×
Ad

ಅಮೆರಿಕ ಆರ್ಥಿಕತೆಗೆ ‘ಶಾಕ್’ ನೀಡಿದ ಮಾಸಿಕ ಉದ್ಯೋಗ ವರದಿ!

Update: 2026-03-07 05:58 IST

ಡೊನಾಲ್ಡ್ ಟ್ರಂಪ್ | Photo Credit : AP , PTI 

ಮಾರ್ಚ್ 6, 2026ರಂದು ಬಿಡುಗಡೆಯಾದ ಅಮೆರಿಕದ ಉದ್ಯೋಗ ವರದಿಯು ಆರ್ಥಿಕತೆಗೆ ದೊಡ್ಡ ‘ಶಾಕ್’ ನೀಡಿದೆ. ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿರುವ ಮಾಸಿಕ ಮಾಹಿತಿಯ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಅಮೆರಿಕದಲ್ಲಿ 92,000 ಜನರು ಉದ್ಯೋಗ ಕಳೆದುಕೊಂಡರೆಂದು ವರದಿಯಾಗಿದೆ. ಈ ಸಂಖ್ಯೆಯು ಆರ್ಥಿಕ ತಜ್ಞರು ನಿರೀಕ್ಷಿಸಿದ್ದ ಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚಿನದಾಗಿದ್ದು, ಆಘಾತಕಾರಿಯಾಗಿದೆ.

ಹಲವಾರು ಆರ್ಥಿಕ ತಜ್ಞರೊಂದಿಗೆ ಬ್ಲೂಮ್‌ಬರ್ಗ್ ನಡೆಸಿದ ಸಮೀಕ್ಷೆಯ ಪ್ರಕಾರ ಅಮೆರಿಕದ ಫೆಬ್ರವರಿ ತಿಂಗಳ ನಿರುದ್ಯೋಗ ಸಂಖ್ಯೆ 55,000 ಎಂದು ನಿರೀಕ್ಷಿಸಲಾಗಿತ್ತು.

ಸರಕಾರದ ಈ ವರದಿಯ ಪ್ರಕಾರ ನಿರುದ್ಯೋಗ ದರ 4.4%ಕ್ಕೆ ಏರಿದೆ. 27 ವಾರಗಳಿಗಿಂತಲೂ ಹೆಚ್ಚು ಕಾಲ ಕೆಲಸ ಸಿಗದೆ ನಿರುದ್ಯೋಗಿಗಳಾಗಿರುವವರ ಸಂಖ್ಯೆ ಈಗ 25.3% ಏರಿದೆ. ಅಮೆರಿಕದ ಒಟ್ಟು ನಿರುದ್ಯೋಗಿಗಳ ಸಂಖ್ಯೆ 7.6 ಮಿಲಿಯನ್ (76 ಲಕ್ಷ) ತಲುಪಿದೆ.

ಈ ನಿರುದ್ಯೋಗ ಗುಂಪಿನಲ್ಲಿ ಪುರುಷರ ಸಂಖ್ಯೆ 4%, ಮಹಿಳೆಯರ ಸಂಖ್ಯೆ 4.1%, ಹಾಗೂ ಹದಿಹರೆಯದವರ (teenage) ಸಂಖ್ಯೆ 14.9% ಆಗಿದೆ. ಈ ವರದಿಯನ್ನು ಇನ್ನೂ ಆಳವಾಗಿ ವಿಶ್ಲೇಷಿಸಿದಾಗ ವರ್ಣ ಹಾಗೂ ಜನಾಂಗೀಯತೆಗಳ ನಿರುದ್ಯೋಗ ಅಂಕಿ-ಅಂಶವು ದೇಶದಲ್ಲಿರುವ ತಾರತಮ್ಯಕ್ಕೆ ಬೆಳಕು ಚೆಲ್ಲುತ್ತದೆ. ಬಿಳಿಯರ ನಿರುದ್ಯೋಗ ದರ 3.7% ಇದ್ದರೆ, ಕರಿಯರಲ್ಲಿ 7.7%, ಏಷಿಯನ್ ಜನಾಂಗದವರಲ್ಲಿ 4.8% ಹಾಗೂ ಹಿಸ್ಪ್ಯಾನಿಕ್ (ಸ್ಪ್ಯಾನಿಷ್ ಭಾಷೆ ಮಾತನಾಡುವ ನೆರೆಯ ದಕ್ಷಿಣ ಅಮೆರಿಕ ಖಂಡ ಹಾಗೂ ಮೆಕ್ಸಿಕನ್ ದೇಶಿಗರು) ಜನರಲ್ಲಿ 5.2% ಇದೆಯೆಂದು ವರದಿ ತಿಳಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ ಫೆಬ್ರವರಿ ತಿಂಗಳಲ್ಲಿ 28,000 ಜನರು ಉದ್ಯೋಗ ಕಳೆದುಕೊಂಡರೆಂದು ವರದಿ ತಿಳಿಸಿದೆ. ಇದಕ್ಕೆ ಮುಖ್ಯ ಕಾರಣ ಆರೋಗ್ಯ ಕ್ಷೇತ್ರದ “ಕೈಜರ್ ಪರ್ಮನಂಟೆ” ಕಂಪನಿಯ ನೌಕರರು ನಡೆಸುತ್ತಿರುವ ಪ್ರತಿಭಟನೆಯೆನ್ನಲಾಗಿದೆ. ಅದೇ ರೀತಿ, ಫೆಬ್ರವರಿಯಲ್ಲಿ ಅಮೆರಿಕವನ್ನು ಆವರಿಸಿದ್ದ ಭೀಕರ ಶೀತಲ ಹವಾಮಾನವೂ ನಿರುದ್ಯೋಗ ಸಂಖ್ಯೆ ಹೆಚ್ಚಲು ಕಾರಣವೆಂದು ವಿವರಿಸಲಾಗುತ್ತಿದೆ. ಶೀತಲ ಹವಾಮಾನದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿತ್ತು ಹಾಗೂ ಹಲವಾರು ರಸ್ತೆಗಳು ಹಿಮದ ಕಾರಣ ಮುಚ್ಚಲ್ಪಟ್ಟಿದ್ದವು.

ಇರಾನ್ ಯುದ್ಧದಿಂದ ಹೆಚ್ಚುತ್ತಿರುವ ತೈಲ ಬೆಲೆ, ಹಣದುಬ್ಬರದ ಜೊತೆಗೆ ಹೆಚ್ಚಿರುವ ಫೆಬ್ರವರಿಯ ನಿರುದ್ಯೋಗ ಸಂಖ್ಯೆಯನ್ನು ಟ್ರಂಪ್ ಹೇಗೆ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ. ಪುನಃ ಅಧಿಕಾರ ಸ್ವೀಕರಿಸಿದ ಬಳಿಕದ ಇಲ್ಲಿಯವರೆಗಿನ 410 ದಿನಗಳಲ್ಲಿ ‘ದಿ ಎಕನಾಮಿಸ್ಟ್’ ಸಮೀಕ್ಷೆಯ ಪ್ರಕಾರ ಟ್ರಂಪ್ ಬೆಂಬಲಿಸುವವರ ಸಂಖ್ಯೆ ಈಗ 38%ಕ್ಕೆ ಕುಸಿದಿದೆ. ಟ್ರಂಪ್ ನೀತಿಗಳನ್ನು ವಿರೋಧಿಸುವವರ ಸಂಖ್ಯೆ 58%ಗೆ ಏರಿದೆ.

ಎಪ್ಸ್ಟೀನ್ ಫೈಲ್ ಬಿಡುಗಡೆಯಿಂದ ಟ್ರಂಪ್‌ಗೆ ಆಗುತ್ತಿರುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಹಾಗೂ ಜನರ ಗಮನವನ್ನು ಬೇರೆಡೆ ತಿರುಗಿಸಲು ಇರಾನ್ ಮೇಲೆ ಯುದ್ಧ ಮಾಡಲಾಗುತ್ತಿದೆ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ. ಅನವಶ್ಯಕವಾಗಿ ಇಸ್ರೇಲ್ ಬೆಂಬಲಿಸಲು ಅಮೆರಿಕ ಇರಾನ್ ಯುದ್ಧದಲ್ಲಿ ಭಾಗವಹಿಸುತ್ತಿದೆ ಎನ್ನಲಾಗಿದೆ.

ಅಮೆರಿಕದ ಅನಿವಾಸಿಗಳ ಮೇಲಿನ ಕ್ರೂರ ವರ್ತನೆಗೆ ಕಾರಣಳಾಗಿದ್ದ ಹೋಮ್ ಲ್ಯಾಂಡ್ ಸೆಕ್ಯೂರಿಟಿ (ಆಂತರಿಕ ಇಲಾಖೆ)ಯ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಅವರನ್ನು ಮಾರ್ಚ್ 5ರಂದು ವಜಾಮಾಡಿ ಅಧ್ಯಕ್ಷ ಟ್ರಂಪ್ ಆದೇಶ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬರುವ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸಂಸತ್ತಿನ ಮಧ್ಯಂತರ ಚುನಾವಣೆಯಲ್ಲಿ ಆಡಳಿತ ರಿಪಬ್ಲಿಕನ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಲಿರುವ ಲಕ್ಷಣಗಳು ಗೋಚರಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ. ಆರ್. ಶ್ರೀನಾಥ್, ಅಟ್ಲಾಂಟ

contributor

Similar News