×
Ad

ಉತ್ತರಾಧಿಕಾರಿ ಬಗ್ಗೆ ಯತೀಂದ್ರ ಕೊಟ್ಟ ಅಸಲಿ ಸುಳಿವೇನು?

Update: 2025-10-27 10:26 IST

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು? ‘ಸಿದ್ದರಾಮಯ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ, ವೈಚಾರಿಕ ಚಿಂತನೆ ಇರುವ ಸತೀಶ್ ಜಾರಕಿಹೊಳಿ ಅವರಿಗೆ ಸಿದ್ದರಾಮಯ್ಯರವರ ಸ್ಥಾನ ತುಂಬುವ ಶಕ್ತಿ ಇದೆ’ ಎಂದು. ಈ ಹೇಳಿಕೆಯನ್ನು ಈಗ ಹಲವು ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಹಾಕುತ್ತಿರುವ ಪಟ್ಟು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದ ಸಂದರ್ಭ ಬಂದರೆ ಆ ಜಾಗಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಕರೆತರುವ ಪ್ರಯತ್ನ, ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟು ಗೊಂದಲ ಉಂಟಾದರೆ ಹೈಕಮಾಂಡ್ ಯಥಾಸ್ಥಿತಿ ಮುಂದುವರಿಸುತ್ತೆ ಎನ್ನುವ ಹಿನ್ನೆಲೆಯಲ್ಲಿ ಹೂಡಿರುವ ರಣತಂತ್ರ, ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಅಸ್ತು ಎನ್ನದ ಕಾರಣಕ್ಕೆ ಸಿದ್ದರಾಮಯ್ಯ ರೂಪಿಸಿರುವ ಹೊಸ ತಂತ್ರಗಾರಿಕೆ, ಸಿದ್ದರಾಮಯ್ಯ ಬಗ್ಗೆ ಮುನಿದಿರುವ ಪರಿಶಿಷ್ಟ ಪಂಗಡದವರನ್ನು (ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ) ಒಲಿಸಿಕೊಳ್ಳಲು ಹೂಡಿರುವ ಬಾಣ, ಇವು ಯತೀಂದ್ರ ಸಿದ್ದರಾಮಯ್ಯ ಮಾತುಗಳಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರನ ಬಾಯಿಂದ ಹೇಳಿಸಿರುವ ಮಾತುಗಳು ಮತ್ತು ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಯವರನ್ನು ಅಹಿಂದ ನಾಯಕ ಎಂದು ಬಿಂಬಿಸುವ ಲೆಕ್ಕಾಚಾರ ಎಂಬೆಲ್ಲ ವ್ಯಾಖ್ಯಾನಗಳಾಗುತ್ತಿವೆ.

ಇನ್ನೂ ಹಲವು ಬಗೆಯ ವ್ಯಾಖ್ಯಾನಗಳಿರಬಹುದು. ಆದರೆ ಇವು ಪ್ರಮುಖವಾದವು. ಇವುಗಳ ಪೈಕಿ ಕಡೆಯ ವಿಷಯ ಹೆಚ್ಚು ಪ್ರಮುಖವಾದುದು. ಅದೇನೆಂದರೆ ಸತೀಶ್ ಜಾರಕಿಹೊಳಿಯವರನ್ನು ಅಹಿಂದ ನಾಯಕ ಎಂದು ಬಿಂಬಿಸುವ ಲೆಕ್ಕಾಚಾರ ಎಂಬ ಚರ್ಚೆ. ಇದು ಏಕೆ ಅತ್ಯಂತ ಪ್ರಮುಖ ಎಂದರೆ, ಕರ್ನಾಟಕಕ್ಕೆ ಅಹಿಂದ ನಾಯಕನ ಅಗತ್ಯ ಇದೆ, ಅದಕ್ಕೆ. ಜೊತೆಗೆ ಇದು ಹೊಸ ಅಹಿಂದ ನಾಯಕ ಹುಟ್ಟಿ ಆತ ಮಾಗಲು ಸಕಾಲವಾಗಿರುವುದರಿಂದ. ಈ ನಿಟ್ಟಿನಲ್ಲಿ ‘ಎಳಸು’ ಎಂದು ವಿಶ್ಲೇಷಿಸಲಾಗುತ್ತಿರುವ ಯತೀಂದ್ರ ಸಿದ್ದರಾಮಯ್ಯ ಕಾಲದ ಅಗತ್ಯಕ್ಕೆ ತಕ್ಕ ವಿಚಾರವನ್ನೇ ಪ್ರಸ್ತಾವ ಮಾಡಿದ್ದಾರೆ.

‘ಅಹಿಂದ’ದಲ್ಲಿ ಅಲ್ಪಸಂಖ್ಯಾತರು ಇರುವುದರಿಂದ ಬಿಜೆಪಿಯಲ್ಲಿ ಅಹಿಂದ ನಾಯಕ ಹುಟ್ಟಬಹುದು ಎನ್ನುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಜೆಡಿಎಸ್ ಒಂದು ಜಾತಿಗೆ ಸೀಮಿತವಾಗಿರುವುದರಿಂದ ಅಲ್ಲೂ ಅಂಥ ಸಾಧ್ಯತೆ ಇಲ್ಲ. ಹಾಗಾಗಿ ಅಹಿಂದ ರಾಜಕಾರಣಿ ಕಾಂಗ್ರೆಸ್ ಪಕ್ಷದಲ್ಲೇ ಹೊರಹೊಮ್ಮಬೇಕು. ಕಾಂಗ್ರೆಸ್ ಪಕ್ಷದಲ್ಲಿ ಅಂಥ ರಾಜಕಾರಣಿಗಳು ಯಾರಿದ್ದಾರೆ ಎನ್ನುವುದನ್ನು ನೋಡಿದರೆ ಮೊದಲಿಗೆ ಕಾಣುವವರೇ ಸತೀಶ್ ಜಾರಕಿಹೊಳಿ. ಹಾಗಾಗಿ ವೈಚಾರಿಕವಾಗಿ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕೂಡ ಸರಿಯಾಗಿಯೇ ಇದೆ.

ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನಡುವೆ ನಾಲ್ಕು ಮುಖ್ಯ ಸಾಮ್ಯತೆಗಳಿವೆ. ಇಬ್ಬರೂ ಜನತಾ ಪರಿವಾರದ ಮೂಲದವರು, ವೈಚಾರಿಕವಾಗಿ ಸ್ಪಷ್ಟತೆಯುಳ್ಳವರು, ತಂತ್ರಗಾರಿಕೆ ಮಾಡುವುದರಲ್ಲಿ ನಿಗೂಢ ಸ್ವಭಾವದವರು ಮತ್ತು ಇವರಿಬ್ಬರ ಜಾತಿಗಳು ಹೆಚ್ಚು ಕಮ್ಮಿ ಸಂಖ್ಯಾ ಬಲದಲ್ಲಿ ಸಮಾನವಾಗಿವೆ ಹಾಗೂ ರಾಜ್ಯಾದ್ಯಂತ ಹರಡಿಕೊಂಡಿವೆ. ಇವೇ ನಾಲ್ಕು ಕಾರಣಗಳಿಂದ ಸಿದ್ದರಾಮಯ್ಯ ಉತ್ತರಾಧಿಕಾರಿಯಾಗಲು ಸತೀಶ್ ಸೂಕ್ತ ನಾಯಕರು. ಆದರೆ ಉಳಿದವರಲ್ಲಿ ಇಷ್ಟು ಸಾಮ್ಯತೆಗಳು ಸಹ ಇಲ್ಲ. ಈ ಹಿನ್ನೆಲೆಯಲ್ಲಿ ಕೂಡ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಮರ್ಥನೀಯವಾಗಿದೆ.

ಯತೀಂದ್ರ ಸಿದ್ದರಾಮಯ್ಯ ಇನ್ನೊಂದು ಮುಖ್ಯವಾದ ಮಾತನ್ನಾಡಿದ್ದಾರೆ. ಸತೀಶ್ ಅವರಿಗೆ ಸಿದ್ದರಾಮಯ್ಯ ಮಾರ್ಗದರ್ಶನ ಮಾಡಬೇಕು ಎಂದಿದ್ದಾರೆ. ಅವರು ಯಾವ ಅರ್ಥದಲ್ಲೇ ಹೇಳಿದ್ದರೂ ಅಹಿಂದ ವರ್ಗ ಇದನ್ನು ಎರಡು ಬಗೆಯಲ್ಲಿ ನೋಡಬೇಕಾಗಿದೆ.

ಒಂದು, ಸಿದ್ದರಾಮಯ್ಯ ತನ್ನ ನಂತರ ಅಹಿಂದ ವರ್ಗಕ್ಕೆ ದಿಕ್ಕು ತೋರಿಸಬೇಕೆಂದು. ಇನ್ನೊಂದು, ಸತೀಶ್ ಜಾರಕಿಹೊಳಿ ‘ಸಿದ್ದರಾಮಯ್ಯ ಮಾದರಿ’ಯನ್ನು ಅನುಸರಿಸಬೇಕೆಂದು.

ಹಿಂದಿನಿಂದಲೂ ಅಹಿಂದ ವರ್ಗ ಕಾಂಗ್ರೆಸ್ ಜೊತೆಗೇ ಇತ್ತು. ಅಹಿಂದ ವರ್ಗ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಿಗಿದಪ್ಪಿಕೊಳ್ಳುವಂತೆ ಮಾಡಿದವರು ದೇವರಾಜ ಅರಸು. ಜನತಾ ಪರಿವಾರ ಉತ್ತುಂಗದಲ್ಲಿದ್ದಾಗ ಅದು ಚದುರಲಾರಂಭಿಸಿತು. ಆಮೇಲೆ ಬಂದ ಬಂಗಾರಪ್ಪ ಹಿಂದುಳಿದವರಿಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಅಲ್ಪಸಂಖ್ಯಾತರು ಮತ್ತು ದಲಿತರಿಗೂ ನೀಡಿದ್ದರೆ ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೇರಿದಂತೆ ಹಲವು ಪಲ್ಲಟಗಳು ಸಂಭವಿಸುತ್ತಿರಲಿಲ್ಲ. ಬಂಗಾರಪ್ಪ ಮತ್ತು ಕಾಂಗ್ರೆಸ್ ಜೊತೆಯಾಗಿ ಆ ಕೆಲಸ ಮಾಡಬೇಕಾಗಿತ್ತು, ಮಾಡಲಿಲ್ಲ. ಅದನ್ನು ಮಾಡಿದವರು ಸಿದ್ದರಾಮಯ್ಯ. ಅವರು ಈ ಸಮುದಾಯಗಳ ಸಮೀಕರಣಕ್ಕೆ ಅಹಿಂದ ಎಂಬ ಹೆಸರಿಟ್ಟರು. ಜೆಡಿಎಸ್ ಪಕ್ಷದಲ್ಲಿ ಇದ್ದಾಗಲೇ ಅಹಿಂದ ಚಳವಳಿ ಶುರುವಾಗಿದ್ದರೂ ಅದು ಫಲ ಕೊಡಲು ಎರಡು ದಶಕಗಳೇ ಬೇಕಾಯಿತು. ಸಿದ್ದರಾಮಯ್ಯ ಕೂಡ ಕಾಂಗ್ರೆಸ್‌ಗೆ ಬರಬೇಕಾಯಿತು. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸೇರಿ ಅಹಿಂದ ಯಶಸ್ವಿಯಾಯಿತು.

ಅಹಿಂದ ಸಮುದಾಯಗಳ ವಿಷಯ ಬಂದಾಗ ಸಿದ್ದರಾಮಯ್ಯ ಅತ್ಯಂತ ಧೈರ್ಯವಾಗಿ ಮಾತನಾಡುತ್ತಾರೆ. ಸ್ಪಷ್ಟವಾಗಿ ಮಾತನಾಡುತ್ತಾರೆ. ಅದರಿಂದ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಒಕ್ಕಲಿಗ ಸಮುದಾಯ ಮುನಿಯುವಂತೆ ಮಾಡುತ್ತದೆ. ಸಿದ್ದರಾಮಯ್ಯ ಗೆಲುವಿಗಾಗಿ ಏದುಸಿರು ಬಿಡುವಂತೆ ಮಾಡುತ್ತದೆ. ಆದರೂ ಮಾತನಾಡುತ್ತಾರೆ. ಇವತ್ತು ಕರ್ನಾಟಕದ ಅಲ್ಪಸಂಖ್ಯಾತರ ನಾಯಕ ಮುಸ್ಲಿಮ್ ಸಮುದಾಯದವರಲ್ಲ, ಸಿದ್ದರಾಮಯ್ಯ. ಪರಿಶಿಷ್ಟ ಜಾತಿ ಕೂಡ ಹೆಚ್ಚು ನಂಬಿಕೆ ಇಟ್ಟಿರುವುದು ಸಿದ್ದರಾಮಯ್ಯ ಅವರ ಮೇಲೆಯೇ. ಬಹುಶಃ ದಲಿತ ಸಮುದಾಯದ ಮುಖ್ಯಮಂತ್ರಿ ಇದ್ದರೂ ಪರಿಶಿಷ್ಟ ಸಮುದಾಯಕ್ಕೆ ಕಾಮಗಾರಿಗಳಲ್ಲಿ ಮೀಸಲಾತಿ, ಭಡ್ತಿ ಮೀಸಲಾತಿ ಮತ್ತು ಒಳ ಮೀಸಲಾತಿ ಜಾರಿ ಮಾಡುತ್ತಿರಲಿಲ್ಲವೇನೋ? ಸಿದ್ದರಾಮಯ್ಯ ಮಾಡಿದ್ದಾರೆ. ಮೊನ್ನೆ ಮೊನ್ನೆ ಪ್ರಿಯಾಂಕ್ ಖರ್ಗೆ ಮೇಲೆ ಆರೆಸ್ಸೆಸ್ ಮತ್ತು ಬಿಜೆಪಿಯವರು ಮುಗಿಬಿದ್ದಾಗಲೂ ಕೂಡಲೇ ಪ್ರಿಯಾಂಕ್ ಪರ ಮಾತನಾಡಿದ್ದು ಸಿದ್ದರಾಮಯ್ಯ.

ಆದರೆ ಸತೀಶ್ ಅಳೆದು ತೂಗಿ ಮಾತನಾಡುತ್ತಾರೆ. ಹಿಜಾಬ್, ಆಝಾನ್ ಮತ್ತಿತರ ವಿಷಯಗಳಲ್ಲಿ ತಮ್ಮ ನಿಲುವೇನು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೇಳಿದರೆ ‘ಶಿಗ್ಗಾವಿಯಲ್ಲಿ ಮುಸ್ಲಿಮ್ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಿದೆ’ ಎನ್ನುತ್ತಾರೆ. ಅವರಿಗೆ ಆ ಸಮುದಾಯದ ಬಗ್ಗೆ ಕಾಳಜಿ ಇದ್ದರೂ ಅದು ವ್ಯಕ್ತವಾಗುವುದಿಲ್ಲ. ಮಾತುಗಳಲ್ಲಿ ಸ್ಪಷ್ಟತೆ ಗೋಚರಿಸುವುದಿಲ್ಲ. ಇತ್ತೀಚೆಗೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯ ಪ್ರಸ್ತಾವವಾದಾಗಲೂ ಸತೀಶ್ ಅಸ್ಪಷ್ಟವಾಗಿಯೇ ಪ್ರತಿಕ್ರಿಯಿಸಿದರು. ಪ್ರಿಯಾಂಕ್ ಖರ್ಗೆ ಪ್ರಕರಣದಲ್ಲೂ ಮೌನವಾಗಿದ್ದರು. ನಾಯಕನಾದವನು ನಿಲುವು ತೆಗೆದುಕೊಳ್ಳುವುದು ಮುಖ್ಯ ಮತ್ತು ಆ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಇನ್ನೂ ಹೆಚ್ಚು ಮುಖ್ಯ. ಈ ಎಲ್ಲಾ ಹಿನ್ನೆಲೆಯಲ್ಲಿ ಸತೀಶ್, ‘ಸಿದ್ದರಾಮಯ್ಯ ಮಾದರಿ’ಯನ್ನು ಅನುಸರಿಸಬೇಕಾಗಿದೆ.

ಸಿದ್ದರಾಮಯ್ಯ ಸದ್ಯ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಒಂದು ಮುಖ್ಯಮಂತ್ರಿ ಸ್ಥಾನ. ಇನ್ನೊಂದು ಅಹಿಂದ ನಾಯಕನ ಸ್ಥಾನ. ಮುಖ್ಯಮಂತ್ರಿ ಸ್ಥಾನ ತಾತ್ಕಾಲಿಕ, ಅಹಿಂದ ನಾಯಕತ್ವ ಶಾಶ್ವತ. ಹಾಗೆಯೇ ಸತೀಶ್ ಕೂಡ ರಾಜಕೀಯ ನಾಯಕತ್ವದ (ತಾತ್ಕಾಲಿಕ) ಜೊತೆಗೆ ‘ಮಾನವ ಬಂಧುತ್ವ ವೇದಿಕೆ’ ಮೂಲಕ ವೈಚಾರಿಕ ನಾಯಕತ್ವ (ಶಾಶ್ವತ) ಎಂಬ ಇನ್ನೊಂದು ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ. ಅದರ ಮೂಲಕ ರಾಜ್ಯಾದ್ಯಂತ ತಮ್ಮದೇ ಸಂಪರ್ಕ ಜಾಲವನ್ನೂ ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ ಅಲ್ಲಿ ಇನ್ನೊಂದಷ್ಟು ಮಂದಿ ಅಹಿಂದ ವರ್ಗದ ಯುವಕರನ್ನು ಬೆಳೆಸುವ ಬಗ್ಗೆ ಮರೆತುಬಿಟ್ಟಿದ್ದಾರೆ.

ಅಹಿಂದ ಚಳವಳಿ ಕೂಡ ಶಾಶ್ವತವಾಗಿರಬೇಕು. ಅದು ನಿರಂತರವಾಗಿ ನಡೆಯುತ್ತಿದ್ದರೆ ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನ ಅಹಿಂದ ಸಮುದಾಯದ

ಮನೆಬಾಗಿಲಿಗೆ ಬರುತ್ತದೆ. 2028ಕ್ಕೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುವ ಸತೀಶ್ ನಿರಂತರವಾಗಿ ಚಳವಳಿಗೆ ಕಾವು ಕೊಟ್ಟರಷ್ಟೇ ಅದು ಮುಂದೊಂದು ದಿನ ಅಧಿಕಾರ ಎಂಬ ಮೊಟ್ಟೆ ಇಡಲು ಸಾಧ್ಯ.

ಸತೀಶ್ ಅಲ್ಲದೆ ಕೇಳಿಬರುತ್ತಿರುವ ಇನ್ನೊಂದು ಹೆಸರು ಪ್ರಿಯಾಂಕ್ ಖರ್ಗೆ. ಅವರಿಗೆ ವಿಷಯ ಸ್ಪಷ್ಟತೆ ಇದೆ. ಧೈರ್ಯವಾಗಿ, ಸ್ಫಷ್ಟವಾಗಿ ಮಾತನಾಡುತ್ತಾರೆ. ಯಾರನ್ನು ಬೇಕಾದರೂ ಎದುರುಹಾಕಿಕೊಳ್ಳುವ ಛಾತಿಯನ್ನು ತೋರುತ್ತಿದ್ದಾರೆ. ಆದರೆ ತಂತ್ರಗಾರಿಕೆ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಯಶಸ್ಸಿನಲ್ಲಿ ತಂತ್ರಗಾರಿಕೆ ಮತ್ತು ಮಾತುಗಾರಿಕೆ ಎರಡೂ ಇವೆ. ಸತೀಶ್ ತಂತ್ರಗಾರಿಕೆಯಲ್ಲಿ ಚತುರ. ಪ್ರಿಯಾಂಕ್ ಮಾತುಗಾರಿಕೆಯಲ್ಲಿ ನಿಪುಣ. ಭವಿಷ್ಯದ ಅಹಿಂದ ನಾಯಕ ಆಗಲು ಆರೋಗ್ಯಕಾರಿ ಪೈಪೋಟಿಯಾದರೆ ಒಳ್ಳೆಯದೇ.

ಕಸಕಡ್ಡಿ ಬಿದ್ದಿರುವ ಬಾವಿಯಿಂದ ನೀರು ಸೇದುವ (ಎತ್ತುವ) ಮೊದಲು ಬಿಂದಿಗೆಯನ್ನು ಮೇಲೆ ಕೆಳಗೆ ಆಡಿಸಬೇಕು. ಕಸ ಕಡ್ಡಿ ಪಕ್ಕಕ್ಕೆ ಸರಿದ ಮೇಲೆ ನೀರನ್ನು ಸೇದಿಕೊಳ್ಳಬೇಕು. ಮತ್ತೆ ಮತ್ತೆ ಕಸ ಕಡ್ಡಿ ಆವರಿಸಿಕೊಳ್ಳುತ್ತವೆ. ಮತ್ತೆ ಮತ್ತೆ ಬದಿಗೆ ಸರಿಸಬೇಕು. ಸಮಾಜದ ಮೇಲೂ ಆಗಾಗ ಕರಿಮೋಡಗಳು ಆವರಿಸಿಕೊಳ್ಳುತ್ತಲೇ ಇರುತ್ತವೆ, ಮತ್ತೆ ಮತ್ತೆ ಬದಿಗೆ ಸರಿಸುತ್ತಲೇ ಇರಬೇಕು (ಇದು ಸದನದಲ್ಲಿ ಮತ್ತು ಈ ಅಂಕಣಕಾರನಿಗೆ ದಿಲ್ಲಿಯಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ ಮಾತು). ಅಹಿಂದ ಚಳವಳಿಗೂ ಇಂಥ ಕಸ ಕಡ್ಡಿಗಳು (ರಾಜಕೀಯ ಮತ್ತು ಸಾಮಾಜಿಕ ಅಡೆತಡೆಗಳು) ಅಡ್ಡಿ ಮಾಡುತ್ತಿರುತ್ತವೆ. ಸತೀಶ್ ಮತ್ತು ಪ್ರಿಯಾಂಕ್ ‘ಕಸ ಕಡ್ಡಿ’ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಸಿದ್ದು ದುರ್ಬಲ ನಾಯಕನೇ?

40 ವರ್ಷಗಳ ಸುದೀರ್ಘ ಅನುಭವ ಇರುವ ಸಿದ್ದರಾಮಯ್ಯ ಅವರಿಗೆ ಯಾವ ಸಂದರ್ಭದಲ್ಲಿ ಯಾರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಕಲೆ ಚೆನ್ನಾಗಿ ಕರಗತವಾಗಿದೆ. ಅವರ ಪರವಾಗಿ ಮಾತನಾಡಲು, ತಂತ್ರಗಾರಿಕೆ ಮಾಡಲು, ಸಂಪನ್ಮೂಲ ಕ್ರೋಡೀಕರಿಸಲು, ವಕಾಲತ್ತು ವಹಿಸಲು ಹಲವರಿದ್ದಾರೆ. ಇಷ್ಟಕ್ಕೂ ಪರಿಸ್ಥಿತಿ ಕೈ ಮೀರುತ್ತಿದೆ ಎಂದರೆ ಸ್ವತಃ ಅಖಾಡ ಪ್ರವೇಶ ಮಾಡುವುದಕ್ಕೂ ಹಿಂಜರಿಯದ ಆಟಗಾರ ಅವರು. ಹೀಗಿದ್ದೂ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಗನ ಹೆಗಲ ಮೇಲೆ ಬಂದೂಕು ಇಡುವಷ್ಟು ದುರ್ಬಲ ರಾಜಕಾರಣಿಯೇ ಅವರು? ರಣರಂಗಕ್ಕೆ ಪುತ್ರನನ್ನು ಕಳುಹಿಸಿ ಫಲಿತಾಂಶಕ್ಕೆ ಕಾಯುವ ಜಾಯಮಾನದವರೇ ಸಿದ್ದರಾಮಯ್ಯ?

ಆಫ್ ದಿ ರೆಕಾರ್ಡ್!

ಸಿದ್ದರಾಮಯ್ಯ ಉತ್ತರಾಧಿಕಾರಿ ಬಗ್ಗೆ ನಿರ್ಧರಿಸಬೇಕಾದವರು ಯಾರು? ಪಕ್ಷ ರಾಜಕಾರಣದ ದೃಷ್ಟಿಯಿಂದ ನೋಡುವುದಾದರೆ ಕಾಂಗ್ರೆಸ್ ನಿರ್ಧರಿಸಬೇಕು. ಆದರೆ ತಮ್ಮ ತಂದೆಯ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ‘ತಾನೇ ನಿರ್ಧರಿಸುತ್ತೇನೆ’ ಎಂದು ಹೊರಟಿದ್ದಾರೆ ಯತೀಂದ್ರ ಸಿದ್ದರಾಮಯ್ಯ. ರಾಜಕೀಯವಾಗಿ ಇದು

Significant Step.

ಸತೀಶ್ ಜಾರಕಿಹೊಳಿ ಅವರಂತೆ ಎಚ್.ಸಿ. ಮಹದೇವಪ್ಪ ಕೂಡ ಸಿದ್ದರಾಮಯ್ಯ ಅವರ ಬಹುಕಾಲದ ಒಡನಾಡಿ, ಅನುಭವಿ, ಆಪ್ತ. ಜೊತೆಗೆ ಜಾತಿ ವಿಷಯದಲ್ಲೂ ಪ್ರಮುಖ ಜಾತಿಯೊಂದರ ನಾಯಕ. ಆದರೂ ಯತೀಂದ್ರ ಅವರ ಹೆಸರನ್ನೇಕೆ ಹೇಳಲಿಲ್ಲ? ಸತೀಶ್ ಹೆಸರನ್ನೇ ಏಕೆ ಹೇಳಿದರು? ಇಲ್ಲೊಂದು ಸ್ಪಷ್ಟ ರಾಜಕೀಯ ಲೆಕ್ಕಾಚಾರ ಇದ್ದಂತೆ ಕಾಣುತ್ತಿದೆ. ‘ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ’ ಎಂದು ಹೇಳುವಾಗಲೂ ಇಂಥ ‘ಖಚಿತ’ವಾದ ಗುಣಾಕಾರವೇ ಗೋಚರಿಸುತ್ತದೆ. ಆದರೂ ಯತೀಂದ್ರಗೆ ರಾಜಕೀಯ ಸಿದ್ಧಿಸಿಲ್ಲ ಎನ್ನುವುದಾದರೆ ಅದು ಮೂರ್ಖತನವಾದೀತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News