×
Ad

ಗ್ಯಾರಂಟಿಗಳ ಪರಿಷ್ಕರಣೆಯಾಗಲೇಬೇಕು

Update: 2026-03-02 10:07 IST

ಒಂದೆಡೆ ನಾಯಕತ್ವದ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಬಜೆಟ್ ತಯಾರಿ ನಡೆಸುತ್ತಿದ್ದಾರೆ. ರಾಜಕೀಯವಾಗಿ ಮುಸ್ಸಂಜೆಯಲ್ಲಿರುವ ಅವರು ಇಷ್ಟೆತ್ತರಕ್ಕೆ ಬೆಳೆಯಲು ಕಾರಣವಾಗಿದ್ದೇ ಕನ್ನಡ ಕಾವಲು ಸಮಿತಿಯಿಂದ ಈವರೆಗೆ ಭಿನ್ನ ಆಡಳಿತಗಾರನಾಗಿ ಗೋಚರಿಸಿದ್ದರಿಂದ. ಆದರೀಗ ಅವರ ರಾಜಕೀಯ ಹತಾರಗಳು ಮೊದಲಿನ ಮೊನಚು ಉಳಿಸಿಕೊಂಡಿಲ್ಲ. ಅದರಿಂದಾಗಿ ರಾಜ್ಯದ ಜನರ ಮನಸ್ಸು ಗೆಲ್ಲಲು ಮತ್ತು ರಾಜಕೀಯವಾಗಿ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಆಡಳಿತ ಮತ್ತು ಬಜೆಟ್ ಮೂಲಕವೇ ‘ಚಮತ್ಕಾರ’ ಮಾಡಬೇಕು.

ಸಿದ್ದರಾಮಯ್ಯ ಕೆಲವು ವಿಷಯದಲ್ಲಿ ಯಥಾಸ್ಥಿತಿವಾದಿ. ಬಜೆಟ್ ವಿಷಯದಲ್ಲಿ ಸಂಪ್ರದಾಯವಾದಿ. ಹಿಂದಿನವರು ಕಡೆಗಣಿಸಿದ್ದ ಅಹಿಂದ ವರ್ಗಗಳಿಗೆ ಹಾಲೆರೆದಿರುವುದು ದಿಟ. ಬಡವರ ಪರ ಮರುಗಿರುವುದು ನಿಜ. ಶಿಸ್ತು ಕಾಯ್ದುಕೊಂಡಿರುವುದು ಸತ್ಯ. ಆದರೆ ‘ಇದ್ದುದ್ದರಲ್ಲಿ ಮಾತ್ರವೇ ಹಂಚುವೆ’ ಎನ್ನುವುದು ದೌರ್ಬಲ್ಯವಾಗಬಾರದು. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯ ಸರಕಾರಕ್ಕೆ ತೆರಿಗೆ ಮೂಲದಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ಅನುದಾನ ಹಂಚಿಕೆಯಲ್ಲೂ ದೊಡ್ಡ ಮಟ್ಟದ ತಾರತಮ್ಯ ಮಾಡುತ್ತಿದೆ. ಜೊತೆಗೆ ಗ್ಯಾರಂಟಿಗಳ ಹೊರೆ ಬಾಧಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಂಪ್ರದಾಯವಾದಿ ಮಾರ್ಗಗಳು ಫಲಕೊಡಲಾರವು. Out of the box ಯೋಚನೆ ಮಾಡುವುದು ಅನಿವಾರ್ಯ.

ಅದಕ್ಕಾಗಿ ಸಿದ್ದರಾಮಯ್ಯ ಹಿಂದಿನ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ಕಡೆ ನೋಡಬೇಕು. ನರಸಿಂಹರಾವ್ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬುದನ್ನರಿತು ಮನಮೋಹನ್ ಸಿಂಗ್ ಅವರನ್ನು ಹುಡುಕಿ ತಂದರು. ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯ ಭಾರದ ಜೊತೆ ಹಣಕಾಸು ಖಾತೆಯ ನಿರ್ವಹಣೆ ಸಾಧ್ಯವಿಲ್ಲ ಎನ್ನುವುದನ್ನು ಮನಗೊಂಡು ಪಿ. ಚಿದಂಬರಂಗೆ ಜವಾಬ್ದಾರಿ ಕೊಟ್ಟರು. ಅವರ ಪ್ರಯೋಗಗಳು ಅಂದಿನ ಹಣಕಾಸು ಪರಿಸ್ಥಿತಿಯಲ್ಲಿ ಪ್ರಯೋಜನ ನೀಡಿದವು. ಸಿದ್ದರಾಮಯ್ಯ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಇಂಥದೇ ಯೋಚನೆ ಮಾಡಬೇಕಾಗಿದೆ. ಇಲ್ಲದಿದ್ದರೆ ಹಣಕಾಸು ಖಾತೆ ಬಿಡುವುದೇ ಉತ್ತಮ.

16 ಬಜೆಟ್ ಮಂಡಿಸಿ ಅನುಭವ ಇರುವ ನಾಯಕನಿಗೆ ಹಣಕಾಸು ಖಾತೆ ಬಿಡಿ ಎನ್ನುವ ಮಾತು ತುಸು ಕಟುವಾಯಿತು ಎನಿಸುತ್ತದೆಯಾದರೂ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾಗಿದೆ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ತಲೆಮಾರಿನಿಂದ ತಲೆಮಾರಿಗೆ ಸಮಸ್ಯೆಗಳು, ಸವಾಲುಗಳು ಬದಲಾಗುತ್ತಿರುತ್ತವೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ನಿಲುವುಗಳನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಜವಾಬ್ದಾರಿಯನ್ನೇ ಬದಲಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸದ್ಯ ದೇಶೀ-ವಿದೇಶಿ ಹಣಕಾಸು ತಜ್ಞರ ಜೊತೆ ಚರ್ಚಿಸಿ, ಚಿಂತಿಸಿ ರಾಜ್ಯದ ಪರಿಸ್ಥಿತಿಗೆ ಅನುಗುಣವಾದ ಆರ್ಥಿಕತೆ ರೂಪಿಸಬಲ್ಲ ಸಾಮರ್ಥ್ಯವುಳ್ಳವರಿಗೆ ಅವಕಾಶ ಕೊಡಬೇಕು. ರಾಜ್ಯದ ಸಚಿವ ಸಂಪುಟದಲ್ಲಿ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರಂಥ ಒಬ್ಬಿಬ್ಬರು ಮಾತ್ರ ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹುಡುಕಬೇಕಷ್ಟೇ.

ಸಿದ್ದರಾಮಯ್ಯ ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ. ಈಗ ಇಡೀ ದೇಶದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಮುರಿಯಲು ಹೊರಟಿದ್ದಾರೆ. ಅವರು ಇನ್ನೆಷ್ಟೇ ದಾಖಲೆ ಬರೆದರೂ, ಮುರಿದರೂ ಜನ ನೆನಪಿನಲ್ಲಿ ಇಟ್ಟುಕೊಳ್ಳುವುದು ಹಸಿದವರ ಹೊಟ್ಟೆ ತುಂಬಿಸಿದ ಅನ್ನರಾಮಯ್ಯ, ಬಡವರ ಪರ ನಿಂತ ಭಾಗ್ಯಗಳ ಸರದಾರ ಎಂದು ಮಾತ್ರವೇ. ಅವರೀಗ ದಾಖಲೆಗಳಿಗಾಗಿ ಉಳಿಯುವಂಥದ್ದು ಏನೂ ಇಲ್ಲ. ಮೇಲಾಗಿ ಅವರಿಗೆ ಜಾಸ್ತಿ ದಿನಗಳು ಉಳಿದಿಲ್ಲ. ಉಳಿದ ಅವಧಿಯಲ್ಲಿ ಮಾಡುವ ಕೆಲಸಕ್ಕೆ ಅವರೀಗ ಇದೇ ಬಜೆಟ್ಟಿನಲ್ಲಿ ಮುನ್ನುಡಿ ಬರೆಯಬೇಕು.

ಕೇಂದ್ರ ಸರಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯಗಳ ನಡುವೆಯೂ ರಾಜ್ಯದ ಹಣಕಾಸು ಸ್ಥಿತಿ ಹದಗೆಡುತ್ತಿರಲು ಇನ್ನೆರಡು ಪ್ರಮುಖ ಸಮಸ್ಯೆಗಳಿವೆ. ಒಂದು; ಮಿತಿ ಮೀರಿರುವ ಸರಕಾರದ ಖರ್ಚುಗಳು, ಎರಡು; ಗ್ಯಾರಂಟಿ ಯೋಜನೆಗಳು. ಸರಕಾರದ ಖರ್ಚುಗಳನ್ನು ನೋಡುವುದಾದರೆ 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ. ಇದರಲ್ಲಿ ಸಂಬಳ, ಪಿಂಚಣಿ, ಬಡ್ಡಿ ಪಾವತಿ, ಸಬ್ಸಿಡಿಗಳು ಸೇರಿದಂತೆ ಆಡಳಿತ ವೆಚ್ಚ 3,11,739 ಕೋಟಿ ರೂಪಾಯಿ. ಪ್ರತೀ ವರ್ಷ ಇದು ಶೇಕಡಾ 10 ರಷ್ಟು ಹೆಚ್ಚಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಿದರೆ ಮಾತ್ರ ಅಭಿವೃದ್ಧಿಗಳಿಗೆ ಹಣ ಉಳಿಸಲು ಸಾಧ್ಯ.

ಆನೆಭಾರವನ್ನು ಹಗುರಾಗಿಸಿ

ಜಿಲ್ಲಾಧಿಕಾರಿ ಇರುವಾಗ, ಹೆಚ್ಚುವರಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ಇರುವಾಗ ಅಸಿಸ್ಟಂಟ್ ಕಮಿಷನರ್, ಇಲಾಖೆಗಳಲ್ಲಿ ಪ್ರಧಾನ ಕಾರ್ಯದರ್ಶಿ ಜೊತೆಗೆ ಹೆಚ್ಚುವರಿ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು ಸೇರಿದಂತೆ ಸರಕಾರಕ್ಕೆ ಅಧಿಕಾರಿಗಳದ್ದೇ ಭಾರ. ಯಾರ ಶ್ರಮಕ್ಕೂ ಅನ್ಯಾಯವಾಗಬಾರದು, ಆದರೆ ಹೆಚ್ಚು ಕೆಲಸ ಮಾಡುವ ಕೆಳ ಹಂತದ ನೌಕರರನ್ನು ಹೆಚ್ಚೆಚ್ಚು ನೇಮಕಾತಿ ಮಾಡಿಕೊಂಡು ಆನೆಭಾರದ ಹುದ್ದೆಗಳನ್ನು ರದ್ದುಪಡಿಸಿದರೆ ಸಂಬಳಕ್ಕೆ ಮಾಡುವ ಖರ್ಚು ತುಸು ಕಮ್ಮಿಯಾದೀತು.

ಸರಕಾರ ಹಮ್ಮಿಕೊಳ್ಳುವ ಎಷ್ಟೋ ಕಾರ್ಯಕ್ರಮಗಳು, ಪ್ರವಾಸಗಳು, ಅಧ್ಯಯನಗಳು, ತರಬೇತಿಗಳು ಅನಗತ್ಯವಾಗಿರುತ್ತವೆ. ಸಚಿವರ ಮತ್ತು ಅಧಿಕಾರಿಗಳ ‘ಖುಷಿ’ಗಾಗಿ

ಏರ್ಪಟ್ಟವಾಗಿರುತ್ತವೆ. ಆಡಳಿತ ಯಂತ್ರವನ್ನು ಕಾಲಕಾಲಕ್ಕೆ ನವೀಕರಣಗೊಳಿಸುವುದು ಸರಕಾರದ ಕರ್ತವ್ಯವಾದರೂ ಅಧಿಕಾರಿ/ನೌಕರ ವರ್ಗ ಸಣ್ಣ ಕೆಲಸ ಕಲಿಯುವ ಖರ್ಚನ್ನೂ ಸರಕಾರವೇ ಭರಿಸಲಿ ಎಂದು ಬಯಸುತ್ತಾರೆ. ಇದೇ ರೀತಿ ಜಾತಿಯ ಹೆಸರಿನ, ಮಹಾನ್ ನಾಯಕರ ಹೆಸರಿನ ಭವನಗಳು ಮತ್ತು ಪ್ರತಿಮೆಗಳ ನಿರ್ಮಾಣವಾಗುತ್ತಿವೆ. ಇವುಗಳ ಲಾಭ ಆಗುತ್ತಿರುವುದು ಆಯಾ ಜಾತಿಯ, ಆಯಾ ಕ್ಷೇತ್ರದ ರಾಜಕಾರಣಿ ಮತ್ತು ಗುತ್ತಿಗೆದಾರರಿಗೆ ಮಾತ್ರ ಲಾಭ. ಇಂಥ ‘ನಿರುಪಯೋಗಿ ಸ್ಥಾವರ’ಗಳ ಬದಲು ಅಧ್ಯಯನ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳ ನಿರ್ಮಾಣದತ್ತ ಲಕ್ಷ್ಯ ಹರಿಸಬೇಕಾಗಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು.

ಇತ್ತೀಚೆಗೆ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ರೀತಿ ರಾಜ್ಯದಲ್ಲಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ಪಡೆಯುತ್ತಿರುವವರು ಸುಮಾರು 150 ಮಂದಿ. ನಿಗಮ-ಮಂಡಳಿಗಳಿಗೆ ಹಣವಿಲ್ಲ, ಹಣ ಇಲ್ಲದ ಕಾರಣಕ್ಕೆ ಕೆಲಸವೂ ಇಲ್ಲ. ಆದರೂ ಅಧ್ಯಕ್ಷರ ಗತ್ತು-ಗೈರತ್ತುಗಳಿಗಾಗಿ ಗೂಟದ ಕಾರು. ಇದು ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗಿದೆ. ಹೀಗೆ ಕೋಟಿ ಕೋಟಿ ರೂಪಾಯಿ ಅನಗತ್ಯವಾಗಿ ಖರ್ಚಾಗುತ್ತಿದೆ. ಇಂಥ ಹಲವು ಲೋಪಗಳನ್ನು ಸರಿಪಡಿಸುವ ಬಗ್ಗೆ ಸಲಹೆ -ಶಿಫಾರಸು ನೀಡಲೆಂದೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಚನೆ

ಮಾಡಲಾಗಿದೆ. ಆಯೋಗ ನಿರಂತರವಾಗಿ ವರದಿಗಳನ್ನು ಕೊಡುತ್ತಿದೆ. ಆದರೆ ಸರಕಾರಗಳು ಅವುಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ. ಈಗಲಾದರೂ ಮನಸ್ಸು ಮಾಡಬೇಕು.

ಅನ್ನಭಾಗ್ಯಕ್ಕೆ ದುಡ್ಡಿಲ್ಲದಂತಾಗಬಾರದು!

ಎರಡನೆಯದಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆಗೆ ಮಾಡಲೇಬೇಕು. ಹೇಗೂ ಈಗ ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಚುನಾವಣೆಗೆ ಮುನ್ನ ‘ಮಹದೇವಪ್ಪ ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ’ ಎಂದು ಹೇಳಿದ್ದರಿಂದ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡಬೇಕಾಗಿತ್ತು. ಮಾಡಿಯಾಯಿತು. ಈಗಲೂ ಅದೇ ರೀತಿ ಮುಂದುವರಿಸುವ ಅಗತ್ಯ ಇಲ್ಲ. ಮೂರು ವರ್ಷದ ಹತ್ತಿರಕ್ಕೆ ಬಂದು ಮೂರನೇ ಬಜೆಟ್ ಮಂಡಿಸುವ ವೇಳೆಯಲ್ಲಾದರೂ ಸರಕಾರ ತನ್ನ ಮಹತ್ವಾಕಾಂಕ್ಷಿ ಯೋಜನೆಗಳಾದ ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡಬೇಕು.

ಒಬ್ಬ ವ್ಯಕ್ತಿಗೆ ಎಷ್ಟು ಅಕ್ಕಿ ಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ಅನ್ನಭಾಗ್ಯದ ಲಾಭಕ್ಕಾಗಿ ಅಕ್ರಮವಾಗಿ ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಬೇಕು. ಉಚಿತವಾಗಿ ವಿದ್ಯುತ್ ನೀಡಲು ಅವರವರ ಆಸ್ತಿ ಮತ್ತು ಆದಾಯಗಳಿಗೆ ಅನುಗುಣವಾಗಿ ಕೆಲವು ಷರತ್ತುಗಳನ್ನು ವಿಧಿಸಬೇಕು. ಕರ್ನಾಟಕಕ್ಕೆ ಉದ್ಯೋಗ ನಿರ್ಮಾಣ ಮಾಡಬಲ್ಲಂಥ ಕಂಪೆನಿಗಳು ಬರಲು ಇಲ್ಲಿ ಕೌಶಲ್ಯಭರಿತ ಯುವಕ/ಯುವತಿಯರಿಲ್ಲ. ಈ ನಿಟ್ಟಿನಲ್ಲಿ ಯುವನಿಧಿ ಹಣವನ್ನು ಕೌಶಲ್ಯ ತರಬೇತಿಗೆ ಬಳಸಬೇಕು. ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ದುಡ್ಡು ಖರ್ಚಾಗುತ್ತಿರುವುದು ಗೃಹಲಕ್ಷ್ಮಿ ಯೋಜನೆಗೆ. ಅದೇ ರೀತಿ ಅತಿ ಹೆಚ್ಚು ದುರುಪಯೋಗ ಆಗುತ್ತಿರುವುದು ಕೂಡ ಗೃಹಲಕ್ಷ್ಮಿ ಯೋಜನೆಯೇ. ಅವರ ಆಸ್ತಿ-ಆದಾಯಗಳ ಆಧಾರದ ಮೇಲೆ ಮಾತ್ರ ಹಣ ನೀಡುವ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಲ್ಲಿ ಮಹಿಳೆಯರು ಓಡಾಡುವುದಕ್ಕೆ ಮಾತ್ರ ಹಣ ಖರ್ಚು ಮಾಡಬೇಕಾಗಿಲ್ಲ. ಉಳಿದಂತೆ ಊಟ, ವಸತಿ ಮತ್ತಿತರ ಕಾರಣಗಳಿಗೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಉಳಿಯದಂತಾಗುತ್ತದೆ. ಸರಕಾರ ಈ ನಿಟ್ಟಿನಲ್ಲೂ ಯೋಚನೆ ಮಾಡಬೇಕು. ಈ ಐದು ಗ್ಯಾರಂಟಿಗಳನ್ನು ಈಗ ಪರಮಾರ್ಶೆ ಮಾಡದಿದ್ದರೆ ಮುಂದೊಂದು ದಿನ ಇವುಗಳ ಕಾರಣಕ್ಕೆ ಅನ್ಯಭಾಗ್ಯಕ್ಕೆ ದುಡ್ಡಿಲ್ಲದಂತಾಗುತ್ತದೆ..

ಈಗಲೇ ಮಾಡಬೇಕು!

ಮೇಲೆ ಹೇಳಲಾದ ಎರಡೂ ಕೆಲಸಗಳನ್ನು ಸಿದ್ದರಾಮಯ್ಯ ಈಗಲೇ ಮಾಡಬೇಕು. ಸರಕಾರದ ಮೇಲಿನ ಭಾರ ಪ್ರತೀ ದಿನವೂ ಹೆಚ್ಚಾಗುತ್ತಿರುವುದರಿಂದ ಎಷ್ಟು ಬೇಗ ಸುಧಾರಣೆಯಾಗುತ್ತೋ ಅಷ್ಟು ಭಾರ ಕಡಿಮೆಯಾಗುತ್ತದೆ. ಇದಲ್ಲದೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಿನ ವರ್ಷ ಕೈ ಹಾಕಿದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಈಗಲೇ ಮಾಡಿದರೆ ‘ಇದು ಸರಿಪಡಿಸುವ ಕ್ರಮ, ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅನುಸರಿಸುತ್ತಿರುವ ಹೆಜ್ಜೆ’ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಮಯ ಇರುತ್ತದೆ.

ಸರಕಾರಕ್ಕೆ ಕೆಟ್ಟ ಹೆಸರು ಯಾರಿಂದ?

ಇದು ಆಡಳಿತಕ್ಕೆ ಸಂಬಂಧಪಟ್ಟಿದ್ದು. ಸಿದ್ದರಾಮಯ್ಯ ನಿಷ್ಕ್ರಿಯರಾಗಿರುವ ಸಚಿವರ ವಿಚಾರದಲ್ಲಿ ಸಕ್ರಿಯವಾಗಬೇಕಿದೆ. ಸರಕಾರಕ್ಕೆ ಹಲವು ಸಚಿವರಿಂದ ಕೆಟ್ಟ ಹೆಸರು ಬರುತ್ತಿದೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಂದ ಜಾಸ್ತಿ ಕೆಟ್ಟ ಹೆಸರು ಬರುತ್ತಿದೆ. ಡಿ.ಕೆ. ಶಿವಕುಮಾರ್ ಉಸ್ತುವಾರಿಯಾಗಿರುವ ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಜನ ಸರಕಾರದ ದುಸ್ಥಿತಿ

ಎಂದು ಬಣ್ಣಿಸುತ್ತಿದ್ದಾರೆ. ಕೋಗಿಲು ವಿದ್ಯಮಾನದಿಂದ ಹಿಡಿದು ಕಸದ ಸಮಸ್ಯೆಯವರೆಗೆ ಇನ್ನೂ ಒಂದಷ್ಟು ಉದಾಹರಣೆ ಕೊಡಬಹುದು. ಇನ್ನೊಬ್ಬ ಕನಸುಗಾರ ಡಾ. ಜಿ. ಪರಮೇಶ್ವರ್ ಮನಸ್ಸಿಲ್ಲದೆ ಗೃಹ ಇಲಾಖೆ ಚಲಾಯಿಸುತ್ತಿರುವುದು ಅವರು ನೀಡುವ ‘ಗೊತ್ತಿಲ್ಲ’ ಎಂಬ ಉತ್ತರದಿಂದ ಗೊತ್ತಾಗುತ್ತದೆ. ಬಾಯಿ ಬಿಟ್ಟರೆ ಸಂವಿಧಾನದ ಬಗ್ಗೆ ಮಾತನಾಡುವ ಮತ್ತೊಬ್ಬ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಚ್.ಸಿ. ಮಹದೇವಪ್ಪ ಒಳಗೊಳಗೇ ಒಳಮೀಸಲಾತಿ ಜಾರಿಗೆ ವಿರೋಧ ಮಾಡಿದರೆಂಬ ಮಾತು ಹೊರಗೆ ಜೋರಾಗಿ ಕೇಳಿಬರುತ್ತಿದೆ. ಈಗಲ್ಲ, 2028ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ಸತೀಶ್ ಜಾರಕಿಹೊಳಿಯವರ ಲೋಕೋಪಯೋಗಿ ಇಲಾಖೆ ಬಗ್ಗೆ ಗುತ್ತಿಗೆದಾರರು ಗುಟುರು ಹಾಕುತ್ತಿದ್ದಾರೆ. ಯಾವಾಗ ಕುತ್ತಿಗೆಗೆ ಬರುತ್ತದೆಯೋ ಗೊತ್ತಿಲ್ಲ. ಸಂಪುಟ ಪುನರ್ ರಚನೆ ಮಾಡಿದರೆ ಎಲ್ಲವೂಸರಿ ಆಗದಿರಬಹುದು, ಮಾಡದಿದ್ದರೆ ಇನ್ನೂ ಕೆಟ್ಟುಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News