×
Ad

ಗಾಂಧಿ ಜಾಹೀರಾತಿನ ಐಡಿಯಾ ಯಾರದ್ದು?

Update: 2026-02-09 10:43 IST

ಜೀವಮಾನವಿಡೀ ಅಹಿಂಸೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧೀಜಿ ಕೋಲು ಹಿಡಿದು ಹೊಡೆಯಲು ಹೋಗುತ್ತಿದ್ದಾರೆ ಎಂದು ಬಿಂಬಿಸುವ, ಹಿಂಸೆಯ ಪ್ರತಿರೂಪದಂತಿರುವ ಜಾಹೀರಾತಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಗಾಂಧೀಜಿ ಬಗೆಗಿನ ದ್ವೇಷವೇ ಬಿಜೆಪಿಗೆ ಇಂಥದೊಂದು ಜಾಹೀರಾತು ನೀಡುವಂತೆ ಪ್ರಚೋದಿಸಿದೆ ಎಂಬ ಮಾತೂ ಕೇಳಿಬರುತ್ತಿದೆ. ಎಂದಿನಂತೆ ನಾವೇ ನಿಜವಾದ ಗಾಂಧಿಯ ವಾರಸುದಾರರು ಎಂದು ಕಾಂಗ್ರೆಸಿಗರು ಕಾಟಾಚಾರಕ್ಕೆ ಮಾಧ್ಯಮ ಹೇಳಿಕೆ ಮೂಲಕ ಖಂಡಿಸಿ, ನೆಪಕ್ಕೆ ದೂರೊಂದನ್ನು ಸಲ್ಲಿಸಿ ಸುಮ್ಮನಾಗಿದ್ದಾರೆ.

ಗಾಂಧೀಜಿ ಬಗೆಗೆ ಬಿಜೆಪಿ ನಾಯಕರದ್ದು ದಶಕಗಳ ದ್ವೇಷ. ಅವರು ಗಾಂಧೀಜಿ ಬಗ್ಗೆ ಪ್ರಬುದ್ಧವಾಗಿ ಅಥವಾ ಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದುದರಿಂದ ಜಾಹೀರಾತು ಪ್ರಹಸನದಲ್ಲೂ ಕಾಂಗ್ರೆಸ್ ಧಾಟಿಯಲ್ಲೇ ಉತ್ತರ ನೀಡಲು ಹೋಗಿ ಅಚಾತುರ್ಯವಾಗಿದೆ ಎಂದು ಅವರು ವಿಷಾದ ಅಥವಾ ಪಶ್ಚಾತಾಪ ವ್ಯಕ್ತಪಡಿಸುವ ಪ್ರಮೇಯ ಕೂಡ ಇಲ್ಲ.

ಗಾಂಧೀಜಿಯನ್ನು ರಾಜಕಾರಣಿಗಳ ನಡುವಿನ ಸಂತ, ಸಂತರ ನಡುವಿನ ರಾಜಕಾರಣಿ ಎಂದು ಹೇಳಲಾಗುತ್ತದೆ. ಗಾಂಧೀಜಿ ರಾಜಕಾರಣ ಮತ್ತು ಜೀವನವನ್ನು, ಒಂದು ಹಂತದಲ್ಲಿ ಧರ್ಮವನ್ನು ಅಷ್ಟು ಉತ್ಕೃಷ್ಟವಾಗಿ ಕಂಡುಂಡವರು. ಇಂದಿನ ರಾಜಕಾರಣಿಗಳು ಗಾಂಧೀಜಿಯನ್ನೇ ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಹೆಸರಿನಲ್ಲಿದ್ದ ಮನರೇಗಾ ಕಾಯ್ದೆಯನ್ನು ರದ್ದು ಮಾಡಿದ ಬಿಜೆಪಿಯದ್ದು ಒಂದು ರೀತಿಯ ಕೀಳು ಮಟ್ಟದ ರಾಜಕಾರಣ. ಅದಕ್ಕೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷದ್ದು ಮತ್ತೊಂದು ಬಗೆಯ ನೀಚ ರಾಜಕಾರಣ.

ಈ ದೇಶದ ಅನ್ನದಾತರು ದಿಲ್ಲಿ ಗಡಿಯಲ್ಲಿ ಕೊರೆಯುವ ಚಳಿ ಮತ್ತು ಬೆಂಕಿಯಂಥ ಬಿಸಿಲಿನ ನಡುವೆಯೂ ವರ್ಷವಿಡೀ ಪ್ರತಿಭಟನೆ ನಡೆಸಿ, 600ಕ್ಕೂ ಹೆಚ್ಚು ಪ್ರಾಣಗಳನ್ನು ಬಲಿಕೊಟ್ಟು, ಕಡೆಗೂ ಕೇಂದ್ರ ಸರಕಾರ ಮರಣಶಾಸನದಂತಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಿದರು. ಅಂಥ ಕೆಲಸ ಮನರೇಗಾ ವಿಷಯದಲ್ಲಿ ಕಾಂಗ್ರೆಸಿಗರಿಂದ ಮಾಡಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಎಂಬಿತ್ಯಾದಿ ಬೊಗಳೆ ಮಾತನ್ನಾಡುವ ಕಾಂಗ್ರೆಸ್ ನಾಯಕರು ಗ್ರಾಮೀಣ ಭಾರತದ ಬಡವರ, ದಿನ ದಲಿತರ ಹೊಟ್ಟೆಪಾಡಿಗಾಗಿ ಇದ್ದ ಮನರೇಗಾ ಕಾಯ್ದೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಅವರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕತೆಯೂ ಉಳಿದಿಲ್ಲ.

► ಪ್ರಿಯಾಂಕ್-ವಿಜಯೇಂದ್ರ ಉತ್ತರಿಸಲಿ

ಮನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಿ ಎಂದು ವಿಧಾನಸಭೆಯಲ್ಲಿ ನಿರ್ಣಯ ಪಾಸು ಮಾಡುವುದು ಸುಲಭ. ಅದಕ್ಕಾಗಿ ಮಾಡಿದ್ದಾರೆ. ಹೋರಾಟ, ಪ್ರತಿಭಟನೆ, ಉಪವಾಸಗಳನ್ನು ಮಾಡುವುದು ಕಷ್ಟ. ಅದಕ್ಕಾಗಿ ಅವುಗಳನ್ನು ಮಾಡುವುದಿಲ್ಲ. ಜಾಹೀರಾತಿನ ವಿಚಾರಕ್ಕೆ ಬರುವುದಾದರೆ ಇನ್ನೊಂದಷ್ಟು ದುರ್ನಾತ. ಮನರೇಗಾ ಕಾಯ್ದೆ ರದ್ದಾಗಿರುವುದನ್ನು ಗಾಂಧೀಜಿ ಮೂಲಕವೇ ವಿರೋಧಿಸಬೇಕು ಎನ್ನುವುದು ಪ್ರಿಯಾಂಕ್ ಖರ್ಗೆಯವರ ಕಲ್ಪನೆಯಂತೆ. ಬಿಜೆಪಿ ಅದೇ ಧಾಟಿಯಲ್ಲಿ ಉತ್ತರಿಸಿರುವುದರಿಂದ ಪ್ರಿಯಾಂಕ್ ಖರ್ಗೆ ಅವರೇ ಪ್ರತ್ಯುತ್ತರ ನೀಡಲಿ, ನಾವ್ಯಾಕೆ ಮಾತನಾಡಬೇಕು ಎನ್ನುತ್ತಾರೆ ಕೆಲ ಕಾಂಗ್ರೆಸಿಗರು. ಗಾಂಧೀಜಿ ಅವರನ್ನು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಚಿತ್ರಿಸಲಾಗಿದೆ. ಅವರ ಮೌಲ್ಯಗಳಿಗೆ ಧಕ್ಕೆ ತರಲಾಗಿದೆ ಎನ್ನುವುದು ಕಾಂಗ್ರೆಸಿಗರಿಗೆ ಸಮಸ್ಯೆಯೇ ಅಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಮಂತ್ರಿಗಳಾದಿಯಾಗಿ ಯಾರೂ ಈ ಕುರಿತು ಮಾತನಾಡಿಲ್ಲ. ಖಂಡಿಸಿಲ್ಲ. ಪ್ರಿಯಾಂಕ್ ಖರ್ಗೆಯನ್ನು ಬಿಡಿ, ನಿಮಗೆ ಗಾಂಧೀಜಿ ಬೇಡವಾ? ಎಂದರೆ ಅದಕ್ಕೂ ಅವರಲ್ಲಿ ಉತ್ತರವಿಲ್ಲ. ಇದರಿಂದ ಬಿಜೆಪಿಯಲ್ಲಿ ಮಾತ್ರವಲ್ಲ, ಸ್ವಪಕ್ಷೀಯರಲ್ಲೂ ಪ್ರಿಯಾಂಕ್ ಖರ್ಗೆ ಬಗ್ಗೆ ಹೆಚ್ಚುತ್ತಿರುವ ಅಸೂಯೆ ಎದ್ದು ಕಾಣುತ್ತಿದೆ.

ಗಾಂಧೀಜಿ ಕೈಗೆ ಕೋಲು ಕೊಟ್ಟು ತಾವೇ ಹೊಡಿಸಿಕೊಳ್ಳುತ್ತಿರುವ ಬಿಜೆಪಿಯವರನ್ನು ಕೇಳಿದರೆ ಅವರದೂ ಅಂಥ ದುರ್ಬುದ್ಧಿಯೇ. ವಿಜಯೇಂದ್ರನನ್ನು ಕೇಳಿ, ನಮ್ಮನ್ನು ಏಕೆ ಕೇಳುತ್ತೀರಿ? ಎಂದು ಜಾರಿಕೊಳ್ಳುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಈಗ ಎಲ್ಲದಕ್ಕೂ ಕ್ರೆಡಿಟ್ ವಾರ್. ವಿಜಯೇಂದ್ರ ಮತ್ತು ಆರ್.ಅಶೋಕ್ ಪೂರ್ವ-ಪಶ್ಚಿಮ. ಅಲ್ಲಿ ಉತ್ತರ, ದಕ್ಷಿಣಗಳೂ ಉಂಟು. ಒಬ್ಬರು ಪ್ರಸ್ತಾಪಿಸುವ ವಿಷಯ ಇನ್ನೊಬ್ಬರಿಗೆ ಸರಿ ಎನಿಸುವುದಿಲ್ಲ. ಇನ್ನೊಬ್ಬರು ಎತ್ತುವ ಪ್ರಶ್ನೆಗಳು ಮತ್ತೊಬ್ಬರಿಗೆ ಸಹ್ಯವಾಗುವುದಿಲ್ಲ.

► ಒಂದು ಚೊಂಬಿನ ಕತೆ

ಜಾಹೀರಾತು ಕೊಟ್ಟಿರುವ ಬಿಜೆಪಿ ಬಗ್ಗೆ ಮಾತ್ರವಲ್ಲ, ಪ್ರಕಟಿಸಿರುವ ಮಾಧ್ಯಮಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಮಾಧ್ಯಮಗಳು ಈ ಮಟ್ಟದ ಅಧಃಪತನಕ್ಕೆ ಇಳಿಯಬಾರದಿತ್ತು ಎಂಬ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜಾಗದಲ್ಲಿ ನರೇಂದ್ರ ಮೋದಿ ಇದ್ದರೆ ಮಾಧ್ಯಮಗಳು ಈ ಜಾಹೀರಾತನ್ನು ಪಕಟಿಸುವ ಧೈರ್ಯ ತೋರುತ್ತಿದ್ದವೇ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಹಿಂದಿನ ಕೆಲ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಹಿಂದೆ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬಿಡಿಗಾಸು ಕೂಡ ಸಿಕ್ಕಿಲ್ಲ, ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿದೆ ಎಂದು ಬಿಂಬಿಸಲು ಕಾಂಗ್ರೆಸ್ ಪಕ್ಷ ‘ಚೊಂಬಿನ ಜಾಹೀರಾತು’ ಕೊಡಲು ಮುಂದಾಗಿತ್ತು. ಆಗ ಅದನ್ನು ಪ್ರಕಟಿಸಲು ಮಾಧ್ಯಮಗಳು ಹಿಂದೇಟು ಹಾಕಿದ್ದವು. ‘ನೀವು ಇದನ್ನು ಪ್ರಕಟಿಸದಿದ್ದರೆ ಮುಂದೆ ಯಾವ ಜಾಹೀರಾತನ್ನೂ ಕೊಡುವುದಿಲ್ಲ’ ಎಂದು ಧಮಕಿ ಹಾಕಿದ ಮೇಲೆ ಪ್ರಕಟಿಸಿದವು. ಅದೇ ರೀತಿ ‘40ಶೇ. ಭ್ರಷ್ಟಾಚಾರದ ಜಾಹೀರಾತು’ ಪ್ರಕಟಿಸುವಂತೆ ಕೇಳಿಕೊಂಡಾಗಲೂ ಮಾಧ್ಯಮಗಳು ಒಪ್ಪಿರಲಿಲ್ಲ. ‘ಇದರಿಂದ ಕಾನೂನು ತೊಡಕುಂಟಾದರೆ ನಾವು ಜವಾಬ್ದಾರರು’ ಎಂದು ಬರೆದುಕೊಟ್ಟ ಮೇಲೆ ಪ್ರಕಟಿಸಿದವು. ಈಗ ಯಾರೂ ಬೆದರಿಸಿಲ್ಲ, ಏಕೆಂದರೆ ಎಲ್ಲರೂ ಮೊದಲೇ ಹೆದರಿ ಕೂತಿದ್ದಾರೆ.

► ಯಾರಿಗೂ ಬೇಡವಾದ ಗಾಂಧಿ

ಗಾಂಧೀಜಿ ಎಲ್ಲರಿಗೂ ಸೇರಿದವರು. ಇಡೀ ಸಮಾಜ ಗಾಂಧೀಜಿಗಾಗುವ ಅವಮಾನಕ್ಕೆ ತಲೆ ತಗ್ಗಿಸಬೇಕು ಎನ್ನುವುದು ನಿಜ. ಆದರೂ ಕಾಂಗ್ರೆಸ್ ಜವಾಬ್ದಾರಿ ಜಾಸ್ತಿ. ಕಾಂಗ್ರೆಸ್ ಇಷ್ಟು ಬೇಜವಾಬ್ದಾರಿತನ ಹೊಂದಿರುವುದರಿಂದಲೇ ಗಾಂಧೀಜಿ ಎಂಬ ಮಹಾತ್ಮನ ಎದುರು ಕ್ಷುದ್ರ ಗೋಡ್ಸೆಯನ್ನು ನಿಲ್ಲಿಸುತ್ತಿರುವುದು.

ಅಹಿಂಸಾ ತತ್ವವನ್ನು ಜಗತ್ತಿಗೇ ಕೂಗಿ ಹೇಳಿದ ಗಾಂಧೀಜಿಗೆ ಇಂದು ಕೋಲು ಕೊಟ್ಟವರು ನಾಳೆ ಚಾಕು, ಚೂರಿಗಳನ್ನೂ ಕೊಡಬಹುದು. ಅರೆಬೆತ್ತಲೆಯ ಮೂಲಕ ಆಡಂಬರವನ್ನು ನಿರಾಕರಿಸಿದ ಫಕೀರನಿಗೆ ‘ಆಧುನಿಕ ಫಕೀರ’ನಂತೆ ಸೂಟು ಬೂಟು ಹಾಕಬಹುದು. ಕೇವಲ ಕನ್ನಡಕದ ಗೆರೆಗಳನ್ನು ಬಿಡಿಸಿ ಈತನೇ ಆ ಮಹಾನ್ ಮಾನವತಾವಾದಿ ಎಂದು ಹೇಳಿಬಿಡುವಷ್ಟು ಸರಳವಾಗಿರುವ ಗಾಂಧಿಗೆ ನರೇಂದ್ರ ಮೋದಿ ಧರಿಸುತ್ತಾರೆ ಎಂದು ಹೇಳಲಾಗುವ (ಖಾತರಿ ಇಲ್ಲ) ದುಬಾರಿ ಕನ್ನಡಕ ಚಿಚ್ಚ ಉಛಿಡಿಛಿಚ್ಟ ಅನ್ನು ತೊಡಿಸಬಹುದು. ಸತ್ಯವನ್ನು ಪ್ರತಿಪಾದಿಸಿದ ಗಾಂಧೀಜಿ ಬಾಯಲ್ಲಿ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳು ಆತಂಕಕಾರಿ ಸುಳ್ಳುಗಳನ್ನೂ ಹೇಳಿಸಬಹುದು.

ಇವೆಲ್ಲಾ ಸಾಧ್ಯವಾಗುತ್ತವೆ. ಏಕೆಂದರೆ ‘ಗಾಂಧಿ ಭಾರತ’ದಲ್ಲಿ ಗಾಂಧೀಜಿಗಿರುವಷ್ಟು ‘ಶತ್ರುಗಳು’ ಬೇರಾರಿಗೂ ಇಲ್ಲ. ಗಾಂಧೀಜಿ ಮುಸ್ಲಿಮ್‌ರ ಬಗ್ಗೆ ಮೃದು ಧೋರಣೆ ಹೊಂದಿದ್ದರು ಎಂದು ಹಿಂದೂಗಳು ವಿರೋಧಿಸುತ್ತಾರೆ. ಜವಾಹರಲಾಲ್ ನೆಹರೂರನ್ನು ಪ್ರಧಾನಿ ಮಾಡಲು ಮುಹಮ್ಮದ್ ಅಲಿ ಜಿನ್ನಾಗೆ ಅನ್ಯಾಯ ಮಾಡಿದರು ಎಂದು ಕೆಲವು ಮುಸ್ಲಿಮರಿಗೂ ಗಾಂಧೀಜಿ ಬೇಡವಾಗಿದ್ದಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡರೆ ನಮ್ಮ ಸಮಸ್ಯೆಗಳು ಅರ್ಧಕ್ಕರ್ಧ ಕಮ್ಮಿಯಾಗುತ್ತವೆ ಎನ್ನುವ ಅರಿವು ಅವರಿಗಿಲ್ಲ.

ಜಾತಿ ವಿಷಯಕ್ಕೆ ಬರುವುದಾದರೆ ಹರಿಜನರ ಪರವಾಗಿದ್ದರು, ಜಾತ್ಯತೀತ ಭಾರತದ ಕನಸು ಹೊಂದಿದ್ದರು ಎನ್ನುವ ಕಾರಣಗಳಿಗಾಗಿ ಸುಧಾರಣೆಯನ್ನು ಒಪ್ಪದ ಬ್ರಾಹ್ಮಣರು ಗಾಂಧೀಜಿಯನ್ನು ಉಗ್ರವಾಗಿ ವಿರೋಧಿಸುತ್ತಾರೆ. ಪೂನಾ ಒಪ್ಪಂದವೂ ಸೇರಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆ ಕೆಲ ಅಭಿಪ್ರಾಯ ಭೇದಗಳಿದ್ದವು ಎನ್ನುವ ಕಾರಣಕ್ಕಾಗಿ ದಲಿತರು ಕೂಡ ಗಾಂಧೀಜಿಯನ್ನು ಒಪ್ಪುವುದಿಲ್ಲ. ಉಳಿದಂತೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಶೂದ್ರರಿಗೆ ಯಾರು ನಮ್ಮವರು, ಯಾರು ನಮ್ಮ ಶತ್ರುಗಳು ಎನ್ನುವುದೇ ಗೊತ್ತಿಲ್ಲ. ಅವರು ಕೂಡ ಗಾಂಧೀಜಿಯನ್ನು ಅಪ್ಪಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಗಾಂಧೀಜಿಗೆ ಅಪ್ಪ, ಅಮ್ಮ ಇಲ್ಲ.

ಗಾಂಧೀಜಿ ದೇಹಕ್ಕೆ ಗೋಡ್ಸೆ ಗುಂಡು ಹೊಡೆದು ಕೊಂದ. ಆದರೆ ಭಾರತ-ಪಾಕಿಸ್ತಾನ ವಿಭಜನೆಯಾದಾಗಲೇ ಅವರು ಅರ್ಧ ಸತ್ತಿದ್ದರು. ಅವರನ್ನು ದೈಹಿಕವಾಗಿ ಕೊಲ್ಲುವ ಮೊದಲೇ ಅವರ ವಿಚಾರಧಾರೆಗಳಿಗೆ ಅಪಚಾರ ಎಸಗುವ ಕೆಲಸ ನಡೆಯುತ್ತಿತ್ತು. ಕೊಲೆಯ ಬಳಿಕ ಇನ್ನಷ್ಟು ಜಾಸ್ತಿಯಾಗಿತ್ತು. ಈಗ ಕೇಂದ್ರದಲ್ಲಿ ತಾಂತ್ರಿಕವಾಗಿ ಬಿಜೆಪಿ ಮತ್ತು ತಾತ್ವಿಕವಾಗಿ ಆರೆಸ್ಸೆಸ್ ಅಧಿಕಾರಕ್ಕೆ ಬಂದ ಮೇಲೆ ಶರವೇಗದಲ್ಲಿ ನಡೆಯುತ್ತಿದೆ.

2014ರ ಅಕ್ಟೋಬರ್ 2ರಂದು ಶುರುವಾದ ಸ್ವಚ್ಛ ಭಾರತ ಅಭಿಯಾನದ ಹಿಂದೆ ಕೂಡ ದುರದ್ದೇಶವಿತ್ತು. ಅಂದಾದರೂ ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಅದನ್ನು ಮರೆಮಾಚಿ ಕಸ-ಪೊರಕೆಗಳ ಬಗ್ಗೆ ಚರ್ಚಿಸುವಂತೆ ಮಾಡಲಾಯಿತು. ಬಹಿರಂಗವಾಗಿ ಗೋಡ್ಸೆಯ ಆರಾಧನೆ ನಡೆಯಿತು. ಲಡಾಖ್‌ಗೆ ಪೂರ್ಣ ರಾಜ್ಯದ ಸ್ಥಾನಮಾನ ಕೊಡಿ ಎಂದು ಗಾಂಧಿ ಮಾದರಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು. ಹೊಸ ಸೇರ್ಪಡೆ ಮನರೇಗಾ ಕಾಯ್ದೆಯ ರದ್ದು. ಗೋಡ್ಸೆಗೆ ಗುಡಿ ಕಟ್ಟುವವರಿಂದ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News