×
Ad

ಎನ್‌ಡಿಎ ಗೆಲುವಿಗೆ ಮಹಿಳೆಯರ ಕೊಡುಗೆ

ಬಿಹಾರ: ಯಾರ ಗೆಲುವು?

Update: 2025-11-17 16:27 IST

ಬಿಹಾರದ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ವೋಟ್ ಚೋರಿ ಯಿಂದ SIR ವರೆಗೆ ಹುಯಿಲೆಬ್ಬಿಸಿದೆ (ನಾಗರಿಕ ವೇದಿಕೆಯಾದ ಎದ್ದೇಳು ಕರ್ನಾಟಕ ಕಾಂಗ್ರೆಸಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಶಕುನಿಯ ದಾಳ ಎಂದೂ ಪೋಸ್ಟರ್ ಸಮರ ಆರಂಭಿಸಿದೆ)

ಇರಲಿ, ಬಹುತೇಕ ಮಾಧ್ಯಮಗಳು ಎನ್‌ಡಿಎ ಗೆಲುವಿಗೆ ಮಹಿಳೆಯರು ನಿತೀಶ್ ಜೊತೆ ನಿಂತಿದ್ದೇ ಕಾರಣ ಎಂದಿವೆ. ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನ ( National Rural Livelihood Mission) ಜಗತ್ತಿನ ಅತಿ ದೊಡ್ಡ ಮಹಿಳಾ ಸ್ವಸಹಾಯ ಗುಂಪುಗಳ ವೇದಿಕೆ. ಈ ಗುಂಪುಗಳಿಗೆ ಬ್ಯಾಂಕ್ ಸಾಲ ಅಲ್ಲದೆ ಸುತ್ತುನಿಧಿಯನ್ನೂ ಕೇಂದ್ರ ಸರಕಾರ ನೀಡಿ ಈ ಫೆಡರೇಶನ್ ಗಳನ್ನು ಬಲಗೊಳಿಸಿದೆ. ಇದನ್ನು ಅತ್ಯಂತ ಗಂಭೀರವಾಗಿ ಅನುಷ್ಠಾನ ಮಾಡಿದ್ದು ಬಿಹಾರದಲ್ಲಿ.

ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ ಎಂಬ ಮಹಿಳಾ ರೈತರನ್ನೇ ಸಂಘಟಿಸಿ ಕೃಷಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಯೋಜನೆ ಇದರಲ್ಲೇ ಅಡಕ

ವಾಗಿದೆ. ಅದರ ಪೈಲಟ್ ಯೋಜನೆಯನ್ನು ನಾನು ಅನುಷ್ಠಾನ ಮಾಡಿದ್ದೆ. ಬಳಿಕ ಕರ್ನಾಟಕ ಸರಕಾರ ಅದರ ಬಗ್ಗೆ ಯಾವ ಆಸಕ್ತಿಯನ್ನೂ ತೋರಲಿಲ್ಲ. ಬಿಹಾರದಲ್ಲಿ ಈ ಎನ್ ಆರ್‌ಎಲ್‌ಎಂ ನ ಹಂತಹಂತದ ಯೋಜನೆಗಳನ್ನು ಬಿಹಾರ ಪೋಷಿಸಿದೆ. ಕೇಂದ್ರ ಸರಕಾರ ಈ ಅಭಿಯಾನಕ್ಕೆ ಅನುದಾನ ನೀಡಿದೆ, ನೀಡುತ್ತಿದೆ.

ಡ್ರೋನ್ ದೀದಿ, ಕೃಷಿ ಸಖಿ, ಪಶು ಸಖಿ, ಉದ್ಯೋಗ ಸಖಿ - ಹೀಗೆ ಪಂಚಾಯತ್ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸೃಷ್ಟಿ ಮಾಡಿದೆ.

ಇದರಿಂದ ಆರ್ಥಿಕ ಸುಧಾರಣೆ ಆಯಿತಾ ಎಂಬುದು ಮುಖ್ಯವಲ್ಲ. ಇದು ಗ್ರಾಮೀಣ ಮಹಿಳೆಯರಿಗೆ ಐಡೆಂಟಿಟಿ ಮತ್ತು ಆತ್ಮವಿಶ್ವಾಸ ನೀಡಿದೆ. ಕೃಷಿ ಹಂಗಾಮಿನ ವೇಳೆ ಮನೆ ಗಂಡಸು ಬ್ಯಾಂಕಿಗೆ ಅಲೆದರೂ ಸಿಗದ ಸಾಲವನ್ನು ಮನೆ ಹೆಂಗಸು ಸ್ವಸಹಾಯ ಗುಂಪಿನಮೂಲಕ ಕೊಡಿಸುವ ಮಟ್ಟಿಗೆ ಗ್ರಾಮೀಣ ಆರ್ಥಿಕತೆ ಇದೆ. ಕಾಂಗ್ರೆಸಿಗೆ ಈ ಸಣ್ಣ ಬದಲಾವಣೆ ಮುಖ್ಯ ಎಂದು ಕಂಡಿಲ್ಲ. ಅದರ ಮಟ್ಟಿಗೆ ಪ್ರಗತಿ ಅಂದರೆ ನಗರೀಕರಣ, ದೊಡ್ಡ ಕಾರ್ಪೊರೇಟ್ ಹೂಡಿಕೆ ಇತ್ಯಾದಿ.

ಇದರೊಂದಿಗೆ ಮದ್ಯ ನಿಷೇಧ ನಿತೀಶ್‌ಗೆ ತಾಯಿತವಾಗಿ ನಿಂತಿದೆ. ಮಹಿಳೆಗೆ ಬಹುಮುಖ್ಯ ಮದ್ಯ ನಿಷೇಧ. ಕುಡಿತದ ಹಾವಳಿ ಹೇಗಿದೆಯೆಂದು ಪ್ರತ್ಯೇಕ ಹೇಳಬೇಕಿಲ್ಲ. ಇದು ಸಾಂಪ್ರದಾಯಿಕ ಅರ್ಥನೀತಿಯ ಪ್ರಕಾರ ನಷ್ಟದ ಬಾಬ್ತು ಅನ್ನಿಸಿದರೂ ಕೌಟುಂಬಿಕ, ಸಾಮಾಜಿಕ ನೆಮ್ಮದಿ, ಕುಟುಂಬದ ಆರ್ಥಿಕ ಉಳಿತಾಯ ಮಹಿಳೆಯ ಕಣ್ಣೋಟದಿಂದ ಮಾತ್ರ ಕಾಣಲು ಸಾಧ್ಯ. ನಿತೀಶ್‌ಗೆ ಇದು ಸಾಧ್ಯವಾಗಿದೆ.

ಕಾಂಗ್ರೆಸ್ ಯಥಾಪ್ರಕಾರ ಪುರುಷ ಪ್ರಧಾನ ಲೋಕ ವ್ಯವಹಾರದಲ್ಲಿ ಮುಳುಗಿರುವ ಕಾರಣ ಅದಕ್ಕೆ ಇದು ಅರ್ಥವಾಗಲು ಸಾಧ್ಯವೇ ಇಲ್ಲ. ಒಂದೆಡೆ ಹಿಂದುತ್ವದ ಬಗ್ಗೆ ಅವಕಾಶವಾದಿ ಮೃದು ಧೋರಣೆ, ಇನ್ನೊಂದೆಡೆ ಮಹಿಳೆಯ ಬಗ್ಗೆ ತಾತ್ಸಾರದ ಧೋರಣೆ.. ಸಾಕಲ್ವಾ ಸ್ವನಾಶಕ್ಕೆ.

ಮೋದಿ 10 ಸಾವಿರ ರೂ. ಕೊಟ್ಟು ನೀತಿ ಸಂಹಿತೆ ಮೀರಿದರು ಅಂತ ಬಾಯಿ ಬಡಕೊಂಡರೂ ಸ್ವತಃ ಕಾಂಗ್ರೆಸ್ ಮುಂದಿಟ್ಟ ನೀತಿ ಇದು!

ಜನರ ಕೈಗೆ ನಗದು! ಆಗ ಕೊಳ್ಳುವ ಶಕ್ತಿ ಹೆಚ್ಚುತ್ತದೆ. ಕನಿಷ್ಠ ಆದಾಯ ನೀಡಬೇಕು ಎಂಬ ಆರ್ಥಿಕ ನೀತಿ ವಾದಿಸಿದ್ದೇ ಕಾಂಗ್ರೆಸ್. ಈಗ ಈ ಕೊಳ್ಳುವ ಶಕ್ತಿಯ ಪಟ್ಟಿಯಲ್ಲಿ ಮತವೂ ಸೇರಿದೆ! ಬಿಜೆಪಿ ಕೋಮು ಧ್ರುವೀಕರಣದ ಜೊತೆ ಆರ್ಥಿಕ ತುರ್ತು ಗುಟುಕು ನೀಡುವ ಕಲೆ ಕಲಿತಿದೆ.

ಬಹಳ ಹಿಂದೆ ಜೆ.ಎಚ್. ಪಟೇಲ್ ಅವರು ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ ಎಂಬ ಮಾತಿನ ಮೂಲಕ ಇದನ್ನು ಹೇಳಿದ್ದರು.

ಸದ್ಯಕ್ಕೆ ತನ್ನ ಆಟದ ತಂತ್ರವನ್ನು ಎದುರಾಳಿ ತನಗಿಂತಲೂ ಚೆನ್ನಾಗಿ ಆಡಿ ಮಣ್ಣು ಮುಕ್ಕಿಸಿದ ದಿಗ್ಭ್ರಮೆಯಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಗೆ ಅಣಿಯಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ. ಪಿ. ಸುರೇಶ

contributor

Similar News