×
Ad

ಬಿಹಾರದ ತೀರ್ಪು ಮತ್ತು ಕಾಂಗ್ರೆಸ್ ಭವಿಷ್ಯ

Update: 2025-11-21 09:57 IST

2026ರಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯು ಕಾಂಗ್ರೆಸ್ ಮತ್ತು ರಾಹುಲ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ವ್ಯಂಗ್ಯವೆಂದರೆ, ಬಿಜೆಪಿ ಎಲ್ಲ ಪಕ್ಷದ ವಲಸಿಗರಿಂದ ತುಂಬಿಕೊಂಡು, ಹಳೆಯ ಕಾಂಗ್ರೆಸ್‌ನ ಪಡಿಯಚ್ಚಾಗಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ತಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿವೆ. ಬಿಜೆಪಿಯನ್ನು ಎದುರಿಸಬಲ್ಲ ರಾಷ್ಟ್ರೀಯ ಹೆಜ್ಜೆಗುರುತು ಮತ್ತು ಐತಿಹಾಸಿಕ ಸ್ವೀಕಾರಾರ್ಹತೆ ಇರುವುದು ಕಾಂಗ್ರೆಸ್‌ಗೆ ಮಾತ್ರ. ಕಾಂಗ್ರೆಸ್ ತನ್ನ ದೊಡ್ಡಣ್ಣನ ಮನಸ್ಥಿತಿ ಕೈಬಿಟ್ಟು, ಪ್ರಾದೇಶಿಕ ಪಕ್ಷಗಳೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ವಿಶಾಲವಾದ ವೇದಿಕೆಯೊಂದನ್ನು ರೂಪಿಸಬೇಕಿದೆ.

ಬಿಹಾರದ ಜನ ಪ್ರತಿಪಕ್ಷಗಳನ್ನು ತಿರಸ್ಕರಿಸಿ, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು ಪ್ರಚಾರದ ವೇಳೆ ತೇಲಿಸಿದ ನುಸುಳುಕೋರ ನರೇಟಿವ್ ನ್ನು ವಿಜಯದ ಬಳಿಕ ಮತ್ತೆ ಪ್ರಸ್ತಾಪಿಸಲಿಲ್ಲ. ಮಹಾಘಟಬಂಧನ್ ಯಾದವ-ಮುಸ್ಲಿಮ್ ಸಮುದಾಯವನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ವಿಫಲವಾಗಿದೆ. ‘ಮತಗಳವು’ ಹಾಗೂ ನ್ಯಾಯಯಾತ್ರೆಯ ಹೊರತಾಗಿಯೂ ಕಾಂಗ್ರೆಸ್ ಸೋತಿದೆ. ಪಕ್ಷ ಮತ್ತೊಮ್ಮೆ ಹೋಳಾಗುವುದೇ ಎಂಬ ಪ್ರಶ್ನೆಯನ್ನೂ ಎತ್ತಿದೆ.

ಬಿಹಾರ ಚುನಾವಣೆಯು ದಮನ, ಶರಣಾಗತಿ ಮತ್ತು ವಿಷಮಯ ವಾತಾವರಣದಲ್ಲಿ ನಡೆಯಿತು. ಸೆಪ್ಟಂಬರ್ 26ರಂದು 75 ಲಕ್ಷ, ಅಕ್ಟೋಬರ್ 3ರಂದು 25 ಲಕ್ಷ ಹಾಗೂ ಅಕ್ಟೋಬರ್ 6ರಂದು 21 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆಯ ಘೋಷಣೆ ಮಾಡಲಾಯಿತು; ಅಕ್ಟೋಬರ್ 17 ಹಾಗೂ ಆನಂತರ ಖಾತೆಗೆ ಹಣ ಹಾಕಲಾಯಿತು. ಆದರೆ, ಚುನಾವಣೆ ಆಯೋಗ ಉಸಿರೆತ್ತಲಿಲ್ಲ. ಮಾದರಿ ನೀತಿಸಂಹಿತೆ ಕಸದ ಬುಟ್ಟಿ ಸೇರಿತು. ಜೀವಮಾನದಲ್ಲಿ 500 ರೂ. ನೋಟು ಮುಟ್ಟದ ಬಿಹಾರದ ಅಸಂಖ್ಯಾತ ಮಹಿಳೆಯರ ಖಾತೆಗೆ ಒಮ್ಮೆಲೇ 10,000 ರೂ. ಜಮೆ ಹಾಗೂ ಆನಂತರ 2 ಲಕ್ಷ ರೂ.ಗಳ ಆಶ್ವಾಸನೆ ಸಿಕ್ಕರೆ ಏನಾಗಬಹುದೋ ಅದೇ ಆಯಿತು.

ಬಿಜೆಪಿ ಬಿಹಾರಕ್ಕೆ ಮತದಾರರಿಂದ ತುಂಬಿದ ರೈಲುಗಳನ್ನು ಕಳುಹಿಸಿದೆ ಎಂಬ ದೂರುಗಳಿವೆ. ಮತದಾನದ ವೀಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕೆಂಬ ಪ್ರತಿಪಕ್ಷಗಳ ಕೋರಿಕೆಯನ್ನು ತಳ್ಳಿ ಹಾಕಿದ ಚುನಾವಣೆ ಆಯೋಗ, ಇದರಿಂದ ಮಹಿಳೆಯರ ಸಭ್ಯತೆಯ ಉಲ್ಲಂಘನೆ ಆಗಲಿದೆ ಎಂದು ನೆಪ ಹೇಳಿತು. ದ್ವೇಷ ಭಾಷಣ ಸೇರಿದಂತೆ ಹಲವು ಉಲ್ಲಂಘನೆಗಳ ಹೊರತಾಗಿಯೂ, ಆಯೋಗ ಈವರೆಗೆ ಪ್ರಧಾನಿ ಮತ್ತು ಗೃಹ ಸಚಿವರ ಮೇಲೆ ದೂರು ದಾಖಲಿಸಿಲ್ಲ. ಮತದಾರರ ಪಟ್ಟಿಯಲ್ಲಿನ ವ್ಯತ್ಯಯಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಸುಮಾರು 65 ಲಕ್ಷ ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ಮಾಡಬೇಕಿದ್ದ ಚುನಾವಣೆ ಆಯೋಗ, ಈ ಹಿಂದೆಯೇ ಏಕೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿತು. ಬೇರೆ ರಾಜ್ಯಗಳಲ್ಲಿ ಮತ ಚಲಾಯಿಸಿದವರು ಬಿಹಾರದಲ್ಲೂ ಮತ ನೀಡಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹರ್ಯಾಣದಲ್ಲಿ ಲಕ್ಷಾಂತರ ನಕಲಿ ಮತದಾರರು ಮತ ಚಲಾಯಿಸಿರುವುದನ್ನು ಕಾಂಗ್ರೆಸ್ ಬಹಿರಂಗಗೊಳಿಸಿದೆ. ಚುನಾವಣೆಯನ್ನು ಈ ರೀತಿ ನಡೆಸುವುದಾದರೆ, ಆಯೋಗವನ್ನು ಮುಚ್ಚಿ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ಜವಾಬ್ದಾರಿ ವಹಿಸಬಹುದಲ್ಲವೇ? ಆಯೋಗದ ಮೇಲೆ ದೂರು ನೀಡುವ ಅವಕಾಶವನ್ನೇ ಕಾನೂನಿನ ಮೂಲಕ ತೆಗೆದುಹಾಕಲಾಗಿದೆ.

ಗೃಹ ಸಚಿವ ಅಮಿತ್ ಶಾ ಕೂಡ ‘ನುಸುಳುಕೋರ’ ಪದವನ್ನು ಉಲ್ಲೇಖಿಸಿದ್ದರಲ್ಲದೆ,‘‘ಬಿಹಾರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಏಕೆಂದರೆ, ಭೂಮಿ ಇಲ್ಲ’’ ಎಂದಿದ್ದರು. ಆದರೆ, ವಿಜಯದ ಬಳಿಕ ಪ್ರಧಾನಿ ತಮ್ಮ ನರೇಟಿವ್ ಬದಲಿಸಿದರು. ‘ನುಸುಳುಕೋರ’ ಪದವನ್ನು ಕೈಬಿಟ್ಟು ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಹೇಳಿದರು. ‘ನುಸುಳುಕೋರ’ ಪದದ ಬಳಕೆಯು ದಿಕ್ಕುಗೆಡಿಸುವ ತಂತ್ರ ಎಂದು ದೃಢಪಡಿಸಿದರು. ‘ರೆವ್ಡಿ ಸಂಸ್ಕೃತಿ’ ದೇಶದ ಆರ್ಥಿಕತೆಯನ್ನು ಹಾಳುಮಾಡುತ್ತದೆ ಎಂದು ‘ಉಚಿತ’ಗಳನ್ನು ಹೀಗಳೆಯುತ್ತಿದ್ದ ಪ್ರಧಾನಿ, ಅದೇ ಮಾರ್ಗ ಹಿಡಿದರು. ನಿತೀಶ್ ಅವರ 20 ವರ್ಷಗಳ ಆಡಳಿತದ ಬಳಿಕವೂ 10,000 ರೂ. ಆಮಿಷಕ್ಕೆ ಬಲಿಯಾಗುವಷ್ಟು ಬಡತನ ರಾಜ್ಯದಲ್ಲಿ ಇದೆ ಎಂಬುದು ಸಾಬೀತಾಯಿತು.

ರಾಹುಲ್ ಅವರ ನಕಾರಾತ್ಮಕ ರಾಜಕೀಯದ ಬಗ್ಗೆ ಕಾಂಗ್ರೆಸ್‌ನಲ್ಲಿರುವ ಅಸಮಾಧಾನವನ್ನು ಉಲ್ಲೇಖಿಸಿದ ಪ್ರಧಾನಿ, ಪ್ರತಿಪಕ್ಷದಲ್ಲಿ ಮತ್ತೊಂದು ವಿಭಜನೆಯನ್ನು ಊಹಿಸಿದ್ದಾರೆ. ಆದರೆ, ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ಬಿಜೆಪಿಯೊಳಗಿನ ಅಸಮಾಧಾನದ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಅದಾನಿ ಗ್ರೂಪ್‌ಗೆ ಭಾಗಲ್ಪುರದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಭೂಮಿ ನೀಡಿರುವುದನ್ನು ಲೂಟಿ ಎಂದು ಸಾರ್ವ ಜನಿಕವಾಗಿ ಖಂಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರಧಾನಿ ಪ್ರತಿಕ್ರಿಯೆ ಏನು? ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ರಾಹುಲ್ ದಾಳಿ ನಡೆಸುತ್ತಿದ್ದಾರೆ ಎಂದು ಮೋದಿ ಟೀಕಿಸುತ್ತಾರೆ. ಆದರೆ, ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯನ್ನು ಬಲಪಡಿಸಿದ್ದಾರೆಯೇ? ಇಲ್ಲ.

ಕಾಂಗ್ರೆಸ್ ಮತ್ತು ರಾಹುಲ್ ಸಮಸ್ಯೆ

ಬಿಹಾರದಲ್ಲಿ ವಿಜಯದ ಸೂಚನೆ ಸಿಕ್ಕ ತಕ್ಷಣ ಬಿಜೆಪಿಯ ಐಟಿ ಸೆಲ್, ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡಲಾರಂಭಿಸಿತು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ 90 ಚುನಾವಣೆಗಳಲ್ಲಿ ಸೋಲು ಅನುಭವಿಸಿದೆ ಎಂದು ಅನುರಾಗ್ ಠಾಕೂರ್, ನರೋತ್ತಮ್ ಮಿಶ್ರಾ ಮತ್ತಿತರರು ಹೀಯಾಳಿಸಿದರು; ‘ಪಪ್ಪು’ ಟ್ಯಾಗ್ ಅನ್ನು ಮರುಜೋಡಿಸುವ ಪ್ರಯತ್ನ ನಡೆಯಿತು. ನಿಜ; 2009ರ ಬಳಿಕ ಕಾಂಗ್ರೆಸ್ 83 ಚುನಾವಣೆಗಳಲ್ಲಿ 71ರಲ್ಲಿ ಸೋಲುಂಡಿದೆ. ಆದರೆ, ರಾಹುಲ್‌ಗೆ ಸಮಸ್ಯೆಯಾಗಿರುವುದು ಕಾಂಗ್ರೆಸ್‌ನಲ್ಲಿ ಇರುವ ಸಂವಿಧಾನ ವಿರೋಧಿಗಳು ಹಾಗೂ ಪಕ್ಷದ ಬಗ್ಗೆ ಅರಿವು ಇಲ್ಲದವರಿಂದ. ‘ಹರ್ಯಾಣದಲ್ಲಿ ಪಕ್ಷ ದುರಾಡಳಿತದಿಂದ ಸೋತಿದೆಯೇ ಹೊರತು ರಾಹುಲ್ ಆರೋಪ ಮಾಡಿದಂತೆ ವೋಟ್ ಚೋರಿಯಿಂದಲ್ಲ’ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲೇ ಕೇಳಿಬಂದಿದೆ. ಕೆಲವರು ರಾಹುಲ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದರೆ, ಇನ್ನಿತರರು ಅವರ ಸುತ್ತಲಿನ ಗುಂಪನ್ನು ದೂಷಿಸುತ್ತಿದ್ದಾರೆ. ಆದರೆ, ಕಟ್ಟಡವೇ ನೆಲಸಮ ಆಗುತ್ತಿರುವಾಗ ಕಿಟಕಿಗಳ ಬಗ್ಗೆ ಕೊರಗುವುದು ವ್ಯರ್ಥ ಎನ್ನುವುದು ಇಂಥವರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಒಳಸಂಚು ಮತ್ತು ಪಿತೂರಿಗಳ ಸಾಗರ. ಪಕ್ಷದ ನಾಯಕರು ನೆಟ್‌ವರ್ಕಿಂಗ್ ಮತ್ತು ಹೊಗಳುಭಟ ಪ್ರವೃತ್ತಿಯಿಂದ ಹುದ್ದೆ ಗಳಿಸಿಕೊಂಡು, ಅದನ್ನು ಉಳಿಸಿಕೊಳ್ಳಲು ಸಾಧ್ಯವಿರುವುದನ್ನೆಲ್ಲ ಮಾಡುತ್ತಾರೆ; ಸಂಘಟನೆಗೆ ಶ್ರಮ ವಹಿಸುವುದಿಲ್ಲ. ಚುನಾವಣೆಯಲ್ಲಿ ಸೋತರೆ, ಪರಿಷತ್ತು-ರಾಜ್ಯಸಭೆಯಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಪಕ್ಷ ನಿರಾಕರಿಸಿದರೆ, ದ್ವೇಷ ಸಾಧಿಸುತ್ತಾರೆ ಮತ್ತು ಮುಖಂಡರನ್ನು ಅವಕಾಶ ಸಿಕ್ಕಾಗಲೆಲ್ಲ ಟೀಕಿಸುತ್ತಾರೆ. ಕೊನೆಗೊಮ್ಮೆ ಪಕ್ಷವನ್ನು ತೊರೆಯುತ್ತಾರೆ. ಬಿಜೆಪಿಗೆ ಪಕ್ಷಾಂತರಗೊಂಡವರನ್ನು ಸಮರ್ಥಿಸುತ್ತ, ಕಡೆಗಣನೆ ಮತ್ತು ನಿರ್ಲಕ್ಷ್ಯವನ್ನು ಸಹಿಸುವುದಕ್ಕೂ ಮಿತಿಯಿದೆ ಎಂದು ವಾದಿಸುತ್ತಾರೆ. ಇಂಥವರಲ್ಲಿ ಹೆಚ್ಚಿನವರು ಅಂತರಂಗದಲ್ಲಿ ಸಂಘಿಗಳೇ ಆಗಿರುತ್ತಾರೆ. ಶಶಿ ತರೂರ್ ಅಂಥವರು ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದಲ್ಲಿ ಇದ್ದಾರೆ. ಮೋದಿ-ಶಾ ಜೋಡಿಯ ವಿನಾಶಕಾರಿ ರಾಜಕೀಯ ದಾಳಿ ಹೊರತಾಗಿಯೂ ಕಾಂಗ್ರೆಸ್‌ನ ಯುವ ಮತ್ತು ಹಿರಿಯ ನಾಯಕರು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಒಗ್ಗಟ್ಟು ಸಾಧಿಸಲು ಸಾಧ್ಯವಾಗಿಲ್ಲ ಎಂಬುದು ಕಠೋರ ಸತ್ಯ.

ರಾಹುಲ್ ತಮ್ಮ ಕಠಿಣ ಪರಿಶ್ರಮ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಸ್ಪಷ್ಟ ಸೈದ್ಧಾಂತಿಕ ನಿಲುವಿನಿಂದ ಕಾರ್ಯಕರ್ತರು ಮತ್ತು ಜನರ ಅಭಿಮಾನ ಗಳಿಸಿದ್ದಾರೆ. ಆದರೆ, ತಮ್ಮ ನಿಲುವನ್ನು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳಲ್ಲೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸೆಣಸಾಟ ರಸ್ತೆಗೆ ಬಂದಿದೆ. ‘ಉಚಿತ’ಗಳ ವಿರುದ್ಧ ಸಚಿವರೇ ಮಾತನ್ನಾಡುತ್ತಾರೆ; ಆದರೆ, ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿ-ಸರಕಾರದ ಮೇಲೆ ಬಿಜೆಪಿ-ಆರೆಸ್ಸೆಸ್ ವಾಗ್ದಾಳಿ ನಡೆಸಿದರೆ, ಸಚಿವರು ಉಸಿರೆತ್ತುವುದಿಲ್ಲ. ಒಂದು ವೇಳೆ ಸೈದ್ಧಾಂತಿಕ ನಿಕಷದಲ್ಲಿ ಪರಿಶೋಧಿಸಿದರೆ, ರಾಜ್ಯ ಕಾಂಗ್ರೆಸ್ ಬಹುತೇಕ ಖಾಲಿಯಾಗಿ ಬಿಡುತ್ತದೆ! ಕಬ್ಬನ್ ಪಾರ್ಕ್ ಮೂಲಕ ಸುರಂಗ ರಸ್ತೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, 46 ಕಸ ಗುಡಿಸುವ ಯಂತ್ರಗಳಿಗೆ 7 ವರ್ಷ ಅವಧಿಗೆ 613 ಕೋಟಿ ರೂ. ಬಾಡಿಗೆ ಒಪ್ಪಂದ(ಈ ಯಂತ್ರವೊಂದರ ಬೆಲೆ 2.5 ಕೋಟಿ ರೂ.)ದಂಥ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ. ಬಿಜೆಪಿಯ ಕೆಟ್ಟ ಆಡಳಿತ ನೋಡಿ, ಜನ ನಮಗೆ ಮತ ನೀಡಿದ್ದಾರೆ ಎಂಬುದನ್ನು ಕಾಂಗ್ರೆಸ್ ಮಂದಿ ಮರೆತಂತೆ ಕಾಣುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ್ ರೆಡ್ಡಿ ಎಬಿವಿಪಿ ಹಿನ್ನೆಲೆಯವರು. ಅವರ ನಡೆಗಳು ರಾಹುಲ್ ಪ್ರತಿಪಾದಿಸುವ ಸಿದ್ಧಾಂತಕ್ಕೆ ತದ್ವಿರುದ್ಧವಾಗಿವೆ. ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸರಕಾರವಿದ್ದರೂ, 2024ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಿಜಕ್ಕೂ ಸಂಕಷ್ಟದಲ್ಲಿದೆ.

ಮಂಡಲ-ಕಮಂಡಲ ಸಮೀಕರಣದ ಪುನರುಜ್ಜೀವ

ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯನ್ನು ‘ಉಚಿತ’ದಿಂದ ತಗ್ಗಿಸಲಾಯಿತು. ವಿಜಯಕ್ಕೆ ಮತ ಕಳವು ಮಾತ್ರವಲ್ಲದೆ ಹಲವು ಕಾರಣಗಳಿವೆ. ಮೊದಲಿಗೆ, ಜಗನ್ನಾಥ್ ಮಿಶ್ರಾ ಅವರ ನಂತರ ಲಾಲು ಪ್ರಸಾದ್ ಯಾದವ್ ಅಧಿಕಾರಕ್ಕೆ ಬಂದಾಗ, ಮೇಲ್ಜಾತಿ ವ್ಯವಸ್ಥೆಯನ್ನು ಹಿಂದುಳಿದ ಜಾತಿಗಳು ಸ್ಥಳಾಂತರಿಸಿದವು; ಲಾಲು ಅವರು ಯಾದವ ಕೇಂದ್ರಿತ ರಾಜಕೀಯಕ್ಕೆ ಪರ್ಯಾಯವನ್ನು ರೂಪಿಸಲಿಲ್ಲ. ನಿತೀಶ್ ಕುಮಾರ್ ಆಡಳಿತದಲ್ಲಿ ಅತಿ ಹಿಂದುಳಿದ ಜಾತಿಗಳು ಮುನ್ನೆಲೆಗೆ ಬಂದಿವೆ. ಇದರಿಂದ, ಮಂಡಲ್ ರಾಜಕೀಯ ಮಾತ್ರವಲ್ಲದೆ ಲಾಲು ಅವರ ಕುಟುಂಬದ ಹಿಡಿತ ಕೂಡ ದುರ್ಬಲಗೊಂಡಿದೆ. ಸಾಕಷ್ಟು ಯುವ ಯಾದವ ಮುಖಂಡರು ಎನ್‌ಡಿಎ ಸೇರಿದ್ದಾರೆ. ಎರಡನೆಯದಾಗಿ, ಮಂಡಲ-ಕಮಂಡಲ ಸಮೀಕರಣ ರೂಪುಗೊಂಡಿದೆ. ಬಿಜೆಪಿ-ಜೆಡಿಯು ಸಂಬಂಧ ಇದನ್ನು ಪ್ರತಿಬಿಂಬಿಸುತ್ತದೆ. ಮೂರನೆಯದಾಗಿ, ಬಿಜೆಪಿ-ಜೆಡಿಯು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಬದಿಗಿಟ್ಟಿವೆ. ಉದಾಹರಣೆಗೆ, ನಿತೀಶ್ ಅವರನ್ನು ಮೈತ್ರಿಕೂಟದ ನಾಯಕ ಎಂದು ಒಪ್ಪಿಕೊಳ್ಳಲಾಯಿತು; ಎರಡೂ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡು, ಒಂದು ಪಕ್ಷ ಬಹುಮತ ಗಳಿಸುವ ಸಾಧ್ಯತೆಯನ್ನು ನಿವಾರಿಸಿದವು. ಮೂರನೆಯದಾಗಿ, ಮುಸ್ಲಿಮ್ ಮತಗಳು ಮತ್ತು ಪ್ರಬಲ ಜಾತಿಯಾದ ಯಾದವರ ಬೆಂಬಲವಿಲ್ಲದಿದ್ದರೂ, ಬಿಜೆಪಿ ಮೇಲ್ಜಾತಿ ಮತಗಳನ್ನು, ಜೆಡಿ(ಯು) ಕುರ್ಮಿ, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಕೊಯರಿ, ಜಿತನ್ ರಾಂ ಮಾಂಝಿ ಅವರ ಹಿಂದುಸ್ಥಾನ್ ಅವಾಂ ಮೋರ್ಚಾ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕಜನ ಶಕ್ತಿ ಪಕ್ಷ(ಆರ್‌ವಿ)ದ ಮೂಲಕ ದಲಿತರ ಮತಗಳನ್ನು ಸೆಳೆಯಲಾಯಿತು. ಆಂಧ್ರದಲ್ಲಿ ರೆಡ್ಡಿ ಸಮುದಾಯವನ್ನು ಕಮ್ಮ-ಕಾಪು ಹೊಂದಾಣಿಕೆ ಮೂಲಕ ಅಥವಾ ತೆಲಂಗಾಣದಲ್ಲಿ ವೇಲಮರನ್ನು ಪ್ರತ್ಯೇಕಿಸಿದಂತೆ, ಯಾದವರನ್ನು ಉಳಿದ ಜಾತಿ ಗುಂಪುಗಳಿಂದ ಪ್ರತ್ಯೇಕಿಸಲಾಯಿತು. ಪ್ರಬಲ ಜಾತಿಗಳನ್ನು ಮುಖಾಮುಖಿಯಾಗಿಸುವ ಬದಲು ಜಾತಿಗಳ ಸುಸಂಬದ್ಧ ಕ್ರೋಡೀಕರಣದಿಂದ ಅವನ್ನು ಪ್ರತ್ಯೇಕಿಸಲಾಯಿತು. ಈ ಸೂತ್ರದಿಂದ ಜಾತಿ ಆಧರಿತ ಪ್ರಾದೇಶಿಕ ಪಕ್ಷಗಳನ್ನು ನಿಭಾಯಿಸಬಹುದಾಗಿದೆ. ನಾಲ್ಕನೆಯದಾಗಿ, ಬಿಹಾರದಲ್ಲಿ ಬಿಜೆಪಿ ಎರಡನೇ ಸ್ಥಾನವನ್ನು ಒಪ್ಪಿಕೊಂಡಿದೆ. ಪ್ರಧಾನಿ ಸ್ಥಾನಕ್ಕೆ ನಿತೀಶ್ ಪ್ರಯತ್ನಿಸದೆ ಇರುವವರೆಗೆ ಬಿಜೆಪಿ ಸುಮ್ಮನಿರುತ್ತದೆ. ವಯಸ್ಸು ನಿತೀಶ್ ಅವರ ಪರ ಇಲ್ಲ. ಐದನೆಯದಾಗಿ, ಜಗನ್ನಾಥ ಮಿಶ್ರಾ ಸಾವಿನ ಬಳಿಕ ಕಾಂಗ್ರೆಸ್ ಬಿಹಾರದಲ್ಲಿ ನೆಲೆ ಕಳೆದುಕೊಂಡಿತು. ಹಿಂದೊಮ್ಮೆ ಮೇಲ್ಜಾತಿ ನಾಯಕತ್ವದಡಿ ಜಾತಿ ಒಗ್ಗಟ್ಟನ್ನು ಸಾಧಿಸಿದ್ದ ಪಕ್ಷ ಈಗ ಸಾಮಾಜಿಕ ಬೆಂಬಲವಿಲ್ಲದೆ ಬಳಲಿದೆ. ಆರ್‌ಜೆಡಿ ಮೇಲಿನ ಜಂಗಲ್ ರಾಜ್ ಆರೋಪ, ಯಾದವ ಸಮುದಾಯದ ಹಿಡಿತ, ಮೃದು ಹಿಂದುತ್ವದ ಅರೆ ಮನಸ್ಸಿನ ನಡೆಗಳು, ರಾಹುಲ್ ಗಾಂಧಿ ಅವರ ಸೈದ್ಧಾಂತಿಕ ನಿಲುವಿಗೆ ಅಸಹಕಾರ, ಚುನಾವಣೆ ಆಯೋಗ ಸೇರಿದಂತೆ ನಾನಾ ಸರಕಾರಿ ಏಜೆನ್ಸಿಗಳಿಂದ ಕಿರುಕುಳ ಮತ್ತು ನಿರಂತರ ಸೋಲಿನಿಂದ ಕಾಂಗ್ರೆಸ್ ಸಂಪೂರ್ಣವಾಗಿ ದಣಿದಿದೆ. ಆರನೆಯದಾಗಿ, ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ದಲಿತರ ಬೆಂಬಲ. ದಲಿತರು ತಮ್ಮ ನಿಷ್ಠೆಯನ್ನು ರಾಮ್‌ವಿಲಾಸ್ ಪಾಸ್ವಾನ್ ಅವರಿಂದ ಮಗ ಚಿರಾಗ್‌ಗೆ ವರ್ಗಾಯಿಸಿದ್ದಾರೆ. ಪಕ್ಷವನ್ನು ಒಡೆದಿದ್ದ ಪಶುಪತಿ ಕುಮಾರ್ ಪಾರಸ್ ಅವರಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿ, ಚಿರಾಗ್ ಅವರನ್ನು ಕಸದ ಬುಟ್ಟಿಗೆ ಎಸೆದಿತ್ತು. ಆದರೆ, 2025ರಲ್ಲಿ ಚಿರಾಗ್ ಅವರಿಗೆ ಮಣೆ ಹಾಕಿತು; ಪಾರಸ್ ಅವರನ್ನು ವಿಸರ್ಜಿಸಿತು. ಬಿಜೆಪಿಯ ಬಳಸಿ ಎಸೆಯುವ ರಾಜಕೀಯಕ್ಕೆ ಇದೊಂದು ಉದಾಹರಣೆ.

ಮಹಿಳೆಯರಿಗೆ ಆದ್ಯತೆ

ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಮಹಿಳೆಯರು ಮತ್ತು ಮೋದಿ-ನಿತೀಶ್ ಅವರ ಮಹಿಳಾಕೇಂದ್ರಿತ ಕಾರ್ಯಕ್ರಮಗಳು ಭರ್ಜರಿ ಇಳುವರಿ ನೀಡಿದವು. ಮಹಿಳೆಯರ ಮತದಾನ ಪ್ರಮಾಣ ಶೇ.71.6(ಪುರುಷರಿಗಿಂತ ಶೇ.10 ಹೆಚ್ಚು) ಮತ್ತು ಕಳೆದ ಬಾರಿ(26)ಗಿಂತ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದಾರೆ(28). ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ ಶಾಸಕಿಯರ ಪಾಲು ಶೇ.10.7. ಕರ್ನಾಟಕದಲ್ಲಿ ಶೇ.3; ದೇಶದಲ್ಲೇ ಕಡಿಮೆ. ಮದ್ಯ ನಿಷೇಧ, ಬಾಲಕಿಯರಿಗೆ ಸಮವಸ್ತ್ರ-ಸೈಕಲ್ ವಿತರಣೆ, ಜೀವಿಕಾ ದೀದಿ ಮತ್ತು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಕಾರ್ಯಕ್ರಮ ಹಾಗೂ 10,000 ರೂ. ವಿಜಯಕ್ಕೆ ಕಾರಣವಾಗಿದೆ. 2016ರಲ್ಲಿ ಆರಂಭಗೊಂಡ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನ(ಡಿಎವೈ-ಎನ್‌ಆರ್‌ಎಲ್‌ಎಂ) ಗ್ರಾಮೀಣ ಮಹಿಳೆಯರಿಗೆ ಸ್ವಉದ್ಯೋಗ ಮತ್ತು ಸುಸ್ಥಿರ ಜೀವನೋಪಾಯ ಕಲ್ಪಿಸುವ ಉದ್ದೇಶವಿರುವ ಪ್ರಮುಖ ಸರಕಾರಿ ಉಪಕ್ರಮ. ನಿತೀಶ್ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ಡ್ರೋನ್ ದೀದಿ, ಕೃಷಿ ಸಖಿ, ಪಶು ಸಖಿ, ಉದ್ಯೋಗ ಸಖಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಅಸ್ಮಿತೆ ಮತ್ತು ಆರ್ಥಿಕ ಸ್ವಾವಲಂಬನೆ ಲಭ್ಯವಾಗಿದೆ. ಈ ‘ಉಚಿತ’ಗಳಿಗೆ ದೀರ್ಘ ಪರಂಪರೆ ಇದೆ. ಇದನ್ನು ಮೊದಲು ಜಾರಿಗೊಳಿಸಿದ್ದು ಕಾಂಗ್ರೆಸ್. ಮೋದಿ ಅದನ್ನು ಚಾಣಾಕ್ಷತನದಿಂದ ಬಳಸಿಕೊಂಡಿದ್ದು, ಅದರೊಟ್ಟಿಗೆ ಕೋಮು ಧ್ರುವೀಕರಣವನ್ನೂ ಮಾಡಿದ್ದಾರೆ. ತಮಾಷೆ ಎಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನೀಡುತ್ತಿರುವ ಭಾಗ್ಯಗಳನ್ನು ‘ಬಿಟ್ಟಿ ಭಾಗ್ಯ’ ಎಂದು ಬಿಜೆಪಿ ಹೀಗಳೆಯುತ್ತದೆ.

ನೀತಿಸಂಹಿತೆ ಜಾರಿಯಾದ ಬಳಿಕವೂ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದ್ದರೂ, ಚುನಾವಣಾ ಆಯೋಗ ಕಮಕ್ ಕಿಮಕ್ ಎನ್ನಲಿಲ್ಲ. ಪ್ರತಿಪಕ್ಷಗಳು ಈ ಸಂಬಂಧ ದೂರು ನೀಡಬೇಕಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ, ಚುನಾವಣಾ ಆಯೋಗ, ಕಾರ್ಯಾಂಗ ಹಾಗೂ ಮಾಧ್ಯಮಗಳನ್ನು ಕೈ ವಶಪಡಿಸಿಕೊಂಡಿರುವ ಬಿಜೆಪಿ ಇದಕ್ಕೆ ಮಣಿಯುತ್ತಿತ್ತೇ? ಜಾತಿ ಸಮೀಕರಣ, ಜಾತಿ-ಧಾರ್ಮಿಕ ಧ್ರುವೀಕರಣ, ಹಣ-ಅಧಿಕಾರದ ಬಲ ಎಲ್ಲವೂ ಬಿಜೆಪಿ ಪರ ಕೆಲಸ ಮಾಡಿದೆ. ಇದು ದುರುಳತನ ಎನ್ನುವುದು ಜನರಿಗೆ ಗೊತ್ತಿಲ್ಲದೆ ಇಲ್ಲ; ಆದರೆ, ಸೈದ್ಧಾಂತಿಕ ಅಮಲು ಬಾಯಿ ಮುಚ್ಚಿಸಿದೆ. ಕೆಲಸ ಮಾಡಿದರೂ, ಮಾಡದೆ ಇದ್ದರೂ ಗೆಲ್ಲುವುದು ಹೇಗೆ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ.

ಮಹಾರಾಷ್ಟ್ರದಲ್ಲಿ 1989ರಿಂದ ಜತೆಗಾರನಾಗಿ, ಆನಂತರ ಮೈತ್ರಿಯನ್ನು ತೊರೆದ ಶಿವಸೇನೆ ಮೇಲೆ ಬಿಜೆಪಿ ಹೇಗೆ ಸೇಡು ತೀರಿಸಿಕೊಂಡಿತು ಎನ್ನುವುದನ್ನು ಸ್ಮರಿಸಿಕೊಳ್ಳಿ. ಶಿವಸೇನೆಯನ್ನು ಒಡೆಯಿತಲ್ಲದೆ, ಆನಂತರ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯನ್ನೂ ವಿಭಜಿಸಿತು. 2024ರ ಲೋಕಸಭೆ ಚುನಾವಣೆಯಲ್ಲಿ ಕೇವಲ 9 ಸ್ಥಾನ ಗಳಿಸಿದರೂ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಾಡಿದ ಭಾಷಣದಲ್ಲಿನ ಕಾಂಗ್ರೆಸ್ ವಿಭಾಗವಾಗುವ ಮಾತನ್ನು ಪರಿಗಣಿಸಬೇಕು. ಕಾಂಗ್ರೆಸ್‌ನಲ್ಲಿ ರಾಹುಲ್ ಅವರ ಕಾರ್ಯನೀತಿ-ನಿಲುವು ಒಪ್ಪದೆ ಇರುವವರು ಸಾಕಷ್ಟು ಮಂದಿ ಇದ್ದಾರೆ. ಕೋಮುವಾದದ ವಿರುದ್ಧ ಮತ್ತು ಸಂವಿಧಾನ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ನಿಲುವು ತೆಗೆದುಕೊಂಡರೆ, ಕಾಂಗ್ರೆಸ್ ಇಬ್ಭಾಗವಾದರೂ ಆಶ್ಚರ್ಯವಿಲ್ಲ. 2026ರಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯು ಕಾಂಗ್ರೆಸ್ ಮತ್ತು ರಾಹುಲ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ವ್ಯಂಗ್ಯವೆಂದರೆ, ಬಿಜೆಪಿ ಎಲ್ಲ ಪಕ್ಷದ ವಲಸಿಗರಿಂದ ತುಂಬಿಕೊಂಡು, ಹಳೆಯ ಕಾಂಗ್ರೆಸ್‌ನ ಪಡಿಯಚ್ಚಾಗಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ತಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿವೆ. ಬಿಜೆಪಿಯನ್ನು ಎದುರಿಸಬಲ್ಲ ರಾಷ್ಟ್ರೀಯ ಹೆಜ್ಜೆಗುರುತು ಮತ್ತು ಐತಿಹಾಸಿಕ ಸ್ವೀಕಾರಾರ್ಹತೆ ಇರುವುದು ಕಾಂಗ್ರೆಸ್‌ಗೆ ಮಾತ್ರ. ಕಾಂಗ್ರೆಸ್ ತನ್ನ ದೊಡ್ಡಣ್ಣನ ಮನಸ್ಥಿತಿ ಕೈಬಿಟ್ಟು, ಪ್ರಾದೇಶಿಕ ಪಕ್ಷಗಳೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ವಿಶಾಲವಾದ ವೇದಿಕೆಯೊಂದನ್ನು ರೂಪಿಸಬೇಕಿದೆ. ಇದು ಆಗುವುದು ಯಾವ ಕಾಲಕ್ಕೆ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News