×
Ad

ಶೂ ತೂರುವುದು ಸನಾತನ ಧರ್ಮವೇ?

Update: 2025-10-13 10:42 IST

► ಘಟನೆ 1: ಮೂರು ವರ್ಷಗಳ ಹಿಂದೆ ರಾಯಚೂರಿನ ಗಣರಾಜ್ಯೋತ್ಸವದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇದ್ದರೆ ತಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದ ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದ್ದರು. ಅಷ್ಟೇಯಲ್ಲ, ಬಾಬಾ ಸಾಹೇಬರ ಫೋಟೊವನ್ನು ತೆಗೆಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

► ಘಟನೆ 2: ವರ್ಷದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲಾಗುವ ಸಂಸತ್ತಿನಲ್ಲೇ ‘ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಈಗ ಫ್ಯಾಶನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರನ್ನು ಜಪ ಮಾಡಿಬಿಟ್ಟಿದ್ದರೆ ನಿಮಗೆ ಸ್ವರ್ಗವೇ ಸಿಕ್ಕಿಬಿಡುತ್ತಿತ್ತು’ ಎಂದರು.

► ಘಟನೆ 3: ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರಿಗೆ ಅಥವಾ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ‘ನ್ಯಾಯವಾದಿ’ ಎನಿಸಿಕೊಳ್ಳುವವನೊಬ್ಬ ಶೂ ಎಸೆಯುತ್ತಾನೆ (ಉದ್ದೇಶಪೂರ್ವಕ ಏಕವಚನ ಪ್ರಯೋಗ).

► ಘಟನೆ 4: ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಪೀಠಕ್ಕೆ ಶೂ ಎಸೆದವನ ಧೈರ್ಯವನ್ನು ಮೆಚ್ಚಲೇಬೇಕು’ ಎಂದು ಹೇಳುತ್ತಾರೆ.

ಈ ಪ್ರಕರಣಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ವ್ಯಕ್ತಿಗಳನ್ನು. ಒಬ್ಬರು ಕಾನೂನನ್ನು ಎತ್ತಿ ಹಿಡಿಯುತ್ತೇನೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿರುವ ನ್ಯಾಯಾಧೀಶರು, ಇನ್ನೊಬ್ಬರು ಕಾನೂನನ್ನು ರಚಿಸುವ ಹೊಣೆಯುಳ್ಳ ಗೃಹ ಸಚಿವರು, ಮತ್ತೊಬ್ಬರು ಹುದ್ದೆಯ ಹೆಸರಲ್ಲೇ ನ್ಯಾಯವಾದಿ ಎನಿಸಿಕೊಳ್ಳುವವರು. ಮಗದೊಬ್ಬರು ಕಾನೂನನ್ನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯಾಗಿದ್ದವರು.

ಮೊದಲ ಎರಡು ಪ್ರಕರಣಗಳಲ್ಲಿ ನೇರವಾಗಿ ಸಂವಿಧಾನ ಬರೆದವರ ಮೇಲೆ ದಾಳಿ ಮಾಡಲಾಗಿದೆ. ನಂತರದ ಎರಡು ಪ್ರಕರಣದಲ್ಲಿ ಸಂವಿಧಾನದ ಮೇಲೆಯೇ ದಾಳಿ ಮಾಡಲಾಗಿದೆ. ಬಾಲ್ಯದಲ್ಲಿ ವಿದ್ಯೆ ನಿರಾಕರಣೆ ಮಾಡಿರುವುದು, ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಿಬಂದಿದ್ದರೂ ಕೋರ್ಟ್ ಕಲಾಪಗಳಲ್ಲಿ ಭಾಗಿಯಾಗಲು ಬಿಡದಿರುವುದು, ಕಾನೂನು ಮಂತ್ರಿಯಾಗಿ ಸಂಸತ್ ಭವನಕ್ಕೆ ಬಂದಾಗ ‘ಮೈಲಿಗೆ ಆಗಿಬಿಡುತ್ತದೆ’ ಎಂದು ರೆಡ್ ಕಾರ್ಪೆಟ್ ಅನ್ನು ತೆಗೆದುಹಾಕಿಸಿರುವುದು, ಸಂವಿಧಾನ ಶಿಲ್ಪಿ, ರಾಷ್ಟ್ರನಾಯಕ ಎಂದು ಒಪ್ಪದೇ ಇರುವುದು ಮತ್ತು ತೀರಾ ಇತ್ತೀಚೆಗೆ ‘ನಾವು ಬಂದಿರುವುದೇ ಸಂವಿಧಾನ ಬದಲಿಸಲು’ ಎಂದು ಬೊಬ್ಬೆಹೊಡೆದದ್ದು, ಎಲ್ಲವೂ ಅಂಬೇಡ್ಕರ್ ಅವರ ಬಗೆಗಿರುವ ಅಸಹನೆಯನ್ನು ಅತ್ಯಂತ ಸ್ಪಷ್ಟವಾಗಿ ಸಾರಿ ಹೇಳುತ್ತವೆ. ಎಲ್ಲದಕ್ಕೂ ಕಾರಣ ಜಾತಿ.

ಇವೆಲ್ಲವೂ ಸಾಂಕೇತಿಕ ಘಟನೆಗಳು. ದೇಶದಲ್ಲಿ ಪ್ರತಿ ದಿನ, ಪ್ರತಿಗಂಟೆ ಪರಿಶಿಷ್ಟ ಜಾತಿಯ ಜನರ ಮೇಲೆ ಹಲ್ಲೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರದಂಥ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆದ ಪ್ರಕರಣಕ್ಕೆ ಮರಳುವುದಾದರೆ ಘಟನೆ ಬಗ್ಗೆ ದೇಶದಲ್ಲಿ ಇನ್ನಷ್ಟು ಚರ್ಚೆಯಾಗಬೇಕಾಗಿತ್ತು. ಇನ್ನಷ್ಟು ಆಕ್ರೋಶ ಉಕ್ಕಿ ಬರಬೇಕಾಗಿತ್ತು. ಚಪ್ಪಲಿ ಎಸೆಯುವ ಮನೋಸ್ಥಿತಿಯ ಜನ ತತ್ತರಿಸಿ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಬೇಕಿತ್ತು. ಆದರೆ ಏನೂ ಆಗಿಲ್ಲ. ದೇಶ ತಣ್ಣಗಿದೆ.

ಹೊಣೆಗೇಡಿ ಮಾಧ್ಯಮಗಳು ‘ಶೂ ಎಸೆಯುವ ಯತ್ನ’ ಎಂದು ಬರೆಯುತ್ತವೆ. ಶೂ ತೂರಿದ್ದಕ್ಕೆ ಕಾರಣಗಳನ್ನು ಕೊಡುತ್ತಿವೆ. ಅವುಗಳ ಪ್ರಕಾರ ಆತ ‘ಯತ್ನಿಸಿದ್ದಾನೆಯಷ್ಟೇ; ಯಶಸ್ವಿಯಾಗಿಲ್ಲ’. ಕನ್ನಡದ ಇನ್ನೊಂದು ಪತ್ರಿಕೆ ‘ವೃದ್ಧ ವಕೀಲ’ ಎಂದು ಬರೆಯುವ ಮೂಲಕ ಅತ್ಯಂತ ನೀಚ ಕೃತ್ಯ ಮಾಡಿದವನ ಮೇಲೆ ಅನುಕಂಪ ಮೂಡಿಸಲು ಪ್ರಯತ್ನಿಸಿದೆ. ಸುದ್ದಿ ವಾಹಿನಿಗಳು ಶೂ ಎಸೆದವನಿಗೆ ಸಮರ್ಥಿಸಿಕೊಳ್ಳಲು ಅವಕಾಶ ಕೊಡುತ್ತಿವೆ. ಒಂದು ವೇಳೆ ‘ಮೇಲ್ಜಾತಿ’ಯ ನ್ಯಾಯಮೂರ್ತಿಗಳ ಮೇಲೆ ದಲಿತ ಅಥವಾ ಮುಸ್ಲಿಮ್ ವ್ಯಕ್ತಿ ಶೂ ತೂರಿದ್ದರೆ ಮಾಧ್ಯಮಗಳು ಹೀಗೆ ವರ್ತಿಸುತ್ತಿದ್ದವಾ? ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಶೂ ಎಸೆದವನನ್ನೂ ಸಮರ್ಥಿಸಲಾಗುತ್ತಿದೆ. ಇಂಥ ಉದ್ದಟತನ ಏಕೆ ಸಾಧ್ಯವಾಗುತ್ತಿದೆ ಎಂದರೆ ಕೋಪ ಮಾಡಿಕೊಳ್ಳಬೇಕಾದವರು ಕೋಪ ಮಾಡಿಕೊಳ್ಳದ ಕಾರಣಕ್ಕೆ, ಹೊಟ್ಟೆಯಾಳದಲ್ಲಿರುವ ಸಿಟ್ಟು ರಟ್ಟೆಗೆ ಬಾರದ ಕಾರಣಕ್ಕೆ.

ತಪ್ಪುಗಳು ಮುಖ್ಯ ನ್ಯಾಯಾಮೂರ್ತಿಗಳಿಂದ ಮೊದಲಾಗಿವೆ ಎಂಬ ವಾದವಿದೆ. ಅದಕ್ಕೂ ಮೀರಿ ಅವರ ಸ್ಥಾನದ ದೃಷ್ಟಿಯಿಂದ ಅವರ ನಡೆ ಸರಿಯಿರಬಹುದು. ಆದರೆ ಅವರ ಕೆಳಗಿನ ವ್ಯವಸ್ಥೆ ಅಥವಾ ನ್ಯಾಯಾಂಗ ವ್ಯವಸ್ಥೆ ಕಠಿಣ ಕ್ರಮಕ್ಕೆ ಮುಂದಾಗಬೇಕಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ನನಗೇ ಈ ಪರಿಸ್ಥಿತಿಯಾದರೆ ಸಮಾಜದ ಕಟ್ಟ ಕಡೆಯಲ್ಲಿರುವವನ ಕಷ್ಟ ಎಷ್ಟಿರಬಹುದು ಎಂದು ಅರೆಕ್ಷಣ ಯೋಚಿಸಬೇಕಾಗಿತ್ತು ಅಥವಾ ‘ನಮ್ಮ ವ್ಯವಸ್ಥೆ’ ಹಾಗೆ ಯೋಚಿಸಬೇಕಿತ್ತು. ಇವೆಲ್ಲವುಗಳ ಜೊತೆಗೆ ನಾಗರಿಕ ಸಮಾಜ ಕೂಡ ಈ ಘಟನೆಗೆ ಹೇಗೆ ಸ್ಪಂದಿಸಿದೆ ಎನ್ನುವುದು ಕೂಡ ಬಹಳ ಮುಖ್ಯವಾದ ವಿಷಯವೇ.

ಮುಖ್ಯ ನ್ಯಾಯಮೂರ್ತಿಗಳಿರಲಿ, ಅಂಬೇಡ್ಕರ್ ವಾದಿಗಳಿರಲಿ, ಬೇರೆ ಯಾರೇ ಇರಲಿ, ಈ ಘೋರ ಅವಮಾನವನ್ನು ಕ್ಷಮಿಸಬಾರದಿತ್ತು. ಕ್ಷುದ್ರ ಜೀವಿಗಳನ್ನು ಕ್ಷಮಿಸುವುದು ಕೂಡ ಅಪರಾಧವೇ. ಭೂಮಿಗೆ ಬಿದ್ದು ತುಳಿಸಿಕೊಳ್ಳುತ್ತಿರುವವರು ಸಿಡಿದೇಳುವ ಗುಣವನ್ನು ಬೆಳಸಿಕೊಳ್ಳಬೇಕೇ ವಿನಃ ಮನ್ನಿಸಿ ಸುಮ್ಮನಾಗುವುದನ್ನಲ್ಲ. ಶತಶತಮಾನಗಳಾಗಿವೆ ‘ಅವರಿಗೆ’ ಮನುಷ್ಯರಾಗಲು ಅವಕಾಶ ಕೊಟ್ಟು. ಅವರಿನ್ನೂ ಅನಿಷ್ಟ-ಕನಿಷ್ಠ ಮನಸ್ಥಿತಿಯಲ್ಲಿಯೇ ಇದ್ದಾರೆಂದರೆ ಅವರು ಶಿಕ್ಷಾರ್ಹರೆಂದೇ ಅರ್ಥ. ದುರ್ಬುದ್ಧಿಯ ಆ ಜನ ದ್ವೇಷಕ್ಕೆ ಅರ್ಹರೆಂದೇ ಅರ್ಥ. ಪ್ರೀತಿಸಬೇಕಾದವರನ್ನು ಪ್ರೀತಿಸಬೇಕು, ದ್ವೇಷಿಸಬೇಕಾದವರನ್ನು ಅಗತ್ಯವಾಗಿ ದ್ವೇಷಿಸಬೇಕು. ಅದೇ ಜಗದ ನಿಯಮ, ಪ್ರಕೃತಿಯ ನಿಯಮ, ಕಡೆಗೆ ಪ್ರೀತಿಯ ನಿಯಮ ಕೂಡ.

ಒಂದೊಮ್ಮೆ ಮುಂದುವರಿದ ಜಾತಿಗಳ ಸಾಧುಗಳು-ಸಂತರು ಅಥವಾ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಂಥವರ ಮೇಲೆ ಯಾರಾದರೂ ಶೂ ತೂರಿದ್ದರೆ ಏನಾಗಿರುತ್ತಿತ್ತು? ಆಗಲೂ ದೇಶ ತಣ್ಣಗಿರುತ್ತಿತ್ತಾ? ಮುಖ್ಯ ನ್ಯಾಯಮೂರ್ತಿಗಳ ಕಡೆಗೆ ಶೂ ತೂರಿದ್ದು ಬೆಳಗ್ಗೆ 11:30ರವೇಳೆಗೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದು ರಾತ್ರಿ 8:29ಕ್ಕೆ. ಒಂದೊಮ್ಮೆ ಭಾಗವತರ ಮೇಲೆ ಯಾರಾದರೂ ಚಪ್ಪಲಿ ಎಸೆದಿದ್ದರೆ ಆಗಲೂ ಪ್ರಧಾನಿಗಳು ಇಷ್ಟೇ ತಡವಾಗಿ ಪ್ರತಿಕ್ರಿಯಿಸುತ್ತಿದ್ದರೆ? ಈ ಪ್ರಶ್ನೆಗೆ ಸ್ವತಃ ಪ್ರಧಾನಿಯೂ ಸೇರಿದಂತೆ ನೂರನಲವತ್ತು ಕೋಟಿಗೂ ಹೆಚ್ಚು ಜನರ ಪೈಕಿ ಯಾರೊಬ್ಬರೂ ‘ಹೌದು’ ಎಂದು ಉತ್ತರಿಸಲಾರರು. ಹಾಗಾದರೆ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಏಕೆ ಅಸಡ್ಡೆ? ಅವರ ರೀತಿ ಪ್ರಕರಣಗಳ ವಿಚಾರಣೆ ವೇಳೆ ಕಹಿ ಅಭಿಪ್ರಾಯ ವ್ಯಕ್ತಪಡಿಸಿದ ಇತರರಿಗೇಕಿಲ್ಲ ಇಂಥ ಅವಮಾನ? ಜಾತಿಯ ಕಾರಣಕ್ಕಾ? ಈ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸುವ ಕೋಟಿ ಕೋಟಿ ಜನ ಸಿಗುತ್ತಾರೆ.

ಇದರಿಂದ ‘ಶೂ ಎಸೆದದ್ದು ಜಾತಿಯ ಕಾರಣಕ್ಕೇ ಹೊರತು ಧರ್ಮದ ಕಾರಣಕ್ಕಲ್ಲ’ ಎನ್ನುವುದು ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇನ್ನೂ ಬಿಡಿಸಿ ಹೇಳಬೇಕೆಂದರೆ ಇದೇ ನ್ಯಾ. ಬಿ.ಕೆ. ಗವಾಯಿ ಅವರು ಸಿಜೆಐ ಆಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಆವರಣದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಮೂರ್ತಿಗಳು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸುಪ್ರೀಂ ಕೋರ್ಟಿನಲ್ಲಿ ಜೈ ಭೀಮ್ ಎಂಬ ಘೋಷಣೆ ಮೊಳಗಿತ್ತು.

ನ್ಯಾಯಾಲಯದ ಅಂಗಳದಲ್ಲಿ ಬಹುಶಃ ಮೊದಲ ಬಾರಿಗೆ ಮೊಳಗಿದ ಜೈ ಭೀಮ್ ಘೋಷಣೆ ‘ನ್ಯಾಯ ನಮ್ಮ ಸ್ವತ್ತು’ ಎಂಬ ಭ್ರಮೆಯಲ್ಲಿದ್ದ ಮಂದಿಗೆ ಅಸೂಯೆಯನ್ನು ಹುಟ್ಟುಹಾಕಿದೆ. ಅದಾದ ಮೇಲೆ ಅವರು ‘ನಿಮ್ಮ ವಿಷ್ಣುವನ್ನು ಕೇಳಿ’ ಎಂದಿದ್ದು ಒಂದಿಡೀ ಸಮೂಹ ಅಸಹಿಷ್ಣುವಾಗಲು ಕಾರಣವಾಗಿದೆ. ಅಂತಿಮವಾಗಿ ನ್ಯಾಯಮೂರ್ತಿಗಳ ಪೋಷಕರು ಆರೆಸ್ಸೆಸ್ ಕಾರ್ಯಕ್ರಮವನ್ನು ತಿರಸ್ಕರಿಸಿದ್ದು ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಇದೆಲ್ಲದರ ಪರಿಣಾಮ ಅವರ ತಲೆಯೊಳಗೆ ಅಡಗಿ ಕುಳಿತಿದ್ದ ಶೂ ಕೈಗೆ ಬಂದಿದೆ.

ಈ ಅವಮಾನ ಜಾತಿಯ ಕಾರಣಕ್ಕೋ, ಧರ್ಮದ ಕಾರಣಕ್ಕೋ. ಧರ್ಮದ ವಿಷಯಕ್ಕೆ ಬರುವುದಾದರೆ ಶೂ ಎಸೆದವನು ‘ತಾನು ಸನಾತನ ಧರ್ಮಕ್ಕೆ ಅವಮಾನವಾಗುವುದನ್ನು ಸಹಿಸುವುದಿಲ್ಲ’ ಎಂದು ಕಿರುಚಾಡುತ್ತಾನೆ. ಸನಾತನ ಧರ್ಮ ಎಂದರೆ ಯಾವುದು? ಸಹ ಮಾನವನ ಮೇಲೆ ಶೂ ಎಸೆಯುವುದು ಸನಾತನ ಧರ್ಮವೇ? ಬೇರೊಬ್ಬನ ಮೇಲೆ ಬೂಟು ಎಸೆದು ಬದುಕಬೇಕಾದಷ್ಟು ದುರ್ಬಲವೇ ಧರ್ಮ? ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಬೇರೊಬ್ಬರತ್ತ ಚಪ್ಪಲಿ ತೂರುವುದು ಸನಾತನದ ಧರ್ಮದ ಸಂಸ್ಕೃತಿಯೇ? ಉತ್ತರಿಸಬೇಕಾದವರು ಯಾರು?

ಇನ್ಯಾರು? ಸಂಸ್ಕೃತಿಯ ಸಂರಕ್ಷಣೆಯ ಹೊಣೆ ಹೊತ್ತವರು, ನೂರು ವರ್ಷ ನಂಜು ಬಿತ್ತಿದವರು. ದೇವರು, ಧರ್ಮ, ದೇಶದ ಹೆಸರಿನಲ್ಲಿ ದ್ವೇಷ ಬಿತ್ತಿ ಭಾರತದ ಅಂತಃಸತ್ವವೇ ಆಗಿದ್ದ ಭ್ರಾತೃತ್ವವೇ ಬತ್ತಿ ಹೋಗುವಂತೆ ಮಾಡಿದವರು. ಹಸಿವಿನಿಂದ ಸತ್ತು, ಸೈಜುಗಲ್ಲು ಹೊತ್ತು, ಭಕ್ತರಾಗಿ ದೇಶ ಕಟ್ಟಿದ ಜನರನ್ನು ಅನುದಿನವೂ ಆಪೋಶನ ತೆಗೆದುಕೊಳ್ಳುತ್ತಿರುವವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News