ಮಕ್ಕಳಲ್ಲಿ ಮೊಬೈಲ್ ವ್ಯಸನ: ಪೋಷಕರ ಪಾತ್ರವೆಷ್ಟು?
ಸಾಂದರ್ಭಿಕ ಚಿತ್ರ PC: freepik
ಮಕ್ಕಳಲ್ಲಿ ಖಿನ್ನತೆಗಳು ಹೆಚ್ಚುತ್ತಿರುವ ದಿನಗಳು ಇವು. ಪೋಷಕರು ಮತ್ತು ಸಮಾಜ ಅವರ ಮೇಲೆ ಹೇರುತ್ತಿರುವ ಒತ್ತಡಗಳೇ ಈ ಖಿನ್ನತೆಗಳಿಗೆ ಮುಖ್ಯ ಕಾರಣ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಮಕ್ಕಳ ಬದುಕನ್ನು ಅರಳಿಸಬೇಕಾಗಿರುವ ಶಿಕ್ಷಣ ವ್ಯವಸ್ಥೆಯೇ ಅವರ ದಯನೀಯ ಸ್ಥಿತಿಗೆ ಕಾರಣವಾಗುತ್ತಿದೆ. ಪರೀಕ್ಷೆಯ ಒತ್ತಡದ ಕಾರಣಕ್ಕೆ ಪ್ರತೀ ವರ್ಷ ನೂರಾರು ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೊಡ್ಡ ಸಂಖ್ಯೆಯ ಮಕ್ಕಳು ಖಿನ್ನತೆಗೆ ಜಾರುವುದಕ್ಕೂ ಇದು ಕಾರಣವಾಗುತ್ತಿದೆ. ಇದೀಗ ಇದರ ಬೆನ್ನಿಗೇ ಮೊಬೈಲ್ ಜಗತ್ತು ಮಕ್ಕಳನ್ನು ಪಾಲಿಗೆ ಮಾದಕ ದ್ರವ್ಯದಷ್ಟೇ ಭೀಕರವಾಗಿ ಪರಿಣಮಿಸಿದೆ. ಯುವ ತಲೆಮಾರು ಮಾದಕ ದ್ರವ್ಯಕ್ಕೆ ಬಲಿಯಾಗಿ ಬದುಕನ್ನು ಕಳೆದುಕೊಳ್ಳುತ್ತಿರುವುದರ ವಿರುದ್ಧ ಕಾನೂನು ವ್ಯವಸ್ಥೆ ದೊಡ್ಡ ಹೋರಾಟವನ್ನೇ ನಡೆಸುತ್ತಿದೆ. ಆದರೆ ಮನೆಯೊಳಗೆ ಎಳೆಯ ಮಕ್ಕಳು ಮೊಬೈಲ್ ಎನ್ನುವ ‘ಮಾದಕ ಚಟ’ಕ್ಕೆ ಬಲಿಯಾಗುತ್ತಿರುವುದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮೊಬೈಲ್ ಬಳಕೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ‘16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ’ಕ್ಕೆ ಮುಂದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ.
ಮೊಬೈಲ್‌ಗಳನ್ನು ಬಳಸುವ ಸಂದರ್ಭದಲ್ಲಿ ವಿವೇಕವನ್ನು ಕಳೆದುಕೊಂಡು ವಯಸ್ಕರೇ ಆಪತ್ತಿಗೆ ತಳ್ಳಲ್ಪಡುತ್ತಿದ್ದಾರೆ. ನೋಟು ನಿಷೇಧದ ಬಳಿಕ ನರೇಂದ್ರ ಮೋದಿಯವರು ಡಿಜಿಟಲ್ ಬ್ಯಾಂಕಿಂಗ್‌ಗೆ ಕರೆ ನೀಡಿದ ದಿನಗಳಿಂದ ಸ್ಮಾರ್ಟ್‌ಫೋನ್‌ಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾದವು. ಇದೇ ಸಂದರ್ಭದಲ್ಲಿ ವಂಚನೆಗಳೂ ಡಿಜಿಟಲೀಕರಣಗೊಂಡವು. ಯಾವುದೋ ದೇಶದಲ್ಲಿ ಕುಳಿತು ವಂಚಕರು, ಬ್ಲ್ಯಾಕ್‌ಮೇಲರ್‌ಗಳು ಜನರನ್ನು ನಿಯಂತ್ರಿಸುವುದಕ್ಕೆ ಶಕ್ತರಾದರು. ಒಂದಿಷ್ಟು ಎಡವಿದರೂ ಹಣ, ಮಾನ ಎರಡನ್ನು ಕಳೆದುಕೊಳ್ಳುವ ಅಪಾಯಗಳು ಎದುರಾದವು. ಸರಕಾರ ಪದೇ ಪದೇ ಎಚ್ಚರಿಕೆ ನೀಡಿದ ಬಳಿಕವೂ ಪ್ರತೀ ದಿನ ಹಲವು ಡಿಜಿಟಲ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿದ್ಯಾವಂತರೇ ಡಿಜಿಟಲ್ ವಂಚನೆಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಇತ್ತ ಯುವ ಸಮುದಾಯ ಮೊಬೈಲ್‌ಗಳಲ್ಲಿ ನೋಡಬಾರದ್ದನ್ನು ನೋಡಿ, ಕಾಣಿಸಬಾರದನ್ನು ಕಾಣಿಸಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ತಮ್ಮ ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಇದೇ ಹೊತ್ತಿಗೆ ಎಳೆ ಮಕ್ಕಳ ಕೈಗೂ ಮೊಬೈಲ್ ಬಂದುದು ಸಮಸ್ಯೆಯ ಮಗದೊಂದು ಮಗ್ಗಲು ತೆರೆದುಕೊಳ್ಳಲು ಕಾರಣವಾಗಿದೆ. ಕೊರೋನ ಲಾಕ್‌ಡೌನ್ ದಿನಗಳ ಬಳಿಕ ತಂದೆ ತಾಯಿಗಳಿಂದ ಸ್ಮಾರ್ಟ್‌ಫೋನ್‌ಗಳು ‘ಆನ್ ಲೈನ್ ತರಗತಿ’ಗಳ ಹೆಸರಿನಲ್ಲಿ ಅನಿವಾರ್ಯವಾಗಿ ಮಕ್ಕಳ ಕೈಗೆ ಹಸ್ತಾಂತರವಾದವು. ಸ್ಮಾರ್ಟ್‌ಫೋನ್ ಇಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಆನ್‌ಲೈನ್ ತರಗತಿ ದೊಡ್ಡ ಪ್ರಮಾಣದ ಪರಿಣಾಮ ಬೀರಿತು. ಇತ್ತ ಲಾಕ್‌ಡೌನ್ ಮುಗಿದ ಬಳಿಕವೂ ಮಕ್ಕಳ ಕೈಯಲ್ಲಿದ್ದ ಫೋನ್‌ಗಳು ಮತ್ತೆ ಪೋಷಕರ ಕೈಗೆ ಮರಳಲಿಲ್ಲ. ಮಕ್ಕಳು ಅದಾಗಲೇ ಮೊಬೈಲ್ ರುಚಿ ಹತ್ತಿಸಿಕೊಂಡಿದ್ದರು. ಮೊಬೈಲ್‌ನಲ್ಲಿ ಇಂಟರ್‌ನೆಟ್ ಮೂಲಕ ಪೋಷಕರು ತಲುಪಲಾಗದ ಸ್ಥಳಗಳನ್ನು ಅವರು ಅದಾಗಲೇ ತಲುಪಿದ್ದರು. ಇಂದು ಎಳೆ ಬಾಲಕ, ಬಾಲಕಿಯರು ಗೇಮಿಂಗ್ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಖಾತೆಗಳನ್ನು ಹೇಗೆ ಬಳಸಬೇಕು ಎನ್ನುವ ಅರಿವೇ ಇಲ್ಲದ ಈ ಮಕ್ಕಳು ಖಾತೆಗಳನ್ನು ತೆರೆದು ಕ್ರಿಮಿನಲ್‌ಗಳು ತೋಡಿದ ಹಳ್ಳಗಳಿಗೆ ಬೀಳುತ್ತಿದ್ದಾರೆ. ಜಾಲತಾಣದ ಭ್ರಮೆಯೊಳಗಿಂದ ಹೊರ ಬರಲಾಗದೆ ಖಿನ್ನತೆ, ಆತ್ಮಹತ್ಯೆಯಂತಹ ಕೃತ್ಯಗಳಿಗೆ ಇಳಿಯುತ್ತಿದ್ದಾರೆ.
ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿ ಇತ್ತೀಚೆಗೆ 12, 14 ಮತ್ತು 16 ವರ್ಷದ ಮೂವರು ಹೆಣ್ಣು ಮಕ್ಕಳು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡರು. ಪ್ರಾಥಮಿಕ ವರದಿಗಳ ಪ್ರಕಾರ, ಮೊಬೈಲ್ ಚಟಕ್ಕೆ ಬಿದ್ದ ಈ ಮಕ್ಕಳಿಗೆ ಏಕಾಏಕಿ ಮೊಬೈಲ್ ನಿರ್ಬಂಧಿಸಿದ್ದೇ ಆತ್ಮಹತ್ಯೆಗೆ ಕಾರಣವಾಗಿತ್ತು. ಅಂಕಿಅಂಶಗಳ ಪ್ರಕಾರ ಪ್ರತೀ ದಿನ 30ಕ್ಕೂ ಅಧಿಕ ಮಕ್ಕಳು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಕೌಟುಂಬಿಕ ಕಲಹಗಳು ಈ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೌಟುಂಬಿಕ ಬಿಕ್ಕಟ್ಟುಗಳು ಹಾಗೂ ಹೆಚ್ಚುತ್ತಿರುವ ಪೋಷಕರು-ಮಕ್ಕಳ ನಡುವಿನ ಅಂತರ ಅಂತಿಮವಾಗಿ ಮಕ್ಕಳು ಮೊಬೈಲ್‌ನ್ನು ಅವಲಂಬಿಸುವಂತೆ ಮಾಡುತ್ತಿದೆ. ಅನೇಕ ಸಂದರ್ಭದಲ್ಲಿ ಮಕ್ಕಳನ್ನು ಒಲಿಸುವುದಕ್ಕಾಗಿ ಪೋಷಕರೇ ಮೊಬೈಲ್‌ಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಾರೆ. ಪುಟ್ಟ ಕಂದಮ್ಮಗಳನ್ನು ರಮಿಸಿ ಉಣಿಸುವುದಕ್ಕೆ ಹೆಚ್ಚಿನ ಪೋಷಕರು ಮೊಬೈಲ್‌ಗಳ ಮೊರೆ ಹೋಗುವುದನ್ನು ಕಾಣಬಹುದು. ಮಕ್ಕಳು ಮೊಬೈಲ್ ಚಟಗಳಿಗೆ ಬಲಿಯಾಗುವ ಮೊದಲ ಹಂತ ಇದು. ಗೇಮಿಂಗ್ ಚಟಗಳಷ್ಟೇ ಅಲ್ಲ, ಸೈಬರ್ ಬುಲ್ಲಿಂಗ್‌ಗಳಿಗೆ ಬಹುತೇಕ ಬಲಿಯಾಗುವವರು ಅಪ್ರಾಪ್ತ ವಯಸ್ಸಿನ ಮಕ್ಕಳು. ಮೊಬೈಲ್ ವ್ಯಸನ ನಿಧಾನಕ್ಕೆ ನಿದ್ರಾ ಹೀನತೆಗೆ ಕಾರಣವಾಗಬಹುದು. ಇದು ಕಲಿಕೆಯ ಮೇಲೂ ಪರಿಣಾಮ ಬೀರಿ ಅವರ ಭವಿಷ್ಯವನ್ನು ಬಲಿತೆಗೆದುಕೊಳ್ಳಬಹುದು. ಡ್ರಗ್ಸ್‌ನಂತಹ ವ್ಯಸನಗಳಿಗೆ ಮೊಬೈಲ್‌ಗಳೇ ಹೆಬ್ಬಾಗಿಲನ್ನು ತೆರೆದುಕೊಡಬಹುದು. ಇದೇ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಡುವ ತಪ್ಪು ಮಾಹಿತಿಗಳು, ವದಂತಿಗಳು, ಅತಿ ರಂಜಿತ ಸುದ್ದಿಗಳು, ಹಿಂಸಾತ್ಮಕ ದೃಶ್ಯಗಳು, ಕಾಮಪ್ರಚೋದಕ ದೃಶ್ಯಗಳು ಎಳೆ ವಯಸ್ಸಿನ ಮೇಲೆ ವಾಸಿ ಮಾಡಲಾಗದ ಗಾಯಗಳನ್ನು ಮಾಡಬಹುದು. ಈ ಕಾರಣಗಳಿಂದ ಈ ಮೊಬೈಲ್ ಚಟಗಳಿಂದ ಮಕ್ಕಳನ್ನು ರಕ್ಷಿಸುವ ಕೆಲಸ ಅವರ ಬಾಲ್ಯದಿಂದಲೇ ಆರಂಭವಾಗಬೇಕು.
ಬರೇ ಸರಕಾರದ ನಿರ್ಬಂಧಗಳಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ ವಿಧಿಸುವುದೆಂದರೆ ಗಾಳಿಗೆ ಉರುಳು ಹಾಕಲು ಹೊರಟಂತೆ. ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿ ತೆರೆದುಕೊಳ್ಳುತ್ತದೆ. ಡಿಸೆಂಬರ್ 25ರಿಂದ ಜಾರಿಗೆ ಬರುವಂತೆ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ದೇಶವಾಗಿ ಆಸ್ಟ್ರೇಲಿ ಗುರುತಿಸಿಕೊಂಡಿದೆ. ಫ್ರಾನ್ಸ್, ಡೆನ್ಮಾರ್ಕ್ ಕೂಡ 15 ವರ್ಷದ ಒಳಗಿನ ಮಕ್ಕಳಿಗೆ ನಿಷೇಧ ಹೇರಲು ಮುಂದಾಗಿದೆ. ಬರೇ ಕರ್ನಾಟಕಕ್ಕಷ್ಟೇ ಸೀಮಿತವಾಗುವ ಈ ನಿಷೇಧ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹುದು ಎಂಬ ಬಗ್ಗೆ ಅನುಮಾನಗಳಿವೆ. ಭೌಗೋಳಿಕ ನಿರ್ಬಂಧಗಳನ್ನು ಮೀರಿ ಸಾಮಾಜಿಕ ಜಾಲತಾಣ ಬಳಸುವುದಕ್ಕೆ ಬೇರೆ ಬೇರೆ ಅಡ್ಡದಾರಿಗಳಿವೆ. ನಿಜವಾದ ವಯಸ್ಸನ್ನು ಮರೆ ಮಾಚಿ ಖಾತೆಗಳನ್ನು ತೆರೆಯುವುದು ತೀರಾ ಕಷ್ಟವೇನೂ ಅಲ್ಲ. ಎಲ್ಲಿಯವರೆಗೆ ಪೋಷಕರು ಸಹಕಾರ ನೀಡುವುದಿಲ್ಲವೋ ಅಲ್ಲಿಯವರೆಗೆ ಮಕ್ಕಳ ಮೊಬೈಲ್ ಬಳಕೆಯನ್ನು ತಡೆಯುವುದು ಕಷ್ಟ. ಮೊದಲು ಪೋಷಕರು ಈ ವ್ಯಸನದಿಂದ ಹೊರಗೆ ಬರಬೇಕು. ಮಕ್ಕಳ ಮುಂದೆ ದಿನವಿಡೀ ಮೊಬೈಲ್‌ನಲ್ಲಿ ತಲ್ಲೀನವಾಗುವುದು ಪರೋಕ್ಷವಾಗಿ ಮಕ್ಕಳನ್ನು ಆ ವ್ಯಸನಕ್ಕೆ ತಳ್ಳಿದಂತೆ. ಮಕ್ಕಳ ಜೊತೆಗೆ ಪೋಷಕರು ಬೇರೆ ಬೇರೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಬೇಕು. ಓದು, ಬುದ್ಧಿಮತ್ತೆಯ ಆಟ, ದೈಹಿಕ ಕ್ರೀಡೆಗಳಿಗೆ ಮಕ್ಕಳು ಆಸಕ್ತರಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರದ್ದಾಗಿದೆ. ಮಕ್ಕಳು ಮೊಬೈಲ್ ವ್ಯಸನಿಗಳಾಗಿ ಗುರುತಿಸಲ್ಪಟ್ಟರೆ ಅವರ ಪೋಷಕರನ್ನೇ ಅದಕ್ಕೆ ಹೊಣೆ ಮಾಡುವ ಕಾನೂನು ಜಾರಿಗೆ ತಂದರೆ ಈ ಬಲೆಯಿಂದ ಮಕ್ಕಳನ್ನು ಸುಲಭವಾಗಿ ಪಾರು ಮಾಡುವುದಕ್ಕೆ ಸಾಧ್ಯವಾಗಬಹುದೇನೋ.