ಪ್ರಿಯಾಂಕ್ ಖರ್ಗೆ ಕಲಿಸಿದ ಪಾಠ ಏನು?
ಸದ್ಯ ರಾಜ್ಯ ರಾಜಕಾರಣದಲ್ಲಿ ಅತ್ಯಂತ ದಿಟ್ಟವಾಗಿ ಮತ್ತು ನಿಖರವಾಗಿ ಮಾತನಾಡಬಲ್ಲ ಕೆಲವೇ ಕೆಲ ನಾಯಕರ ಪೈಕಿ ಪ್ರಿಯಾಂಕ್ ಖರ್ಗೆ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಪವಾಗಿ ಕಾಡುತ್ತಿರುವ ಆರೆಸ್ಸೆಸ್ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡುತ್ತಿರುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಕೂಡ ಪ್ರಿಯಾಂಕ್ ಖರ್ಗೆ ಹೆಸರಿದೆ. ಕರ್ನಾಟಕ ರಾಜಕಾರಣದಲ್ಲಿ ಬಹುದಿನಗಳವರೆಗೆ ಬಾಳುವಂಥ ನಾಯಕರ ಸಾಲಿನಲ್ಲಿ ಕೂಡ ಪ್ರಿಯಾಂಕ್ ಖರ್ಗೆ ಎದ್ದು ಕಾಣುತ್ತಾರೆ. ಪ್ರಿಯಾಂಕ್ ಖರ್ಗೆ ಈಗ ‘ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ’ ಎಂದು ಪತ್ರ ಬರೆಯುವ ಮೂಲಕ (ಬಾಯಿ ಮಾತಿನಲ್ಲಿ ಅಲ್ಲ) ಏಕ ಕಾಲಕ್ಕೆ ಕಾಂಗ್ರೆಸ್‌ಗೆ, ವಿರೋಧ ಪಕ್ಷಗಳಿಗೆ ಮತ್ತು ಆರೆಸ್ಸೆಸ್‌ಗೆ ಪಾಠ ಕಲಿಸಿದ್ದಾರೆ.
ಕಾಂಗ್ರೆಸ್‌ಗೇನು ಪಾಠ?
ಇತ್ತೀಚೆಗೆ ರಾಹುಲ್ ಗಾಂಧಿ ‘ಆರೆಸ್ಸೆಸ್ ಬಗ್ಗೆ ಭಯಪಡುವವರು ಅಥವಾ ಅದರ ಜೊತೆ ಸಂಬಂಧ ಹೊಂದಿರುವವರು ಪಕ್ಷ ಬಿಟ್ಟು ಹೋಗಿ’ ಎಂದು ಹೇಳಿದರು. ಅವರು ಹಾಗೆ ಹೇಳಿದ ಕೆಲವೇ ದಿನಗಳಲ್ಲಿ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸದನದಲ್ಲಿ ‘ಸದಾವತ್ಸಲೆ’
ಎಂದು ಹಾಡಿದರು. ಡಿ.ಕೆ. ಶಿವಕುಮಾರ್ ಸಾಂಕೇತಿಕವಷ್ಟೇ. ಕಾಂಗ್ರೆಸ್ ಇರುವುದೇ ಹಾಗೆ. ಮೊದಲಿಗೆ ಹಿಂದೂ ಮಹಾಸಭಾ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ನಂತರ ಆರೆಸ್ಸೆಸ್ ಬಗ್ಗೆಯೂ ಅಂಥದ್ದೇ ಜಿಜ್ಞಾಸೆಯಲ್ಲಿ ಜರ್ಜರಿತವಾಗಿತ್ತು. ಗೊತ್ತಿದ್ದೂ-ಗೊತ್ತಿಲ್ಲದೆಯೂ ಕಾಂಗ್ರೆಸ್ ಆರೆಸ್ಸೆಸ್ ಎಂಬ ವಿಷಸರ್ಪಕ್ಕೆ ಹಾಲೆರೆದು ಪೊರೆದಿತ್ತು. ಬೇವು ಬಿತ್ತಿದ್ದ ಕಾಂಗ್ರೆಸ್ ಇಂದು ಬೇವಿನ ಫಲವನ್ನೇ ಉಣ್ಣುತ್ತಿದೆ.
ಹಿಂದುತ್ವಕ್ಕೆ ಮೃದು ಹಿಂದುತ್ವ ಪರಿಹಾರವಾಗಲಾರದು ಎಂಬ ಸತ್ಯ ಶತಮಾನ ಕಳೆದರೂ ಕಾಂಗ್ರೆಸ್‌ಗೆ ಅರ್ಥವಾಗಿಲ್ಲ. ಇವತ್ತಿಗೂ ಬಹುಪಾಲು ಕಾಂಗ್ರೆಸಿಗರದು ಅದೇ ಎಡಬಿಡಂಗಿ ಮೃದು ಹಿಂದುತ್ವ. ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ ರೀತಿ ಅವರ ಎಡಬಿಡಂಗಿತನವನ್ನು ಬಿಡಿಸಿ ಹೇಳಿದೆ. ‘ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ’ ಎಂಬ ಪತ್ರ ಬರೆಯುತ್ತಿದ್ದಂತೆ ಬಿಜೆಪಿ ನಾಯಕರೆಲ್ಲರೂ ಒಟ್ಟಾಗಿ ಪ್ರಿಯಾಂಕ್ ಖರ್ಗೆ ಮೇಲೆ ಮುಗಿಬಿದ್ದರು. ಕಾಂಗ್ರೆಸ್ ಕಡೆಯಿಂದ ಪ್ರಿಯಾಂಕ್ ಖರ್ಗೆಗೆ ದನಿಗೂಡಿಸಿದವರು ಸಿದ್ದರಾಮಯ್ಯ,
ಬಿ.ಕೆ. ಹರಿಪ್ರಸಾದ್, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಹೆಚ್ಚೆಂದರೆ ಇನ್ನು ನಾಲ್ಕೈದು ನಾಯಕರು ಮಾತ್ರ.
ಉಳಿದ ಕಾಂಗ್ರೆಸ್ ನಾಯಕರಿಗೆ ಏನಾಗಿದೆ?
ಕೃಷ್ಣಭೈರೇಗೌಡರಂಥ ನಾಯಕರು ಬಾಯಿ ಬಿಡಲಿಲ್ಲ. ಇಂಥ ವಿಷಯಗಳಲ್ಲಿ ಮಾತನಾಡಬೇಕಾದವರು ಬಹಳ ಮುಖ್ಯವಾಗಿ ವಿಶ್ವಾಸಾರ್ಹತೆಯುಳ್ಳವರು. ಕೃಷ್ಣಭೈರೇಗೌಡ ಮಾತನಾಡಿದ್ದರೆ ಅದಕ್ಕೊಂದು ತೂಕ ಇರುತ್ತಿತ್ತು. ನಂತರ ಎಚ್.ಸಿ ಮಹದೇವಪ್ಪ. ಅವರು ಮಾತನಾಡಿದ್ದಾರೆ. ಆದರದು ಸಾಲದು. ಸಂವಿಧಾನ ದಿನ, ಸಂವಿಧಾನದ ಓದು, ಸಂವಿಧಾನದ ಸರಪಳಿ ಎಂಬ ಕಾರ್ಯಕ್ರಮ ಮಾಡುವ ಮಹದೇವಪ್ಪ, ಸಂವಿಧಾನಾತ್ಮಕ ಕರ್ತವ್ಯ ನಿರ್ವಹಿಸಿ ನಿಂದನೆಗೆ ಗುರಿಯಾಗುತ್ತಿರುವ ಮತ್ತು ಬೆದರಿಕೆ ಕರೆಗಳನ್ನು ಎದುರಿಸುತ್ತಿರುವ ತಮ್ಮ ಸಹೋದ್ಯೋಗಿ ಜೊತೆ ಗಟ್ಟಿಯಾಗಿ ನಿಲ್ಲಬೇಕಾಗಿತ್ತು. ಅದೇ ರೀತಿ ದಲಿತರ ಕೋಟಾದಲ್ಲಿ ಮುಖ್ಯಮಂತ್ರಿಯಾಗಬೇಕು ಎಂಬ ಮಹದಾಸೆ ಹೊಂದಿರುವ ಡಾ. ಜಿ. ಪರಮೇಶ್ವರ್ ಮಾತನಾಡಬೇಕಾಗಿತ್ತು. ಅದೂ ಇನ್ನೊಬ್ಬ ಯುವ ದಲಿತ ನಾಯಕನ ಮೇಲೆ ದಾಳಿಯಾಗುತ್ತಿರುವಾಗ ಮುಕ್ತ ಮನಸ್ಸಿನಿಂದ ಮಾತನಾಡಬೇಕಾಗಿತ್ತು. ಮಾತನಾಡಲು ಕಾರಣ ಇತ್ತು, ಮಾತನಾಡದೆ ಇರಲು ಏನು ಕಾರಣ?
ಆರೆಸ್ಸೆಸ್ ಬಗ್ಗೆ ಮಾತನಾಡಿದರೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಹುಸಿಭಯ. ‘ನಮಗ್ಯಾಕೆ ಬೇಕು ಈ ಉಸಾಬಾರಿ’ ಎಂಬ ಬೇಜವಾಬ್ದಾರಿ. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ನಾವೇಕೆ ಪ್ರತಿಕ್ರಿಯಿಸಬೇಕು? ನಾವು ಪ್ರತಿಕ್ರಿಯೆ ನೀಡುವ ಮೂಲಕ ಪ್ರಿಯಾಂಕ್ ಖರ್ಗೆಯನ್ನೇಕೆ ದೊಡ್ಡವರನ್ನಾಗಿ ಮಾಡಬೇಕು? ನಾವು ಏನೇ ಮಾತನಾಡಿದರೂ ಹೆಚ್ಚುಗಾರಿಕೆ ಪ್ರಿಯಾಂಕ್ ಖರ್ಗೆಗೆ ಹೋಗುತ್ತದೆ. ಅದಕ್ಕಾಗಿ ನಾವೇಕೆ ಮಾತನಾಡಬೇಕು? ಎಂಬ ಅಸೂಯೆ.
ಕಾಂಗ್ರೆಸ್ ನಾಯಕರು ಇಂಥ ಕೀಳು ಆಲೋಚನೆ ಮಾಡದೆ ಬಿಜೆಪಿ ನಾಯಕರಂತೆ ತಿರುಗಿಬಿದ್ದಿದ್ದರೆ, ಶಾಸಕರು ಇನ್ನಿತರ ನಾಯಕರನ್ನು ಬಿಡಿ. ಕೇವಲ ಮಂತ್ರಿಗಳು ಮನಸ್ಸು ಮಾಡಿದ್ದರೂ ಪರಿಸ್ಥಿತಿ ಬದಲಾಗುತ್ತಿತ್ತು. ಅವರವರ ಊರು, ಕ್ಷೇತ್ರ, ಜಿಲ್ಲೆಗಳಲ್ಲಿ ಅವರ ಜನರನ್ನು ಬೀದಿಗಿಳಿಸಿದ್ದರೆ ಬಿಜೆಪಿಯವರು ಮಾತ್ರವಲ್ಲ, ಅವರು ಸಾಕಿಕೊಂಡಿರುವ ಮಾಧ್ಯಮದವರೂ ಬಾಲ ಮುದುರಿಕೊಂಡು ಕುಳಿತುಕೊಳ್ಳುತ್ತಿದ್ದರು.
ಪ್ರಿಯಾಂಕ್ ಖರ್ಗೆ ಧೈರ್ಯವಾಗಿ ಮಾತನಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ತಾನು ಬಿತ್ತಿದ ಬೇವನ್ನು ಕಿತ್ತೆಸೆಯಬೇಕು- ಕಿತ್ತೆಸೆಯಬಹುದು ಎಂದು ಹೇಳಿಕೊಟ್ಟಿದ್ದಾರೆ. ಸಂವಿಧಾನ ನೀಡಿದ ಸ್ವಾತಂತ್ರ್ಯ, ವಿದ್ಯೆ ಮತ್ತು ಹಕ್ಕುಗಳನ್ನು ಬಳಸಿಕೊಂಡು ನ್ಯಾಯಾಲಯಕ್ಕೆ ಹೋಗಿ ಸಿಜೆಐಗೆ ಶೂ ಎಸೆದ ಸಂದರ್ಭದಲ್ಲಿ ಪತ್ರ ಬರೆಯುವ ಮೂಲಕ ವಿಷಸರ್ಪಕ್ಕೆ ಹಾಲೆರೆದ ಮಾತ್ರಕ್ಕೆ ಅದು ನಮ್ಮನ್ನು ಕಚ್ಚದೆ ಬಿಡದು ಎನ್ನುವುದನ್ನು ನೆನಪಿಸಿಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಪಕ್ಷಕ್ಕೆ ನಿಯತ್ತಾಗಿರುವವರು ಯಾರು? ಹೊಣೆಗೇಡಿಗಳು ಯಾರು ಎಂದು ಬೆತ್ತಲು ಮಾಡಿದ್ದಾರೆ. ಪ್ರಿಯಾಂಕ್ ಹೇಳಿದ ಪಾಠವನ್ನು ಕಲಿಯುವುದು ಕಾಂಗ್ರೆಸ್‌ಗೆ ಕಷ್ಟವಾಗಬಹುದು. ಕಲಿಯದಿದ್ದರೆ ಭವಿಷ್ಯದಲ್ಲಿ ಬದುಕುಳಿಯುವುದು ಇನ್ನೂ ಕಷ್ಟವಾಗಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಸಂವಿಧಾನ ಎಂಬ ದಂಡವನ್ನು ಪ್ರದರ್ಶಿಸುತ್ತಿರುವಾಗ ಮುನ್ನುಗ್ಗಲು ರಾಜ್ಯ ನಾಯಕರು ಹಿಂಜರಿಯುತ್ತಿರುವುದೇಕೆ? ಇದನ್ನೇ ತಾನೇ ಪ್ರಿಯಾಂಕ್ ಖರ್ಗೆ ಮಾಡಿದ್ದು?
ವಿಪಕ್ಷಗಳಿಗೇನು ಪಾಠ?
ಸೂಕ್ತ ಕಾಲದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೆ ಸಾಯಬೇಕಾಗುತ್ತದೆ ಎನ್ನುವುದು ಜೆಡಿಎಸ್ ಕಲಿಯಬೇಕಾದ ಪಾಠ. ಇಡೀ ಪ್ರಕರಣದಲ್ಲಿ ಜೆಡಿಎಸ್ ಪಾತ್ರ ಗೌಣ. ಆಟವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವುದರಿಂದ ಅದು ನಗಣ್ಯ. ಜಾತ್ಯತೀತ ಎಂಬ ಮಾತೆತ್ತಲು ನೈತಿಕತೆ ಇಲ್ಲದಿರುವುದರಿಂದಲೇ ಈ ತಾಕಲಾಟ. ಇನ್ನು ಬಿಜೆಪಿಯದ್ದು ಆರೆಸ್ಸೆಸ್ ನೆರಳಿಲ್ಲದೆ ಅರಳಲಾರದ ನರಳಾಟ. ಆರೆಸ್ಸೆಸ್‌ನ
ಎಲ್ಲಾ ಅವಾಂತರಗಳನ್ನು ಸಮರ್ಥಿಸಲಾರದ ಸಂದಿಗ್ಧ ಸ್ಥಿತಿ. ಆರೆಸ್ಸೆಸ್ ಪ್ರತಿಪಾದಿಸುವ ಬ್ರಾಹ್ಮಣವಾದಿ ಹಿಂದುತ್ವವನ್ನು ಉಗುಳಲೂ ಆಗದೆ ನುಂಗಲೂ ಆಗದೆ ಬಿಜೆಪಿ ಪರಿತಪಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ಅನುಮತಿ ಇಲ್ಲದೆ ಚಟುವಟಿಕೆ ನಡೆಸಲು ಅವಕಾಶ ಕೊಡಬೇಡಿ ಎಂದು ಬಹಳ ಸ್ಪಷ್ಟವಾಗಿ ಬರೆದಿರುವ ಪತ್ರವನ್ನು ವಿರೋಧಿಸಲು ಒಂದು ಪ್ರತಿಪಕ್ಷವಾಗಿ ಬಿಜೆಪಿಗೆ ಸಾಧ್ಯವೇ ಇರಲಿಲ್ಲ. ಆದರೆ ಆರೆಸ್ಸೆಸ್ ಕಾರಣಕ್ಕೆ ವಿರೋಧಿಸದೆ ಬೇರೆ ದಾರಿ ಇರಲಿಲ್ಲ.
ಏಕೆ ನೋಂದಣಿಯಾಗಿಲ್ಲ? ರಾಷ್ಟ್ರದ್ವಜವನ್ನು ಏಕೆ ಒಪ್ಪುವುದಿಲ್ಲ? ಸರಕಾರಿ ಜಾಗಗಳಲ್ಲಿ ತನ್ನ ಚಟುವಟಿಕೆಗಳನ್ನು ಮಾಡುವಾಗ ಏಕೆ ರಾಷ್ಟ್ರಗೀತೆ ಹಾಡುವುದಿಲ್ಲ? ಸಂವಿಧಾನದ ಪೀಠಿಕೆಯನ್ನು ಏಕೆ ಓದುವುದಿಲ್ಲ? ಸ್ವಾತಂತ್ರ್ಯ ಸಂಗ್ರಾಮದಲ್ಲಿ (ಹಿಂದೂ ಮಹಾಸಭಾ) ಏಕೆ ಪಾಲ್ಗೊಳ್ಳಲಿಲ್ಲ? ಮನುವಾದಕ್ಕಿಂತ ಸಂವಿಧಾನ ಶ್ರೇಷ್ಠ ಎಂದು ಏಕೆ ಹೇಳುವುದಿಲ್ಲ? ಮತ್ತಿತರ ಪ್ರಶ್ನೆಗಳಿಗೆ ಉತ್ತರಿಸಬೇಕಾದುದು ಆರೆಸ್ಸೆಸ್. ಆದರೆ ಆರೆಸ್ಸೆಸ್ ತಾನು ತೆರೆ ಹಿಂದೆ ಸರಿದು ಬಿಜೆಪಿಯನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಬಿಜೆಪಿ ಉತ್ತರ ಗೊತ್ತಿಲ್ಲದೆ ಬಡಬಡಾಯಿಸುತ್ತಿದೆ. ಬಿಜೆಪಿಗೆ ತಾನು ಎದುರಿಸುತ್ತಿರುವ ಮೂಲಭೂತವಾದ ಸಮಸ್ಯೆ ಮತ್ತು ಸವಾಲುಗಳೇನು ಎನ್ನುವುದನ್ನು ಪ್ರಿಯಾಂಕ್ ತಿಳಿಸಿಕೊಟ್ಟಿದ್ದಾರೆ.
ಆರೆಸ್ಸೆಸ್‌ಗೆ ಏನು ಪಾಠ?
ಹಿಂದಿನ ಬಿಜೆಪಿ ಅವಧಿಯಲ್ಲಿ ಹೊರಡಿಸಿದ್ದ ಒಂದೇ ಒಂದು ಸುತ್ತೋಲೆ ಆಧಾರದ ಮೇಲೆ ಈಗಿನ ಸರಕಾರ ‘ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಆರೆಸ್ಸೆಸ್ ಸರಕಾರದ ಅನುಮತಿ ಪಡೆಯುವುದು ಕಡ್ಡಾಯ’ ಎಂಬ ತೀರ್ಮಾನ ಮಾಡಿದೆ. ಬಿಜೆಪಿ ನಾಯಕರು ಏನೇ ಹಾರಾಡಿದರೂ ರಾಜ್ಯ ಸರಕಾರ ಇಂಥದೊಂದು ನಿರ್ಧಾರ ಮಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಬಿಜೆಪಿ ಮತ್ತು ಮಾಧ್ಯಮವನ್ನು ಬಳಸಿಕೊಂಡು ಆರೆಸ್ಸೆಸ್ ಏನೇ ಮಸಲತ್ತು ನಡೆಸಿದರೂ ತಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಸಂವಿಧಾನದಲ್ಲಿ ಆರೆಸ್ಸೆಸ್ ವಾದಕ್ಕೆ ಮಾನ್ಯತೆ ಇಲ್ಲ. ಆರೆಸ್ಸೆಸ್ ಸಂವಿಧಾನಕ್ಕಿಂತ ದೊಡ್ಡದಲ್ಲ. ಆರೆಸ್ಸೆಸ್ ಚಟುವಟಿಕೆಗಳಿಂದ ಹಿಡಿದು ಸಂಪೂರ್ಣವಾಗಿ ಆರೆಸ್ಸೆಸನ್ನೇ ನಿಷೇಧಿಸಬೇಕು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಿಯಾಂಕ್ ಖರ್ಗೆ ಪಾಲಿಗೆ ಇದೇ ದೊಡ್ಡ ಗೆಲುವು ಹಾಗೂ ಆರೆಸ್ಸೆಸ್ ಪಾಲಿಗೆ ದೊಡ್ಡ ಹಿನ್ನಡೆ.
ಆರೆಸ್ಸೆಸ್ ಬಲು ಆಳಕ್ಕೆ ಬೇರುಬಿಟ್ಟು ಬಲು ಎತ್ತರಕ್ಕೆ ಮತ್ತು ಗಾತ್ರದಲ್ಲೂ ಬಲು ದೊಡ್ಡದಾಗಿ ಬೆಳೆದಿರುವ ಬೃಹತ್ ಮರ. ಇದನ್ನು ಕಡಿದುರುಳಿಸುವುದು ಕಡುಕಷ್ಟ. ಸಾಧ್ಯವೇ ಇಲ್ಲ ಎನಿಸುವಷ್ಟು ಕಷ್ಟ. ನೂರು ವರ್ಷ ತುಂಬಿದ ಈ ಮರಕ್ಕೆ ಯಾವ ಕಡೆಯಿಂದ ಹೊಡೆಯಲು ಶುರು ಮಾಡಬೇಕು? ಯಾವ ಹತಾರ ಬಳಸಬೇಕು? ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಆದರೆ ಆ ಮರಕ್ಕೆ ನೀರು-ಗೊಬ್ಬರ ಹಾಕುವವರನ್ನು ನಿಯಂತ್ರಿಸಬಹುದು. ಬೇರುಗಳಿಗೆ ನೀರು ಬಾರದಂತೆ ಮೂಲಗಳನ್ನು ಪತ್ತೆ ಮಾಡಿ ಮೂಲದಲ್ಲೇ ನಿರ್ಮೂಲ ಕೆಲಸಗಳನ್ನು ಕೈಗೆತ್ತಿಗೊಳ್ಳಬಹುದು. ಆರೆಸ್ಸೆಸ್ ಸಂಘಟನೆಯ ಫಲಾನುಭವಿಗಳು ಬ್ರಾಹ್ಮಣರು. ಬಲಿಪಶುಗಳಾಗುತ್ತಿರುವವರು ಶೂದ್ರರು, ದಲಿತರು ಮತ್ತು ಆದಿವಾಸಿಗಳು. ಬಲಿಪಶುಗಳೇ ಬಂಡೇಳಬೇಕು. ಒಳಗೊಳಗೇ ಕೊರೆಯಲು ಶುರು ಮಾಡಬೇಕು. ಬಹುಶಃ ಈ ಹಿನ್ನೆಲೆಯಲ್ಲಿ ‘ಬಡವರ-ಶೋಷಿತರ ಮಕ್ಕಳು ಆರೆಸ್ಸೆಸ್ ಪಥಸಂಚಲನಕ್ಕೆ ಹೋಗಬೇಡಿ’ ಎಂದು ಅವರು ಕರೆ ಕೊಟ್ಟಿದ್ದಾರೆ. ಆ ಮೂಲಕ ಇಷ್ಟು ದಿನ ಯಾರನ್ನು ಕಾಲಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದರೋ ಅವರನ್ನು ಎಚ್ಚರಿಸುವ ಕೆಲಸಕ್ಕೆ ಕೈಹಾಕಿ ಆರೆಸ್ಸೆಸ್‌ಗೆ ಪಾಠ ಕಲಿಸಿದ್ದಾರೆ.
ಸಮುದಾಯಗಳಿಗೇನು ಪಾಠ?
ಕೆಲವು ವಿಷಯಗಳನ್ನು ದಿವಾಳಿಯಾಗಿರುವ, ದುಬಾರಿಯಾಗಿರುವ ಕಾಂಗ್ರೆಸ್ ಪಕ್ಷದಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆ ಕೆಲಸವನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಪ್ರಗತಿಪರರು ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ಅಲ್ಪಸಂಖ್ಯಾತರು ಅಸಹಾಯಕರು. ಅವರನ್ನು ದೂರಬಾರದು. ಇವರೆಲ್ಲರ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜವಾಬ್ದಾರಿ ದೊಡ್ಡದು. ಏಕೆಂದರೆ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಕಾಲಕ್ಕೆ ಬೇರೆಲ್ಲರಿಗಿಂತ ಅವರು ಒಂದು ಸೂತ್ರದಡಿ ಒಟ್ಟಾಗಿದ್ದಾರೆ.
ಇದು ಸನಾತನವಾದಿಗಳಿಗೆ ಚೆನ್ನಾಗಿ ಗೊತ್ತಿದೆ. ಅದೇ ಕಾರಣಕ್ಕೆ ಅವರು ಪರಿಶಿಷ್ಟ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡಿರುವುದು. ತನ್ನ ಮೇಲೆ ಶೂ ತೂರಿಬಂದರೂ ಕ್ಷಮಿಸಿ ಕೈತೊಳೆದುಕೊಂಡ ಸಿಜೆಐ, ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಚಂಡಿಗಡದ ಐಪಿಎಸ್ ಅಧಿಕಾರಿ ಪೂರನ್ ಕುಮಾರ್, ಗುಂಪುಹತ್ಯೆಗೆ ಒಳಗಾದ ಉತ್ತರ ಪ್ರದೇಶದ ಹರಿ ಓಂ ವಾಲ್ಮೀಕಿ ಮತ್ತು ಪ್ರಿಯಾಂಕ್ ಖರ್ಗೆ ಎಲ್ಲರೂ ದಲಿತರು ಎನ್ನುವುದು ಕಾಕತಾಳೀಯವಲ್ಲ.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಪ್ರಗತಿಪರರು ತಮ್ಮ ನಡುವಿರುವ ಭಿನ್ನಾಭಿಪ್ರಾಯಗಳೆಲ್ಲವನ್ನೂ ಬದಿಗೊತ್ತಿ ಒಂದಾಗದಿದ್ದರೆ, ಸರಕಾರದ ಅಕಾಡಮಿ, ಪ್ರಾಧಿಕಾರ, ನಿಗಮ, ಮಂಡಳಿಗಳ ಸದಸ್ಯತ್ವಕ್ಕೆ ರಾಜಕೀಯ ಪಕ್ಷದ ಕಾರ್ಯಕರ್ತರಂತೆ ಹಪಹಪಿಸುತ್ತಾ, ಸಿಗದಿದ್ದಾಗ ಮುನಿಸಿಕೊಳ್ಳುತ್ತಾ ಒಟ್ಟಾಗದಿದ್ದರೆ ಭವಿಷ್ಯ ಇನ್ನೂ ಬರ್ಬರವಾಗಲಿದೆ. ಪ್ರಿಯಾಂಕ್ ಖರ್ಗೆ ಪ್ರಕರಣದಲ್ಲಿ ಪರಿಶಿಷ್ಟ ಸಮುದಾಯಗಳು ಮತ್ತು ಪ್ರಗತಿಪರರು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ ಇನ್ನಷ್ಟು ತ್ವರಿತ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿತ್ತು.
ಆಫ್ ದಿ ರೆಕಾರ್ಡ್!
ಭರವಸೆಯ ನಾಯಕನಾಗಿ ಹೊರಹೊಮ್ಮಿರುವ ಪ್ರಿಯಾಂಕ್ ಖರ್ಗೆ ಮೊದಲಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸೈದ್ಧಾಂತಿಕವಾಗಿ ತಾವು ಮಾತ್ರ ಸ್ಪಷ್ಟತೆಯಿಂದ ಇದ್ದರೆ ಸಾಲದು. ನಾಯಕನಾದವನು ತನ್ನೊಂದಿಗೆ ದಂಡನ್ನೂ ಕೊಂಡೊಯ್ಯಬೇಕು. ಆ ದಂಡಿಗೂ ಅಷ್ಟೇ ಸ್ಪಷ್ಟತೆ, ಬದ್ಧತೆಗಳಿರಬೇಕು. ಪೊಲಿಟಿಕಲಿ ಕರೆಕ್ಟ್ ಆಗಿದ್ದರಷ್ಟೇ ಸಾಲದು. ಪ್ರಾಕ್ಟಿಕಲಿ ಕೂಡ ಸರಿ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ರಾಜಕಾರಣವನ್ನು ಹಗುರವಾಗಿ ಪರಿಗಣಿಸಬಾರದು. 2019ರಲ್ಲಿ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏನಾಯಿತು ಎನ್ನುವುದನ್ನು ಆಗಾಗ ನೆನಪಿಸಿಕೊಂಡರೆ ಸಾಕು.