೆ ಇನ್ನಾದರೂ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಯೂಸುಫ್ ಪಟೇಲ್

contributor

Similar News