ಮಹಿಳೆಯರ ಸಬಲೀಕರಣ, ಮಕ್ಕಳ ಪೋಷಣೆ: ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ
ಬೋರ್ಡ್ ರೂಮಿನಿಂದ ಸಮರ ಭೂಮಿಯ ತನಕ, ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಿರುವ ಮಹಿಳೆಯರು ನಿಜವಾಗಿಯೂ ಬದಲಾವಣೆ ತರಬಹುದು. ಮಹಿಳೆಯರು ತಮ್ಮ ನೈಜ ಶಕ್ತಿಯನ್ನು ಹೊರಹಾಕಲು ಶ್ರಮಿಸಬೇಕು, ಯೋಗವು ಈ ಶಕ್ತಿಗೆ ಪ್ರಮುಖವಾಗಿದೆ.
ಯೋಗದ ಪ್ರಾಚೀನ ಅಭ್ಯಾಸದ ಜನ್ಮಸ್ಥಳ ಭಾರತವು, ಈ ಪ್ರಾಚೀನ ಬುದ್ಧಿವಂತಿಕೆಯನ್ನು ದೈಹಿಕ ವ್ಯಾಯಾಮಗಳಾಗಿ ಮಾತ್ರವಲ್ಲದೆ ಮನುಷ್ಯನ ಮನಸ್ಸು, ದೇಹ ಮತ್ತು ಚೈತನ್ಯದ ಪೋಷಣೆಗಾಗಿ ಸಮಗ್ರ ತತ್ವಶಾಸ್ತ್ರವಾಗಿ ಎತ್ತಿಹಿಡಿಯುವುದನ್ನು ಮುಂದುವರಿಸಿದೆ. ಭಗವದ್ಗೀತೆಯಿಂದ (ಅಧ್ಯಾಯ 2, ಶ್ಲೋಕ 50) ಬಂದ ‘‘ಯೋಗ: ಕರ್ಮಸು ಕೌಶಲಮ್’’ ಎಂಬ ಸಂಸ್ಕೃತ ನುಡಿಗಟ್ಟು ಯೋಗವು ಕ್ರಿಯೆಯಲ್ಲಿ ಕೌಶಲ್ಯ ಎಂಬರ್ಥ ಸೂಚಿಸುತ್ತದೆ. ಇದು ಶ್ರೀಕೃಷ್ಣನ ಪ್ರಬಲ ಬೋಧನೆಯಾಗಿದ್ದು, ನಿಜವಾದ ಯೋಗವು ದೈಹಿಕ ಭಂಗಿಗಳು ಅಥವಾ ಧ್ಯಾನಕ್ಕೆ ಸೀಮಿತವಾಗಿರದೆ, ನಾವು ನಮ್ಮ ದೈನಂದಿನ ಕರ್ತವ್ಯಗಳನ್ನು ಎಷ್ಟು ಕೌಶಲ್ಯದಿಂದ ಮತ್ತು ಚಿಂತನಾಶೀಲವಾಗಿ ನಿರ್ವಹಿಸುತ್ತೇವೆ ಎಂಬುದನ್ನು ಅದು ಪ್ರತಿಫಲಿಸುತ್ತದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ನಾನು, ಯೋಗದ ಪರಿವರ್ತನೀಯ ಸಾಮರ್ಥ್ಯಗಳನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಮಕ್ಕಳನ್ನು ಪೋಷಿಸುವಲ್ಲಿ - ನಮ್ಮ ಸಮಾಜದ ಭದ್ರ ಬುನಾದಿಯಲ್ಲಿ ಇದೆ ಎಂದು ದೃಢವಾಗಿ ನಂಬುತ್ತೇನೆ.
ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಯೋಗವು ಯೋಗಕ್ಷೇಮ ಮತ್ತು ಸಾಮಾಜಿಕ ಪರಿವರ್ತನೆಗೆ ಒಂದು ಸನ್ಮಾರ್ಗವಾಗಿ ಜಾಗತಿಕ ಮನ್ನಣೆ ಗಳಿಸಿದೆ. 2014ರ ಜೂನ್ 21 ಅನ್ನು ಅಂತರ್‌ರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ವಿಶ್ವಸಂಸ್ಥೆಯ ನಿರ್ಧಾರವು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಮತ್ತು ನಾಗರಿಕ ಪರಂಪರೆಯನ್ನು ವಿಶ್ವದ ಮನ್ನಣೆಗೆ ಒಳಪಡಿಸಿತು.
ಈ ವರ್ಷ, ಅಂತರ್‌ರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆ ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ ಯೋಗ, ಇದು ಯೋಗದ ಸಮಗ್ರ ಮತ್ತು ಸಾರ್ವತ್ರಿಕ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ. ಮಾನ್ಯ ಪ್ರಧಾನ ಮಂತ್ರಿ ಅವರು ಯೋಗವು ಹಕ್ಕುಸ್ವಾಮ್ಯ, ಪೇಟೆಂಟ್, ರಾಜಧನದಿಂದ ಮುಕ್ತವಾಗಿದೆ. ಇದು ಎಲ್ಲರಿಗೂ ಹೊಂದಿಕೊಳ್ಳುವಂತಿದೆ. ನೀವು ಏಕಾಂಗಿಯಾಗಿಯೂ, ಗುಂಪಿನಲ್ಲೂ ಅಭ್ಯಾಸ ಮಾಡಬಹುದು, ಶಿಕ್ಷಕರಿಂದ ಕಲಿಯಬಹುದು ಅಥವಾ ಸ್ವಯಂ-ಕಲಿಯಬಹುದು ಎಂದು ಒತ್ತಿ ಹೇಳಿದರು. ದೇಶವು ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವಾಗ, ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಜೀವನದಲ್ಲಿ ಯೋಗಾಭ್ಯಾಸವನ್ನು ಸಂಯೋಜಿಸುವುದು ಅವಶ್ಯಕ.
ಭಾರತದ ಜನಸಂಖ್ಯೆಯ ಸುಮಾರು 3ನೇ 2ರಷ್ಟು ಮಹಿಳೆಯರು ಮತ್ತು ಮಕ್ಕಳೇ ಇದ್ದಾರೆ. ಅವರು ಹೆಚ್ಚು ದೌರ್ಬಲ್ಯಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಒಡ್ಡಿಕೊಳ್ಳುತ್ತಾರೆ. ಆದ್ದರಿಂದ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ನೋಡಿಕೊಳ್ಳುವುದು ಕಡ್ಡಾಯವಾಗುತ್ತದೆ, ಹಾಗಾಗಿ ಯೋಗವು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಗವು ಮಹಿಳೆಯರಿಗೆ ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಮಾನಸಿಕ ಆರೋಗ್ಯ ಮತ್ತು ಹಾರ್ಮೋನುಗಳ ಸಮತೋಲನ ಸುಧಾರಿಸುವುದರಿಂದ ಹಿಡಿದು ಸ್ನಾಯು ಮತ್ತು ಅಸ್ಥಿಪಂಜರ ವ್ಯವಸ್ಥೆಯನ್ನು ಬಲಪಡಿಸುವ ತನಕ, ಯೋಗವು ಎಲ್ಲಾ ವಯೋಮಾನದ ಮಹಿಳೆಯರ ದೈಹಿಕ ಅಗತ್ಯಗಳನ್ನು ಪೂರೈಸಲು ವಿಶಿಷ್ಟವಾಗಿ ಸೂಕ್ತವಾಗಿದೆ.
ಗರ್ಭಧಾರಣೆಯ ಮೊದಲು ಮತ್ತು ನಂತರ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಈ ಪರಿವರ್ತನೆಯ ಅವಧಿಯಲ್ಲಿ ಅವರು ಎದುರಿಸುವ ಎಲ್ಲ ರೀತಿಯ ಆರೋಗ್ಯ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡುತ್ತದೆ. ಪ್ರಸವಪೂರ್ವ ಯೋಗವು ಅದರ ಉದ್ದೇಶಿತ ಭಂಗಿಗಳು ಮತ್ತು ಧ್ಯಾನ ತಂತ್ರಗಳೊಂದಿಗೆ, ಗರ್ಭಧಾರಣೆಯ ಅಸ್ವಸ್ಥತೆಗಳನ್ನು ನಿವಾರಿಸುತ್ತದೆ, ನಾನಾ ರೀತಿಯ ನೋವುಗಳನ್ನು ಉಪಶಮನ ಮಾಡಿ, ದೇಹದ ಶಕ್ತಿ ಹೆಚ್ಚಿಸುತ್ತದೆ. ಇದು ನಿರೀಕ್ಷಿತ ತಾಯಂದಿರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹೆರಿಗೆಗೆ ಸಿದ್ಧಪಡಿಸುತ್ತದೆ. ಪ್ರಸವಪೂರ್ವ ಯೋಗವು ಹಾಲುಣಿಸುವ ತಾಯಂದಿರಿಗೆ ಅವರ ಚೇತರಿಕೆ, ಭಾವನಾತ್ಮಕ ಯೋಗಕ್ಷೇಮ, ಸ್ತನ್ಯಪಾನವನ್ನು ಹೆಚ್ಚಿ ಸುವುದು ಮತ್ತು ತಾಯಿ-ಮಗುವಿನ ಬಾಂಧವ್ಯ ಬಲಪಡಿಸಲು ಸಹಾಯ ಮಾಡುತ್ತದೆ.
ಮಹಿಳೆಯರಲ್ಲಿ ಯೋಗಾಭ್ಯಾಸ ಹೆಚ್ಚಿಸಲು, ಭಾರತದಾದ್ಯಂತ 25 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರ ಜಾಲವನ್ನು ನಾವು ಹೊಂದಿದ್ದೇವೆ, ಅವರು ಮಹಿಳೆಯರು ಮತ್ತು ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಗತ್ಯ ಅಭ್ಯಾಸವಾಗಿ ಅಳವಡಿಸಿಕೊಳ್ಳುವಲ್ಲಿ ಮಾಹಿತಿ ನೀಡುತ್ತಿದ್ದಾರೆ, ಶಿಕ್ಷಣ ನೀಡುತ್ತಿದ್ದಾರೆ ಮತ್ತು ಸಹಾಯ ಮಾಡುತ್ತಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿರಂತರವಾಗಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಯಾವುದೇ ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖವಾದ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಅವರು ಸಕ್ರಿಯವಾಗಿ ಬೆಂಬಲಿಸುತ್ತಿದ್ದಾರೆ. ಹೆಚ್ಚಿದ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ತಯಾರಿಕೆ ಅಥವಾ ಉತ್ಪಾದನೆಯನ್ನು 9ಶೇ.ದಷ್ಟು ಹೆಚ್ಚಿಸುತ್ತದೆ. 2047ರ ವೇಳೆಗೆ ಹೆಚ್ಚಿನ ಆದಾಯದ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನಕ್ಕೆ ಏರಲು ನಮಗೆ ಸಹಾಯ ಮಾಡುತ್ತದೆ ಎಂದು ವಿಶ್ವ ಬ್ಯಾಂಕ್ ಪ್ರತಿಪಾದಿಸಿದೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಂತ ಮಹಿಳಾ ಕಾರ್ಯಪಡೆಯನ್ನು ಹೊಂದಿದಾಗ ಮಾತ್ರ ಇದೆಲ್ಲವನ್ನೂ ಸಾಧಿಸಬಹುದು.
ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಮಕ್ಕಳು ಸಹ ಜೀವನಶೈಲಿ ಅಸ್ವಸ್ಥತೆಗಳು, ಡಿಜಿಟಲ್ ಸ್ಕ್ರೀನ್‌ಗಳ ಅವಲಂಬನೆ ಮತ್ತು ಶೈಕ್ಷಣಿಕ ಒತ್ತಡಗಳಿಂದ ಹೆಚ್ಚಾಗಿ ಪ್ರಭಾವಿತರಾಗುತ್ತಿದ್ದಾರೆ. ಯೋಗವು ಈ ಸವಾಲುಗಳಿಗೆ ಪುರಾವೆ ಆಧಾರಿತ, ಸಮಯೋಚಿತ ಮತ್ತು ಸಾಂಸ್ಕೃತಿಕವಾಗಿ ಬೇರೂರಿರುವ ಸ್ಪಂದನೆ ನೀಡುತ್ತದೆ. ಇದು ಏಕಾಗ್ರತೆ, ಸ್ಮರಣಶಕ್ತಿ, ಭಾವನಾತ್ಮಕ ನಿಯಂತ್ರಣ, ನಿದ್ರೆಯ ಗುಣಮಟ್ಟ ಮತ್ತು ಒತ್ತಡ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಸಮಗ್ರ ಬಾಲ್ಯದ ಸದೃಢ ಬೆಳವಣಿಗೆಗೆ ಪ್ರಮುಖ ಅಂಶಗಳಾಗಿವೆ. ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ, ನಮ್ಮ ಸಚಿವಾಲಯವು ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಯಲ್ಲಿ ಯೋಗಾಭ್ಯಾಸ ಅಳವಡಿಸುತ್ತಿದ್ದು, ಜೀವಮಾನದ ಸ್ವಾಸ್ಥ್ಯ ಅಭ್ಯಾಸಗಳಿಗೆ ಭದ್ರ ಅಡಿಪಾಯ ಹಾಕುತ್ತಿದೆ.
ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರು, ಮಕ್ಕಳ ಜೀವನದಲ್ಲಿ ಯೋಗಾಭ್ಯಾಸಗಳನ್ನು ಹೆಚ್ಚಿಸುವ ಬಹುಮುಖಿ ಕಾರ್ಯತಂತ್ರದತ್ತ ಕೆಲಸ ಮಾಡುತ್ತಿದೆ. ಸಚಿವಾಲಯವು ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮ, ಆರೋಗ್ಯ ಮತ್ತು ಪೋಷಕಾಂಶಗಳ ಸೇವನೆಯನ್ನು ಗುರಿಯಾಗಿಟ್ಟುಕೊಂಡು ವಿವಿಧ ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹೊಂದಿದೆ. ಈ ಪ್ರಯೋಜನಗಳನ್ನು ನೀಡುವಾಗ, ಅಂಗನವಾಡಿ ಕೇಂದ್ರಗಳು, ಒನ್ ಸ್ಟಾಪ್ ಕೇಂದ್ರಗಳು, ಮಕ್ಕಳ ಆರೈಕೆ ಸಂಸ್ಥೆಗಳು ಮತ್ತಿತರ ನಮ್ಮ ಸಂಸ್ಥೆಗಳು ಫಲಾನುಭವಿಗಳಿಗೆ ಶಿಕ್ಷಣ, ಪ್ರಭಾವ ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ಯೋಗದೊಂದಿಗೆ ಅವರ ಜೀವನಶೈಲಿಯನ್ನು ಪೂರೈಸಲು ಅನುಕೂಲ ಮಾಡಿಕೊಡುತ್ತವೆ. ಆಯುಷ್ ಸಚಿವಾಲಯದೊಂದಿಗೆ ಒಟ್ಟಾಗಿ ವಿನ್ಯಾಸಗೊಳಿಸಲಾದ ವಿಶೇಷ ಯೋಗ ಮಾಡ್ಯೂಲ್‌ಗಳನ್ನು ಈ ಕೇಂದ್ರಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಿ ಪರಿಚಯಿಸಲಾಗುತ್ತಿದೆ.
ಜಾಗತಿಕ ಕ್ರಮದ ಬದಲಾಗುತ್ತಿರುವ ಚರ್ಚೆಯಲ್ಲಿ, ಮಹಿಳೆಯರು ಈಗ ಹೊಸ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದಿಂದ ಬಾಹ್ಯಾಕಾಶದವರೆಗೆ ನೀತಿ ನಿರೂಪಣೆಯಿಂದ ಕಾರ್ಯತಂತ್ರ ರಕ್ಷಣೆಯವರೆಗೆ, ಮಹಿಳೆಯರು ಹೊಸ ಮುಂಚೂಣಿಯ ಯೋಧರಾಗಿದ್ದಾರೆ. ಇತ್ತೀಚೆಗೆ ಇಬ್ಬರು ಧೈರ್ಯಶಾಲಿ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರದ ಮುಖವಾಗಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಇಂದಿನ ಜಗತ್ತಿನಲ್ಲಿ ಮಹಿಳೆಯರು ಮಾಡುತ್ತಿರುವ ಬದಲಾವಣೆಗೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಆದ್ದರಿಂದ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸುವತ್ತ ಶ್ರಮಿಸಬೇಕು, ಈ ನಿಟ್ಟಿನಲ್ಲಿ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ.
ಯೋಗಕ್ಕೆ ನಮ್ಮ ಸರಕಾರ ಹೊಂದಿರುವ ಬದ್ಧತೆಯೇನೆಂದರೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಬೆಳೆಸುವ ಬಗ್ಗೆ ಆಗಿದೆ. ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನೀತಿಗಳಲ್ಲಿ ಯೋಗವನ್ನು ಸಕ್ರಿಯವಾಗಿ ಸೇರಿಸುವ ಮೂಲಕ, ನಾವು ನಮ್ಮ ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿದ್ದೇವೆ. ಅದೇ ಸಮಯದಲ್ಲಿ, ತಳಮಟ್ಟದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತಿದ್ದೇವೆ. ಯೋಗವನ್ನು ಕೇವಲ ಒಂದು ಅಭ್ಯಾಸವಾಗಿ ನೋಡದೆ, ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಭಾಗವಹಿಸುವ ಆಂದೋಲನವಾಗಿ - ಜನಾಂದೋಲನವಾಗಿ ನೋಡಬೇಕು. ನಮ್ಮ ಸರಕಾರವು ಈ ಆಂದೋಲನವನ್ನು ರಾಷ್ಟ್ರದ ಪ್ರತಿಯೊಂದು ಭಾಗಕ್ಕೂ ಕೊಂಡೊಯ್ಯಲು ಬದ್ಧವಾಗಿದೆ.
ವಿಕಸಿತ ಭಾರತ 2047 ಕಡೆಗೆ ಸಾಗುವ ನಮ್ಮ ಪ್ರಯಾಣದಲ್ಲಿ, ಯೋಗವು ಹೆಚ್ಚು ಸಹಾನುಭೂತಿಯುಳ್ಳ, ಚೇತರಿಕೆಯ ಮತ್ತು ಸಬಲೀಕೃತ ಸಮಾಜಕ್ಕಾಗಿ ಒಂದು ದೂರದೃಷ್ಟಿಯ ನೋಟವನ್ನು ನೀಡುತ್ತದೆ. ಆರೋಗ್ಯಕರ ಭಾರತ ನಿರ್ಮಿಸಲು ಮತ್ತು ಹೊಸ ಎತ್ತರಕ್ಕೆ ತಲುಪಲು ಯೋಗವನ್ನು ಸಾಮಾಜಿಕ ಮತ್ತು ವೈಯಕ್ತಿಕ ಬದ್ಧತೆಯಾಗಿ ಸ್ವೀಕರಿಸಲು ನಾವೆಲ್ಲರೂ ಒಂದಾಗೋಣ.