ದೆಹಲಿ ರೈಲುನಿಲ್ದಾಣ ಕಾಲ್ತುಳಿತಕ್ಕೆ ಪ್ರಯಾಣಿಕನ ಲಗೇಜ್ ಕಾರಣ!
PC : PTI
ಹೊಸದಿಲ್ಲಿ: ಪ್ರಯಾಣಿಕರೊಬ್ಬರು ತಲೆ ಮೇಲೆ ಹೊತ್ತಿದ್ದ ದೊಡ್ಡ ಲಗೇಜ್ ಕೆಳಗೆ ಬಿದ್ದುದು ದೆಹಲಿ ರೈಲು ನಿಲ್ದಾಣದಲ್ಲಿ ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಕಾರಣ ಎಂಬ ಅಂಶವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದಾರೆ. ಘಟನೆಯಲ್ಲಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 18 ಮಂದಿ ಜೀವ ಕಳೆದುಕೊಂಡಿದ್ದರು.
ಸಮಾಜವಾದಿ ಪಕ್ಷದದ ಸಂಸದ ರಾಮ್ಜೀ ಲಾಲ್ ಸುಮನ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಫೆಬ್ರುವರಿ 15ರಂದು ನಡೆದ ಘಟನೆಗೆ ಮುಖ್ಯ ಕಾರಣ ಪ್ರಯಾಣಿಕರೊಬ್ಬರ ತಲೆ ಮೇಲೆ ಇರಿಸಿದ್ದ ಲಗೇಜ್ ಬಿದ್ದದ್ದು ಎಂಬ ಅಂಶವನ್ನು ಉನ್ನತ ಮಟ್ಟದ ಸಮಿತಿ ನಡೆಸಿದ ವಿಚಾರಣೆ ದೃಢಪಡಿಸಿದೆ ಎಂದು ಹೇಳಿದ್ದಾರೆ.
ಪ್ಲಾಟ್‌ಫಾರಂ 14 ಮತ್ತು 15ನ್ನು ಸಂಪರ್ಕಿಸುವ ಮೆಟ್ಟಲಲ್ಲಿ ರಾತ್ರಿ 9.15-9.30ರ ಅವಧಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ತೆರಳಲು ದೊಡ್ಡಸಂಖ್ಯೆಯಲ್ಲಿ ಸೇರಿದ್ದ ಪ್ರಯಾಣಿಕರು ಬಿಹಾರದಿಂದ ಬರುತ್ತಿದ್ದ ರೈಲಿಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು.
ರೈಲ್ವೆ ಇಲಾಖೆ ಗುಂಪು ನಿರ್ವಹಣೆ ಶಿಷ್ಟಾಚಾರಗಳನ್ನು ಪಾಲಿಸಿದರೂ, ರಾತ್ರಿ 8.15ರ ಬಳಿಕ ಪಾದಚಾರಿ ಸೇತುವೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಾ ಹೋಯಿತು ಎಂದು ತನಿಖಾ ಸಮಿತಿ ಅಭಿಪ್ರಾಯಪಟ್ಟಿದೆ. ಪ್ರಯಾಣಿಕರು ತಲೆ ಮೇಲೆ ದೊಡ್ಡ ಲಗೇಜ್ ಗಳನ್ನು ಹೊಂದಿದ್ದುದು 25 ಅಡಿ ಅಗಲದ ಪಾದಚಾರಿ ಸೇತುವೆಯಲ್ಲಿ ಸುಲಲಿತ ಸಂಚಾರಕ್ಕೆ ಅಡಚಣೆಯಾಯಿತು ಎಂದು ವಿವರಿಸಲಾಗಿದೆ.