ದೇಶಕ್ಕೆ ಇನ್ನಷ್ಟು ರೊಡ್ರಿಗ್ಸ್, ಕೌರ್ ಮತ್ತು ಖುರೇಶಿಗಳು ಅಗತ್ಯ
ರೊಡ್ರಿಗ್ಸ್ ಬ್ಯಾಟ್ ಮತ್ತು ಬೈಬಲ್ ಪದ್ಯದೊಂದಿಗೆ; ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವ ಮತ್ತು ಸಂಯಮದಿಂದ; ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್.ವೈ. ಖುರೇಶಿ, ತಮ್ಮ ಘನತೆಯ ಸೇವೆಯಿಂದ. ಆತ್ಮವಿಶ್ವಾಸ, ವೈವಿಧ್ಯತೆಯ, ಒಳಗೊಳ್ಳುವ ಮತ್ತು ಯಾರೂ ತಡೆಯಲು ಸಾಧ್ಯವಿಲ್ಲದ ದೇಶ ಆಗಬಹುದು ಎಂದು ನಮಗೆ ನೆನಪಿಸುವವರು. ಇವರು ಬೆಳಗಿದಾಗ ರಾಷ್ಟ್ರ ಅವರೊಂದಿಗೆ ಹೊಳೆಯುತ್ತದೆ. ಪೂರ್ವಗ್ರಹವಿಲ್ಲದೆ ಸಂಭ್ರಮಿಸಿದಾಗ, ನಾವು ಇನ್ನಷ್ಟು ಎತ್ತರ ಬೆಳೆಯುತ್ತೇವೆ. ದೇಶಕ್ಕೆ ಇನ್ನಷ್ಟು ಗೋಡೆಗಳ ಅಗತ್ಯವಿಲ್ಲ. ಇನ್ನಷ್ಟು ರೊಡ್ರಿಗ್ಸ್, ಕೌರ್ ಮತ್ತು ಖುರೇಶಿಗಳ ಅಗತ್ಯವಿದೆ; ಪ್ರತಿಭೆಗೂ ಧರ್ಮಕ್ಕೂ ಸಂಬಂಧವಿಲ್ಲ ಮತ್ತು ದೇಶಪ್ರೇಮವನ್ನು ಜನ್ಮಸ್ಥಳದಿಂದ ಅಳೆಯಬಾರದು ಎಂದು ನಂಬುವ ನಾಗರಿಕರು ಇನ್ನಷ್ಟು ಹೆಚ್ಚಬೇಕಿದೆ.
ಮಹಿಳಾ ಕ್ರಿಕೆಟ್ ವಿಶ್ವಕಪ್ ನಮ್ಮ ಪಾಲಾಗಿದೆ. 1983ರಲ್ಲಿ ಪುರುಷರ ವಿಶ್ವಕಪ್, 2011ರಲ್ಲಿ ಐಸಿಸಿ ವಿಶ್ವಕಪ್ ಗೆಲುವಿನ ನಂತರದ ಚರಿತ್ರಾರ್ಹ ಗೆಲುವು ಇದು. 2005ರಲ್ಲಿ ಆಸ್ಟ್ರೇಲಿಯ ಹಾಗೂ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಮಹಿಳಾ ತಂಡ ಸೋಲುಂಡಿತ್ತು. ಗೆಲುವಿನ ಬಳಿಕ ತಂಡ ಘನತೆಯಿಂದ ನಡೆದುಕೊಂಡಿತು. ಪ್ರತಿಯಾಗಿ 2025ರ ಏಶ್ಯ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಾಯಕ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ನಾಯಕನ ಹಸ್ತಲಾಘವ ಮಾಡಲಿಲ್ಲ; ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಇದು ಸಾಂಕೇತಿಕ ಪ್ರತಿಕ್ರಿಯೆ ಎಂದು ಹೇಳಿದ್ದರು. ಇದೊಂದು ರಾಜಕೀಯಪ್ರೇರಿತ ಮತ್ತು ಗುಲಾಮ ಮನಸ್ಥಿತಿಯ ಕ್ರಿಯೆ; ಕ್ರೀಡಾ ಸ್ಫೂರ್ತಿಗಿಂತ ರಾಜಕೀಯ ಓಲೈಕೆ ಮತ್ತು ಪ್ರಭುತ್ವದ ಮನವೊಲಿಕೆ ಕ್ರಿಯೆಗೆ ರಾಷ್ಟ್ರ ಪ್ರೇಮದ ಕವಚ ತೊಡಿಸುವ ಪ್ರಯತ್ನ. ಇದಕ್ಕೆ ಪ್ರತಿಯಾಗಿ ಆಟಗಾರ್ತಿಯರು ಅಪಾರ ಕ್ರೀಡಾಸ್ಫೂರ್ತಿ ಮೆರೆದರು.
ಸೆಮಿಫೈನಲ್‌ನಲ್ಲಿ ಜೆಮಿಮಾ ರೊಡ್ರಿಗ್ಸ್ ಆಟಕ್ಕೆ ಮರುಳಾಗದವರೇ ಇಲ್ಲ; ಹುಸಿ ರಾಷ್ಟ್ರೀಯವಾದಿಗಳು ಧಾರ್ಮಿಕ ಕಾರಣಗಳಿಂದಾಗಿ ಜೆಮಿಮಾ ಮತ್ತು ಆಕೆಯ ಕುಟುಂಬದ ಮೇಲೆ ಅಪಮಾನದ ಮಳೆ ಸುರಿಸಿದ್ದರು. ಆದರೆ, ತಮ್ಮ ಆಟದ ಮೂಲಕ ಅಂಥವರು ನೆಲಕ್ಕೆ ಮೂಗು ಉಜ್ಜುವಂತೆ ಮಾಡಿದರು. 2018ರಲ್ಲಿ ಇಂಗ್ಲೆಂಡ್ ತಂಡದ ನಾಯಕ ನಾಸಿರ್ ಹುಸೇನ್, ಜೆಮಿಮಾ ಭಾರತದ ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು.
ಕೇರಳದ ಕಾಯಂಕುಳಂ ಮೂಲದ ಪತ್ರಕರ್ತ-ಅಂಕಣಕಾರ ಎ.ಜೆ. ಫಿಲಿಪ್, ಈ ಹಿಂದೆ ಟ್ರಿಬ್ಯೂನ್, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಹಿಂದೂಸ್ತಾನ್ ಟೈಮ್ಸ್‌ನಂತಹ ಪ್ರಮುಖ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಮರ್ತ್ಯ ಸೇನ್ ಸ್ಥಾಪಿಸಿದ ಪ್ರತೀಚಿ ಟ್ರಸ್ಟ್‌ನ ಮೊದಲ ನಿರ್ದೇಶಕ ಮತ್ತು ಮಕ್ಕಳಿಗಾಗಿ ಕಾರ್ಯ ನಿರ್ವಹಿಸುವ ‘ದೀಪಾಲಯ’ ಸರಕಾರೇತರ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು; ಯೋಜನಾ ಆಯೋಗದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜಕೀಯ, ಕ್ರಿಕೆಟ್, ಧರ್ಮ ಮತ್ತು ರಾಷ್ಟ್ರಭಕ್ತಿಯ ಕಲಸುಮೇಲೋಗರ ಹಾಗೂ ಅಲ್ಪಸಂಖ್ಯಾತರ ಕುರಿತ ನಮ್ಮ ನಿಲುವು ಏನಿರಬೇಕು ಎಂಬ ಕುರಿತು ಅವರು ಇಂಡಿಯನ್ ಕರೆಂಟ್ಸ್‌ನಲ್ಲಿ ಬರೆದ ಲೇಖನದ ಆಯ್ದ ಭಾಗ ಇಂತಿದೆ:
ತಪ್ಪೊಪ್ಪಿಗೆಯೊಂದಿಗೆ ಪ್ರಾರಂಭಿಸುತ್ತೇನೆ: ನಾನು ಕ್ರಿಕೆಟ್ ಪ್ರಿಯ ಅಲ್ಲ; ಬಿಳಿ ಅಥವಾ ನೀಲಿ ಸಮವಸ್ತ್ರ ಧರಿಸಿದ ಪುರುಷರು (ಅಥವಾ ಮಹಿಳೆಯರು) ಚೆಂಡನ್ನು ಬೆನ್ನಟ್ಟುವುದನ್ನು ವೀಕ್ಷಿಸಲು ನಾನು ಅಪರಾತ್ರಿಯಲ್ಲಿ ಎದ್ದು ಕುಳಿತುಕೊಳ್ಳುವುದಿಲ್ಲ. ನಾನು ಫುಟ್‌ಬಾಲ್ ಪ್ರಿಯ; ಅದು ಭಾವೋದ್ರೇಕವನ್ನು ಬಡಿದೆಬ್ಬಿಸುವ ಸುಂದರವಾದ ಆಟ. ಅಲ್ಲಿ ಬರಿಗಾಲಿನ ಹುಡುಗ ಕೂಡ ಸ್ಟಾರ್ ಆಗಬಹುದು; 90 ನಿಮಿಷಗಳಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಆಟಕ್ಕಾಗಿ ಐದು ದೀರ್ಘ ದಿನಗಳನ್ನು ಕಳೆಯಬೇಕಿಲ್ಲ. ನನ್ನ ಪ್ರಕಾರ, ಕ್ರಿಕೆಟ್ ವಸಾಹತುಶಾಹಿಯ ಕೊಡುಗೆ. 1948ರಲ್ಲಿ ಬಾಂಬೆ ಬಂದರಿನಿಂದ ಹೊರಟ ಕೊನೆಯ ಹಡಗಿನಲ್ಲೇ ಕ್ರಿಕೆಟ್‌ನ್ನು ಇಂಗ್ಲೆಂಡಿಗೆ ವಾಪಸ್ ಕಳಿಸ ಬೇಕಿತ್ತು. ಕ್ರಿಕೆಟ್ ಕುರಿತ ನನ್ನ ಆಕ್ಷೇಪ ಸರಳ ಮತ್ತು ನೇರ; ಒಂದು ಟೆಸ್ಟ್ ಪಂದ್ಯ ಐದು ದಿನ ನಡೆಯುತ್ತದೆ; ಜೀವನ ದೀರ್ಘವಾದುದಲ್ಲ; ಆದರೆ, ಕ್ರಿಕೆಟ್‌ನಲ್ಲಿ ಸ್ಕೋರ್ ಮಾಡುವ ಉದ್ದೇಶವಿಲ್ಲದೆ ಚೆಂಡುಗಳನ್ನು ರಕ್ಷಣಾತ್ಮಕವಾಗಿ ದಿನಗಟ್ಟಲೆ ಆಡಲಾಗುತ್ತದೆ. ಆನಂತರ ಆಟಗಾರರು ಧರಿಸುವ ವಸ್ತ್ರ; ಸ್ಟಾರ್ಚ್ ಮಾಡಿದ ವಸ್ತ್ರ, ಬ್ಯಾಟ್, ಚೆಂಡು, ಪ್ಯಾಡ್ ಇದೆಲ್ಲವನ್ನೂ ಶ್ರೀಮಂತರು ಅಥವಾ ಶ್ರೀಮಂತರು ನಡೆಸುವ ಶಾಲೆಗಳು ಮಾತ್ರ ನಿಭಾಯಿಸಬಲ್ಲವು. ಜನಸಾಮಾನ್ಯರ ದೇಶವೊಂದು ದೇಶಭಕ್ತಿಯಂತೆ ಪ್ಯಾಕ್ ಮಾಡಿದ ಇಂಥ ವಿರಾಮಕಾಲದ ಕ್ರೀಡೆಯನ್ನು ಆರಾಧಿಸಬೇಕೇ ಎನ್ನುವುದು ನನ್ನ ಪ್ರಶ್ನೆ. ತದ್ವಿರುದ್ಧವಾಗಿ, ಫುಟ್ಬಾಲ್ ಪ್ರಾಮಾಣಿಕ ಆಟ; ಪಂದ್ಯ 60 ಅಥವಾ 90 ನಿಮಿಷದಲ್ಲಿ ಮುಗಿಯುತ್ತದೆ. ಅಂಕ ಸಮವಾದರೆ ಮರುಪಂದ್ಯ ಅಥವಾ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಚಹಾ-ಊಟದ ವಿರಾಮ, ಮಳೆಯಿಂದ ವಿಳಂಬ ಇತ್ಯಾದಿ ಇರುವುದಿಲ್ಲ.
ಆದರೆ, ಸೀಮಿತ ಓವರ್ ಕ್ರಿಕೆಟ್ ಇದೆಲ್ಲವನ್ನೂ ನಾಟಕೀಯವಾಗಿ ಬದಲಿಸಿತು. ಏಕದಿನ ಪಂದ್ಯಗಳು ಆಟವನ್ನು ರೋಮಾಂಚಕವಾಗಿಸಿದವು; ದೂರದರ್ಶನಕ್ಕೆ ಚಿನ್ನದ ಭಂಡಾರ ಸಿಕ್ಕಿತು. ಭಾರತೀಯ ಕ್ರಿಕೆಟ್‌ಗೆ ಅಗತ್ಯವಿರುವ ಸೌಜನ್ಯವನ್ನು ಸಂಪತ್ತು ಸರಿದೂಗಿಸುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಪೊರೇಟ್ ಸಂಸ್ಥೆಯಂತೆ ವರ್ತಿಸುತ್ತದೆ; ಕೆಲವು ರಾಜ್ಯಗಳ ಆಯವ್ಯಯಕ್ಕಿಂತ ಅಧಿಕ ಆದಾಯ ಹೊಂದಿದೆ. ಅರಮನೆಯಂತಹ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದ್ದು, ಆಟಗಾರರು ಸಿಇಒಗಳಂತೆ ಹಣ ಗಳಿಸುತ್ತಾರೆ. ಮಂಡಳಿ ತನ್ನ ದೇಶಪ್ರೇಮವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸುತ್ತದೆ; ಉದಾಹರಣೆಗೆ, ‘ಆಪರೇಷನ್ ಸಿಂಧೂರ’ ಬಳಿಕ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡದಂತೆ ಆಟಗಾರರಿಗೆ ಸೂಚನೆ ನೀಡುತ್ತದೆ. ದೇಶಭಕ್ತಿಯೇ ಮುಖ್ಯವಾಗಿದ್ದಲ್ಲಿ, ಸನ್ನಿವೇಶ ಸಹಜ ಸ್ಥಿತಿಗೆ ಮರಳುವವರೆಗೆ ಆಟಕ್ಕೆ ಅನುಮತಿ ನೀಡಬಾರದಿತ್ತು. ಆದರೆ, ಆರ್ಥಿಕ ಲಾಭ ಮುಖ್ಯವಾಗುತ್ತದೆ.
ಮಹಿಳಾ ಕ್ರಿಕೆಟ್ ತಂದ ಸುಳಿಗಾಳಿ
ದೀರ್ಘ ಕಾಲ ನಾನು ಮಹಿಳಾ ಕ್ರಿಕೆಟ್‌ನತ್ತ ಗಮನ ಹರಿಸಿರಲಿಲ್ಲ. ಅವರಲ್ಲಿ ಪ್ರತಿಭೆಯ ಕೊರತೆ ಇದೆ ಎಂದಲ್ಲ; ಬದಲಾಗಿ, ಕ್ರೀಡೆ ಪುರುಷರಿಗೆ ಸೇರಿದ್ದು ಎಂದು ದೇಶ ನಂಬಿರುವುದರಿಂದ. ‘ಚಕ್ ದೇ! ಇಂಡಿಯಾ’ ಚಲನಚಿತ್ರದಲ್ಲಿ ಪದಕ ವಿಜೇತ ಹಾಕಿ ಆಟಗಾರ್ತಿಯರನ್ನು ಜನ ಗುರುತಿಸುವುದಿಲ್ಲ; ಅವರು ಮನೆಗೆ ತೆರಳಲು ವಾಹನಕ್ಕಾಗಿ ಹೆಣಗಾಡುವ ದೃಶ್ಯವು ದೇಶದ ಕ್ರೀಡಾ ಆದ್ಯತೆಗಳಿಗೆ ಒಂದು ನಿದರ್ಶನ. ಆದರೆ, ಅಕ್ಟೋಬರ್ 31, 2025 ರಂದು ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ಛಾಯಾಚಿತ್ರವೊಂದು ನನ್ನಲ್ಲಿ ಸಂಚಲನ ಮೂಡಿಸಿತು; ಜೆಮಿಮಾ ರೊಡ್ರಿಗ್ಸ್ ಕಣ್ಣೀರು ಹಾಕಿದ್ದು ಸೋಲಿನಿಂದಲ್ಲ; ಬದಲಾಗಿ, ವಿಜಯದಿಂದ. ಆಕೆ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತವನ್ನು ಅಸಾಧಾರಣ ಗೆಲುವಿನತ್ತ ಮುನ್ನಡೆಸಿದ್ದರು. ಹಿರಿಯ ಪತ್ರಕರ್ತ ಅಮಿತಾಭ್ ಶ್ರೀವಾಸ್ತವ ಬರೆದಂತೆ, ಅದು ಭಾರತದ ಶ್ರೇಷ್ಠ ವಿಜಯ. ಪಂದ್ಯದ ಆರಂಭದ ದಿನ ಮುಂಬೈ ಮೇಲೆ ಮುಂಗಾರು ಮೋಡಗಳು ಕವಿದಿದ್ದವು; ಆಸ್ಟ್ರೇಲಿಯನ್ನರು ವಿಜಯೋತ್ಸಾಹದ ಭರವಸೆಯಲ್ಲಿದ್ದರೆ, ಭಾರತ ಕೈ ಚೆಲ್ಲಿದಂತೆ ಕಾಣಿಸುತ್ತಿತ್ತು. ಆದರೆ, ಜೆಮಿಮಾ ದೃಢನಿಶ್ಚಯ, ಆತ್ಮವಿಶ್ವಾಸ ಮತ್ತು ನಿರ್ಭೀತ ಆಟದಿಂದ ಅಲೆಯನ್ನು ತಿರುಗಿಸಿದರು; ತನ್ನ ತೆಳು ಭುಜದ ಮೇಲೆ ರಾಷ್ಟ್ರವನ್ನು ಎತ್ತಿದರು.
ಗೆಲುವಿನ ಬಳಿ ಅತ್ತರು; ಬಳಿಕ ಯೇಸುವಿಗೆ ಧನ್ಯವಾದ ಹೇಳಿದರು. ಆನಂತರ ಬೈಬಲ್‌ನ್ನು ಉಲ್ಲೇಖಿಸಿ, ತಾನು ಮೈದಾನದಲ್ಲಿ ನಿಂತಿದ್ದೇನಷ್ಟೆ; ದೇವರು ಆಟವಾಡಿದ ಎಂದು ಹೇಳಿದರು. ನಂಬಿಕೆಯನ್ನು ಹ್ಯಾಶ್‌ಟ್ಯಾಗ್‌ಗಳು ಮತ್ತು ದೇವಾಲಯದಲ್ಲಿ ಸೆಲ್ಫಿಗೆ ಇಳಿಸಿರುವ ಯುಗದಲ್ಲಿ ಇಂಥ ಶುದ್ಧತೆ, ನಂಬಿಕೆ, ಸೌಜನ್ಯ ಅಪರೂಪದ್ದು. ತಂಡಕ್ಕೆ ಧನ್ಯವಾದ ಹೇಳಿದರು, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಹೊಗಳಿದರು; ನಾನು ಉದ್ದೇಶ ಪೂರ್ವಕವಾಗಿ ಕೌರ್ ಅವರನ್ನು ಉಲ್ಲೇಖಿಸಿದ್ದೇನೆ; ಆಟಗಾರ್ತಿಯರನ್ನು ಕ್ರಿಕೆಟಿನ ವಿವಿಧ ಪ್ರಕಾರಗಳಲ್ಲಿ ಮುನ್ನಡೆಸುತ್ತಿರುವ ಹೆಮ್ಮೆಯ ಸಿಖ್. ತ್ರಿವರ್ಣ ಧ್ವಜಕ್ಕೆ ಬದ್ಧತೆಯನ್ನು ಧರ್ಮ ವ್ಯಾಖ್ಯಾನಿಸುವುದಿಲ್ಲ ಎಂದು ಈ ಪಂಜಾಬಿನ ಪುತ್ರಿ ಸಾಬೀತುಪಡಿಸಿದ್ದಾರೆ. ನಂಬಿಕೆ ವೈಯಕ್ತಿಕ; ದೇಶಭಕ್ತಿ ಸಾಮೂಹಿಕ. ಅದು ಇರಬೇಕಾದ್ದು ಹಾಗೆಯೇ.
ನಾನು ಆಟಗಾರರ ಧರ್ಮವನ್ನು ಎತ್ತಿ ಹೇಳುವುದಿಲ್ಲ. ಆದರೆ, ರೊಡ್ರಿಗ್ಸ್ ಪ್ರಕರಣದಲ್ಲಿ ಮೌನ ಅನ್ಯಾಯವಾಗುತ್ತದೆ. ಕ್ಲಬ್‌ನ ಸೌಲಭ್ಯವನ್ನು ‘ಮತಾಂತರ’ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂಬ ಆರೋಪದ ಮೇಲೆ ಆಕೆಯ ತಂದೆ ಇವಾನ್ ರೊಡ್ರಿಗ್ಸ್ ಅವರ ಗೌರವ ಸದಸ್ಯತ್ವವನ್ನು ಮುಂಬೈನ ಖಾರ್ ಜಿಮ್‌ಖಾನಾ ಅಮಾನತುಗೊಳಿಸಿತು. ಈ ಆರೋಪ ಪರಮತ ದ್ವೇಷ ಮಾತ್ರವಲ್ಲದೆ, ಆಧಾರರಹಿತವಾಗಿತ್ತು. ವೈವಿಧ್ಯದ ಬಗ್ಗೆ ಕೊಚ್ಚಿ ಕೊಳ್ಳುವ ದೇಶದಲ್ಲಿ ಪೂರ್ವಾಗ್ರಹವು ಸತ್ಯಕ್ಕಿಂತ ಮೊದಲು ಚಲಿಸುತ್ತದೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ. ಇದರಿಂದಾಗಿಯೇ ರೊಡ್ರಿಗ್ಸ್ ಅವರ ಕಣ್ಣೀರು, ನಂಬಿಕೆ, ಧೈರ್ಯ ಮತ್ತು ಗೆಲುವು ಹೆಚ್ಚು ಮುಖ್ಯವಾಗುತ್ತದೆ. ರಾಷ್ಟ್ರವೊಂದು ಒಂದಾಗಿ ನಿಂತಾಗ, ಅದನ್ನು ತಡೆಯಲು ಆಗುವುದಿಲ್ಲ; ಆದರೆ, ವಿಭಜಿಸಿಕೊಂಡಾಗ ತನ್ನದೇ ಶೂಲೇಸನ್ನು ಎಡವಿ ಬೀಳುತ್ತದೆ.
ಜೆಮಿಮಾ ಆಸ್ಟ್ರೇಲಿಯನ್ನರನ್ನು ಹಣಿಯುತ್ತಿದ್ದಾಗ, ರಾಜಕೀಯ ವೇದಿಕೆಯಲ್ಲಿ ಮತ್ತೊಂದು ಆಟ ನಡೆಯುತ್ತಿತ್ತು. ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮತದಾರರನ್ನು ‘ಇಟಲಿಯಲ್ಲಿ ಪ್ರತಿಧ್ವನಿಸುವಂತೆ’ ಮತ ಚಲಾಯಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಮೂರು ವರ್ಷ ಪೂರೈಸಿದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಬಿಹಾರ ಎಲ್ಲಿದೆ ಎನ್ನುವುದು ಗೊತ್ತಿದೆಯೇ ಎಂದು ಯಾರಾದರೂ ಪ್ರಶ್ನಿಸಬಹುದು. ಅದೇ ರೀತಿ ಗೃಹ ಸಚಿವರಿಗೆ ಇಟಲಿಯ ಎಷ್ಟು ಪ್ರಾಂತಗಳ ಹೆಸರು ಗೊತ್ತಿದೆ ಎಂದು ಕೇಳುತ್ತೇನೆ. ಆದರೆ, ಇಟಲಿಯೇ ಏಕೆ? ಏಕೆಂದರೆ, ಸೋನಿಯಾ ಗಾಂಧಿ ಜನಿಸಿದ ದೇಶವನ್ನು ಮತದಾರರಿಗೆ ನೆನಪಿಸಲು ಮತ್ತು ಆ ಮೂಲಕ ರಾಹುಲ್ ಗಾಂಧಿಯವರ ‘ಭಾರತೀಯತೆ’ಯನ್ನು ಶಾ ಪ್ರಶ್ನಿಸಿದರು. ರಾಹುಲ್ ಗಾಂಧಿ ಇಲ್ಲಿ ಜನಿಸಿ, ವಾಸಿಸಿ, ಚುನಾವಣೆಗಳನ್ನು ಎದುರಿಸಿದ್ದಾರೆ ಮತ್ತು ಸೋತಿದ್ದಾರೆ ಎಂಬುದು ಅವರಿಗೆ ಮುಖ್ಯವಾಗಲಿಲ್ಲ.
ನಾನು ದಶಕಗಳ ಹಿಂದೆ ಮಧ್ಯಪ್ರದೇಶದ ರಾಯಗಢದಲ್ಲಿ ಎಂಭತ್ತರ ಹರೆಯದ ಇಬ್ಬರು ಕೆಥೊಲಿಕ್ ಪಾದ್ರಿಗಳನ್ನು ಭೇಟಿಯಾಗಿದ್ದೆ; ಐವತ್ತು ವರ್ಷ ಕಾಲ ಜನರ ಸೇವೆ ಮಾಡಿದ್ದ ಅವರನ್ನು ಮತಾಂತರ ಆರೋಪದ ಮೇಲೆ ಹೊರತಳ್ಳಲಾಯಿತು; ಇಬ್ಬರೂ ಇಟಲಿಯೊಂದಿಗಿನ ಸಂಬಂಧವನ್ನು ಬಹಳ ಹಿಂದೆಯೇ ಕಡಿದುಕೊಂಡಿದ್ದರು. ಮನೆ ಎಂದುಕೊಂಡಿದ್ದ ಸ್ಥಳವನ್ನು ತೊರೆದು, ದಿಲ್ಲಿಗೆ ತೆರಳಬೇಕಾಯಿತು. ತಾವು ಇಲ್ಲಿನವರೇ ಎಂದು ತೋರಿಸಲು ಸಾವಿನ ನಂತರ ಸಮಾಧಿ ಮಾಡುವ ಬದಲು ಸುಡುವಂತೆ ಸೂಚಿಸಿದರು.
ಸೋನಿಯಾ ಗಾಂಧಿ ಸೀರೆಯನ್ನು ಅಚ್ಚುಕಟ್ಟಾಗಿ ತೊಡುತ್ತಾರೆ ಮತ್ತು ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಾರೆ; ಆದರೆ, ನಿಂದಕರಿಗೆ ಅವರ ದಶಕಗಳ ಸಾರ್ವಜನಿಕ ಸೇವೆಗಿಂತ ಜನ್ಮಸ್ಥಳ ಮುಖ್ಯವಾಗುತ್ತದೆ. ಅವರು ಒಂದು ದಶಕ ಕಾಲ ದೇಶವನ್ನು ಆಳಿದರು ಎಂದು ಬಿಜೆಪಿ ಹೇಳುತ್ತದೆ. ರಾಜಕೀಯದಲ್ಲಿ ತಾತ್ಕಾಲಿಕ ಸ್ಮತಿ ನಷ್ಟ ಒಂದು ಕಲೆ ಮತ್ತು ಲೆಕ್ಕಾಚಾರದ ತಂತ್ರ. ವಿದೇಶಿ ಸಂಪರ್ಕ ಅಷ್ಟೊಂದು ಸಮಸ್ಯಾತ್ಮಕ ಎನ್ನುವುದಾದರೆ, ನಾವು ಇತಿಹಾಸವನ್ನು ಮರುಪರಿಶೀಲಿಸಬೇಕು. ಸಂಘಪರಿವಾರದ ಸೈದ್ಧಾಂತಿಕ ಬೇರುಗಳು ಯುರೋಪಿಯನ್ ಫ್ಯಾಶಿಸಂನಲ್ಲಿವೆ. ಎಂ.ಎಸ್. ಗೋಳ್ವಾಲ್ಕರ್ ಅವರ ಮಾರ್ಗದರ್ಶಕರಾದ ಬಿ.ಎಸ್.ಮೂಂಜೆ ಅವರು 1931ರಲ್ಲಿ ಬೆನಿ ಟೊ ಮುಸ್ಸೋಲಿನಿಯನ್ನು ಭೇಟಿಯಾದರು; ಇಟಲಿಯಲ್ಲಿ ಯುವಜನರ ಮಿಲಿಟರೀಕರಣವನ್ನು ಅಧ್ಯಯನ ಮಾಡಿ, ಅದನ್ನು ಭಾರತದಲ್ಲಿ ಪುನರಾವರ್ತಿಸಲು ಪ್ರಯತ್ನಿಸಿದರು. ಗೋಳ್ವಾಲ್ಕರ್ ತಮ್ಮ ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್’ ಪುಸ್ತಕದಲ್ಲಿ ನಾಝಿ ಜರ್ಮನಿಯ ಜನಾಂಗೀಯ ಹೆಮ್ಮೆಯನ್ನು ಹೊಗಳಿದ್ದಾರೆ. ಪ್ರಾಸಂಗಿಕವಾಗಿ, ಗಾಂಧಿ ಅವರನ್ನು ಕೊಲ್ಲಲು ಬಳಸಿದ ಪಿಸ್ತೂಲ್(ಬೆರೆಟ್ಟಾ ಎಂ1934) ಇಟಲಿಯಲ್ಲಿ ತಯಾರಾಗಿತ್ತು. ನಾವು ಈಗ ಜನಾಂಗೀಯ ಶುದ್ಧತೆ ಪರೀಕ್ಷೆಗೆ ಆಗ್ರಹಿಸಬೇಕೇ? ನಮ್ಮಲ್ಲಿ ಎಷ್ಟು ಮಂದಿ ಇಂಥ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು? ಮಧ್ಯ ಏಶ್ಯದಿಂದ ಬಂದು ಸಿಂಧೂ ನದಿ ದಡದಲ್ಲಿ ನೆಲೆಸಿದವರು ತಮ್ಮನ್ನು ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುತ್ತಾರೆ; ಆದರೆ, ನಿಜವಾದ ಮೂಲನಿವಾಸಿಗಳನ್ನು ವನವಾಸಿಗಳು ಎನ್ನುತ್ತಾರೆ. ಬಿಹಾರದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ದಿವಂಗತ ಸುಶೀಲ್ ಕುಮಾರ್ ಮೋದಿ ಇಂಥ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದರು. ಅವರ ಪತ್ನಿ ದಕ್ಷಿಣ ಭಾರತದ ಕ್ರಿಶ್ಚಿಯನ್. ಹೀಗಿದ್ದರೂ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಪರಿಗಣಿಸಿತು. ಅಸ್ಮಿತೆ ಮತ್ತು ಸಾಮರ್ಥ್ಯಕ್ಕೆ ಯಾವುದೇ ಸಂಬಂಧ ಇಲ್ಲದೆ ಇರುವುದರಿಂದ ಇದು ಸರಿಯಾದ ಕ್ರಮ.
ಹಿರಿಯ ಪತ್ರಕರ್ತ ಮತ್ತು ದಿ ಹಿಂದೂ ಪತ್ರಿಕೆಯ ಸಂಪಾದಕ ವರ್ಗೀಸ್ ಕೆ. ಜಾರ್ಜ್ ಅವರು ಇತ್ತೀಚೆಗೆ ತಮ್ಮ ಅಂಕಣದಲ್ಲಿ ಭಾರತದ ಡಯಾಸ್ಪೊರಾ ಕುರಿತ ಶಶಿ ತರೂರ್ ಅವರ ‘ಸಾಗರೋತ್ತರ ಭಾರತೀಯರು ದೇಶದ ಹಿತಾಸಕ್ತಿಗಳನ್ನು ಬೆಂಬಲಿಸಬೇಕು’ ಎಂಬ ವಾದಕ್ಕೆ ಪ್ರತಿಕ್ರಿಯಿಸಿ, ವಿದೇಶಿ ನೆಲದಲ್ಲಿ ದೇಶಭಕ್ತಿಯನ್ನು ಧ್ವನಿವರ್ಧಕದ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲ; ಉತ್ತಮ ಜಾಗತಿಕ ನಾಗರಿಕರಾಗುವ ಮತ್ತು ಸಮರ್ಪಕ ವರ್ತನೆ ಯಿಂದ ದೇಶದ ಬಗ್ಗೆ ತಿಳಿಸಬಹುದು. ಲಂಡನ್ ಅಥವಾ ವಾಶಿಂಗ್ಟನ್‌ನಲ್ಲಿರುವ ಎಲ್ಲ ಸಂಸದರು ನ್ಯೂಜೆರ್ಸಿ ಅಥವಾ ಮೆಲ್ಬೋರ್ನ್‌ನಲ್ಲಿ ವಾಸಿಸುವ ಭಾರತೀಯರ ಅಭಿಪ್ರಾಯಕ್ಕಾಗಿ ಕಾಯುತ್ತಿರುವುದಿಲ್ಲ ಎಂದು ಬರೆದಿದ್ದರು. ಆದರೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರ ಒಂದು ಗುಂಪು ತನ್ನ ದೇಶಪ್ರೇಮವನ್ನು ಸಾಬೀತುಪಡಿಸಲು ದೃಢಸಂಕಲ್ಪ ಮಾಡಿರುವಂತಿದೆ; ದೀಪಾವಳಿ ಸಮಯದಲ್ಲಿ ಕಾನೂನುಬಾಹಿರವಾಗಿ ಪಟಾಕಿ ಸಿಡಿಸುತ್ತಾರೆ. ಇನ್ನು ಕೆಲವರು ವಿದೇಶದ ಕೊಳಗಳಲ್ಲಿ ಮುಳುಗಿಸಲೆಂದೇ ವಿಗ್ರಹಗಳನ್ನು ಒಯ್ಯುತ್ತಾರೆ; ಇಂಥ ಉಗ್ರ ದೇಶಪ್ರೇಮಿಗಳಿಗೆ ಮಾಲಿನ್ಯ ಕೂಡ ಪವಿತ್ರ ರಾಷ್ಟ್ರೀಯ ಕರ್ತವ್ಯವಾಗಿ ಬದಲಾಗುತ್ತದೆ ಎನ್ನಿಸುತ್ತದೆ; ಭೌತಿಕ ದೇಹ ದೇಶವನ್ನು ತೊರೆದಿದ್ದರೂ, ಸಂದೇಹಾಸ್ಪದ ಅಭ್ಯಾಸಗಳು ಎಚ್1ಬಿ ವೀಸಾದೊಟ್ಟಿಗೆ ಪ್ರಯಾಣಿಸುತ್ತವೆ ಎಂದು ತೋರುತ್ತದೆ.
ನನ್ನ ಸ್ವಂತ ಚರ್ಚ್(ಮಾರ್ಥೋಮಾ)ನಲ್ಲಿ ಹೊರದೇಶಗಳಲ್ಲಿ ಅಲ್ಲಿನ ಮುಖಂಡರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ; ಲಂಡನ್‌ನಲ್ಲಿ ರಾಜ, ಅಮೆರಿಕದಲ್ಲಿ ರಾಷ್ಟ್ರದ ಅಧ್ಯಕ್ಷ ಮತ್ತು ಯುಎಇಯಲ್ಲಿ ಶೇಕ್. ನಿಷ್ಠೆ ಎಂದರೆ ನೀವು ಬಂದ ಭೂಮಿಯನ್ನು ಪ್ರೀತಿಸುತ್ತಲೇ ವಾಸಿಸುವ ಭೂಮಿಯನ್ನು ಗೌರವಿಸುವುದು. ಆದರೆ, ಕೆಲವು ರಾಜಕೀಯ ನಾಯಕರು ಸಮರ್ಥ ಅಧಿಕಾರಿಗಳಿಗೆ ಧರ್ಮದ ಹಣೆಪಟ್ಟಿ ಕಟ್ಟುತ್ತಾರೆ. ಮಾಜಿ ಮುಖ್ಯ ಚುನಾವಣಾ ಆಯುಕ್ತರನ್ನು ‘ಮುಸ್ಲಿಮ್ ಸಿಇಸಿ’ ಎಂದು ಕರೆಯಲಾಗುತ್ತಿತ್ತು; ಸಾಮರ್ಥ್ಯವು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದೆ ಎನ್ನುವಂತೆ. ಉತ್ತರಪ್ರದೇಶದಲ್ಲಿ ಮತ್ತೊಬ್ಬ ನಾಯಕ ‘ಒಬ್ಬ ಹಿಂದೂ ಹುಡುಗಿಗೆ ಪ್ರತಿಯಾಗಿ ಹತ್ತು ಮುಸ್ಲಿಮ್ ಹುಡುಗಿ’ಯರನ್ನು ಮದುವೆಯಾಗಿ ಎಂದು ‘ಪ್ರತೀಕಾರದ ಮತಾಂತರ’ವನ್ನು ಪ್ರೋತ್ಸಾಹಿಸಿದ. ಅವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ; ಒಂದುವೇಳೆ ಆತ ಮುಸ್ಲಿಮ್ ಆಗಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ ಕೊಳ್ಳಿ!
ಜಾತಿ, ಧರ್ಮ, ಅಹಂ ಆಧರಿತ ವಿಭಜನೆಗಳೇ ನಮ್ಮನ್ನು ವಿದೇಶಿ ಶಕ್ತಿಗಳು ವಶಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟವು. ನಾವು ಈ ಪಾಠವನ್ನು ಮರೆತುಬಿಡುತ್ತೇವೆ. ಆದರೂ, ಆಗೊಮ್ಮೆ ಈಗೊಮ್ಮೆ ಯಾರೋ ಒಬ್ಬರು ಮುಖಕ್ಕೆ ಕನ್ನಡಿ ಹಿಡಿದು, ಒಗ್ಗಟ್ಟಾಗಿದ್ದರೆ ಮಾತ್ರ ಬಲಿಷ್ಠವಾಗಿರುತ್ತೇವೆ ಎಂದು ನೆನಪಿಸುತ್ತಾರೆ. ದಿಲ್ಲಿ ಮೆಟ್ರೊ ಮಾತ್ರ ‘ನಮ್ಮೆಲ್ಲರಿಗಿಂತ ಯಾರೂ ದೊಡ್ಡವರಲ್ಲ’ ಎಂದು ನಂಬುತ್ತದೆ. ಅಜೈವಿಕ ಜೀವಿಗಳು ಈ ದೇಶವನ್ನು ಆಳಲು ಪ್ರಾರಂಭಿಸುವ ಮೊದಲೇ ಈ ಘೋಷಣೆಯನ್ನು ಟಂಕಿಸಲಾಗಿತ್ತು. ನಿಜವಾದ ನಾಯಕರು ಘೋಷಣೆಗಳನ್ನು ಕೂಗುವುದಿಲ್ಲ; ಸಾಧಿಸುತ್ತಾರೆ. ಸ್ಫೂರ್ತಿ ತುಂಬುತ್ತಾರೆ. ರೊಡ್ರಿಗ್ಸ್ ಬ್ಯಾಟ್ ಮತ್ತು ಬೈಬಲ್ ಪದ್ಯದೊಂದಿಗೆ; ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವ ಮತ್ತು ಸಂಯಮದಿಂದ; ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್.ವೈ. ಖುರೇಶಿ ತಮ್ಮ ಘನತೆಯ ಸೇವೆಯಿಂದ. ಆತ್ಮವಿಶ್ವಾಸ, ವೈವಿಧ್ಯತೆಯ, ಒಳಗೊಳ್ಳುವ ಮತ್ತು ಯಾರೂ ತಡೆಯಲು ಸಾಧ್ಯವಿಲ್ಲದ ದೇಶ ಆಗಬಹುದು ಎಂದು ನಮಗೆ ನೆನಪಿಸುವವರು ಇವರು. ಇವರು ಬೆಳಗಿದಾಗ ರಾಷ್ಟ್ರ ಅವರೊಂದಿಗೆ ಹೊಳೆಯುತ್ತದೆ. ಪೂರ್ವಾಗ್ರಹವಿಲ್ಲದೆ ಸಂಭ್ರಮಿಸಿದಾಗ, ನಾವು ಇನ್ನಷ್ಟು ಎತ್ತರ ಬೆಳೆಯುತ್ತೇವೆ. ದೇಶಕ್ಕೆ ಇನ್ನಷ್ಟು ಗೋಡೆಗಳ ಅಗತ್ಯವಿಲ್ಲ. ಇನ್ನಷ್ಟು ರೊಡ್ರಿಗ್ಸ್, ಕೌರ್ ಮತ್ತು ಖುರೇಶಿಗಳ ಅಗತ್ಯವಿದೆ; ಪ್ರತಿಭೆಗೂ ಧರ್ಮಕ್ಕೂ ಸಂಬಂಧವಿಲ್ಲ ಮತ್ತು ದೇಶಪ್ರೇಮವನ್ನು ಜನ್ಮಸ್ಥಳದಿಂದ ಅಳೆಯಬಾರದು ಎಂದು ನಂಬುವ ನಾಗರಿಕರು ಇನ್ನಷ್ಟು ಹೆಚ್ಚಬೇಕಿದೆ.
ಜೆಮಿಮಾ ರೊಡ್ರಿಗ್ಸ್ ಅವರ ಸಂತೋಷದ ಕಣ್ಣೀರನ್ನು ನೋಡಿದಾಗ, ಕ್ರೀಡೆ ಎನ್ನುವುದು ಬ್ಯಾಟ್ ಅಥವಾ ಬಾಲ್ ಬಗ್ಗೆ ಅಲ್ಲ; ಬದಲಾಗಿ, ಹೃದಯದ ಬಗ್ಗೆ ಎಂದು ಅರ್ಥ ಮಾಡಿಕೊಂಡೆ. ನಂಬುವ ಹೃದಯ. ಮುನ್ನುಗ್ಗುವ ಹೃದಯ. ಒಂದಾಗುವ ಹೃದಯ. ಇಂಥ ಚೈತನ್ಯದ ಒಂದು ಭಾಗವನ್ನು ನಾವು ಕ್ರೀಡಾಂಗಣಗಳಿಂದ ರಾಜಕೀಯಕ್ಕೆ, ನಮ್ಮ ಮನೆಗಳಿಗೆ, ನಮ್ಮ ಸಮಾಜಕ್ಕೆ ಸಾಗಿಸಲು ಸಾಧ್ಯವಾದರೆ, ದೇಶ ಕೇವಲ ಪಂದ್ಯಗಳನ್ನು ಗೆಲ್ಲುವುದಿಲ್ಲ; ಭಾರತ ಸ್ವತಃ ಗೆಲ್ಲುತ್ತದೆ. ಇದೊಂದು ಕಠಿಣ ಪ್ರಕ್ರಿಯೆ. ‘ದೇಶಪ್ರೇಮ ಮತ್ತು ಧರ್ಮ ಎನ್ನುವುದು ರಾಜಕೀಯ ಲಾಭ ಪಡೆಯುವ ಸರಕಲ್ಲ; ಹಾಗೆಂದು ಯಾರಾದರೂ ತಿಳಿದಿದ್ದರೆ, ಅಂಥವರನ್ನು ಅಧಿಕಾರದಿಂದ ದೂರ ಇಡುವ ಹೊಣೆ ಜನರದ್ದು’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇದು ನಮ್ಮೆಲ್ಲರಲ್ಲೂ ಅನುರಣಿಸಬೇಕು.