ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು
ದೇಶ ಮತ್ತು ನಾಗರಿಕರು, ಬಹುಸಂಖ್ಯಾತರು-ಅಲ್ಪಸಂಖ್ಯಾತರು, ಸ್ತ್ರೀ-ಪುರುಷ, ಬಡವರು-ಹಣವಂತರ ನಡುವೆ ನ್ಯಾಯಸಮ್ಮತ ಸಮತೋಲನ, ಒಕ್ಕೂಟ ಮತ್ತು ರಾಜ್ಯಗಳ ನಡುವೆ ನಂಬಿಕಸ್ಥ ಪಾಲುದಾರಿಕೆ ಇದ್ದಾಗ ದೇಶ ಚೈತನ್ಯಶಾಲಿ ಆಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಸದೃಢ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ. ಕಳೆದ ಏಳು ದಶಕಗಳಿಂದ ಈ ಸರಳ ಪಾಠವನ್ನು ಕಲಿಯಲು ನಾವು ವಿಫಲವಾಗಿದ್ದೇವೆ; ಸಾಂಸ್ಥಿಕ ಲೋಪದೋಷಗಳಿಂದ ಕೆಟ್ಟ ಆಯ್ಕೆಗಳಲ್ಲದೆ, ದುಬಾರಿ ದಂಡ ತೆರಬೇಕಾಗುತ್ತದೆ. ವಿವೇಕಶಾಲಿ ನಾಯಕತ್ವದ ಅನುಪಸ್ಥಿತಿಯಲ್ಲಿ ಸಮತೋಲನವನ್ನು ಕಾಯುವ ಹೊರೆ ನ್ಯಾಯಾಂಗದ ಮೇಲೆ ಬೀಳುತ್ತದೆ.
ನವೆಂಬರ್ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಾಟ್ನಾದಲ್ಲಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್ ಕುಮಾರ್ ಮತ್ತು ಮೈತ್ರಿ ಪಕ್ಷ ಬಿಜೆಪಿ ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್ ತೀರ್ಪು ಗಣತಂತ್ರಕ್ಕೆ ಅಪಾಯಕಾರಿ ಆಗಲಿದೆ.
ಅಕ್ಟೋಬರ್ 5ರಂದು ನಡೆದ ಆರೆಸ್ಸೆಸ್ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದ ಮು.ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ ಅವರ ತಾಯಿ ಕಮಲಾ ಗವಾಯಿ ಅವರ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ನವೆಂಬರ್ 23ಕ್ಕೆ ಗವಾಯಿ ಅವರ ಅಧಿಕಾರಾವಧಿ ಅಂತ್ಯಗೊಂಡಿತು. ಅವರ ನೇತೃತ್ವದ ಸಂವಿಧಾನ ಪೀಠವು ತಮಿಳುನಾಡು ರಾಜ್ಯ ವರ್ಸಸ್ ತಮಿಳುನಾಡು ರಾಜ್ಯಪಾಲರು ಪ್ರಕರಣದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿ ವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಹೈಕೋರ್ಟಿನ ದ್ವಿಸದಸ್ಯ ಪೀಠ ಎಪ್ರಿಲ್ 8ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಸುಪ್ರೀಂ ಆದೇಶವು ಕಾನೂನಿನ ಪ್ರಕಾರ ಸರಿ; ಆದರೆ, ಹಾಲಿ ರಾಜಕೀಯ ಸನ್ನಿವೇಶದಲ್ಲಿ ಅದು ಅಪ್ರಾಯೋಗಿಕ ಮತ್ತು ಅಸಂಗತ. ಆದರ್ಶ ರಾಜ್ಯ-ರಾಜಕಾರಣಿಗಳು ಇದ್ದಾಗ ಮಾತ್ರ ಇಂಥ ಆದೇಶಕ್ಕೆ ಮನ್ನಣೆ ಇರುತ್ತದೆ.
ಕೋರ್ಟ್ ಆದೇಶ ಏನಿತ್ತು?
‘‘ಶಾಸಕಾಂಗ/ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು/ರಾಷ್ಟ್ರಪತಿ ಅನಿರ್ದಿಷ್ಟ ಕಾಲ ಇರಿಸಿಕೊಳ್ಳುವಂತಿಲ್ಲ. 3 ತಿಂಗಳೊಳಗೆ ಮಸೂದೆಯನ್ನು ಮುಕ್ತಗೊಳಿಸಬೇಕು; ಇಲ್ಲವಾದರೆ ಸಮ್ಮತಿ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ’’ ಎಂದು ನ್ಯಾ. ಪರ್ದಿವಾಲಾ-ಮಹಾದೇವನ್ ಪೀಠ ಹೇಳಿತ್ತು. ಈ ಆದೇಶ ‘ಪಾಕೆಟ್ ವೀಟೊ’ಗೆ ಅಂತ್ಯ ಹಾಡಿತ್ತು. ರಾಜ್ಯಗಳ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಮತ್ತು ಯಜಮಾನತ್ವವನ್ನು ಸಡಿಲಗೊಳಿಸಿತು. 2014ರ ಬಳಿಕ ಕೇಂದ್ರ ಸರಕಾರವು ರಾಜ್ಯಗಳನ್ನು, ವಿಶೇಷವಾಗಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳನ್ನು ಅಟಕಾಯಿಸುತ್ತಿದೆ. ಎನ್‌ಡಿಎ 21 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಬಿಜೆಪಿಯೇತರ ಸರಕಾರ ಇರುವ ರಾಜ್ಯ(ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ, ಜಾರ್ಖಂಡ್, ಪಂಜಾಬ್ ಮತ್ತು ಮಿಜೋರಾಂ)ಗಳಲ್ಲಿ ರಾಜ್ಯಪಾಲರನ್ನು ಇನ್ನೊಂದು ಶಕ್ತಿ ಕೇಂದ್ರವಾಗಿಸಿದ್ದು, ಇವರು ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡದೆ ಇಲ್ಲವೇ ರಾಷ್ಟ್ರಪತಿಗೆ ಕಳಿಸದೆ ವಿಳಂಬ ಮಾಡುತ್ತಿದ್ದಾರೆ. ಒಂದು ವೇಳೆ ರಾಷ್ಟ್ರಪತಿಗೆ ಕಳಿಸಿದರೂ, ಅಲ್ಲಿಯೂ ವಿನಾಕಾರಣ ವಿಳಂಬ ಆಗುತ್ತಿದೆ. ತಮಿಳುನಾಡು ರಾಜ್ಯಪಾಲರ ಅಡ್ಡಿ ಪಡಿಸುವ ವರ್ತನೆ ‘ಗಂಭೀರ ಕಳವಳಕಾರಿ ವಿಷಯ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ‘ವಿಧಾನಸಭೆ ಅಂಗೀಕರಿಸಿದ 12 ಮಸೂದೆಗಳ ಮೇಲೆ ರಾಜ್ಯಪಾಲರು ಕುಳಿತಿದ್ದಾರೆ’ ಎಂದು ತಮಿಳುನಾಡು ಸರಕಾರ ದೂರು ನೀಡಿತ್ತು. ಇದರಲ್ಲಿ ಕೆಲವು 2020ರಷ್ಟು ಹಿಂದಿನವು. ಜೊತೆಗೆ, ತಮಿಳು ಸಂಪುಟವು ಅನುಮೋದಿಸಿದ ಕ್ರಮಗಳನ್ನು ಅನುಮೋದಿಸಲು ರಾಜ್ಯಪಾಲರು ನಿರಾಕರಿಸಿದ್ದರು. ತಮಿಳುನಾಡು ಮಾತ್ರವಲ್ಲ; ರಾಜ್ಯಪಾಲರು ಶಾಸಕಾಂಗ ಮತ್ತು ಕಾರ್ಯಾಂಗದ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತೆಲಂಗಾಣ, ಪಂಜಾಬ್ ಮತ್ತು ಕೇರಳ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಪಶ್ಚಿಮ ಬಂಗಾಳದ ರಾಜ್ಯಪಾಲರು ವಿಶ್ವವಿದ್ಯಾನಿಲಯ ಗಳಿಗೆ ಉಪಕುಲಪತಿಗಳನ್ನು ನೇಮಿಸಬಾರದೆಂದು ಅಕ್ಟೋಬರ್ 2024ರಲ್ಲಿ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ.
ಇದು ಇತ್ತೀಚಿನ ಪ್ರವೃತ್ತಿಯಲ್ಲ. ರಾಜ್ಯಪಾಲರ ಅಧಿಕಾರದ ಮೂಲ- ವಸಾಹತುಶಾಹಿ ಕಾಲದ 1935ರ ಇಂಡಿಯಾ ಆಕ್ಟ್. 1937ರಿಂದ ರಾಜ್ಯಗಳು (ಅಥವಾ ಪ್ರಾಂತಗಳು) ಸರಕಾರಗಳನ್ನು ಹೊಂದಿದ್ದವು ಮತ್ತು ರಾಜ್ಯಪಾಲರು ಬ್ರಿಟಿಷರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗಲೂ ರಾಜ್ಯಪಾಲರು ಚುನಾಯಿತ ಸರಕಾರಗಳಿಗೆ ಕಿರುಕುಳ ನೀಡುತ್ತಿದ್ದರು; ಸಚಿವ ಸಂಪುಟಗಳನ್ನು ಕೆಳಗಿಳಿಸಿದ್ದೂ ಇದೆ. ಸ್ವಾತಂತ್ರ್ಯಾನಂತರ ಈ ಪ್ರವೃತ್ತಿ ಮುಂದುವರಿಯಿತು. 1970ರ ದಶಕದಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ರಾಜಭವನಗಳಲ್ಲಿ ಸ್ನಾಯುಬಲ ಪ್ರದರ್ಶಿಸಿತು. ಕಾಲಕ್ರಮೇಣ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತು. ಈ ಪ್ರವೃತ್ತಿಯನ್ನು ಬಿಜೆಪಿ ಮುಂದುವರಿಸಿದೆ. 2022ರಲ್ಲಿ ಠಾಕ್ರೆ ಸರಕಾರವನ್ನು ರಾಜ್ಯಪಾಲರ ನೆರವಿನಿಂದ ಉರುಳಿಸಿತು. 2019ರಲ್ಲಿ ಪಶ್ಚಿಮ ಬಂಗಾಳಕ್ಕೆ ರಾಜ್ಯಪಾಲರಾಗಿ ನೇಮಕಗೊಂಡ ಜಗದೀಪ್ ಧನ್ಕರ್ ಅತ್ಯಂತ ಕೆಟ್ಟ ಉದಾಹರಣೆ. ಬಿಜೆಪಿ ಪ್ರಾಬಲ್ಯ ಇಲ್ಲದಿದ್ದ ಆ ರಾಜ್ಯದಲ್ಲಿ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಿ, ತೃಣಮೂಲ ಕಾಂಗ್ರೆಸ್ ಸರಕಾರವನ್ನು ಎಡೆಬಿಡದೆ ಕಾಡಿದರು. 2021ರಲ್ಲಿ ತೃಣಮೂಲ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿತು. ಆನಂತರದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸಾಧನೆ ತೃಪ್ತಿಕರವಾಗಿರಲಿಲ್ಲ(42ರಲ್ಲಿ 12 ಸ್ಥಾನದಲ್ಲಿ ಜಯ. 6 ಸ್ಥಾನ ಕಳೆದುಕೊಂಡಿತು).
ರಾಜ್ಯಪಾಲರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸದ್ಯಕ್ಕೆ ಅಧಿಕಾರಕ್ಕೆ ಬರುವ ಸಾಧ್ಯತೆಯಿಲ್ಲ. ಆದ್ದರಿಂದ ರಾಜ್ಯಪಾಲರನ್ನು ಬಳಸಿಕೊಂಡು ಪಕ್ಷವನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಸುತ್ತಿದೆ. ಈ ಪ್ರವೃತ್ತಿ ಒಕ್ಕೂಟ ವ್ಯವಸ್ಥೆಯಲ್ಲಿನ ಲೋಪವನ್ನು ತೋರಿಸುತ್ತದೆ. ಇದರಿಂದ, ಬಿಜೆಪಿಯನ್ನು ವಿರೋಧಿಸುವ ರಾಜ್ಯ ಆಧರಿತ ಉಪರಾಷ್ಟ್ರೀಯತೆಗಳು ಹೊರಹೊಮ್ಮಿವೆ ಮತ್ತು ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಹೆಚ್ಚು ಪಾಲು ಉತ್ತರದ ರಾಜ್ಯಗಳಿಗೆ ವರ್ಗಾವಣೆ ಆಗುತ್ತಿರುವ ಬಗ್ಗೆ ಅಸಮಾಧಾನ ಹೆಚ್ಚಿದೆ. ರಾಜ್ಯಪಾಲರನ್ನು ಬಳಸಿಕೊಳ್ಳುವಿಕೆಯು ತಾತ್ಕಾಲಿಕ ಮಾರ್ಗವಾಗಿದ್ದು, ಬಿಜೆಪಿಯ ದೌರ್ಬಲ್ಯವನ್ನು ಹೋಗಲಾಡಿಸುವುದಿಲ್ಲ ಮತ್ತು ಕಾಲಕ್ರಮೇಣ ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ದುರ್ಬಲಗೊಳ್ಳುತ್ತದೆ. ಏಕೆಂದರೆ, ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷವು ಪ್ರಜಾಸತ್ತಾತ್ಮಕ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾಗದೆ, ರಾಜ ಭವನಗಳನ್ನು ಅವಲಂಬಿಸುತ್ತಿದೆ ಎಂದು ಜನ ಅರ್ಥ ಮಾಡಿಕೊಳ್ಳುತ್ತಾರೆ.
ಸುಪ್ರೀಂ ತೀರ್ಪು
ವಿಧಿ 200ರ ಅಡಿಯಲ್ಲಿ ರಾಜ್ಯಪಾಲರ ಅಧಿಕಾರದ ವ್ಯಾಪ್ತಿ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಅಸ್ಪಷ್ಟವಾಗಿದೆ. ರಾಜ್ಯಪಾಲರು ಮಸೂದೆಗೆ ಸಹಿ ಹಾಕಲು ನಿರಾಕರಿಸಲು, ತಡೆಹಿಡಿಯಲು ಅಥವಾ ರಾಷ್ಟ್ರಪತಿ ಅವರಿಗೆ ರವಾನಿಸದೇ ಇರಲು ಅವಕಾಶ ನೀಡುವ ಮೂಲಕ ಸಾಂವಿಧಾನಿಕ ವೀಟೊಗೆ ದಾರಿ ಮಾಡಿಕೊಡುತ್ತದೆ. ನ್ಯಾಯಾಲಯವು ತಾನು ಶಾಸಕಾಂಗ-ಕಾರ್ಯಾಂಗದ ರಾಜಕೀಯ ಜಗಳವನ್ನು ಬಗೆಹರಿಸಲು ಸಿದ್ಧವಿಲ್ಲ ಎಂಬ ಸಂದೇಶ ನೀಡಿರುವುದಲ್ಲದೆ, ತನ್ನ ಸಾಂಸ್ಥಿಕ ಜವಾಬ್ದಾರಿಯನ್ನು ತೊರೆದಂತೆ ಕಾಣುತ್ತದೆ. ಸುಪ್ರೀಂ ಆದೇಶವು ಎಡಿಎಂ ಜಬಲ್ಪುರ್ ಪ್ರಕರಣ(1976ರ ಸುಪ್ರೀಂ ಕೋರ್ಟ್ ತೀರ್ಪು, ತುರ್ತು ಪರಿಸ್ಥಿತಿ ಸಮಯದಲ್ಲಿ ಮೂಲಭೂತ ಹಕ್ಕುಗಳ ಜಾರಿಗೆ ನ್ಯಾಯಾಲಯದ ಕದ ತಟ್ಟುವ ಹಕ್ಕನ್ನು ಅಮಾನತುಗೊಳಿಸಿತು. ಸಂವಿಧಾನದ 226ನೇ ವಿಧಿಯಡಿ ಕೂಡ ವ್ಯಕ್ತಿಯೊಬ್ಬ ತನ್ನ ಬಂಧನವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಈ ವಿವಾದಾಸ್ಪದ ತೀರ್ಪು ಹೇಳುತ್ತದೆ; 1978ರ 44ನೇ ತಿದ್ದುಪಡಿ ಕಾಯ್ದೆಯಿಂದ ರದ್ದುಗೊಳಿಸಲಾಯಿತು)ದ ಆದೇಶವನ್ನು ನೆನಪಿಗೆ ತರುತ್ತದೆ. ಜಬಲ್ಪುರ್ ಆದೇಶಕ್ಕೆ 50 ವರ್ಷ ಆಗಿದೆ; ದೇಶದ ರಾಜಕೀಯ ವಿಕಾಸಗೊಂಡಿದೆ ಮತ್ತು ನ್ಯಾಯಾಂಗ ತುರ್ತುಪರಿಸ್ಥಿತಿ ಯುಗವನ್ನು ಮೀರಿ ಸಾಗಿದೆ.
ಸುಪ್ರೀಂ ಆದೇಶದಿಂದ ಬಿಜೆಪಿಯೇತರ ಸರಕಾರವಿರುವ ರಾಜ್ಯಗಳಲ್ಲಿ ರಾಜಭವನಗಳು ಪರ್ಯಾಯ ಶಕ್ತಿ ಕೇಂದ್ರವಾಗಲಿವೆ; ರಾಜ್ಯಪಾಲರು ನ್ಯಾಯಮೂರ್ತಿಯಂತೆ ವರ್ತಿಸುವಂತಿಲ್ಲ ಮತ್ತು ರಾಜ್ಯದಲ್ಲಿ ಇಬ್ಬರು ಕಾರ್ಯನಿರ್ವಾಹಕರು ಇರುವಂತಿಲ್ಲ ಎಂದು ದ್ವಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿತ್ತು. ರಾಜ್ಯಪಾಲರು ಒಪ್ಪಿಗೆಯನ್ನು ‘ಅನಿರ್ದಿಷ್ಟ’ ಕಾಲ ತಡೆಹಿಡಿಯಬಹುದಾದರೆ, ಯಾವಾಗ ರಾಜ್ಯಪಾಲರ ಕ್ರಮವು ‘ವಿವರಿಸಲಾಗದ ವಿಳಂಬ’ ಆಗುತ್ತದೆ? ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಂವಿಧಾನಿಕ ಸಂಸ್ಥೆಗಳು ಕೂಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗದ ಮೌನ ಸಮ್ಮತಿ ಅಥವಾ ಅಸಮ್ಮತಿ ನಡುವೆಯೇ ರಾಷ್ಟ್ರಾಧ್ಯಕ್ಷ ತನ್ನ ಅಧಿಕಾರವನ್ನು ಬೇಕಾಬಿಟ್ಟಿ ಚಲಾಯಿಸಬಹುದು ಎಂಬುದಕ್ಕೆ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಒಂದು ನಿದರ್ಶನ. ಭಾರತದ ಸಂವಿಧಾನವು ಹಲವಾರು ಬದ್ಧತೆ, ವಿನಾಯಿತಿ ಮತ್ತು ರಾಜಿ ಸಂಧಾನದ ಮೂಲಕ ಮಾಡಿ ಕೊಂಡ ರಾಜಕೀಯ ಒಪ್ಪಂದ; ನಿಯಮಗಳ ಪ್ರಕಾರವೇ ಆಟ ಆಡಬೇಕೆಂದು ಸಂವಿಧಾನ ಎಲ್ಲ ಭಾಗೀದಾರರ ಮೇಲೆ ನಿರ್ಬಂಧ ಹೇರುತ್ತದೆ.
ರಾಜ್ಯಪಾಲ-ರಾಷ್ಟ್ರಪತಿ ಮೇಲೆ ಕಾಲಮಿತಿಯ ಒತ್ತಡ ಹೇರಲಾಗದು. ಅವರು ‘ತಾರ್ಕಿಕ ಕಾಲಾವಧಿ’ಯೊಳಗೆ ಪ್ರತಿಕ್ರಿಯಿಸಬೇಕು ಎಂದು ಆದೇಶ ಹೇಳುತ್ತದೆ. ಆದರೆ, ‘ತಾರ್ಕಿಕ ಕಾಲಾವಧಿ’ಯನ್ನು ನಿಗದಿಪಡಿಸಿಲ್ಲ. ಆದರೆ, ದ್ವಿಸದಸ್ಯ ಪೀಠವು ‘ರಾಜ್ಯಪಾಲರು ಮಸೂದೆಯೊಂದನ್ನು ಅನಿರ್ದಿಷ್ಟ ಕಾಲ ಇರಿಸಿಕೊಳ್ಳುವಂತಿಲ್ಲ. ಸಾಮಾನ್ಯ ಮಸೂದೆಯಾದರೆ ಒಂದು ತಿಂಗಳು, ಆಂತರಿಕ-ಬಾಹ್ಯ ತುರ್ತುಪರಿಸ್ಥಿಗೆ ಸಂಬಂಧಿಸಿದವು 3-4 ತಿಂಗಳು ತೆಗೆದು ಕೊಳ್ಳಬಹುದು’ ಎಂದು ಹೇಳಿತ್ತು. ನ್ಯಾಯಾಲಯ ಉತ್ತರಿಸದ ಪ್ರಶ್ನೆಯೆಂದರೆ, ಈ ತೀರ್ಪು ಯಾವ ಸಾಂವಿಧಾನಿಕ ಉದ್ದೇಶವನ್ನು ಈಡೇರಿಸುತ್ತದೆ? ರಾಜ್ಯಪಾಲರು ಸಂವಿಧಾನದ ರಕ್ಷಣೆಗೆ ಬದಲು ಒಕ್ಕೂಟ ಸರಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದು, ಮಸೂದೆಗಳನ್ನು ಅನಿರ್ದಿಷ್ಟಾವಧಿ ತಡೆಹಿಡಿಯುವ ಮೂಲಕ ಅಧಿಕಾರ ದುರುಪಯೋಗ ಮತ್ತು ರಾಜ್ಯ ಸರಕಾರಗಳನ್ನು ಹೈರಾಣು ಮಾಡಿರುವುದು ಪ್ರಸ್ತುತ ಬಿಕ್ಕಟ್ಟಿಗೆ ಕಾರಣ. ದ್ವಿಸದಸ್ಯ ಪೀಠ ಈ ರೋಗಕ್ಕೆ ಔಷಧ ನೀಡಲು ಪ್ರಯತ್ನಿಸಿತ್ತು.
ಮೊದಲಿಗೆ, ‘ವಿವೇಚನೆ’ ಎಂದರೆ ಏನು? ಆರು ತಿಂಗಳ ಕಾಲಾವಧಿಯಲ್ಲಿ ರಾಜ್ಯಪಾಲರ ವಿವೇಚನೆ ಹೇಗೆ ಬದಲಾಗುತ್ತದೆ? ರಾಜ್ಯಪಾಲರು ‘‘ನನಗೆ ವಿವೇಚನೆಯಿದೆ ಮತ್ತು ನಿಮ್ಮೊಂದಿಗೆ ಮಾತಾಡಲಿದ್ದೇನೆ. ಯಾವಾಗ ಮಾತ ನಾಡುತ್ತೇನೆ ಎಂದು ನಿಮಗೆ ಹೇಳುವುದಿಲ್ಲ. ನನ್ನ ಮೌನ ಅನಿರ್ದಿಷ್ಟ ಕಾಲಾವಧಿ ಆಗಿರಬಹುದು’’ ಎನ್ನಬಹುದು. ಇದು ಸಂವಾದವಲ್ಲ; ಬದಲಾಗಿ, ಅಪರಿಮಿತ ಅಧಿಕಾರದ ಲಕ್ಷಣ. ಎರಡನೆಯದಾಗಿ, ನ್ಯಾಯಾಲಯ ತಾನು ಯಾವಾಗ ಮಧ್ಯಪ್ರವೇಶಿಸುತ್ತೇನೆ ಎಂದು ಹೇಳುವುದಿಲ್ಲ. ಆರು ತಿಂಗಳ ನಂತರ? ಒಂದು ವರ್ಷ? ಮೂರು ವರ್ಷ? ಮೂರನೆಯದಾಗಿ, ತೀರ್ಪಿನಿಂದ ದಾವೆಗಳು ಹೆಚ್ಚುತ್ತವೆ ಮತ್ತು ನ್ಯಾಯಾಂಗದ ಮೇಲೆ ಹೊರೆ ಹೆಚ್ಚುತ್ತದೆ. ದ್ವಿಸದಸ್ಯ ಪೀಠದ ಆದೇಶವು ರಾಜ್ಯ ಸರಕಾರ ಯಾವಾಗ ನ್ಯಾಯಾಲಯದ ಕಟಕಟೆ ಹತ್ತಬೇಕು? ರಾಜ್ಯಪಾಲರ ನಿಷ್ಕ್ರಿಯತೆಯು ಸಾಂವಿಧಾನಿಕ ಮಿತಿಯನ್ನು ಮೀರಿದೆ ಎಂದು ಯಾವಾಗ ಹೇಳಬಹುದು ಎಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ, ಸುಪ್ರೀಂ ತೀರ್ಪು ನಿರ್ವಾತವನ್ನು ಸೃಷ್ಟಿಸುತ್ತದೆ. ರಾಜ್ಯಗಳು ನ್ಯಾಯಾಂಗದ ಮೊರೆಹೋಗುವವರೆಗೆ ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ರಾಜ್ಯಪಾಲರಿಗೆ ಹೇಳುತ್ತದೆ. ರಾಜ್ಯ ಸರಕಾರಗಳು ‘ಸೀಮಿತ ನಿರ್ದೇಶನ’ ಕ್ಕಾಗಿ ನ್ಯಾಯಾಲಯದ ಕದ ತಟ್ಟಿದಾಗ, ಅದು ಯಾವ ಮಾನದಂಡವನ್ನು ಆಧರಿಸಿ ನಿರ್ಧಾರಕ್ಕೆ ಬರುತ್ತದೆ? ಸ್ಪಷ್ಟ ಮಾನದಂಡಗಳಿಲ್ಲದೆ ಇರುವಾಗ ನ್ಯಾಯಾಲಯದ ನಿರ್ಧಾರಗಳು ವಿವೇಚನೆರಹಿತ ಮತ್ತು ರಾಜಕೀಯಪ್ರೇರಿತ ಆಗಿರಬಹುದು. ಸಂವಿಧಾನ ತಪ್ಪಿಸಲು ಪ್ರಯತ್ನಿಸಿದ್ದು ಇಂಥ ಸಂಘರ್ಷವನ್ನೇ. ಸುಪ್ರೀಂ ತೀರ್ಪು ಎಲ್ಲ ಗೊಂಬೆಗಳ ಸೂತ್ರಗಳನ್ನು ಕೇಂದ್ರ ಸರಕಾರದ ಕೈಗೆ ಕೊಟ್ಟಿದೆ.
ದೇಶ ಮತ್ತು ನಾಗರಿಕರು, ಬಹುಸಂಖ್ಯಾತರು-ಅಲ್ಪಸಂಖ್ಯಾತರು, ಸ್ತ್ರೀ-ಪುರುಷ, ಬಡವರು-ಹಣವಂತರ ನಡುವೆ ನ್ಯಾಯಸಮ್ಮತ ಸಮತೋಲನ, ಒಕ್ಕೂಟ ಮತ್ತು ರಾಜ್ಯಗಳ ನಡುವೆ ನಂಬಿಕಸ್ಥ ಪಾಲುದಾರಿಕೆ ಇದ್ದಾಗ ದೇಶ ಚೈತನ್ಯಶಾಲಿ ಆಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಸದೃಢ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ. ಕಳೆದ ಏಳು ದಶಕಗಳಿಂದ ಈ ಸರಳ ಪಾಠವನ್ನು ಕಲಿಯಲು ನಾವು ವಿಫಲವಾಗಿದ್ದೇವೆ; ಸಾಂಸ್ಥಿಕ ಲೋಪದೋಷಗಳಿಂದ ಕೆಟ್ಟ ಆಯ್ಕೆಗಳಲ್ಲದೆ, ದುಬಾರಿ ದಂಡ ತೆರಬೇಕಾಗುತ್ತದೆ. ವಿವೇಕಶಾಲಿ ನಾಯಕತ್ವದ ಅನುಪಸ್ಥಿತಿಯಲ್ಲಿ ಸಮತೋಲನವನ್ನು ಕಾಯುವ ಹೊರೆ ನ್ಯಾಯಾಂಗದ ಮೇಲೆ ಬೀಳುತ್ತದೆ.
ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ
‘‘ಕಾಯ್ದೆಗಳಿಗೆ ಸಮ್ಮತಿ ನೀಡಲು ಸಂವಿಧಾನ ಕಾಲಮಿತಿ ವಿಧಿಸಿಲ್ಲ; ಅಲ್ಲಿ ಇಲ್ಲದೆ ಇರುವುದನ್ನು ನಾವು ಹುಡುಕಲು ಸಾಧ್ಯವಿಲ್ಲ. ಅದನ್ನು ಸಂಸತ್ತು ಮಾಡಬೇಕು’’ ಎಂದು ನ್ಯಾ. ಗವಾಯಿ ಅವರು ನಿವೃತ್ತಿಗೆ ಮುನ್ನ ಹೇಳಿದ್ದಾರೆ. ನಿವೃತ್ತಿ ಬಳಿಕ ಯಾವುದೇ ಸರಕಾರಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ; 15 ಮಹಿಳೆಯರು, ಒಬಿಸಿ/ಬಿಸಿ ಸಮುದಾಯದ 11, ಪರಿಶಿಷ್ಟ ಜಾತಿಯ 10 ಮತ್ತು ಅಲ್ಪಸಂಖ್ಯಾತ ಸಮುದಾಯದ 13 ಸೇರಿದಂತೆ 93 ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಅನುಮತಿ ನೀಡಿದೆ ಎಂದಿದ್ದಾರೆ. ಇದು ಸ್ವಾಗತಾರ್ಹ. ಆದರೆ, ರಬ್ಬರ್‌ಸ್ಟ್ಯಾಂಪ್ ರಾಷ್ಟ್ರಪತಿ ಹಾಗೂ ವಸಾಹತುಶಾಹಿಯ ಪಳೆಯುಳಿಕೆಗಳಾದ ರಾಜ್ಯಪಾಲರ ಹುದ್ದೆಯನ್ನೇ ವಿಸರ್ಜಿಸಬೇಕಿರುವ ಸಂದರ್ಭದಲ್ಲಿ ಅವರಿಗೆ ವಿವೇಚನಾಧಿಕಾರ ಕೊಡುವ ತೀರ್ಪಿನಿಂದ ಸಂವಿಧಾನದ ಮೂಲ ಶಿಲ್ಪಕ್ಕೆ ಧಕ್ಕೆಯುಂಟಾಗಿದೆ. ಧೀಮಂತರು ಆ ಸ್ಥಾನದಲ್ಲಿದ್ದರೆ, ವಿವೇಚನೆ-ಘನತೆಯನ್ನು ನಿರೀಕ್ಷಿಸಬಹುದಿತ್ತು. 1997ರಲ್ಲಿ ಉತ್ತರಪ್ರದೇಶದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ (ಅಧಿಕಾರಾವಧಿ 1997-2002) ಅವರಿಗೆ ಪ್ರಧಾನಿ ಐ.ಕೆ. ಗುಜ್ರಾಲ್ ಶಿಫಾರಸು ಮಾಡಿದರು. ಕೆ.ಅರ್.ಎನ್. ಅವರು ಮರುಪರಿಶೀಲನೆಗೆ ವಾಪಸ್ ಕಳಿಸಿದ ಕಡತ ಮತ್ತೊಮ್ಮೆ ಅವರ ಬಳಿ ಬರಲಿಲ್ಲ. 1998ರಲ್ಲಿ ಎ.ಬಿ. ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಬಿಹಾರದ ರಾಬ್ಡಿದೇವಿ ಸರಕಾರವನ್ನು ವಜಾಗೊಳಿಸಿ, ವಿಧಿ 356ರಡಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ರಾಜ್ಯಪಾಲರು ಶಿಫಾರಸು ಮಾಡಿದರು. ಆದರೆ, ಕೆ.ಆರ್. ನಾರಾಯಣನ್ ಅವರು ಸಮ್ಮತಿಸಲಿಲ್ಲ. ಸಚಿವ ಸಂಪುಟ ಕಡತವನ್ನು ಮತ್ತೊಮ್ಮೆ ಕಳಿಸುವ ಸಾಹಸ ಮಾಡಲಿಲ್ಲ. ಆರ್. ವೆಂಕಟರಾಮನ್ ಅವರು ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್ ಹಾಗೂ ಆನಂತರ ಪಿ.ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ರಾಷ್ಟ್ರಪತಿ ಆಗಿದ್ದರು(1987-92). ಯಾವುದೇ ಸಂಘರ್ಷ ನಡೆಯಲಿಲ್ಲ. ರಾಜಕೀಯದಲ್ಲಿದ್ದೂ ಅಂಟಿಕೊಳ್ಳದ ಮುತ್ಸದ್ದಿಗಳಿಂದ ಮಾತ್ರ ಇಂಥದ್ದು ಸಾಧ್ಯ. ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ಅವರ ದೇಹಭಾಷೆ/ಮಾತು ಮತ್ತು ಸಂಸತ್ತಿನಲ್ಲಿ ಅವರ ವರ್ತನೆ ಗಮನಿಸಿದ್ದವರಿಗೆ, ನಾವು ಎಂಥ ಕಾಲದಲ್ಲಿ ಇದ್ದೇವೆ ಎನ್ನುವುದು ಗೊತ್ತಾಗುತ್ತದೆ. ಸುಪ್ರೀಂ ಕೋರ್ಟಿನ ಕಪಾಳಮೋಕ್ಷದ ನಂತರವೂ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ವರ್ತನೆಯಲ್ಲಿ ಹೆಚ್ಚೇನೂ ಬದಲಾವಣೆ ಆದಂತಿಲ್ಲ. ಇವರೆಲ್ಲರೂ ದಿಲ್ಲಿಯ ರಿಂಗ್ ಮಾಸ್ಟರ್ ಹೇಳಿದಂತೆ ನರ್ತಿಸುತ್ತ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ.
ಪಕ್ಕದ ರಾಷ್ಟ್ರ ಪಾಕಿಸ್ತಾನದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಸೈಯದ್ ಮನ್ಸೂರ್ ಅಲಿ ಶಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ‘ತನ್ನ ಆಡಳಿತದ ಹೃದಯದಲ್ಲಿ ಕಾನೂನಿನ ಆಳ್ವಿಕೆಯನ್ನು ಇರಿಸಿರುವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಪವಿತ್ರ ಎಂದು ಪರಿಗಣಿಸುವ ದೇಶಗಳು ಅಭಿವೃದ್ಧಿಗೊಳ್ಳುತ್ತವೆ. ನ್ಯಾಯಾಂಗವನ್ನು ಶೃಂಖಲೆಯಲ್ಲಿ ಇರಿಸಿದಾಗ, ದೇಶಗಳು ಎಡವುತ್ತವೆ ಮಾತ್ರವಲ್ಲ; ತಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಳ್ಳು ತ್ತವೆ. ಚರಿತ್ರೆಯಲ್ಲಿ ಇಂಥ ಉದಾಹರಣೆಗಳಿವೆ; ನ್ಯಾಯಾಲಯಗಳು ಮೌನ ವಹಿಸಿದಾಗ, ಸಮಾಜಗಳು ಕತ್ತಲೆಗೆ ಬೀಳುತ್ತವೆ’ ಎಂದು ಬರೆದಿದ್ದರು. ಫೀಲ್ಡ್ ಮಾರ್ಷಲ್ ಮುನೀರ್ ಖಾನ್ ನಿರ್ದೇಶಿತ ಸಂವಿಧಾನ ತಿದ್ದುಪಡಿಗಳಿಗೆ ಬಹುಪಾಲು ನ್ಯಾಯಾಧೀಶರು ಸಮ್ಮತಿಸಿದ್ದರು; ನ್ಯಾ. ಶಾ ರಾಜೀನಾಮೆ ನೀಡಿದರು.
‘ಸುಪ್ರೀಂ ತೀರ್ಪಿನಿಂದ ಕಾನೂನಿನ ಚೈತನ್ಯಕ್ಕೆ ಸೋಲುಂಟಾಗಿಲ್ಲ’ ಎಂದು ಗೋಪಾಲಕೃಷ್ಣ ಗಾಂಧಿ ಹೇಳುತ್ತಾರೆ. ಅವರ ಗ್ರಹಿಕೆಯಲ್ಲಿ ಸಮಸ್ಯೆಯಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನ್ಯಾಯಾಂಗವು ಸಾಂವಿಧಾನಿಕ ಹಕ್ಕುಗಳ ನಿರ್ಣಾಯಕ ರಕ್ಷಕ; ಅದು ಸ್ವತಂತ್ರವಾಗಿ ಉಳಿಯಬೇಕು ಮತ್ತು ಉನ್ನತ ಗುಣಮಟ್ಟದ ನಡವಳಿಕೆ ಹೊಂದಿರಬೇಕು. ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಮತ್ತು ನ್ಯಾಯಾಧೀಶರ ಕ್ರಮಗಳು ನ್ಯಾಯವ್ಯವಸ್ಥೆಯ ನಿಷ್ಪಕ್ಷಪಾತತನದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಬೇಕು ಎಂದು ಹೇಳಿದ್ದರು. ಇದೆಲ್ಲವೂ ಈಗ ಮರೀಚಿಕೆಯಾಗಿದೆ.
76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಬಂದುಹೋಗಿದೆ; ಸಂವಿಧಾನದ ಬುನಾದಿ ಅಳ್ಳಕವಾಗುತ್ತಿದೆ ಮತ್ತು ಬೆಳಕು ಮಸುಕಾಗುತ್ತಿದೆ.