ಅಸಾಧ್ಯವನ್ನು ಸಾಧ್ಯವಾಗಿಸಿದ ಝೊಹ್ರಾನ್ ಮಮ್ದಾನಿ
ಇದು ಅಮೆರಿಕದ ಮತ್ತು ಬಹುಶಃ ಇಡೀ ಜಗತ್ತಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ಆರಂಭ.
ಒಂದಿಷ್ಟೂ ಹಿಂಜರಿಕೆಯಿಲ್ಲದೆ ‘‘ನಾನು ಡೆಮಾಕ್ರಟಿಕ್ ಸಮಾಜವಾದಿ’’ ಎಂದು ಘೋಷಿಸಿಕೊಂಡ, ಕೇವಲ 34 ವರ್ಷದ, ಭಾರತೀಯ-ಉಗಾಂಡ ಮೂಲದ ಮುಸ್ಲಿಮ್ ಯುವಕನೊಬ್ಬ, ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ನಗರದ ಚುಕ್ಕಾಣಿ ಹಿಡಿಯುವುದು ಅಸಾಮಾನ್ಯದಲ್ಲಿ ಅಸಾಮಾನ್ಯ ಸಾಧನೆ.
200 ಕೋಟಿ ರೂಪಾಯಿ ಹಣ,
26 ಶತಕೋಟ್ಯಧಿಪತಿಗಳ ಒಕ್ಕೂಟ,
ಅಮೆರಿಕದ ಅಧ್ಯಕ್ಷರ ಸಹಿತ ಅತ್ಯಂತ ಪ್ರಭಾವಿಗಳಿಂದ ಖಟ್ಟರ್ ವಿರೋಧ, ಸ್ವಂತ ಪಕ್ಷದೊಳಗೂ ಹಿತಶತ್ರುಗಳು
ಹೀಗೆ... ಪಟ್ಟಿ ಮಾಡುತ್ತಾ ಹೋದರೆ ಆತನ ಸೋಲು ಖಚಿತವಾಗಬೇಕಿತ್ತು.
ಅದಕ್ಕೂ ಮೊದಲು ಆತ ಅಧಿಕೃತ ಅಭ್ಯರ್ಥಿಯಾಗುವುದೂ ಬರೀ ಕನಸಿನ ಮಾತಾಗಿತ್ತು.
ಆದರೆ ಅಸಾಧ್ಯವಾದುದನ್ನು ಆತ ಸಾಧ್ಯವಾಗಿಸಿಬಿಟ್ಟ.
ಇಡೀ ಅಮೆರಿಕ ಮಾತ್ರವಲ್ಲ ಇಡೀ ಜಗತ್ತೇ ನಿಬ್ಬೆರಗಾಗುವಂತಹ ಇತಿಹಾಸ ರಚಿಸಿಬಿಟ್ಟ.
ಆತ ಜಗತ್ತಿನ ಅತ್ಯಂತ ಸಿರಿವಂತ ನಗರ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಕೇವಲ 34 ವರ್ಷದ ಡೆಮಾಕ್ರಟಿಕ್ ಸಮಾಜವಾದಿ ಯುವಕ ಝೊಹ್ರಾನ್ ಮಮ್ದಾನಿ.
ಅಮೆರಿಕ ಮತ್ತು ಇಡೀ ಜಗತ್ತಿಗೆ ಝೊಹ್ರಾನ್ ಮಮ್ದಾನಿಯ ಈ ಗೆಲುವು ಏಕೆ ಇಷ್ಟು ವಿಶೇಷ?
ನ್ಯೂಯಾರ್ಕ್ ನಗರದ ಮೇಯರ್ ಆಗಿ ಝೊಹ್ರಾನ್ ಮಮ್ದಾನಿ ಅವರ ಆಯ್ಕೆ ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ.
ಇದು ಅಮೆರಿಕದ ಮತ್ತು ಬಹುಶಃ ಇಡೀ ಜಗತ್ತಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ಆರಂಭ.
ಒಂದಿಷ್ಟೂ ಹಿಂಜರಿಕೆಯಿಲ್ಲದೆ ‘‘ನಾನು ಡೆಮಾಕ್ರಟಿಕ್ ಸಮಾಜವಾದಿ’’ ಎಂದು ಘೋಷಿಸಿಕೊಂಡ, ಕೇವಲ 34 ವರ್ಷದ, ಭಾರತೀಯ-ಉಗಾಂಡ ಮೂಲದ ಮುಸ್ಲಿಮ್ ಯುವಕನೊಬ್ಬ, ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ನಗರದ ಚುಕ್ಕಾಣಿ ಹಿಡಿಯುವುದು ಅಸಾಮಾನ್ಯದಲ್ಲಿ ಅಸಾಮಾನ್ಯ ಸಾಧನೆ.
ಈ ಗೆಲುವು ಇತ್ತೀಚಿನ ಅಮೆರಿಕನ್ ಇತಿಹಾಸದ ಯಾವುದೇ ಚುನಾವಣೆಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
ಆ ಎಲ್ಲ ಚುನಾವಣೆಗಳಿಗೂ ಝೊಹ್ರಾನ್ ಮಮ್ದಾನಿ ಗೆದ್ದ ಚುನಾವಣೆಗೂ ಹಗಲು ರಾತ್ರಿಯ ವ್ಯತ್ಯಾಸವಿದೆ
ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ; ಇದು ಒಂದು ಜನಪರ ಸಿದ್ಧಾಂತದ ಗೆಲುವು.
ಇದು ಹಣಬಲ, ಅಧಿಕಾರ, ದ್ವೇಷ ಮತ್ತು ಪಟ್ಟಭದ್ರ ರಾಜಕೀಯ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರ ಒಗ್ಗಟ್ಟಿನ ಧ್ವನಿಯ ಗೆಲುವು.
ಝೊಹ್ರಾನ್ ಮಮ್ದಾನಿ ಹೇಗೆ ಅಸಾಧ್ಯವನ್ನು ಸಾಧ್ಯವಾಗಿಸಿದರು ಎಂಬುದನ್ನು ಸ್ವಲ್ಪ ವಿಶ್ಲೇಷಿಸೋಣ.
ಹಣಬಲದ ವಿರುದ್ಧ ಜನಬಲದ ವಿಜಯ
ಝೊಹ್ರಾನ್ ಗೆಲುವನ್ನು ತಡೆಯಲು ನ್ಯೂಯಾರ್ಕ್‌ನ ಶತಕೋಟ್ಯಧಿಪತಿಗಳು ಅಕ್ಷರಶಃ ಒಂದಾಗಿದ್ದರು.
ಹೆಜ್ ಫಂಡ್ ದೈತ್ಯ ಬಿಲ್ ಅಕ್ಮನ್, ರೊನಾಲ್ಡ್ ಲಾಡರ್, ಮಾಜಿ ಮೇಯರ್ ಮೈಕಲ್ ಬ್ಲೂಮ್‌ಬರ್ಗ್ ಸೇರಿದಂತೆ 26ಕ್ಕೂ ಹೆಚ್ಚು ಬಿಲಿಯನೇರ್‌ಗಳು, ಝೊಹ್ರಾನ್ ವಿರೋಧಿ ಅಭ್ಯರ್ಥಿಗಳಿಗೆ ಮತ್ತು ಪ್ರಚಾರ ಗುಂಪುಗಳಿಗೆ 25 ಮಿಲಿಯನ್ ಡಾಲರ್ ಅಂದರೆ ಸುಮಾರು 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಸುರಿದಿದ್ದರು.
ಅವರ ಗುರಿ ಒಂದೇ ಆಗಿತ್ತು: ‘‘ಝೊಹ್ರಾನ್ ಅನ್ನು ಬಿಟ್ಟು ಬೇರೆ ಯಾರು ಗೆದ್ದರೂ ಪರವಾಗಿಲ್ಲ.’’
ಈ ದೈತ್ಯ ಹಣಬಲದ ಎದುರು ಝೊಹ್ರಾನ್ ಅವರ ತಂತ್ರ ಸರಳವಾಗಿತ್ತು - ಅದು ಜನಬಲ.
ಅವರು ಕಾರ್ಪೊರೇಟ್ ದೇಣಿಗೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಬದಲಾಗಿ, 20,000ಕ್ಕೂ ಹೆಚ್ಚು ಸಾಮಾನ್ಯ ನಾಗರಿಕರಿಂದ, ಸರಾಸರಿ ಕೇವಲ 35 ಡಾಲರ್ ಅಂದರೆ ಸುಮಾರು 3,000 ರೂಪಾಯಿಯಂತೆ ಸಣ್ಣ ದೇಣಿಗೆಗಳನ್ನು ಸಂಗ್ರಹಿಸಿದರು. ಇದು ರಾಜಕೀಯದಲ್ಲಿ ಉದ್ಯಮಿಗಳ ಹಣವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ನಂಬಿಕೆಯನ್ನು ಸಂಪೂರ್ಣ ಅಲುಗಾಡಿಸಿದೆ.
ನ್ಯೂಯಾರ್ಕ್‌ನ ಜನ ಝೊಹ್ರಾನ್ ಮಮ್ದಾನಿಗೆ ದೇಣಿಗೆ ನೀಡಲು ಅದೆಷ್ಟು ಆಸಕ್ತಿ ತೋರಿಸಿದರು ಅಂದರೆ ಕೊನೆಗೆ ಝೊಹ್ರಾನ್ ಹಲವಾರು ಬಾರಿ ‘‘ಸಾಕು, ಸಾಕು, ಇನ್ನು ದುಡ್ಡು ಬೇಡ, ಇನ್ನು ನಿಮ್ಮ ಸಹಕಾರ, ಪ್ರಚಾರ ಮಾತ್ರ ಬೇಕಾಗಿದೆ’’ ಎಂದು ವಿನಂತಿಸಬೇಕಾಯಿತು.
ರಾಜಕೀಯ ದಿಗ್ಗಜರು ಮತ್ತು ಪ್ರಭಾವಿಗಳ ಸೋಲು
ಝೊಹ್ರಾನ್ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಝೊಹ್ರಾನ್ ಸೋಲಿಸಿದ್ದು ಆಂಡ್ರ್ಯೂ ಕುಮೊ ಅವರನ್ನು.
ಕುಮೊ ಸಾಮಾನ್ಯ ಅಭ್ಯರ್ಥಿಯಾಗಿರಲಿಲ್ಲ. ಅವರು ನ್ಯೂಯಾರ್ಕ್ ರಾಜ್ಯದ ಮಾಜಿ ಗವರ್ನರ್, ಅವರ ತಂದೆಯೂ ಗವರ್ನರ್ ಆಗಿದ್ದವರು. ಪಕ್ಷದಲ್ಲೇ ಬಿಲ್ ಕ್ಲಿಂಟನ್, ಬ್ಲೂಮ್‌ಬರ್ಗ್‌ರಂತಹ ಘಟಾನುಘಟಿಗಳ ಬೆಂಬಲ ಅವರಿಗಿತ್ತು.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಝೊಹ್ರಾನ್ ಎದುರು ಸೋತರೂ ಕುಮೊ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಅಲ್ಲೂ ಈಗ ಸೋತಿದ್ದಾರೆ.
ಕುಮೊ ಅವರ ಸೋಲು ಕೇವಲ ಒಬ್ಬ ವ್ಯಕ್ತಿಯ ಸೋಲಲ್ಲ. ಅದು ಕಾರ್ಪೊರೇಟ್ ಬೆಂಬಲಿತ, ಸ್ಥಾಪಿತ, ಪುರಾತನ ರಾಜಕೀಯದ ಸಂಪೂರ್ಣ ತಿರಸ್ಕಾರವಾಗಿದೆ.
ಮತದಾರರು ಅನುಭವಕ್ಕಿಂತ ಹೆಚ್ಚಾಗಿ, ಬದಲಾವಣೆಯ ಸ್ಪಷ್ಟ ದೃಷ್ಟಿಕೋನಕ್ಕೆ ಮತ ಹಾಕಿದ್ದಾರೆ.
ಝೊಹ್ರಾನ್ ಗೆಲುವು, ಯಾರು ಗೆಲ್ಲಬೇಕು ಎಂದು ವ್ಯವಸ್ಥೆ ನಿರ್ಧರಿಸುತ್ತದೆ ಎಂಬ ಪುರಾತನ ನಿಯಮವನ್ನು ಮುರಿದುಹಾಕಿದೆ.
ದ್ವೇಷ, ಪೂರ್ವಾಗ್ರಹ ಮತ್ತು ಗುರುತಿನ ರಾಜಕೀಯದ ಸೋಲು
ಝೊಹ್ರಾನ್ ತಮ್ಮ ಗುರುತನ್ನು ಎಂದಿಗೂ ಮರೆಮಾಚಲಿಲ್ಲ.
ತಾನು ಭಾರತೀಯ-ಆಫ್ರಿಕನ್ ಮೂಲದ, ವಲಸಿಗ, ಮುಸ್ಲಿಮ್ ಮತ್ತು ಡೆಮಾಕ್ರಟಿಕ್ ಸಮಾಜವಾದಿ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಇದೇ ಕಾರಣಕ್ಕೆ ಅವರನ್ನು ತೀವ್ರವಾಗಿ ಗುರಿ ಮಾಡಲಾಯಿತು.
ಸ್ವತಃ ಡೊನಾಲ್ಡ್ ಟ್ರಂಪ್, ಝೊಹ್ರಾನ್ ಅವರನ್ನು ‘‘ನೂರು ಶೇಕಡಾ ಕಮ್ಯುನಿಸ್ಟ್ ಹುಚ್ಚ’’ ಎಂದು ಜರೆದಿದ್ದರು.
ಅದಕ್ಕೆ ಝೊಹ್ರಾನ್, ‘‘ನಾನು ಟ್ರಂಪ್‌ರ ಅತಿ ಕೆಟ್ಟ ದುಃಸ್ವಪ್ನ’’ ಎಂದು ದಿಟ್ಟ ತಿರುಗೇಟು ನೀಡಿದ್ದರು.
ವಿರೋಧಿಗಳು ಅವರನ್ನು ‘‘ಯಹೂದಿ ವಿರೋಧಿ’’ ಎಂದು ಬಿಂಬಿಸಲು ಯತ್ನಿಸಿದರು. ಅದಕ್ಕೆ ಝೊಹ್ರಾನ್, ‘‘ನಾನು ನ್ಯೂಯಾರ್ಕ್‌ನ ಪ್ರತಿಯೊಬ್ಬ ಯಹೂದಿ ನಾಗರಿಕರ ಜೊತೆ ನಿಲ್ಲುತ್ತೇನೆ’’ ಎಂದು ಹೇಳುವ ಮೂಲಕ, ದ್ವೇಷವನ್ನು ವಿಭಜನೆಯ ಅಸ್ತ್ರವಾಗಿಸುವುದನ್ನು ತಡೆದರು.
ಅವರು ತಮ್ಮ ಮುಸ್ಲಿಮ್ ಗುರುತನ್ನು, ಎಲ್ಲಾ ದುಡಿಯುವ ವರ್ಗಗಳ ಪರವಾದ ಆರ್ಥಿಕ ನ್ಯಾಯದ ಹೋರಾಟದೊಂದಿಗೆ ಜೋಡಿಸಿದರು.
ಈ ಗೆಲುವು ಕೇವಲ ಆರ್ಥಿಕ ಅಸಮಾನತೆಯ ವಿರುದ್ಧ ಮಾತ್ರವಲ್ಲ, ಇದು ಅಮೆರಿಕದ ರಾಜಕೀಯದಲ್ಲಿ ಆಳವಾಗಿ ಬೇರೂರಿರುವ ಇಸ್ಲಾಮೋಫೋಬಿಯಾ ಮತ್ತು ಜನಾಂಗೀಯ ದ್ವೇಷದ ವಿರುದ್ಧದ ಪ್ರಚಂಡ ಜಯವೂ ಹೌದು.
ಝೊಹ್ರಾನ್ ಅವರನ್ನು ಭಯೋತ್ಪಾದಕರ ಪರ ಸಹಾನುಭೂತಿ ಉಳ್ಳವ ಎಂದು ಕರೆಯಲಾಯಿತು. ಅವರ ಹೆಸರನ್ನು 9/11 ದಾಳಿಯೊಂದಿಗೆ ಹೋಲಿಸುವಂತಹ ಅತ್ಯಂತ ಕೀಳುಮಟ್ಟದ, ಜನಾಂಗೀಯ ಕಾರ್ಟೂನ್‌ಗಳನ್ನು ಹರಡಲಾಯಿತು.
ಸ್ವತಃ ಅಧ್ಯಕ್ಷ ಟ್ರಂಪ್, ಝೊಹ್ರಾನ್ ಗೆದ್ದರೆ ನ್ಯೂಯಾರ್ಕ್ ಗೆ ನೀಡುವ ಆರ್ಥಿಕ ನೆರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೂ ಈ ದ್ವೇಷದ ರಾಜಕಾರಣ ಕೆಲಸ ಮಾಡಲಿಲ್ಲ.
ಇದಕ್ಕೆ ಪ್ರಮುಖ ಕಾರಣ, ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಅಮೆರಿಕದ ಯುವಜನರಲ್ಲಿ ಮೂಡಿದ ತೀವ್ರ ವಿರೋಧ.
ಝೊಹ್ರಾನ್, ‘‘ನೆತನ್ಯಾಹು ನ್ಯೂಯಾರ್ಕ್‌ಗೆ ಬಂದರೆ, ನಾನು ಅವನನ್ನು ಬಂಧಿಸುತ್ತೇನೆ’’ ಎಂದು ಧೈರ್ಯದಿಂದ ಘೋಷಿಸಿದರು.
ಇಸ್ರೇಲ್ ಹೊರತುಪಡಿಸಿ ಅತಿ ಹೆಚ್ಚು ಯಹೂದಿ ಜನಸಂಖ್ಯೆ ಇರುವ ನಗರದಲ್ಲಿ ಈ ನಿಲುವು ತೆಗೆದುಕೊಂಡರೂ, ಪ್ರಾಥಮಿಕ ಚುನಾವಣೆಯಲ್ಲಿ ಅವರಿಗೆ ಅತಿ ಹೆಚ್ಚು ಮತಗಳು ಬಂದಿದ್ದೇ ಯಹೂದಿ ನೆರೆಹೊರೆಗಳಿಂದ.
ಇದು ದ್ವೇಷದ ವಿರುದ್ಧ ನಿಂತ "Jews for Mamdani" ಹಾಗೂ "Hindus for Mamdani"ಯಂತಹ ಅಭಿಯಾನಗಳ ಮತ್ತು ಅಮೆರಿಕನ್ ಜನತೆಯ ಸ್ಪಷ್ಟ ಗೆಲುವಾಗಿದೆ.
ಭಾರತೀಯರಿಗೆ ಚಿರಪರಿಚಿತವಾದ ‘ರೋಟಿ ಕಪ್ಡಾ ಮಖಾನ್’ ಘೋಷಣೆಯೇ ಝೊಹ್ರಾನ್ ಪ್ರಚಾರದ ತಿರುಳಾಗಿತ್ತು.
ಅವರು ಅಮೂರ್ತ ವಿಷಯಗಳ ಬದಲು, ನ್ಯೂಯಾರ್ಕ್ ಜನರ ದೈನಂದಿನ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಬಾಡಿಗೆ ಸ್ಥಗಿತ ಅಂದರೆ ಲಕ್ಷಾಂತರ ಬಾಡಿಗೆದಾರರಿಗೆ ತಕ್ಷಣದ ಪರಿಹಾರ.
ಉಚಿತ ಬಸ್ ಸಾರಿಗೆ ಮೂಲಕ ದುಡಿಯುವ ವರ್ಗದ ಪ್ರಯಾಣದ ವೆಚ್ಚ ಕಡಿತ.
ಸಾರ್ವತ್ರಿಕ ಮಕ್ಕಳ ಆರೈಕೆ ಯೋಜನೆ ಮೂಲಕ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆ ಇಳಿಕೆ.
ಅಗ್ಗದ ದಿನಸಿ ಒದಗಿಸುವ ಮೂಲಕ ಜೀವನ ವೆಚ್ಚವನ್ನು ಕಡಿಮೆ ಮಾಡುವ ಭರವಸೆ.
ಝೊಹ್ರಾನ್ ಅವರ ಈ ಗ್ಯಾರಂಟಿಗಳು ವಿಲಾಸಿ ನ್ಯೂಯಾರ್ಕ್ ನೊಳಗೆ ಮೌನವಾಗಿ ದಿನದೂಡುತ್ತಿದ್ದ ಜನಸಾಮಾನ್ಯರಿಗೆ ಆಶಾ ಕಿರಣದಂತೆ ಕಂಡಿತು.
ಝೊಹ್ರಾನ್ ಗೆಲುವಿನ ಹಿಂದಿನ ನಿಜವಾದ ಶಕ್ತಿ ಅವರ 46,000 ಸ್ವಯಂಸೇವಕರ ತಂಡ. ಇದು ನ್ಯೂಯಾರ್ಕ್ ಇತಿಹಾಸದಲ್ಲೇ ಅತಿದೊಡ್ಡ ಸ್ವಯಂಸೇವಕ-ಚಾಲಿತ ಪ್ರಚಾರವಾಗಿತ್ತು. ಈ ತಂಡ ಹತ್ತು ಲಕ್ಷಕ್ಕೂ ಹೆಚ್ಚು ಮನೆಗಳ ಬಾಗಿಲು ತಟ್ಟಿದೆ.
ನ್ಯೂಯಾರ್ಕ್‌ನ 83 ಲಕ್ಷ ಜನರಲ್ಲಿ ಸುಮಾರು 25 ಲಕ್ಷ ಜನರಿಗೆ ಇಂಗ್ಲಿಷ್ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ಇದನ್ನು ಅರಿತ ಝೊಹ್ರಾನ್, ಕೇವಲ ಇಂಗ್ಲಿಷ್‌ನಲ್ಲಿ ಪ್ರಚಾರ ಮಾಡಲಿಲ್ಲ. ಅವರು ಹಿಂದಿ, ಉರ್ದು, ಬಂಗಾಳಿ, ಸ್ಪ್ಯಾನಿಷ್ ಭಾಷೆಗಳಲ್ಲಿ ನೇರವಾಗಿ ಜನರೊಂದಿಗೆ ಸಂವಾದ ನಡೆಸಿದರು.
ಅವರು ಟಿಕ್‌ಟಾಕ್, ಇನ್‌ಸ್ಟಾಗ್ರಾಂಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು.
ನೀರಸ ರಾಜಕೀಯ ಭಾಷಣಗಳ ಬದಲು, ಹಾಸ್ಯ, ಬಾಲಿವುಡ್ ಹಾಡುಗಳು ಮತ್ತು ಸಾಂಸ್ಕೃತಿಕ ಉಲ್ಲೇಖಗಳನ್ನು ಬಳಸಿದರು.
ಅಮಿತಾಭ್ ಬಚ್ಚನ್ ಅವರ ದೀವಾರ್ ಚಿತ್ರದ ‘‘ತುಮ್ಹಾರೆ ಪಾಸ್ ಕ್ಯಾ ಹೈ?’’ ಡೈಲಾಗ್ ಬಳಸಿದ ಅವರ ವೀಡಿಯೊ ವೈರಲ್ ಆಯಿತು.
ಅದಕ್ಕೆ ಝೊಹ್ರಾನ್ ಉತ್ತರ, ‘‘ಮೇರೆ ಪಾಸ್... ಐ ಹ್ಯಾವ್ ದಿ ಪೀಪಲ್’’ ಅಂದರೆ ‘‘ನನ್ನ ಬಳಿ ಜನರಿದ್ದಾರೆ’’ ಎಂಬುದಾಗಿತ್ತು. ಇದು ಅವರ ಇಡೀ ಪ್ರಚಾರದ ಸಾರಾಂಶವಾಗಿತ್ತು.
ಈ ಗೆಲುವು, ಕಾರ್ಪೊರೇಟ್ ಹಣವಿಲ್ಲದೆ, ಕೇವಲ ಜನಪರ ನೀತಿಗಳು ಮತ್ತು ತಳಮಟ್ಟದ ಸಂಘಟನೆಯ ಮೂಲಕ ಅಮೆರಿಕದಂತಹ ಬಂಡವಾಳಶಾಹಿ ದೇಶದ ಹೃದಯದಲ್ಲೇ ಗೆಲ್ಲಬಹುದು ಎಂದು ಸಾಬೀತುಪಡಿಸಿದೆ.
ಝೊಹ್ರಾನ್ ಕೇವಲ ಸ್ಥಳೀಯ ನಾಯಕರಲ್ಲ. ಅವರು ಇಸ್ರೇಲ್‌ನ ಆಕ್ರಮಣ ನೀತಿಯ ವಿರುದ್ಧ ಫೆಲೆಸ್ತೀನ್ ಪರ ಸ್ಪಷ್ಟ ಮತ್ತು ದಿಟ್ಟ ನಿಲುವು ತಳೆದವರು.
ಜಾಗತಿಕ ವಿಷಯಗಳ ಬಗ್ಗೆ ಮಾತನಾಡುವುದು ರಾಜಕೀಯವಾಗಿ ಅಪಾಯಕಾರಿ ಎಂಬ ನಂಬಿಕೆಯನ್ನು ಇದು ಸುಳ್ಳಾಗಿಸಿದೆ.
ಝೊಹ್ರಾನ್ ಅವರ ಸ್ಪಷ್ಟ ನಿಲುವು ಕೇವಲ ನ್ಯೂಯಾರ್ಕ್‌ಗೆ ಸೀಮಿತವಾಗಿಲ್ಲ; ಇದು ಫೆಲೆಸ್ತೀನ್ ವಿಷಯವು ಜಾಗತಿಕವಾಗಿ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ಚುನಾವಣೆಗಳ ಮೇಲೆ ಬೀರುತ್ತಿರುವ ಪ್ರಭಾವದ ಭಾಗವಾಗಿದೆ.
ಫೆಲೆಸ್ತೀನ್ ಇಂದು ಕೇವಲ ವಿದೇಶಾಂಗ ನೀತಿಯ ವಿಷಯವಾಗಿ ಉಳಿದಿಲ್ಲ, ಬದಲಿಗೆ ಸ್ಥಳೀಯ ಚುನಾವಣೆಗಳ ಫಲಿತಾಂಶವನ್ನೇ ನಿರ್ಧರಿಸುವಷ್ಟು ಪ್ರಬಲ ರಾಜಕೀಯ ಪ್ರಶ್ನೆಯಾಗಿ ಬೆಳೆದಿದೆ.
ಇತ್ತೀಚಿನ ಯುಕೆ ಚುನಾವಣೆಯಲ್ಲಿ, ಲೇಬರ್ ಪಕ್ಷದ ಫೆಲೆಸ್ತೀನ್ ನಿಲುವನ್ನು ದುರ್ಬಲ ಎಂದು ವಿರೋಧಿಸಿ ಸ್ಪರ್ಧಿಸಿದ ಐದು ಸ್ವತಂತ್ರ ಅಭ್ಯರ್ಥಿಗಳು ಪಕ್ಷದ ಭದ್ರಕೋಟೆಗಳಲ್ಲೇ ಗೆಲುವು ಸಾಧಿಸಿದರು.
ಅದೇ ರೀತಿ, ಐರಿಶ್ ಅಧ್ಯಕ್ಷೀಯ ಚುನಾವಣೆಯಲ್ಲಿ, ಇಸ್ರೇಲ್ ಅನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಬಹಿರಂಗವಾಗಿ ಕರೆದ ಅಭ್ಯರ್ಥಿಯು ಶೇ. 60ಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಾಧಿಸಿದರು.
ಇದು, ಫೆಲೆಸ್ತೀನ್ ವಿಷಯವು ಪಾಶ್ಚಿಮಾತ್ಯ ದೇಶಗಳಲ್ಲಿನ ಯುವಜನರನ್ನು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಮೂಲಭೂತವಾಗಿ ಬದಲಾಯಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಗುಜರಾತ್ ಹತ್ಯಾಕಾಂಡದಂತಹ ವಿಷಯಗಳ ಬಗ್ಗೆ ಮಾತನಾಡಲು ಭಾರತದ ವಿರೋಧ ಪಕ್ಷದ ನಾಯಕರು ಹೆದರು ವಾಗ, ಝೊಹ್ರಾನ್ ಅಮೆರಿಕದಲ್ಲಿ ನಿಂತು ಆ ಬಗ್ಗೆ ನಿರ್ಬಿಡೆಯಿಂದ ಮಾತನಾಡಿ ಗೆದ್ದಿದ್ದಾರೆ. ಇದು ಸೈದ್ಧಾಂತಿಕ ಸ್ಪಷ್ಟತೆ ಮತ್ತು ನೈತಿಕ ನಿಲುವುಗಳಿಗೆ ಜನಬೆಂಬಲವಿದೆ ಎಂಬುದನ್ನು ತೋರಿಸುತ್ತದೆ.
ಝೊಹ್ರಾನ್ ಮಮ್ದಾನಿ ಅವರ ಗೆಲುವು ಕೇವಲ ನ್ಯೂಯಾರ್ಕ್‌ನ ಗೆಲುವಲ್ಲ. ಇದು ಜಗತ್ತಿನಾದ್ಯಂತ ಹಣಬಲ ಮತ್ತು ಅಧಿಕಾರದ ರಾಜಕೀಯದಿಂದ ಬೇಸತ್ತಿರುವ ಕೋಟ್ಯಂತರ ಜನರಿಗೆ ಒಂದು ಹೊಸ ಭರವಸೆಯಾಗಿದೆ.
ಇದು ಜನಶಕ್ತಿಯ ನಿಜವಾದ ವಿಜಯ.