ಮುಂಗಾರು ಅಬ್ಬರಕ್ಕೆ ಈಶಾನ್ಯ ತತ್ತರ; 5.5 ಲಕ್ಷ ಸಂತ್ರಸ್ತರು
PC: x.com/timesofindia
ಗುವಾಹತಿ: ಹಲವು ಈಶಾನ್ಯ ರಾಜ್ಯಗಳು ತೀವ್ರ ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿದ್ದು, ಮುಂಗಾರು ಆರಂಭದಲ್ಲೇ ಸಂಭವಿಸಿದ ಮಳೆ ಸಂಬಂಧಿ ಅನಾಹುತಗಳಿಂದ ಕನಿಷ್ಠ 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 5.5 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಅಸ್ಸಾಂನಲ್ಲಿ ವ್ಯಾಪಕ ಹಾನಿ ಹಾಗೂ ಸಾವು ನೋವು ಸಂಭವಿಸಿದ್ದು, 11 ಮಂದಿ ಮಳೆಗೆ ಬಲಿಯಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ 10, ಮೇಘಾಲಯದಲ್ಲಿ 6, ಮಿಜೋರಾಂನಲ್ಲಿ 5, ಸಿಕ್ಕಿಂನಲ್ಲಿ ಮೂವರು ಹಾಗೂ ತ್ರಿಪುರಾದಲ್ಲಿ ಒಬ್ಬರು ಮಳೆ ಸಂಬಂಧಿ ಅನಾಹುತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.
ಎಲ್ಲ ಪಕ್ಷಗಳ ರಾಜ್ಯ ಘಟಕಗಳು ಮತ್ತು ಕಾರ್ಯಕರ್ತರು ಸಾಧ್ಯವಿರುವ ಎಲ್ಲ ನೆರವು ಒದಗಿಸುವಂತೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮನವಿ ಮಾಡಿದ್ದಾರೆ. ಏತನ್ಮಧ್ಯೆ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ. ಯಾವುದೇ ಪರಿಶೋಧನೆ ಇಲ್ಲದೇ ಕೋಟ್ಯಂತರ ರೂಪಾಯಿ ಕೊಳೆಯುತ್ತಿರುವ ಪಿಎಂ ಕೇರ್ಸ್ ನಿಧಿಯಿಂದ ನೆರವು ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಅಸ್ಸಾಂನ 22 ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, 5.35 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೇರಿದ್ದು, 15 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.