×
Ad

ಲಡಾಖ್‌ನ ಗಾಯಗಳು ಮಾಯುವುದು ಎಂದು?

Update: 2025-10-03 08:51 IST

ಲಡಾಖಿಗಳ ಬೇಡಿಕೆಗಳು ಪ್ರತ್ಯೇಕತಾವಾದವಲ್ಲ; ಘನತೆಯ ಬದುಕು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾಲು ಕೇಳುತ್ತಿದ್ದಾರೆ. ಅವುಗಳ ಪೂರೈಸುವಿಕೆಯು ದಿಲ್ಲಿಯ ಅಧಿಕಾರವನ್ನು ದುರ್ಬಲಗೊಳಿಸುವುದಿಲ್ಲ; ಬದಲಾಗಿ, ಪ್ರಜಾಪ್ರಭುತ್ವವನ್ನು ಭದ್ರಗೊಳಿಸುತ್ತದೆ. ಲಡಾಖಿಗಳು ದೇಶದೊಳಗೆ ತಮ್ಮ ಅನನ್ಯತೆ-ಅಸ್ಮಿತೆಯನ್ನು ಗುರುತಿಸಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ರಾಜಕೀಯ ಪಾಲ್ಗೊಳ್ಳುವಿಕೆಗೆ ಅವಕಾಶ ಮತ್ತು ಸಂವಿಧಾನಾತ್ಮಕ ರಕ್ಷಣೆ ನೀಡುವುದರಿಂದ ಒಕ್ಕೂಟ ಬಲಗೊಳ್ಳುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಸ್ಥಳೀಯರ ಸಬಲೀಕರಣ ಪರಸ್ಪರ ವಿರುದ್ಧವಲ್ಲ. ಲಡಾಖ್‌ನ ಪರ್ವತಗಳು ಶತಮಾನಗಳಿಂದ ಅಚಲವಾಗಿ ನಿಂತಿವೆ; ಈಗ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ.


ಕಾಶ್ಮೀರ-ಜಮ್ಮು, ಲಡಾಖ್ ಸೇರಿದಂತೆ ಹಿಮಾವೃತ ಪರ್ವತಗಳು ಮತ್ತು ಅಲ್ಲಿನ ವಾಸಿಗಳು ಗಾಯಗೊಂಡಿದ್ದಾರೆ. ದೇಶದ ರಕ್ಷಣಾ ಕಾರ್ಯತಂತ್ರದ ದೃಷ್ಟಿಯಲ್ಲಿ ಲಡಾಖ್ ವಿಶಿಷ್ಟ ಸ್ಥಾನ ಹೊಂದಿದೆ; ಪಶ್ಚಿಮದಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶ(ಪಿಒಕೆ) ಮತ್ತು ಪೂರ್ವದಲ್ಲಿ ಚೀನಾ ನಿಯಂತ್ರಿತ ಟಿಬೆಟ್ ಇದೆ. ದೇಶದ ಉತ್ತರ ಗಡಿಯನ್ನು ಲಡಾಖ್‌ನ ಹಿಮಭರಿತ ಶಿಖರಗಳು ಮತ್ತು ಕಣಿವೆಗಳು ಬಹಳ ಹಿಂದಿನಿಂದಲೂ ಕಾಯ್ದುಕೊಂಡಿವೆ. ಆದರೆ, ಇಂದು ಲಡಾಖ್ ಜನರಲ್ಲಿ ಅಸಮಾಧಾನ ಕುದಿಯುತ್ತಿದೆ. ಲೆಹ್ ಅಪೆಕ್ಸ್ ಬಾಡಿ(ಎಲ್‌ಎಬಿ) ಮಾತುಕತೆಯಿಂದ ಹಿಂದೆ ಸರಿದಿರುವುದರಿಂದ, ಎಲ್ಲವೂ ಅಯೋಮಯವಾಗಿದೆ.

ಕೇಂದ್ರ ಸರಕಾರ ಆಗಸ್ಟ್ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ, ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತು. ಜಮ್ಮು-ಕಾಶ್ಮೀರದ ಆಡಳಿತದಿಂದ ನಿರ್ಲಕ್ಷಿಸಲ್ಪಟ್ಟಿದ್ದೇವೆ ಎಂದು ಭಾವಿಸಿದ್ದ ಲಡಾಖಿಗಳು ವಿಧಿ 370ನ್ನು ವಜಾಗೊಳಿಸಿದ್ದನ್ನು ಆರಂಭದಲ್ಲಿ ಸಂಭ್ರಮಿಸಿದರು. ಇದರಿಂದ ಪ್ರದೇಶದ ಅಭಿವೃದ್ಧಿ ಆಗುತ್ತದೆ ಎಂದು ಕನಸಿದರು. ಆದರೆ, ಭೂಮಿ, ಉದ್ಯೋಗ ಮತ್ತು ಸಾಂಸ್ಕೃತಿಕ-ಪರಿಸರ ಸಂರಕ್ಷಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ನೀತಿಯನ್ನು ರೂಪಿಸುವ ಚುನಾಯಿತ ಶಾಸಕಾಂಗದ ಅನುಪಸ್ಥಿತಿಯಿಂದಾಗಿ, ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ನೇರವಾಗಿ ಆಡಳಿತ ನಡೆಸಲಾರಂಭಿಸಿತು. ಇದರ ವಿಪರಿಣಾಮಗಳು ಶೀಘ್ರವೇ ಸ್ಪಷ್ಟವಾದವು. ಲಡಾಖಿಗಳಿಗೆ ಪೂರ್ವಜರ ಭೂಮಿ ಮತ್ತು ಸಾಂಪ್ರದಾಯಿಕ ಜೀವನೋಪಾಯದ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭಯ ಎದುರಾಯಿತು. ಲಡಾಖ್‌ನ ಜನಸಂಖ್ಯೆ 2011ರ ಜನಗಣತಿ ಪ್ರಕಾರ, 2,74,289. ಸಾಂವಿಧಾನಿಕ ರಕ್ಷಣೆಗಳಿಲ್ಲದೆ ಹೊರಗಿನವರು ಆಸ್ತಿಯನ್ನು ಖರೀದಿಸಬಹುದು, ಇದು ಜನಸಂಖ್ಯಾ ಸಮತೋಲನವನ್ನು ಬದಲಿಸಬಹುದು ಎಂಬ ಆತಂಕಕ್ಕೆ ಸಿಲುಕಿದರು. ಅನಿಯಂತ್ರಿತ ಮೂಲಸೌಕರ್ಯ ನಿರ್ಮಾಣ ಮತ್ತು ಪ್ರವಾಸೋದ್ಯಮದಿಂದ ಪರ್ವತ ಪ್ರದೇಶದ ಪರಿಸರ ವ್ಯವಸ್ಥೆ ನಾಶವಾಗಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದರು. ಲಡಾಖನ್ನು 6ನೇ ಪರಿಶಿಷ್ಟದಡಿ ಸೇರಿಸಬೇಕು ಹಾಗೂ ಇನ್ನರ್ ಲೈನ್ ಪರ್ಮಿಟ್(ಐಎಲ್‌ಪಿ) ಎಂದರೆ, ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಹೊರಗಿನಿಂದ ಬಂದವರಿಗೆ ಮನೆ ಕಟ್ಟಲು ಹಾಗೂ ವಾಸಿಸಲು ಅವಕಾಶ ನೀಡಬಾರದು. ಪ್ರವಾಸಿಗಳು ಬಂದು ಹೋಗಬಹುದು. ಆದರೆ, ನಿರ್ದಿಷ್ಟ ಕಾಲಾವಧಿ ಮೀರಿ ಉಳಿದುಕೊಳ್ಳುವಂತಿಲ್ಲ. ಇದು ಪರಿಸರ ಸಂರಕ್ಷಣೆಗೆ ಮುಖ್ಯವಾಗಲಿದೆ. ಇಲ್ಲಿ ಬೋಟ್(ಬೋಟೋ), ಬಾಲ್ಟಿ ಬೇಡ, ಬ್ರೋಕ್ಪಾ(ಡ್ರೋಕ್ಪಾ), ಚಂಗ್ಪಾ, ಗರ್ರಾ, ಮೋನ್ ಮತ್ತು ಪುರಿಗ್ಪಾ ಬುಡಕಟ್ಟುಗಳು ವಾಸಿಸುತ್ತಿವೆ.

ಚಳವಳಿ ಆರಂಭ

ಲಡಾಖ್‌ನ ಆಂತರಿಕ ಉದ್ವಿಗ್ನತೆ ಮತ್ತು ಅದರ ಆಯಕಟ್ಟಿನ ಪ್ರಾಮುಖ್ಯತೆ ಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಈ ಪ್ರದೇಶ ದೇಶದ ಅತ್ಯಂತ ಸೂಕ್ಷ್ಮ ಗಡಿ ಪ್ರದೇಶದ ಹೃದಯಭಾಗ ದಲ್ಲಿದೆ. 2020ರ ಗಾಲ್ವಾನ್ ಕಣಿವೆ ಯಲ್ಲಿ ನಡೆದ ಘರ್ಷಣೆಯು ಇಪ್ಪತ್ತು ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡಿತ್ತು. ಆನಂತರ ಈ ಪ್ರದೇಶದಲ್ಲಿ ಮಿಲಿಟರಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ, ಸೈನ್ಯದ ನಿಯೋಜನೆ ಹೆಚ್ಚಿದೆ ಮತ್ತು ರಸ್ತೆ ನಿರ್ಮಾಣ ವೇಗಗೊಂಡಿದೆ. ಲಡಾಖ್ ಸೇನೆಯಿಂದಾಗಿ ಹೆಚ್ಚು ಸುರಕ್ಷಿತವಾಗಿದೆ; ಆದರೆ, ರಾಜಕೀಯವಾಗಿ ಅಭದ್ರವಾಗಿದೆ. ಲಡಾಖಿಗಳಿಗೆ ಬೇಡಿಕೆಯಾದ ಸ್ಥಳೀಯ ಅಭಿವೃದ್ಧಿ ಆಗಿಲ್ಲ.

ಆಗಸ್ಟ್ 5, 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಧಿ 370ರಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಜಾಗೊಳಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು. ಆದರೆ, ಲಡಾಖ್‌ಗೆ ಶಾಸಕಾಂಗ ಸಭೆಯ ಸೌಲಭ್ಯ ನೀಡಲಿಲ್ಲ. 2021ರ ಸುಮಾರಿಗೆ ಚಳವಳಿಗಳು ಆರಂಭಗೊಂಡವು. ಧರ್ಮ ಹಾಗೂ ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ವಿಂಗಡಣೆಯಾದ ಲೇಹ್ ಮತ್ತು ಕಾರ್ಗಿಲ್‌ನಲ್ಲಿನ ನಾಗರಿಕ ಸಮಾಜದ ಗುಂಪುಗಳು ಮೊದಲ ಬಾರಿಗೆ ಒಗ್ಗೂಡಿದವು. ಈ ಏಕತೆಯು ಲಡಾಖ್‌ನಲ್ಲಿ ಕಾಣಿಸಿಕೊಂಡ ಆತಂಕ ಮತ್ತು ರಾಜಕೀಯ ಪ್ರಬುದ್ಧತೆ ಎರಡನ್ನೂ ಪ್ರತಿಬಿಂಬಿಸುತ್ತದೆ. ಭಾರೀ ಉದ್ಯಮಿಗಳು ಭೂಮಿ ಮತ್ತು ಉದ್ಯೋಗಗಳನ್ನು ಕಸಿದುಕೊಳ್ಳುತ್ತಾರೆ ಎನ್ನುವ ಸ್ಥಳೀಯರ ಆತಂಕ ಇತ್ತೀಚೆಗೆ ಬೀದಿಗಳಲ್ಲಿ ಕಾಣಿಸಿಕೊಂಡಿತು. ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ಭದ್ರತೆಗೆ ಆಗ್ರಹಿಸಿ ನಡೆದ ಶಾಂತಿಯುತ ಪ್ರದರ್ಶನಗಳು ಹಿಂಸಾತ್ಮಕವಾಗಿ ಮಾರ್ಪಟ್ಟವು.

ಲೆಹ್ ಅಪೆಕ್ಸ್ ಬಾಡಿ(ಎಲ್‌ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್(ಕೆಡಿಎ) ಪರವಾಗಿ ಸೆಪ್ಟಂಬರ್ 10, 2025ರಂದು ಇಂಜಿನಿಯರ್-ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ 15 ಕಾರ್ಯಕರ್ತರೊಂದಿಗೆ 35 ದಿನಗಳ ನಿರಶನ ಆರಂಭಿಸಿದರು. ಕಾರ್ಯಕರ್ತರ ಬೇಡಿಕೆಗಳು ನಾಲ್ಕು- ಲಡಾಖ್‌ನ್ನು 6ನೇ ಪರಿಶಿಷ್ಟದಡಿ ಸೇರ್ಪಡೆ(ಆದಿವಾಸಿ ಸ್ಥಾನಮಾನ), ರಾಜ್ಯದ ಸ್ಥಾನಮಾನ, ಲೆಹ್ ಮತ್ತು ಕಾರ್ಗಿಲ್‌ಗೆ 2 ಸಂಸತ್ ಸ್ಥಾನ ಹಾಗೂ ಸರಕಾರದ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಮಾತುಕತೆ ಆರಂಭಿಸಬೇಕು ಎಂದು ಒತ್ತಾಯಿಸಿದರು. ನಿರಶನ ಆರಂಭಿಸಿದ 15ನೇ ದಿನ ಲೆಹ್ ಪಟ್ಟಣದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು 80ಕ್ಕೂ ಅಧಿಕ ಮಂದಿ ಗಾಯಗೊಂಡರು. ತಕ್ಷಣ ಕಣಕ್ಕಿಳಿದ ಸರಕಾರ, ಸೋನಮ್ ವಾಂಗ್ಚುಕ್ ವಿದೇಶಿ ದೇಣಿಗೆ ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಸೆಪ್ಟಂಬರ್ 26 ರಂದು ಜೈಲಿಗಟ್ಟಿತು. ಅವರಿಗೆ ಪಾಕಿಸ್ತಾನದ ನಂಟಿದೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಮತ್ತು ಅವರ ಎನ್‌ಜಿಒಗೆ ವಿದೇಶದಿಂದ ದೇಶವಿರೋಧ ಕೆಲಸಗಳಿಗೆ ಹಣ ಬರುತ್ತಿದೆ ಎಂದು ತನಿಖೆ ನಡೆಸಲಾಗುತ್ತಿದೆ.

ಜನವರಿ 2023ರಲ್ಲಿ ಲಡಾಖ್‌ನಲ್ಲಿ ನಡೆದ ಪ್ರತಿಭಟನೆಗಳ ಬಳಿಕ ಕೇಂದ್ರ ಸರಕಾರವು ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ(ಎಚ್‌ಪಿಸಿ)ಯನ್ನು ರಚಿಸಿತು. ಸಮಿತಿಯಲ್ಲಿ ಎಲ್‌ಎಬಿ, ಕೆಡಿಎ ಪ್ರತಿನಿಧಿಗಳಲ್ಲದೆ, ಇನ್ನಿತರ ಸದಸ್ಯರಿದ್ದರು. ಆದರೆ, ಸರಕಾರದ ಪರ ಇರುವವರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಸಮಿತಿಯನ್ನು ತಿರಸ್ಕರಿಸಲಾಯಿತು. ಆನಂತರ ನವೆಂಬರ್ 30,2023ರಲ್ಲಿ ಸಮಿತಿಯನ್ನು ಪುನರ್‌ರಚಿಸಲಾಯಿತು. ಪ್ರಾಂತದ ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯ ರಕ್ಷಣೆ, ಲಡಾಖಿಗಳ ಭೂಮಿ ಮತ್ತು ಉದ್ಯೋಗದ ರಕ್ಷಣೆ ಖಾತರಿಗೊಳಿಸುವುದು, ಪ್ರಾಂತದ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ, ಲೇಹ್/ಕಾರ್ಗಿಲ್ ಸ್ವಾಯತ್ತ ಪರ್ವತ ಜಿಲ್ಲಾ ಪರಿಷತ್‌ಗಳ ಸಬಲೀಕರಣ ಕುರಿತು ಚರ್ಚೆ ಹಾಗೂ ಈ ಕ್ರಮಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡುವ ಕುರಿತು ಚರ್ಚಿಸಬೇಕೆಂದು ಸಮಿತಿಗೆ ಸೂಚಿಸಲಾಗಿತ್ತು. ಆದರೆ, ಮಾರ್ಚ್ 2024ರಲ್ಲಿ ಮಾತುಕತೆ ಮುರಿದುಬಿತ್ತು. ಡಿಸೆಂಬರ್ 3, 2024, ಜನವರಿ 15, 2025 ಹಾಗೂ ಮೇ 27, 2025ರಲ್ಲಿ ಸಭೆಗಳು ನಡೆದವು. ಮೂರನೇ ಸಭೆ ನಡೆದ ಮಾರನೇ ದಿನ ಸಮಿತಿ ಸದಸ್ಯರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಜೂನ್ 3, 2025ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೀಸಲು ಕಾರ್ಯನೀತಿ, ಖಾಯಂನಿವಾಸಿಗಳು ಮತ್ತು ಪರ್ವತ ಪರಿಷತ್‌ಗಳ ಸಂಯೋಜನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದರು. ಇದರಿಂದ ಸರಕಾರದ ಹುದ್ದೆಗಳಲ್ಲಿ ಲಡಾಖಿಗಳಿಗೆ ಶೇ.85ರಷ್ಟು ಮೀಸಲು ಸಿಕ್ಕಿತು. ಆದರೆ, ಮುಖ್ಯ ಬೇಡಿಕೆಗಳಾದ ರಾಜ್ಯದ ಸ್ಥಾನಮಾನ ಹಾಗೂ 6ನೇ ಪರಿಶಿಷ್ಟಕ್ಕೆ ಸೇರ್ಪಡೆ ಹಾಗೆಯೇ ಉಳಿದುಕೊಂಡವು. 2022ರಲ್ಲೇ ಗೃಹ ಮಂತ್ರಾಲಯವು ‘6ನೇ ಪರಿಶಿಷ್ಟಕ್ಕೆ ಸೇರ್ಪಡೆಯಿಂದ ಒಟ್ಟಾರೆ ಸಾಮಾಜಿಕೋ-ಆರ್ಥಿಕ ಬೆಳವಣಿಗೆ ಆಗಲಿದೆ. ಕೇಂದ್ರಾಡಳಿತ ಈ ಸಂಬಂಧ ಕ್ರಮ ತೆಗೆದುಕೊಳ್ಳಲಿದೆ ಮತ್ತು ಲಡಾಖಿಗೆ ಸಾಕಷ್ಟು ಅನುದಾನ ನೀಡ ಲಾಗುತ್ತದೆ’ ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಹೇಳಿತ್ತು. ಆದರೆ, ಉಲ್ಟಾ ಹೊಡೆಯಿತು.

ಇತ್ತೀಚಿನ ಘಟನೆಗಳ ಬಳಿಕ ಎಲ್‌ಎಬಿ ಮತ್ತು ಕೆಡಿಎ ಜೊತೆ ಸಭೆ ನಡೆಸುತ್ತಿರುವುದಾಗಿ ಗೃಹ ಸಚಿವಾಲಯ ಹೇಳಿಕೊಂಡಿದೆ. ಲಡಾಖ್‌ನಲ್ಲಿ ಪರಿಶಿಷ್ಟ ವರ್ಗದ ಮೀಸಲನ್ನು ಶೇ.45ರಿಂದ ಶೇ.84ಕ್ಕೆ ಹೆಚ್ಚಳ, ಸಮಿತಿಗಳಲ್ಲಿ 1/3ರಷ್ಟು ಮಹಿಳಾ ಮೀಸಲು, ಬೋಟ್ ಮತ್ತು ಪರ್ಗಿಯನ್ನು ಅಧಿಕೃತ ಭಾಷೆಗಳೆಂದು ಮನ್ನಣೆ ನೀಡಲಾಗಿದೆ ಎಂದು ಹೇಳಿಕೊಂಡಿದೆ. ‘‘ಲಡಾಖ್‌ನ ಅಭಿವೃದ್ಧಿಗೆ ನೀಡಲಾದ 6,000 ಕೋಟಿ ರೂ. ಯಾವುದೇ ಕಾರಣಕ್ಕೂ ವಾಪಸ್ ಪಡೆಯುವಂತಿಲ್ಲ ಎಂಬ ನಿಯಮ ವಿಧಿಸಲಾಗಿತ್ತು. ಆದರೆ, ಅನುದಾನ ಬಳಕೆಯಾಗಿಲ್ಲ ಎಂದು ಹಣವನ್ನು ಕೇಂದ್ರ ವಾಪಸ್ ಪಡೆದುಕೊಂಡಿದೆ. ಲಡಾಖ್‌ನಲ್ಲಿ 8,000 ಉದ್ಯೋಗದ ಆಶ್ವಾಸನೆ ನೀಡಲಾಗಿತ್ತು. 800 ಉದ್ಯೋಗ ಕೂಡ ಈವರೆಗೆ ಸೃಷ್ಟಿಯಾಗಿಲ್ಲ’’ ಎಂದು ಲಡಾಖಿಗಳು ದೂರುತ್ತಾರೆ.

ಸೋನಮ್ ವಾಂಗ್ಚುಕ್ ಅಂದರೆ...

ವೃತ್ತಿಪರ ಇಂಜಿನಿಯರ್, ಸಂಶೋಧಕ. 100ಕ್ಕೂ ಅಧಿಕ ಪೇಟೆಂಟ್ ಅವರ ಹೆಸರಿನಲ್ಲಿದೆ. ಅವರ ತಂದೆ ಸೋನಮ್ ವಾಂಗ್ಯಾಲ್, ಮೌಂಟ್ ಎವರೆಸ್ಟ್ ಏರಿದ ಮೂರನೇ ಭಾರತೀಯ. ಆಗ ಅವರ ವಯಸ್ಸು 23. ಒಂಭತ್ತು ಮಂದಿ ಇದ್ದ ಆ ಪರ್ವತಾರೋಹಣ ತಂಡದ ನೇತೃತ್ವ ವಹಿಸಿದವರು ಭಾರತೀಯ ನೌಕಾ ದಳದ ಹಿರಿಯ ಅಧಿಕಾರಿ ಕ್ಯಾಪ್ಟನ್ ಎಂ.ಎಸ್. ಕೊಹ್ಲಿ. ಆನಂತರ ವಾಂಗ್ಯಾಲ್ ಜಮ್ಮು-ಕಾಶ್ಮೀರ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. 1965ರಲ್ಲಿ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿಗೆ ಪಾತ್ರರಾದರು. ಸೋನಮ್ ವಾಂಗ್ಚುಕ್ ಅಭಿವೃದ್ಧಿಪಡಿಸಿದ ಮಂಜುಗಡ್ಡೆಯ ಸ್ತೂಪಗಳು ಲಡಾಖಿ ರೈತರ ನೀರಿನ ಬವಣೆಯನ್ನು ನೀಗಿಸಿವೆ. ಅವರು ಸೈನಿಕರಿಗೆಂದೇ ರೂಪಿಸಿರುವ ಕೊಂಡೊಯ್ಯಬಹುದಾದ ಸೌರ ಟೆಂಟ್, ಲಡಾಖ್, ಲೆಹ್ ಹಾಗೂ ಇನ್ನಿತರ ಹಿಮಾವೃತ ಪರ್ವತಗಳಲ್ಲಿ ಸೈನಿಕರಿಗೆ ವರದಾನವಾಗಿವೆ. ಲಡಾಖ್ ನೀರಿನ ತೀವ್ರ ಕೊರತೆ ಇರುವ ಪ್ರದೇಶ. ವಾರ್ಷಿಕ ಮಳೆ ಪ್ರಮಾಣ 10 ಸೆಂ.ಮೀ. ಲಡಾಖಿಗಳು ದಿನವೊಂದಕ್ಕೆ ಕೇವಲ 5 ಲೀಟರ್ ನೀರು ಬಳಸುತ್ತಾರೆ. ಕಾರ್ಖಾನೆಗಳು ಪ್ರಾರಂಭವಾದರೆ, ನೀರಿನ ಕೊರತೆ ತೀವ್ರವಾಗುತ್ತದೆ. ಹಿಮನದಿಗಳು ಕರಗಿ ಕೇವಲ 20 ವರ್ಷದಲ್ಲಿ ನೀರೇ ಇಲ್ಲದಂತೆ ಆಗಬಹುದು ಎಂಬುದು ಸ್ಥಳೀಯರ ಆತಂಕ.

ಆದರೆ, ಲಡಾಖಿಗಳ ಪ್ರತಿಭಟನೆಗಳು ದಂಗೆಯಲ್ಲ; ಸ್ಥಳೀಯ ನಾಯಕರು ತಮ್ಮ ಬೇಡಿಕೆಗಳು ಸಂವಿಧಾನದ ಚೌಕಟ್ಟಿನೊಳಗೆ ಇವೆ ಎಂದು ಪದೇಪದೇ ಒತ್ತಿ ಹೇಳುತ್ತಾರೆ. ಅವರು ಪ್ರತ್ಯೇಕತೆಯನ್ನು ಕೇಳುತ್ತಿಲ್ಲ; ಪಾಲುದಾರಿಕೆಯನ್ನು ಬಯಸುತ್ತಾರೆ. ಅವರ ನಿಲುವು ಸ್ಪಷ್ಟ: ಲಡಾಖ್ ಕುರಿತ ನಿರ್ಧಾರಗಳನ್ನು ಲಡಾಖಿಗಳೊಟ್ಟಿಗೆ ತೆಗೆದುಕೊಳ್ಳಬೇಕು. ಲಡಾಖ್‌ನ ಸವಾಲುಗಳಿಗೆ ಉತ್ತರ ಸಂಕೀರ್ಣವೇನಲ್ಲ. ಲಡಾಖಿಗಳು ಬಯಸುವುದು ರಾಜಕೀಯ ಭಾಗವಹಿಸುವಿಕೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸದೆ ನೀಡಬಹುದಾದ ಕಾನೂನು ಭರವಸೆ. ಲೇಹ್‌ನ ಬೌದ್ಧ ಸಮುದಾಯ ಮತ್ತು ಕಾರ್ಗಿಲ್‌ನ ಮುಸ್ಲಿಮರ ನಡುವಿನ ಸಹಭಾಗಿತ್ವವು ಅಸ್ಮಿತೆ ಮತ್ತು ಜೀವನೋಪಾಯ ಅಪಾಯದಲ್ಲಿರುವಾಗ, ಅಂತರಗಳು ಇಲ್ಲವಾಗುತ್ತವೆ ಎಂಬುದನ್ನು ತೋರಿಸುತ್ತದೆ. ಈ ಒಗ್ಗಟ್ಟು ಲಡಾಖ್‌ನ ಪ್ರಾತಿನಿಧ್ಯದ ಬೇಡಿಕೆಗೆ ನೈತಿಕ ಚೌಕಟ್ಟನ್ನು ನೀಡಿದೆ.

ಆಗಬೇಕಾದುದೇನು?

ಮೊದಲನೆಯದಾಗಿ, ಭೂಬಳಕೆ, ಉದ್ಯೋಗ, ಸಂಸ್ಕೃತಿ ಮತ್ತು ಪರಿಸರ ಇತ್ಯಾದಿಯನ್ನು ಒಳಗೊಂಡಂತೆ ಸ್ಥಳೀಯ ವಿಷಯಗಳ ಮೇಲೆ ಅಧಿಕಾರ ಹೊಂದಿರುವ ಚುನಾಯಿತ ಶಾಸಕಾಂಗ ರಚಿಸಬೇಕು. ಇದು ಆಡಳಿತದಲ್ಲಿನ ನಿರ್ವಾತವನ್ನು ತುಂಬುತ್ತದೆ. ಎರಡನೆಯದಾಗಿ, ಹೊರಗಿನವರಿಗೆ ಭೂಮಿಯ ಮಾರಾಟಕ್ಕೆ ತಡೆ ಮತ್ತು ಸ್ಥಳೀಯರಿಗೆ ಉದ್ಯೋಗ ಖಚಿತಪಡಿಸಿಕೊಳ್ಳಲು, ಲಡಾಖ್ ಭೂಮಿ ಮತ್ತು ಉದ್ಯೋಗ ಸಂರಕ್ಷಣಾ ಕಾಯ್ದೆಯ ಅನುಷ್ಠಾನ. ದೇಶದ ಇತರ ಬುಡಕಟ್ಟು ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಈ ಕಾಯ್ದೆಯು ಲಡಾಖ್‌ನ ಸಾಮಾಜಿಕ ಸಂರಚನೆಯನ್ನು ರಕ್ಷಿಸುತ್ತದೆ ಮತ್ತು ಜನಸಂಖ್ಯಾ ಬದಲಾವಣೆಯ ಭಯಗಳನ್ನು ಪರಿಹರಿಸುತ್ತದೆ. ಮೂರನೆಯದಾಗಿ, ಸುಸ್ಥಿರ ಮೂಲ ಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಪೂರಕ ಜೀವನೋಪಾಯಗಳನ್ನು ಗುರಿಯಾಗುಳ್ಳ ಲಡಾಖ್ ಅಭಿವೃದ್ಧಿ ಒಪ್ಪಂದಕ್ಕೆ ಸಮ್ಮತಿ. ಈ ಒಪ್ಪಂದದಡಿ ಕೇಂದ್ರದ ಅನುದಾನವನ್ನು ಪಾರದರ್ಶಕವಾಗಿ, ಸಮುದಾಯ ಆಧರಿತ ಉಪಕ್ರಮಗಳಿಗೆ ಬಳಸಬೇಕು ಮತ್ತು ಅವು ಸ್ಥಳೀಯ ಅಗತ್ಯಗಳನ್ನು ಪೂರೈಸುತ್ತವೆ ಎಂದು ಖಾತರಿಪಡಿಸಿಕೊಳ್ಳಬೇಕು. ನಾಲ್ಕನೆಯದಾಗಿ, ನಿರಂತರ ಸಂವಾದ ಮತ್ತು ಹೊಣೆಗಾರಿಕೆ. ಇತ್ತೀಚಿನ ಹಿಂಸಾಚಾರದ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕು. ಐದನೆಯದಾಗಿ, ಈ ಪ್ರದೇಶದ ಮಿಲಿಟರೀಕರಣ ಅನಿವಾರ್ಯ. ಆದರೆ, ಸೇನೆ ಮತ್ತು ನಾಗರಿಕ ಪ್ರತಿನಿಧಿಗಳ ನಡುವೆ ನಿಯಮಿತ ಸಂವಹನ ನಡೆಯಬೇಕು. ಇದ್ಯಾವುದೂ ಕಠಿಣವಲ್ಲ.

ಕೇಂದ್ರ ಸರಕಾರದ ಪ್ರತಿಕ್ರಿಯೆ ಲಡಾಖ್‌ನ ರಾಜಕೀಯದ ದಿಕ್ಕನ್ನು ನಿರ್ಧರಿಸುತ್ತದೆ. ದಮನಿಸುವ ಮೂಲಕ ಪ್ರತಿಭಟನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಲಡಾಖಿಗಳು ದೇಶಭಕ್ತರು; ಕಡುಕಠಿಣ ಚಳಿಗಾಲ ಮತ್ತು ಪ್ರತ್ಯೇಕತೆಯನ್ನು ಸಹಿಸಿಕೊಂಡಿದ್ದಾರೆ. ತಾಯ್ನಾಡನ್ನು ರಕ್ಷಿಸಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಬೇಡಿಕೆಗಳು ಪ್ರತ್ಯೇಕತಾವಾದವಲ್ಲ; ಘನತೆಯ ಬದುಕು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾಲು ಕೇಳುತ್ತಿದ್ದಾರೆ. ಅವುಗಳ ಪೂರೈಸುವಿಕೆಯು ದಿಲ್ಲಿಯ ಅಧಿಕಾರವನ್ನು ದುರ್ಬಲಗೊಳಿಸುವುದಿಲ್ಲ; ಬದಲಾಗಿ, ಪ್ರಜಾಪ್ರಭುತ್ವವನ್ನು ಭದ್ರಗೊಳಿಸುತ್ತದೆ. ಲಡಾಖಿಗಳು ದೇಶದೊಳಗೆ ತಮ್ಮ ಅನನ್ಯತೆ-ಅಸ್ಮಿತೆಯನ್ನು ಗುರುತಿಸಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ರಾಜಕೀಯ ಪಾಲ್ಗೊಳ್ಳುವಿಕೆಗೆ ಅವಕಾಶ ಮತ್ತು ಸಂವಿಧಾನಾತ್ಮಕ ರಕ್ಷಣೆ ನೀಡುವುದರಿಂದ ಒಕ್ಕೂಟ ಬಲಗೊಳ್ಳುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಸ್ಥಳೀಯರ ಸಬಲೀಕರಣ ಪರಸ್ಪರ ವಿರುದ್ಧವಲ್ಲ. ಲಡಾಖ್‌ನ ಪರ್ವತಗಳು ಶತಮಾನಗಳಿಂದ ಅಚಲವಾಗಿ ನಿಂತಿವೆ; ಈಗ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ.

ಆದರೆ, ಕೇಂದ್ರದ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆ-ಭಿನ್ನಾಭಿಪ್ರಾಯವನ್ನು ದೇಶದ್ರೋಹ ಎನ್ನುವ ಕಾಲಘಟ್ಟದಲ್ಲಿ ಇದ್ದೇವೆ. ದೌರ್ಜನ್ಯವನ್ನು ಪ್ರಶ್ನಿಸಿದರೆ, ಪ್ರತಿಭಟಿಸಿದರೆ ಹಣೆಪಟ್ಟಿ ಹಚ್ಚಲಾಗು ತ್ತದೆ. ಇದು ವಿಷಮ ಕಾಲ. ‘ಮನುಷ್ಯರು ಭೂಮಿ ಮೇಲಿನ ಅತ್ಯಂತ ಅಧಿಕ ಬುದ್ಧಿಶಕ್ತಿ ಇರುವ ಜೀವಿಗಳು; ಆದರೆ, ವಿವೇಕಿಗಳಲ್ಲ. ನೀವು ವಿವೇಕಿ ಗಳಾಗಿದ್ದರೆ ನಿಮ್ಮದೇ ಮನೆಯನ್ನು ಕೈಯಾರೆ ನಾಶಪಡಿಸುವುದಿಲ್ಲ’ ಎಂದು ಖ್ಯಾತ ಮಾನವಶಾಸ್ತ್ರಜ್ಞೆ ಡಾ. ಜೇನ್ ಗೊಡಾಲ್ ಹೇಳುತ್ತಾರೆ. ವಿವೇಕಶೂನ್ಯತೆ ಸಾರ್ವತ್ರಿಕವಾಗಿರುವಾಗ ಸೋನಮ್ ವಾಂಗ್ಚುಕ್ ಹಾಗೂ ಲಡಾಖಿಗಳು ಯಾವ ಮಾರ್ಗ ಕಂಡುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News