ಸಿದ್ದು ಪ್ರಶ್ನೆಗೆ ಉತ್ತರಿಸುವರೇ ಎಚ್‌ಡಿಕೆ?
ಬಹಳ ದಿನಗಳ ನಂತರ ಮತ್ತೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರ ಶುರುವಾಗಿದೆ. ಹಾಗೆಯೇ ಬಹಳ ದಿನಗಳ ನಂತರ ಅಧಿಕಾರ ಹಂಚಿಕೆ ಬದಲು ಬೇರೊಂದು ಚರ್ಚೆ ಹುಟ್ಟಿಕೊಂಡಿದೆ. ನಾಯಕತ್ವದ ಬದಲಾವಣೆ ಎಂಬ ಸವಕಲು ಚರ್ಚೆಯ ಬದಲು ‘ಯಾರು, ಯಾವ ಸಮುದಾಯಕ್ಕೆ ಏನು ಮಾಡಿದ್ದಾರೆ?’ ಎನ್ನುವ ಹೊಸ ಚರ್ಚೆ ಅಗತ್ಯ ಎಂದೇ ಅನಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ದಿನ (ಫೆಬ್ರವರಿ 20) ಪತ್ರಿಕೆಯೊಂದಕ್ಕೆ ಬರೆದ ಲೇಖನ ಚರ್ಚೆಯ ಮೂಲ. ವಿಶೇಷ ಎಂದರೆ ಅಂದು ರಾಜ್ಯದ ಬೇರೆ ಯಾವ ರಾಜಕಾರಣಿಯೂ ಸಾಮಾಜಿಕ ನ್ಯಾಯದ ದಿನ ಕುರಿತು ಒಂದೇ ಒಂದು ಶಬ್ದ ಮಾತನಾಡಿಲ್ಲ. ಲೇಖನದಲ್ಲಿ ‘‘ನನ್ನ ಮೇಲೆ ಮಾಡುತ್ತಿರುವ ಟೀಕೆಗಳಿಗೆ ಜಾತಿ ಕೂಡ ಕಾರಣ. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಗಾಗಲು ಕಾರಣ. ನಾನು ಬಡವರು, ಶೋಷಿತರು ಮತ್ತು ಅವಕಾಶ ವಂಚಿತರ ಪರ ಮಾತನಾಡುತ್ತೇನೆ, ಕೆಲಸ ಮಾಡುತ್ತೇನೆ ಎನ್ನುವ ಕಾರಣಕ್ಕಾಗಿಯೇ ಪಟ್ಟಭದ್ರರು ನನ್ನನ್ನು ಗುರಿ ಮಾಡಿಕೊಂಡಿದ್ದಾರೆ. ಯಾರು, ಏನೇ ಮಾಡಿದರೂ ನಾನು ಕಡೆಯವರೆಗೂ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತೇನೆ. ಓಡಿ ಹೋಗಲು ರಣಹೇಡಿಯಲ್ಲ’’ ಎಂದು ಸಿದ್ದರಾಮಯ್ಯ ಹೇಳಿದ್ದರು.
ಈ ಮಾತುಗಳು ‘ನಾಯಕತ್ವದ ಬದಲಾವಣೆ ಹಿನ್ನೆಲೆಯಲ್ಲೇ ಬಂದಿವೆ’. ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖ ಮಾಡಿರುವುದರಿಂದ ‘ಹೈಕಮಾಂಡ್‌ಗೆ ಸಂದೇಶ ಕೊಡಲೆಂದೇ ಬಂದಿವೆ’. ‘ಮಾರ್ಮಿಕವಾಗಿ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್‌ಗೆ ಅವರದೇ ಧಾಟಿಯಲ್ಲಿ ಉತ್ತರಿಸಲು ಈ ರೀತಿ ಹೇಳಲಾಗಿದೆ’ ಎಂಬಿತ್ಯಾದಿ ವ್ಯಾಖ್ಯಾನವಾಗುತ್ತಿತ್ತು. ಇದಕ್ಕೆ ಡಿ.ಕೆ. ಶಿವಕುಮಾರ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎನ್ನುವ ಕುತೂಹಲವೂ ಹುಟ್ಟಿಕೊಂಡಿತು. ಆದರೆ ಡಿ.ಕೆ. ಶಿವಕುಮಾರ್ ಆಗಲಿ, ಬಿಜೆಪಿ ನಾಯಕರಾಗಲಿ ಪ್ರತಿಕ್ರಿಯಿಸಲಿಲ್ಲ. ಪ್ರತಿಕ್ರಿಯಿಸಿದವರು ಅದರಲ್ಲೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವರು ಎಚ್.ಡಿ. ಕುಮಾರಸ್ವಾಮಿ.
ಸಿದ್ದರಾಮಯ್ಯ ಯಾವುದೇ ಜಾತಿ ಮತ್ತು ನಾಯಕನ ಹೆಸರನ್ನು ಹೇಳಿರಲಿಲ್ಲ. ಆದರೂ ಕುಮಾರಸ್ವಾಮಿ ನೇರವಾಗಿ ‘‘ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಅಸ್ತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯರನ್ನು ಮೂಲೆಗುಂಪು ಮಾಡಿದ್ದಾರೆ. ಅಹಿಂದ ಉದ್ಧಾರಕ್ಕಾಗಿ ಮುಖ್ಯಮಂತ್ರಿ ಆಗಿಲ್ಲ. ಅವರು ಮುಖ್ಯಮಂತ್ರಿ ಆಗಲು ಕುರುಬರಷ್ಟೇ ಕಾರಣರಲ್ಲ’’ ಎಂದು ಸಿದ್ದರಾಮಯ್ಯ ಹೆಸರನ್ನೂ ಹೇಳಿದರು. ಜೊತೆಗೆ ಕುರುಬ ಜಾತಿಯ ಬಗೆಗೂ ಮಾತನಾಡಿದರು. ಇದಾದ ಮೇಲೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ‘ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಕುಟುಂಬವಾದಿಗಳು. ಕುಟುಂಬಕ್ಕಾಗಿ ಸ್ವಜಾತಿ ನಾಯಕರನ್ನು ಮುಗಿಸಿದ್ದಾರೆ’ ಎಂದಿದ್ದಾರೆ. ಜೊತೆಗೆ ದೇವೇಗೌಡ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ? ಎಂಬ ಪ್ರಶ್ನೆ ಎತ್ತಿದ್ದಾರೆ.
ಈ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಬೇಕಾಗಿತ್ತು. ಏಕೆಂದರೆ ‘ಕಾದಾಟ’ ಶುರು ಮಾಡಿದವರು ಅವರೇ ಆಗಿದ್ದರು. ಆದರೆ ದೇವೇಗೌಡ ಇಲ್ಲದಿದ್ದರೆ ಸಿದ್ದರಾಮಯ್ಯ ಉಲ್ಲೇಖ ಮಾಡಿರುವ ನಾಯಕರು ಶಾಸಕ, ಸಂಸದರೇ ಆಗುತ್ತಿರಲಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ದೇವೇಗೌಡ ಇಲ್ಲದೆಯೂ ಪುಟ್ಟಸ್ವಾಮಿಗೌಡ, ವೈ.ಕೆ. ರಾಮಯ್ಯ, ಬಚ್ಚೇಗೌಡ ಸಂಸದರಾದರು. ಬೈರೇಗೌಡರ ಪುತ್ರ ಕೃಷ್ಣ ಬೈರೇಗೌಡ ಈಗ ಸಚಿವ. ಇನ್ನೊಬ್ಬ ನಾಯಕ ಚೆಲುವರಾಯಸ್ವಾಮಿ ಮಂತ್ರಿ. ಇದೇ ರೀತಿ ಮುಖ್ಯಮಂತ್ರಿಯಾಗುವಂತಹ ದಲಿತ ನಾಯಕರು ಇರುವುದು ಕೂಡಾ ಕಾಂಗ್ರೆಸ್ ಪಕ್ಷದಲ್ಲಿಯೇ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು’’ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ 2008ರಲ್ಲಿ ಅಂಥದೊಂದು ಅವಕಾಶ ದೇವೇಗೌಡರ ಮುಂದೆ ಇತ್ತು ಎನ್ನುವುದನ್ನು ಮರೆತಿದ್ದಾರೆ.
ಕುಮಾರಸ್ವಾಮಿ ಮೊದಲು ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಅವರಿಗೂ ಪ್ರಶ್ನೆಗಳನ್ನು ಕೇಳಬೇಕು. ಅಷ್ಟು ಮಾತ್ರವಲ್ಲ, ಉತ್ತರಕ್ಕೆ ಒತ್ತಾಯಿಸಬೇಕು. ವಾಸ್ತವದಲ್ಲಿ ಇಂಥ ಚರ್ಚೆ ನಡೆಯುವುದು ಒಳ್ಳೆಯದೇ. ದೇವೇಗೌಡ, ಕುಮಾರಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಏನು ಮಾಡಿದರು? ಬೇರೆ ಸಮುದಾಯಗಳಿಗೆ ಏನು ಮಾಡಿದರು? ಹಾಗೆಯೇ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿದ್ದಾರೆ? ಬೇರೆ ಸಮುದಾಯಗಳಿಗೆ ಏನು ಮಾಡಿದ್ದಾರೆ? ಯಾರು ಸಾಮಾಜಿಕ ನ್ಯಾಯದ ಪರ? ಯಾರು ವಿರುದ್ಧ? ಯಾರನ್ನು ಯಾರು ಬೆಳೆಸಿದರು? ಯಾರನ್ನು ಯಾರು ಬಳಸಿಕೊಂಡು ಬಿಸಾಡಿದರು? ಎಲ್ಲವೂ ಚರ್ಚೆಯಾಗಬೇಕು. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಆರೋಗ್ಯಕರ ಚರ್ಚೆ ಬಹಳ ಅಗತ್ಯ.
ಡಿಕೆಶಿ ಪರವಾದರೆ ಎಚ್‌ಡಿಕೆ?
ಸಿದ್ದರಾಮಯ್ಯ ವಿರುದ್ಧ ಸಮರಕ್ಕಿಳಿದಿರುವ ಕುಮಾರಸ್ವಾಮಿ ಅನಿವಾರ್ಯವಾಗಿ ಈಗ ಡಿ.ಕೆ. ಶಿವಕುಮಾರ್ ಪರ ನಿಲ್ಲುವಂತಾಗಿದೆ. ಇಷ್ಟು ದಿನ ಸಿದ್ದರಾಮಯ್ಯ ಬೇಕಾದರೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿ, ಪರಮೇಶ್ವರ್‌ಗೆ ಬೇಕಾದರೂ ಪಟ್ಟ ಸಿಗಲಿ, ಡಿ.ಕೆ. ಶಿವಕುಮಾರ್ ಮಾತ್ರ ಮುಖ್ಯಮಂತ್ರಿ ಆಗಬಾರದು ಎನ್ನುವ ನಿಲುವಿನಲ್ಲಿದ್ದ ಕುಮಾರಸ್ವಾಮಿ ಈಗ ‘ಸಿದ್ದರಾಮಯ್ಯಗೆ ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ‘ನಮ್ಮಲ್ಲಿ ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ. ಕೃಷ್ಣಪ್ಪ, ಕೃಷ್ಣಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ಸೇರಿದಂತೆ ಇನ್ನೂ ಅನೇಕ ಒಕ್ಕಲಿಗರ ನಾಯಕರಿದ್ದಾರೆ’ ಎಂದು ಹೇಳುವಂತೆ ಪ್ರಚೋದಿಸಿದ್ದಾರೆ. ಇದರಿಂದ ಅಂತಿಮವಾಗಿ ಲಾಭವಾಗುವುದು ಸಿದ್ದರಾಮಯ್ಯ ಅವರಿಗೇನೇ. ಏಕೆಂದರೆ ಅವರೀಗ ಒಂದೆಡೆ ದೊಡ್ಡ ಪಟ್ಟಿ ಬಿಡುಗಡೆ ಮಾಡಿ ‘ಡಿ.ಕೆ. ಶಿವಕುಮಾರ್ ಒಕ್ಕಲಿಗರ ಏಕಮೇವ ನಾಯಕ ಅಲ್ಲ’ ಎನ್ನುವ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್ ಪಕ್ಷದಲ್ಲಿ ಇರುವ ಒಕ್ಕಲಿಗ ನಾಯಕರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಪಿಕ್ ಆಂಡ್ ಪಾರ್ಕ್!
ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ಎಸ್.ಎಂ. ಕೃಷ್ಣ ಕಾರಣ. He Is Unpolished ಎಂಬುದಾಗಿ ಹೇಳಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಸೋನಿಯಾ ಗಾಂಧಿ ಅವರನ್ನು ಒಪ್ಪಿಸಿದ್ದು ಎಸ್.ಎಂ. ಕೃಷ್ಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ರಾಜಕೀಯವನ್ನು ಏಕಮುಖವಾಗಿ ನೋಡಲು ಸಾಧ್ಯವಿಲ್ಲ. ದೇವೇಗೌಡರ ವೈರಿ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲಿ ಎನ್ನುವ ಅಭಿಪ್ರಾಯ ಎಸ್.ಎಂ. ಕೃಷ್ಣಗೆ ಇತ್ತಾದರೂ ಬಂದಮೇಲೆ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಬೇಡ ಎನ್ನುವ ನಿಲುವನ್ನೂ ಹೊಂದಿದ್ದರು. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕು ಎನ್ನುವ ಪ್ರಸ್ತಾವವನ್ನು ರಾಜ್ಯದ ನಾಯಕರು ಎಸ್.ಎಂ. ಕೃಷ್ಣ ಎದುರು ಇಟ್ಟಾಗ Pick And Park (ಕರೆದು ಮೂಲೆಗೆ ಕೂರಿಸಿ) ಎಂದಷ್ಟೇ ಹೇಳಿ ಎದ್ದು ಹೋಗಿದ್ದರಂತೆ. ಈ ಘಟನೆಗೆ ಬಿ.ಎಲ್. ಶಂಕರ್, ಎಚ್.ಎಂ. ರೇವಣ್ಣ, ಎಚ್. ವಿಶ್ವನಾಥ್, ಆರ್.ವಿ. ದೇವರಾಜ್ ಸಾಕ್ಷಿಯಾಗಿದ್ದರು ಎನ್ನುತ್ತಾರೆ ಕಾಂಗ್ರೆಸ್ ನಾಯಕರು.
ಬಿಜೆಪಿ ನಾಯಕರ ಬಣ್ಣನೆಯೇ ಬೇರೆ!
ಇನ್ನೊಂದೆಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ-ಕುಮಾರಸ್ವಾಮಿ ಜಗಳವನ್ನು ಬೇರೆ ರೀತಿ ನೋಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸಮಸ್ಯೆ ಶುರುವಾಗಿದೆ. ಹಾಸನದಲ್ಲಿ ಪ್ರೀತಮ್ ಗೌಡ, ಮಂಡ್ಯದಲ್ಲಿ ನಾರಾಯಣಗೌಡ ಜೆಡಿಎಸ್ ಜೊತೆ ಕಿರಿಕಿರಿ ಶುರು ಮಾಡಿದ್ದಾರೆ. ಇತ್ತೀಚೆಗೆ ಛಲವಾದಿ ನಾರಾಯಣಸ್ವಾಮಿ 113 ಸ್ಥಾನ ಪಡೆದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದರು. ಆ ಮೂಲಕ ಜೆಡಿಎಸ್ ಕನಸು ಕಾಣಬಾರದು ಎಂಬ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಮೊನ್ನೆ ಮೊನ್ನೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ‘ಸ್ವತಂತ್ರವಾಗಿ ಗೆಲ್ಲಬೇಕು’ ಎನ್ನುವ ಮಾತನ್ನಾಡಿದ್ದಾರೆ. ಜೆಡಿಎಸ್ ಎಂಬ ಮಿತ್ರ ಪಕ್ಷ ಇದೆ ಎನ್ನುವುದನ್ನು ಉದ್ದೇಶಪೂರ್ವಕವಾಗಿಯೇ ಮರೆತಿದ್ದಾರೆ. ಇವೆಲ್ಲವೂ ಕುಮಾರಸ್ವಾಮಿಗೆ ಇರಿಸುಮುರಿಸು ಉಂಟುಮಾಡಿವೆ. ಅವರು ಹತಾಶೆಯಿಂದ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಈ ಹಂತದಲ್ಲಿ ಡಿ.ಕೆ. ಶಿವಕುಮಾರ್ ಏನನ್ನಾದರೂ ಮಾತನಾಡಿದರೆ ಅವರ ವಿರುದ್ಧವೂ ತಿರುಗಿ ಬೀಳುತ್ತಿದ್ದರು ಎನ್ನುವುದು ಬಿಜೆಪಿ ನಾಯಕರ ವಾದ.
----ಆಫ್ ದಿ ರೆಕಾರ್ಡ್!----
2028ರ ಚುನಾವಣೆಗೆ ಸುನೀಲ್ ಕನಗೋಲುರನ್ನು ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಅಷ್ಟು ಬೇಗ ಮಾಡುವುದು ಅದರ ಜಾಯಮಾನವೂ ಅಲ್ಲ. ಇದರ ನಡುವೆ ಇನ್ನೊಬ್ಬ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮುಂದಿನ ಬಾರಿ ರಾಜ್ಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಯಾವ ಪಕ್ಷಕ್ಕೆ ಕೆಲಸ ಮಾಡುತ್ತಾರೆ ಎನ್ನುವುದು ಖಾತ್ರಿಯಾಗಿಲ್ಲ. ಅವರು ಚುನಾವಣಾ ತಂತ್ರಜ್ಞನಾಗಿ ಕೆಲಸ ಶುರು ಮಾಡಿದ್ದೇ ಬಿಜೆಪಿ ಮೂಲಕ, ಮತ್ತೆ ಬಿಜೆಪಿಗೆ ಹೋಗಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಅವರು ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಿದ್ದರಿಂದ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಎರಡೂ ಪ್ರಬಲ ಪಕ್ಷಗಳ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್ ಪಿಕೆಯನ್ನು ಕರೆತಂದರೆ ಅಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಹೆಚ್ಚು ಖುಷಿ ಪಡಬೇಕಾದವರು ರಾಜಕೀಯ ವರದಿ ಮಾಡುವ ಪತ್ರಕರ್ತರು. ಏಕೆಂದರೆ ಈಗಾಗಲೇ ಪ್ರಶಾಂತ್ ಕಿಶೋರ್ ತಂಡ ರಾಜಕೀಯ ವಿಶ್ಲೇಷಕರಿಗಾಗಿ ಹುಡುಕಾಟ ನಡೆಸುತ್ತಿದೆಯಂತೆ.