ಜಾತಿ ಬೇಕಾಗಿರುವುದು ಯಾರಿಗೆ ಗೊತ್ತಾ?
ಗಾತ್ರದಲ್ಲಿ ಆನೆ, ಎತ್ತರದಲ್ಲಿ ಜಿರಾಫೆ, ವೇಗದಲ್ಲಿ ಚಿರತೆ, ಬುದ್ಧಿಯಲ್ಲಿ ನರಿ ನಂಬರ್ ೧. ಸಿಂಹ ಯಾವುದರಲ್ಲೂ ನಂಬರ್ ೧ ಅಲ್ಲ. ಆದರೂ ಕಾಡಿನ ರಾಜ ಸಿಂಹ. ಸಿಂಹಕ್ಕೆ ಅದು ಸಾಧ್ಯವಾಗುವುದು ಏಕೆ ಎಂದು ತಿಳಿಯಲು ಈ ರೀತಿ ಊಹಿಸಿಕೊಳ್ಳಿ. ಆನೆ ಮತ್ತು ಸಿಂಹ ಎದುರಾಬದುರಾಗುತ್ತವೆ ಎಂದುಕೊಳ್ಳಿ. ಆಗ ತಕ್ಷಣವೇ ಆನೆ ಏನನ್ನು ಯೋಚನೆ ಮಾಡುತ್ತದೆ? ಸಿಂಹ ಬಂತು, ನನ್ನ ಮೇಲೆ ಎರಗುತ್ತೆ. ತಿಂದಾಕಿಬಿಡುತ್ತೆ ಅಂತಾ. ಸಿಂಹ ಏನು ಯೋಚನೆ ಮಾಡುತ್ತದೆ? ಇವತ್ತಿನ ಊಟ ಸಿಕ್ತು ಅಂತಾ. ಆನೆ ಬಳಿ ಶಕ್ತಿ ಇಲ್ಲ ಅಂತಾ ಅಲ್ಲ. ಆದರೆ ಸಿಂಹವನ್ನು ಎದುರಿಸುವ ಧೈರ್ಯ ಇಲ್ಲ. ಸಿಂಹಕ್ಕೆ ಆನೆ ತನಗಿಂತ ದೊಡ್ಡದು ಎನ್ನುವುದು ತಿಳಿದಿಲ್ಲ ಅಂತಾ ಅಲ್ಲ. ಆದರೆ ಆನೆಯನ್ನು ಮಣಿಸಬಹುದು ಎನ್ನುವ ಧೈರ್ಯ ಇದೆ. ಸಿಂಹ ತನ್ನ ಆಕ್ರಮಣಶೀಲಾ ದೋರಣೆಯಿಂದ ಗೆಲುವು ಸಾಧಿಸುತ್ತದೆ. ಆನೆ ಆತ್ಮವಿಶ್ವಾಸದ ಕೊರತೆಯಿಂದ ಶಕ್ತಿ ಇದ್ದೂ ಎದುರಾಳಿಗೆ ಶರಣಾಗಿಬಿಡುತ್ತದೆ.
ಇದನ್ನು ನಮ್ಮ ಸಾಮಾಜಿಕ ವ್ಯವಸ್ಥೆಗೆ ಹೋಲಿಸಿಕೊಳ್ಳಿ. ಪ್ರಬಲ ಸಮುದಾಯಗಳು ಸಿಂಹ ಇದ್ದಂತೆ. ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಆನೆ, ಜಿರಾಫೆ ಮತ್ತು ಚಿರತೆ ಇದ್ದಂತೆ. ಈಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ವಿಷಯದಲ್ಲಿ ಆಗುತ್ತಿರುವುದು ಇದೇ. ಹೇಗೆಂದರೆ ಸಮೀಕ್ಷೆಗೆ ಒಳಪಡುತ್ತಿರುವ 1,668 ಜಾತಿಗಳ ಪೈಕಿ ವಿರೋಧ ಮಾಡುತ್ತಿರುವುದು ಕೇವಲ ಎರಡು ಮುಖ್ಯ ಜಾತಿಗಳು ಮತ್ತು ಅದರ ಉಪಜಾತಿಗಳು. ಅವರು ಪ್ರಬಲರು, ಆಕ್ರಮಣಶೀಲರು-ಸಿಂಹಗಳಂತೆ.
ಉಳಿದ ಒಂದೂವರೆ ಸಾವಿರಕ್ಕೂ ಹೆಚ್ಚು ಜಾತಿಗಳು ಮೌನವಾಗಿವೆ. ಮೌನವಾಗಿವೆ ಎಂದರೆ ಸಮೀಕ್ಷೆ ನಡೆಯಲಿ ಎಂದು ಬಯಸುತ್ತಿವೆ. ಆದರೆ ಸಮೀಕ್ಷೆ ನಡೆಯಲಿ ಎಂದು ಹೇಳುತ್ತಿಲ್ಲ. ಹಾಗಂತ ನಾವು ಸಂಖ್ಯೆಯಲ್ಲಿ ದೊಡ್ಡವರಿದ್ದೇವೆ ಎನ್ನುವುದು ಗೊತ್ತಿಲ್ಲ ಅಂತಾ ಅಲ್ಲ. ಗೊತ್ತಿದೆ. ಆದರೆ ನಾವೇ ದೊಡ್ಡವರು ಎಂದು ಹೇಳುವ ಧೈರ್ಯ ಇಲ್ಲ. ನಮಗೆ ಸಮೀಕ್ಷೆ ಬೇಕಾಗಿದೆ ಎಂದು ಎದೆ ಸೆಟೆಸಿ ಹೇಳುವ ಧೈರ್ಯ ಇಲ್ಲ - ಆನೆ, ಜಿರಾಫೆ ಮತ್ತು ಚಿರತೆಗಳಂತೆ.
ಇದಕ್ಕೂ ಮೀರಿ ಇನ್ನೂ ಕೆಲವು ಜಾತಿಗಳು ಸಮೀಕ್ಷೆಗೆ ವಿರೋಧ ಮಾಡುತ್ತಿರಬಹುದು ಅದನ್ನು ಹೇಳದೇ ಇರಬಹುದು. ಅಥವಾ ಬೇರೆ ರೀತಿಯಲ್ಲಿ ಸಮೀಕ್ಷೆಗೆ ಅಸಹಕಾರ ತೋರುತ್ತಿರಬಹುದು. ಏನೇ ಆದರೂ ಸಮೀಕ್ಷೆ ಬೇಡ ಎನ್ನುವ ಜನ, ಜಾತಿಗಳಿಗಿಂತ ಬೇಕು ಎನ್ನುವವರ ಸಂಖ್ಯೆ ಜಾಸ್ತಿ ಇದೆ ಮತ್ತು ಅಂತರ ಬಹಳ ದೊಡ್ಡದಾಗಿದೆ. ಸುಮ್ಮನಿರುವ ಸಮುದಾಯ ದೊಡ್ಡದು ಮಾತ್ರವೇ ಅಲ್ಲ, ನಿರ್ಣಾಯಕವೂ ಹೌದು. ಅದು ಇವತ್ತಲ್ಲಾ, ನಾಳೆ ತಿರುಗಿ ಬೀಳುತ್ತದೆ. ಅದೇ ಪ್ರಕೃತಿ ನಿಯಮ. ಯಾರನ್ನಾದರೂ ಗೋಡೆಯವರೆಗೆ ತಳ್ಳಬಹುದಷ್ಟೇ. ಆಗ ತಳ್ಳಿಸಿಕೊಂಡವನಿಗೆ ತಿರುಗಿಬೀಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರುವುದಿಲ್ಲ. ಸಾಮಾಜಿಕ ಅನ್ಯಾಯಗಳ ವಿಷಯದಲ್ಲೂ ‘ಸುಮ್ಮನಿರುವ ದೊಡ್ಡ ವರ್ಗ’ ತಿರುಗಿಬಿದ್ದರೆ ಅದನ್ನು ತಡೆದುಕೊಳ್ಳುವ ಶಕ್ತಿ ಈ ವ್ಯವಸ್ಥೆಗೆ ಇರುವುದಿಲ್ಲ ಎನ್ನುವುದು ವಾಸ್ತವ. ಕಾಡಿನ ರಾಜನಾದರೂ ಸಿಂಹವನ್ನು ಇತರ ಪ್ರಾಣಿಗಳೆಲ್ಲಾ ಸೇರಿಕೊಂಡು ಕೆಲವೊಮ್ಮೆ ಒಬ್ಬಂಟಿಯಾಗಿಯೂ ಹಿಮ್ಮೆಟ್ಟಿಸಿದ ಉದಾಹರಣೆಗಳೂ ಉಂಟು.
ಜಾತಿ ಸಮೀಕ್ಷೆ ವಿಷಯಕ್ಕೆ ಮರಳುವುದಾದರೆ ಕೆಲ ಸಮುದಾಯಗಳ ನಾಯಕರು ಮತ್ತು ಮಠಾಧೀಶರು ನಿರ್ದಿಷ್ಟವಾಗಿ ತಮ್ಮ ಜಾತಿಗಳ ಹೆಸರನ್ನು ‘ಹೀಗೆ ಬರೆಸಿ’ ಎಂದು ಕರೆ ಕೊಡುತ್ತಿದ್ದಾರೆ. ಉಪಜಾತಿಯ ಹೆಸರನ್ನು ಬರೆಸಬೇಡಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಬಹಳ ಸ್ಪಷ್ಟವಾಗುವ ವಿಷಯವೇನೆಂದರೆ ಅವರಿಗೆ ಜಾತಿಯೇ ಮುಖ್ಯ ಎಂದು. ಮುಖ್ಯ ಜಾತಿಯ ಸಂಖ್ಯೆ ಹೆಚ್ಚಿಸಿಕೊಳ್ಳಲು ಉಪ ಜಾತಿಗಳನ್ನು ಉಪೇಕ್ಷೆ ಮಾಡುತ್ತಿದ್ದಾರೆ ಎಂದು. ಉಪ ಜಾತಿಗಳ ಅಸ್ತಿತ್ವ ಮತ್ತು ಹಿತಾಸಕ್ತಿಗಳನ್ನು ಕತ್ತು ಹಿಸುಕಿ ಕೊಂದುಹಾಕುತ್ತಿದ್ದಾರೆ ಎಂದು. ಎಲ್ಲಕ್ಕಿಂತ ಮುಖ್ಯವಾಗಿ ಜಾತಿ ಸಮೀಕ್ಷೆ ಬೇಡ ಎನ್ನುವವರಿಗೆ ತಮ್ಮದೇ ಜಾತಿಯ ಸಾಮಾನ್ಯ ಜನರಿಗೆ ಇರುವ ಭೂಮಿ ಪ್ರಮಾಣ ಎಷ್ಟು? ತಮ್ಮ ಸಮುದಾಯ ಸಾಧಿಸಿರುವ ಶೈಕ್ಷಣಿಕ, ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿ ಎಂಥದ್ದು ಎನ್ನುವುದೂ ಬೇಡವಾಗಿದೆ.
ತನ್ನ ಜಾತಿಯ ಕಟ್ಟಕಡೆಯ ಜನರ ಹಿತಾಸಕ್ತಿಗಳನ್ನು ಬಲಿ ಕೊಟ್ಟು ಕೆಲವೇ ಕೆಲವರ ಅಸ್ತಿತ್ವಕ್ಕಾಗಿ ಜಾತಿಯ ಸಂಖ್ಯೆಯೇ ಮುಖ್ಯ ಎಂದು ಮಾತನಾಡುವ ರಾಜಕೀಯ ನೇತಾರರ ಮತ್ತು ಮಠಾಧೀಶರ ನಡೆಗಳು ಅವರದೇ ಸಮುದಾಯಕ್ಕೆ ಅವರು ಮಾಡುವ ಅತಿದೊಡ್ಡ ಅನ್ಯಾಯ ಮತ್ತು ಅಪಚಾರ. ಈ ಸಮಾಜದಲ್ಲಿ ಜಾತಿ ಬೇಡ ಎನ್ನುವವರ ಅಥವಾ ಜಾತಿಯ ಸಂಕೋಲೆಗೆ ಸಿಲುಕದಿರುವವರ ಅಥವಾ ತಮ್ಮ ದಿನನಿತ್ಯದ ಬದುಕು ನೀಗಿಸಿಕೊಳ್ಳುವುದೇ ದುಸ್ತರವಾಗಿ ಜಾತಿಗೆ ವಿಶೇಷ ಪ್ರಾಶಸ್ತ್ಯ ನೀಡದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಅವರಿಗೆ ಜಾತಿ ಬೇಕಾಗಿಲ್ಲ. ನಿಜವಾಗಿಯೂ ಜಾತಿ ಬೇಕಾಗಿರುವುದು ಉಳ್ಳವರಿಗೆ, ಉಂಡವರಿಗೆ, ಜಾತಿ ಹೆಸರಿನಲ್ಲಿ ತಮ್ಮದೇ ಸಮುದಾಯದವರನ್ನು ತುಳಿಯುತ್ತಿರುವ ಅಥವಾ ವಸ್ತುಸ್ಥಿತಿಯನ್ನು ಮರೆ ಮಾಚುತ್ತಿರುವ ಕೆಲವೇ ಕೆಲವು ಜನರಿಗೆ.
ಯಾರಿಗೆ ಜಾತಿಯ ಯಜಮಾನಿಕೆ ಬೇಕೋ ಅವರಿಗೆ ಜಾತಿ ಸಮೀಕ್ಷೆ ನಡೆಸುವ ಅಗತ್ಯ ಇಲ್ಲ. ಯಾರಿಗೆ ಜಾತಿ ಬೇಕಾಗಿಯೇ ಇಲ್ಲವೋ ಅವರಿಗೆ ಸಮೀಕ್ಷೆ ನಡೆಸುವ ಅಗತ್ಯ ಇದೆ ಎನ್ನುವುದು ಈ ಸಮಾಜದ ಕಟು ವಾಸ್ತವ. ಇದರರ್ಥ ಜಾತಿ ನಾಶಕ್ಕಾಗಿ ಜಾತಿ ಸಮೀಕ್ಷೆ ಮಾಡುವ ಅಗತ್ಯ ಇದೆ ಎಂದು ಕೂಡ. ಜಾತಿ ನಾಶದ ಬಗ್ಗೆ ಬಸವಣ್ಣ, ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್, ನಾರಾಯಣ ಗುರು, ಕುವೆಂಪು ಮತ್ತಿತರ ಮಹಾನ್ ಮಾನವತಾವಾದಿಗಳು ಮಾತನ್ನಾಡಿದ್ದಾರೆ. ಇವರ ಮಾತುಗಳಿಗಾದರೂ ಜಾತಿ ಸಮೀಕ್ಷೆ ಬೇಡ ಎಂದು ವಾದಿಸುವವರು ಕಿವಿ ಕೊಡಬೇಕಾಗಿದೆ.
ಅಭಿವೃದ್ಧಿಗೆ ಜಾತಿಯ ಮುಖ
ಇದು ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಅಂದರೆ ಎಲ್ಲರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಸ್ಥಿತಿಗತಿಯನ್ನು ಅರಿಯುವ ಸಮೀಕ್ಷೆಯೇ ಆದರೂ ಜಾತಿ ಸಮೀಕ್ಷೆ ಎಂದು ವ್ಯಾಖಾನವಾಗುತ್ತಿದೆ. ಜೊತೆಗೆ ಅಭಿವೃದ್ಧಿಗೆ ಜಾತಿಯ ಮುಖ ಇರುವುದು ವಾಸ್ತವವಾದುದರಿಂದ ಮತ್ತು ಆಯೋಗ ಜಾತಿ ಮೂಲಕ ಹಿಂದುಳಿದಿರುವಿಕೆಯನ್ನು ಪತ್ತೆಹಚ್ಚಲು ಹೊರಟಿರುವುದರಿಂದ ಜಾತಿ ಸಮೀಕ್ಷೆ ಎಂದು ಕರೆದರೆ ತಪ್ಪು ಕೂಡ ಆಗಲಾರದು.
ಆದರೆ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯ ಜನ ಎಷ್ಟು ಅಭಿವೃದ್ಧಿ ಹೊಂದಿದ್ದಾರೆ? ಯಾವ ಜಾತಿಯ ಜನ ಎಷ್ಟು ಹಿಂದುಳಿದಿದ್ದಾರೆ ಎನ್ನುವುದು ಮಾತ್ರ ಗೊತ್ತಾಗುವುದಿಲ್ಲ. ಅವರು ಯಾವ್ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣವೂ ಸಿಗುತ್ತದೆ. ಮತ್ತಿದು ಎಲ್ಲಾ ಜಾತಿಗಳ ವಿಷಯದಲ್ಲೂ ಸಿಗುತ್ತದೆ. ಹತ್ತು ವರ್ಷಗಳಿಗೊಮ್ಮೆ ತನ್ನ ರಾಜ್ಯದ ಸ್ಥಿತಿಗತಿಗಳನ್ನು ಸಮಗ್ರವಾಗಿ ತಿಳಿದು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾದುದು ಚುನಾಯಿತ ಸರಕಾರದ ಆದ್ಯ ಕರ್ತವ್ಯವಾಗಿದೆ. ಇದನ್ನು ೧೯೯೨ರಲ್ಲಿ ಕೇಂದ್ರ ಸರಕಾರ ಮತ್ತು ಇಂದ್ರಾ ಸಾಹ್ನಿ ಪ್ರಕರಣದ (ಮಂಡಲ್ ಆಯೋಗದ ವರದಿ ಕುರಿತು) ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ೯ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ಕೂಡ ಹೇಳಿದೆ.
ಜಾತಿ ಸಮೀಕ್ಷೆ ನಡೆಸುತ್ತಿರುವ ಹಿಂದುಳಿದ ವರ್ಗಗಳ ಆಯೋಗ ಈ ಮಹತ್ವವನ್ನು ಜನರಿಗೆ ಮತ್ತು ಜಾತಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳಬೇಕಾಗಿದೆ. ಈಗ ೧೫ ದಿನದಲ್ಲಿ ಸಮೀಕ್ಷೆ ಮಾಡಿ ಮುಗಿಸುವ ಯಾವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಬೇಕಾಗುತ್ತದೆ. ಅದಕ್ಕೂ ಮಿಗಿಲಾಗಿ ಸಮೀಕ್ಷೆ ಮುಗಿದ ನಂತರ ವರದಿ ಸಿದ್ಧಪಡಿಸುವ ಹಾಗೂ ಶಿಫಾರಸು ಮಾಡುವ ಹಂತದಲ್ಲೂ ‘ಸಮೀಕ್ಷೆ ಸರಿಯಿಲ್ಲ’, ‘ಕಾಟಾಚಾರಕ್ಕೆ ಕಲೆ ಹಾಕಿದ ಮಾಹಿತಿ’ ಮತ್ತಿತರ ಅಪಪ್ರಚಾರ ನಡೆಯುವ ಸಾಧ್ಯತೆಗಳು ಹೇರಳವಾಗಿವೆ. ಇದು ‘ಮೌನವಾಗಿದ್ದು ಕೊಂಡೇ ಸಮೀಕ್ಷೆ ಆಗಲಿ’ ಎಂದು ಅಪೇಕ್ಷಿಸುತ್ತಿರುವ ಒಂದು ದೊಡ್ಡ ವರ್ಗಕ್ಕೆ ಆತಂಕವನ್ನು ಮೂಡಿಸಿದೆ. ಆಯೋಗ ಸಮೀಕ್ಷೆ ಬಗ್ಗೆ ಆತಂಕಗೊಂಡಿರುವ ಈ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುವುದನ್ನು ಮರೆಯಬಾರದು.
ಆಫ್ ದಿ ರೆಕಾರ್ಡ್!
ನವೆಂಬರ್ ಹತ್ತಿರವಾಗುತ್ತಿದೆ. ಸುದ್ದಿಗಳಿಗೆ ಮತ್ತು ಸುಳ್ಳು ಸುದ್ದಿಗಳಿಗೆ ಈಗ ಸುಗ್ಗಿ ಕಾಲ. ಆ ಪೈಕಿ ಡಿ.ಕೆ. ಶಿವಕುಮಾರ್ ನವೆಂಬರ್ ಮೂರನೇ ವಾರಕ್ಕೆ ಮುಖ್ಯಮಂತ್ರಿ ಯಾಗುವುದು ಗ್ಯಾರಂಟಿ ಎನ್ನುವ ಸುದ್ದಿ ಒಂದು. ‘ಮುಂದಿನ ತಿಂಗಳು ಮುಖ್ಯಮಂತ್ರಿ ಆಗುವುದಾಗಿ ಆಪ್ತರ ಬಳಿ ಸ್ವತಃ ಡಿಕೆ ಶಿವಕುಮಾರ್ ಅವರೇ ತಿಳಿಸಿದ್ದಾರೆ’ ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುತ್ತಿದ್ದಾರೆ ಕೆಲವರು. ಆದರೆ ಸದನದಲ್ಲಿ ಸದಾವತ್ಸಲೆ ವಿಚಾರದಿಂದ ಶುರುವಾದ ಕಿರಿಕಿರಿ ಇನ್ನೂ ನಿಂತಿಲ್ಲ. ಅಮಿತ್ ಶಾ ಭೇಟಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹೈಕಮಾಂಡ್ ಅನುಮಾನ ಮಾತ್ರ ಕಮ್ಮಿಯಾಗಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಸ್ಥಾಪನೆ, ಗ್ರೇಟರ್ ಬೆಂಗಳೂರು ಬದಲಾವಣೆ ಮತ್ತು ಸುರಂಗ ಮಾರ್ಗದ ವಿಷಯದಲ್ಲಿ ಡಿಕೆಶಿ ಹೇಳಿದ್ದೇ ಅಂತಿಮವಾಗಿತ್ತು. ಆದರೀಗ ಬೆಂಗಳೂರಿನ ಗುಂಡಿ ಮುಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಭೆ ಕರೆದಿದ್ದಾರೆ ಎಂದರೆ, ಡಿಸಿಎಂ ಇಲ್ಲದೆ ನಗರಪ್ರದಕ್ಷಿಣೆ ಮಾಡಿದ್ದಾರೆ ಎಂದರೆ ಬೇರೆ ಏನೋ ನಡೆಯುತ್ತಿರಬಹುದು. ಒಟ್ಟಿನಲ್ಲಿ ಇದು ಇನ್ನೊಂದು ಗೊಂದಲ.