×
Ad

ಸುಪ್ರೀಂ ಕೋರ್ಟ್‌ಗೆ ಭಿನ್ನಮತದ ಮೆರುಗು

Update: 2025-10-17 11:07 IST

ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಒಮ್ಮತಕ್ಕೆ ಪ್ರಯತ್ನಿಸುವಂಥದ್ದು. ಆದರೆ, ಭಿನ್ನಮತ ಕೂಡ ಹೆಜ್ಜೆಗುರುತು ಮೂಡಿಸುವ ಮತ್ತು ಭವಿಷ್ಯದಲ್ಲಿ ಸರಿ ಎಂದು ಸಾಬೀತಾಗುವ ಸಾಧ್ಯತೆ ಇರುತ್ತದೆ. ಅಲೆಗಳ ವಿರುದ್ಧ ಈಜಲು ಹಿಂಜರಿಯದ ನ್ಯಾ. ನಾಗರತ್ನ ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ನ್ಯಾಯಮೂರ್ತಿಗಳ ನೇಮಕ ಸಂಬಂಧಿಸಿದಂತೆ ಕೊಲಿಜಿಯಂನ ಬಹುಮತ ನಿರ್ಧಾರಕ್ಕೆ ಭಿನ್ನಮತ ವ್ಯಕ್ತಪಡಿಸಿ ಸಂಚಲನ ಮೂಡಿಸಿದ್ದರು. ಪಟ್ನಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಪುಲ್ ಮನುಭಾಯಿ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟಿಗೆ ನೇಮಕಗೊಳಿಸುವುದನ್ನು ವಿರೋಧಿಸಿದ್ದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನವು ಸನಾತನ ಮನಸ್ಥಿತಿಯ ಗಂಭೀರ ಪ್ರಕರಣ. ಸನಾತನ ಧರ್ಮಕ್ಕೆ ಅಪಮಾನವನ್ನು ಸಹಿಸುವುದಿಲ್ಲ ಎಂದು ಈ ಪ್ರಯತ್ನ ನಡೆಸಿದಾತ ಹೇಳಿದ್ದಾನೆ. ಆತ ಅಪ್ರಬುದ್ಧನಲ್ಲ; ಮಾನಸಿಕ ಅಸ್ವಸ್ಥನಲ್ಲ; ಅಕ್ಷರಸ್ಥ ಮತ್ತು ವೃತ್ತಿಯಲ್ಲಿ ವಕೀಲ. ನ್ಯಾಯಾಲಯದ ತೀರ್ಮಾನ ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎನ್ನುವ ಅಸಹನೆಯು ಗುಂಪು ಹಲ್ಲೆಗಳು ಮತ್ತು ಬುಲ್ಡೋಜರ್ ನ್ಯಾಯದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡುತ್ತಿದೆ.

ದೇಶದ ನಾಯಕತ್ವ ವಹಿಸಿದವರ ರೋಗ ಅವರ ಆಶ್ರಿತರು, ಅನುಯಾಯಿಗಳು ಹಾಗೂ ಬಾಲಂಗೋಚಿಗಳಲ್ಲೂ ಕಾಣಿಸಿಕೊಂಡಿದೆ. ಈ ವಕೀಲ ಮಾತ್ರವಲ್ಲ, ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸೇರಿದಂತೆ ಕೃಪಾಪೋಷಿತರು ಕೂಡ ನ್ಯಾಯಾಲಯದ ಹೀನೈಸುವಿಕೆಯಲ್ಲಿ ಭಾಗಿಯಾಗಿದ್ದಾರೆ. ಸೆಪ್ಟಂಬರ್ 2025ರಲ್ಲಿ ನಡೆದ ನ್ಯಾಯನಿರ್ಮಾಣ ಸಮಾವೇಶದಲ್ಲಿ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಸದಸ್ಯ ಸಂಜೀವ್ ಸನ್ಯಾಲ್, ‘‘ನ್ಯಾಯಾಲಯಗಳು ದೇಶದ ಅಭಿವೃದ್ಧಿಗೆ ಮುಖ್ಯ ಅಡೆತಡೆಯಾಗಿವೆ. ನ್ಯಾಯಾಂಗ ಮತ್ತು ಕಾನೂನು ಪರಿಸರ ವ್ಯವಸ್ಥೆ, ವಿಶೇಷವಾಗಿ ನ್ಯಾಯಾಂಗ, ನನ್ನ ದೃಷ್ಟಿಯಲ್ಲಿ ದೇಶದ ವಿಕಾಸಕ್ಕೆ ಮತ್ತು ಶೀಘ್ರ ಬೆಳವಣಿಗೆಗೆ ಅತಿ ದೊಡ್ಡ ತೊಡಕಾಗಿದೆ. ಇಲ್ಲವಾಗಿದ್ದರೆ ದೇಶ 20-25 ವರ್ಷಗಳೊಳಗೆ ವಿಕಸಿತ ಭಾರತವಾಗುತ್ತಿತ್ತು’’ ಎಂದು ಹೇಳಿದರು. ಬಿಜೆಪಿಯಲ್ಲಿ ಇಂಥ ಕೂಗುಮಾರಿಗಳ ಸರತಿಸಾಲೇ ಇದೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಸಚಿವ ಕಿರಣ್ ರಿಜಿಜು, ಸಂಸದ ಅನುರಾಗ್ ಠಾಕೂರ್ ಮತ್ತಿತರರು ಇದರಲ್ಲಿ ಸೇರಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಎಪ್ರಿಲ್ 2025ರಲ್ಲಿ ಸುಪ್ರೀಂ ಕೋರ್ಟ್ ಮತ್ತು ಆಗಿನ ಸಿಜೆಐ ಸಂಜೀವ್ ಖನ್ನಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘‘ನ್ಯಾಯಾಲಯ ಅಂತರ್‌ಯುದ್ಧಗಳನ್ನು ಪ್ರಚೋದಿಸುತ್ತಿದೆ ಮತ್ತು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ’’ ಎಂದು ದೂರಿದ್ದರು.

ಯಾರು ಕಾರಣ?

ದೇಶದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ 5 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಅರ್ಧದಷ್ಟು ಸರಕಾರಕ್ಕೆ ಸಂಬಂಧಿಸಿವೆ. ಹೈಕೋರ್ಟ್‌ಗಳಲ್ಲಿ 63 ಲಕ್ಷಕ್ಕೂ ಅಧಿಕ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಸುಮಾರು 4.6 ಕೋಟಿ ಪ್ರಕರಣಗಳು ಬಾಕಿ ಇವೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್(ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್,ಎನ್‌ಜೆಡಿಜಿ) ಪ್ರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 88,417(ಇದರಲ್ಲಿ ಸಿವಿಲ್ 69,553 ಮತ್ತು ಉಳಿದವು ಕ್ರಿಮಿನಲ್ ಪ್ರಕರಣಗಳು). ಸರಕಾರದ ಇಲಾಖೆಗಳ ವಿರುದ್ಧ ಹೈಕೋರ್ಟ್ ಗಳಲ್ಲಿ 1.43 ಲಕ್ಷಕ್ಕೂ ಹೆಚ್ಚು ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಇವೆ. ರಾಜ್ಯದಲ್ಲಿ 2022ರಿಂದ ಸರಕಾರದ ವಿರುದ್ಧ ಸುಮಾರು 4,000 ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಉಳಿದಿವೆ (ಆಗಸ್ಟ್ 2025). ನ್ಯಾಯಾಧೀಶರು-ಜನಸಂಖ್ಯೆ ಅನುಪಾತ ಕಡಿಮೆ ಇರುವುದು, ನ್ಯಾಯಾಂಗದಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳು, ಮೂಲಸೌಕರ್ಯ ಕೊರತೆ ಮತ್ತು ಸರಕಾರಿ ಮೊಕದ್ದಮೆಗಳು ಹೆಚ್ಚು ಇರುವುದು ಪ್ರಕರಣಗಳು ಬಾಕಿ ಉಳಿಯಲು ಕಾರಣ. ಇದ್ಯಾವುದಕ್ಕೂ ನ್ಯಾಯಾಂಗ ಕಾರಣವಲ್ಲ. ಮೂಲಸೌಕರ್ಯ ನಿರ್ಮಾಣ, ಸಿಬ್ಬಂದಿ/ನ್ಯಾಯಾಧೀಶರ ನೇಮಕ, ಇಲಾಖೆಗೆ ಅನುದಾನ ನೀಡಿಕೆ ಇವೆಲ್ಲವೂ ಸರಕಾರಕ್ಕೆ ಸಂಬಂಧಿಸಿವೆ. ನ್ಯಾಯ ವಿತರಣೆಯನ್ನು ಸುಧಾರಿಸಲು ವ್ಯವಸ್ಥಿತ ಪರಿಷ್ಕರಣೆ ಅಗತ್ಯವಿದೆ ಎಂದು ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 ಹೇಳುತ್ತದೆ. ಅದರ ಪ್ರಮುಖ ಶಿಫಾರಸುಗಳೆಂದರೆ, * ನ್ಯಾಯ ವ್ಯವಸ್ಥೆಯ ಮೂಲಸೌಕರ್ಯ ನಿರ್ಮಾಣಕ್ಕೆ ಹೂಡಿಕೆ ಹೆಚ್ಚಳ * ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ * ಕಾನೂನು ನೆರವು ಸೇವೆಗಳಿಗೆ ಪ್ರವೇಶಾವಕಾಶ ಸುಧಾರಣೆ * ಜನಸಂಖ್ಯೆಯ ವೈವಿಧ್ಯಕ್ಕೆ ಅನುಗುಣವಾಗಿ ನ್ಯಾಯಾಂಗದಲ್ಲಿ ಪ್ರಾತಿನಿಧ್ಯದ ಹೆಚ್ಚಳ * ನ್ಯಾಯ ವಿತರಣೆಯನ್ನು ಅತ್ಯಗತ್ಯ ಸೇವೆ ಎಂದು ಪರಿಗಣಿಸುವುದು. ಇವೆಲ್ಲವೂ ಸರಕಾರ ಮಾಡಬೇಕಿರುವ ಕೆಲಸ. ಇಂಥ ಸನ್ನಿವೇಶದಲ್ಲಿ ನ್ಯಾಯಾಂಗವನ್ನು ಬರಿದೇ ಹಳಿಯುವ ಸನ್ಯಾಲ್ ಮತ್ತಿತರರನ್ನು ಏನು ಮಾಡುವುದು?

ಹಾಗೆಂದ ಮಾತ್ರಕ್ಕೆ ನ್ಯಾಯಾಂಗ ವ್ಯವಸ್ಥೆ ಪರಿಪೂರ್ಣವೆಂದಲ್ಲ; ಅಷ್ಟು ಮಾತ್ರವಲ್ಲ, ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ಕೊಲಿಜಿಯಂ ವ್ಯವಸ್ಥೆ ಕೂಡ ಲೋಪದೋಷಗಳಿಂದ ಕೂಡಿದೆ. ಎಲ್ಲ ನ್ಯಾಯಾಧೀಶರು ಶುದ್ಧಹಸ್ತರಲ್ಲ. ಅದಕ್ಷತೆ, ಭ್ರಷ್ಟಾಚಾರ, ಸಿಬ್ಬಂದಿ/ಮೂಲಭೂತ ಸೌಲಭ್ಯ ಕೊರತೆ, ಲಿಂಗ ಅಸಮಾನತೆ-ಜಾತಿ ತಾರತಮ್ಯದಿಂದ ನ್ಯಾಯಾಂಗ ಬಳಲಿದೆ. ಕೆಲ ನ್ಯಾಯಾಧೀಶರು ಸೇವೆಯಲ್ಲಿರುವಾಗಲೇ ನಿವೃತ್ತಿ ಬಳಿಕ ರಾಜ್ಯಪಾಲ ಮತ್ತಿತರ ಲಾಭದಾಯಕ ಹುದ್ದೆಗಳ ಆಸೆಯಿಂದ ವ್ಯವಸ್ಥೆಯೊಟ್ಟಿಗೆ ರಾಜಿ ಮಾಡಿಕೊಂಡಿರುತ್ತಾರೆ; ಸರಕಾರಕ್ಕೆ ಅನುಕೂಲಕರ ತೀರ್ಪು ನೀಡುತ್ತಾರೆ. ಮನುವಾದಿ ನ್ಯಾಯಾಧೀಶರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಲಿಂಗ ಅಸಮಾನತೆ ಬಗ್ಗೆ ಧ್ವನಿಯೆತ್ತುವ ಮತ್ತು ನಿರ್ಬಿಡೆಯಿಂದ ಕೆಲಸ ಮಾಡುವವರೂ ಇದ್ದಾರೆ. ಅಂಥವರಲ್ಲಿ ಒಬ್ಬರು-ಬೆಂಗಳೂರು ವೆಂಕಟರಾಮಯ್ಯ ನಾಗರತ್ನ.

ಗಟ್ಟಿ ಧ್ವನಿ

1987ರಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಬಂದ ನ್ಯಾ. ನಾಗರತ್ನ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಮೊದಲು ವಕೀಲರಾಗಿ ಆನಂತರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಅವರ ತಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ. ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಆಗಿದ್ದಾಗ, ಮು.ನ್ಯಾ. ಪಿ.ಡಿ. ದಿನಕರನ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ವಕೀಲರು ಪ್ರತಿಭಟನೆ ನಡೆಸಿ, ನ್ಯಾಯಾಲಯಕ್ಕೆ ಮುತ್ತಿಗೆ ಹಾಕಿದ್ದರು. ದಿಗ್ಬಂಧನದಿಂದ ಹೊರಗೆ ಬಂದ ನ್ಯಾ. ನಾಗರತ್ನ, ‘‘ನಮ್ಮನ್ನು ಈ ರೀತಿ ಮಣಿಸಲು ಸಾಧ್ಯವಿಲ್ಲ. ನಾವು ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದೇವೆ’’ ಎಂದು ಹೇಳಿದ್ದರು (ನವೆಂಬರ್ 2009). ಆಗಸ್ಟ್ 2021ರಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ತೆರಳುವ ಮುನ್ನ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಹಿಳಾ ವಕೀಲರನ್ನು ಉದ್ದೇಶಿಸಿ, ‘‘ಸರಿಯಾದ ಅವಕಾಶ ಸಿಕ್ಕಿದರೆ ಪ್ರತಿಯೊಬ್ಬರೂ ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು. ಎಲ್ಲರೂ ಅಂಥ ಅವಕಾಶಗಳನ್ನು ಹುಡುಕಬೇಕು. ಆತ್ಮವಿಶ್ವಾಸದಿಂದ ಅಂದುಕೊಂಡಿದ್ದನ್ನು ಸಾಧಿಸಬೇಕು ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು’’ ಎಂದು ಹೇಳಿದ್ದರು.

ಅವರು ಸೆಪ್ಟಂಬರ್ 25, 2027ರಲ್ಲಿ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿ, ಚರಿತ್ರೆ ನಿರ್ಮಿಸಲಿದ್ದಾರೆ. ಆದರೆ, ಅವರ ಅಧಿಕಾರಾವಧಿ ಕೇವಲ 36 ದಿನ ಮಾತ್ರ. ಆಗಸ್ಟ್ 2021ರಲ್ಲಿ ಅವರೊಟ್ಟಿಗೆ ಸುಪ್ರೀಂ ಕೋರ್ಟಿಗೆ ಆಯ್ಕೆಯಾದವರು ನ್ಯಾ.ಬೇಲಾ ಎಂ. ತ್ರಿವೇದಿ(ಅವರು ಮೇ 16, 2025ರಂದು ನಿವೃತ್ತರಾದರು). ಆನಂತರ ಇನ್ನೊಬ್ಬರು ಮಹಿಳಾ ನ್ಯಾಯಮೂರ್ತಿ ಸುಪ್ರೀಂ ಕೋರ್ಟಿಗೆ ಆಯ್ಕೆಯಾಗಿಲ್ಲ. ಅವರು ಈಗ ಸುಪ್ರೀಂ ಕೋರ್ಟಿನಲ್ಲಿರುವ ಏಕೈಕ ಮಹಿಳಾ ನ್ಯಾಯಮೂರ್ತಿ. ಮೇ 25,2025ರಲ್ಲಿ ಕೊಲಿಜಿಯಂಗೆ ಸೇರ್ಪಡೆಯಾದರು; ಅವರು ಕೊಲಿಜಿಯಂಗೆ ನೇಮಕಗೊಂಡ ಮೂರನೇ ಮಹಿಳಾ ನ್ಯಾಯಮೂರ್ತಿ (ನ್ಯಾ.ರುಮಾ ಪಾಲ್ ಮತ್ತು ನ್ಯಾ.ಭಾನುಮತಿ ಈ ಮೊದಲು ಕೊಲಿಜಿಯಂನಲ್ಲಿ ಇದ್ದರು).

ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಒಮ್ಮತಕ್ಕೆ ಪ್ರಯತ್ನಿಸುವಂಥದ್ದು. ಆದರೆ, ಭಿನ್ನಮತ ಕೂಡ ಹೆಜ್ಜೆಗುರುತು ಮೂಡಿಸುವ ಮತ್ತು ಭವಿಷ್ಯದಲ್ಲಿ ಸರಿ ಎಂದು ಸಾಬೀತಾಗುವ ಸಾಧ್ಯತೆ ಇರುತ್ತದೆ. ಅಲೆಗಳ ವಿರುದ್ಧ ಈಜಲು ಹಿಂಜರಿಯದ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ನ್ಯಾಯಮೂರ್ತಿಗಳ ನೇಮಕ ಸಂಬಂಧಿಸಿದಂತೆ ಕೊಲಿಜಿಯಂನ ಬಹುಮತ ನಿರ್ಧಾರಕ್ಕೆ ಭಿನ್ನಮತ ವ್ಯಕ್ತಪಡಿಸಿ ಸಂಚಲನ ಮೂಡಿಸಿದ್ದರು. ಪಟ್ನಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಪುಲ್ ಮನುಭಾಯಿ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟಿಗೆ ನೇಮಕಗೊಳಿಸುವುದನ್ನು ವಿರೋಧಿಸಿದ್ದರು. ನ್ಯಾ. ಪಂಚೋಲಿ ಅವರನ್ನು ಜುಲೈ 2023ರಲ್ಲಿ ಗುಜರಾತ್ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗೆ ಬೇರೆಯದೇ ಕಾರಣ ಇದೆ. ಅಲ್ಲದೆ, ಅವರ ಸೇರ್ಪಡೆಯಿಂದ ಸುಪ್ರೀಂ ಕೋರ್ಟಿನಲ್ಲಿ ಗುಜರಾತ್ ಮೂಲದ ನ್ಯಾಯಾಧೀಶರ ಸಂಖ್ಯೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಲಿದೆ ಎಂದು ನ್ಯಾ. ನಾಗರತ್ನ ತಮ್ಮ ಲಿಖಿತ ಅಭಿಪ್ರಾಯದಲ್ಲಿ ಹೇಳಿದ್ದರು. ಜೊತೆಗೆ, ತಮ್ಮ ಭಿನ್ನಮತವನ್ನು ಜಾಲತಾಣದಲ್ಲಿ ಅಳವಡಿಸಬೇಕು ಎಂದು ಹೇಳಿದ್ದರು. ಹೈಕೋರ್ಟ್ ನ್ಯಾಯಾಧೀಶರ ಹಿರಿತನದ ಪಟ್ಟಿಯಲ್ಲಿ ನ್ಯಾ.ಪಂಚೋಲಿ 57ನೇ ಸ್ಥಾನದಲ್ಲಿದ್ದಾರೆ; ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ಸುನೀತಾ ಅಗರ್‌ವಾಲ್, ಬಾಂಬೆ ಹೈಕೋರ್ಟಿನ ರೇವತಿ ಮೋಹಿತೆ ದೇರೆ ಮತ್ತು ಪಂಜಾಬ್-ಹರ್ಯಾಣ ಹೈಕೋರ್ಟಿನ ಲೀಲಾ ಗಿಲ್ ಅಧಿಕ ಹಿರಿತನ ಹೊಂದಿದ್ದಾರೆ. ತಮ್ಮ ಭಿನ್ನ ಮತವನ್ನು ದಾಖಲಿಸಬೇಕೆಂಬ ಅವರ ಕೋರಿಕೆಯನ್ನು ಕೊಲಿಜಿಯಂ ಮನ್ನಿಸಲಿಲ್ಲ. ಕೊಲಿಜಿಯಂನ ಸದಸ್ಯರೊಬ್ಬರ ಭಿನ್ನಾಭಿಪ್ರಾಯವನ್ನು ದಾಖಲಿಸುವುದರಿಂದ, ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುವುದಿಲ್ಲ; ಬದಲಾಗಿ, ಇನ್ನಷ್ಟು ಬಲಿಷ್ಠವಾಗುತ್ತದೆ.

ನ್ಯಾ.ಪಂಚೋಲಿ ನೇಮಕದ ವಿರುದ್ಧ ನ್ಯಾ. ನಾಗರತ್ನ ಅವರ ಭಿನ್ನಮತ ಅತ್ಯಂತ ಧೈರ್ಯದ ಕೆಲಸ. ಏಕೆಂದರೆ, ಅವರು ನ್ಯಾ. ಪಂಚೋಲಿ ಅವರ ಜೊತೆಗೆ 2 ವರ್ಷಕ್ಕೂ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ ಮತ್ತು ತಾರತಮ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಇಂಥ ಪ್ರಕರಣ ಹಿಂದೆಯೂ ನಡೆದಿತ್ತು. ನ್ಯಾ. ಸಂಜೀವ್ ಖನ್ನಾ ಅವರ ಭಡ್ತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾ. ಸಂಜಯ್ ಕಿಷನ್ ಕೌಲ್, ಇತರ ನ್ಯಾಯಾಧೀಶರ ಹಿರಿತನವನ್ನು ಕಡೆಗಣಿಸಿ, ನ್ಯಾ. ಖನ್ನಾ ಅವರಿಗೆ ಭಡ್ತಿ ನೀಡಲಾಗಿದೆ ಎಂದು ಆಕ್ಷೇಪಿಸಿದ್ದರು. ನ್ಯಾ. ನಾಗರತ್ನ ಅವರಿಗೆ ನಾಲ್ವರು ಹಿರಿಯ ವಕೀಲೆಯರು(ಮಹಾಲಕ್ಷ್ಮೀ ಪಾವನಿ, ಶೋಭಾ ಗುಪ್ತ, ಅಪರ್ಣಾ ಭಟ್ ಮತ್ತು ಕವಿತಾ ವಾಡಿಯಾ) ಬೆಂಬಲ ನೀಡಿದರಲ್ಲದೆ, ‘‘ನ್ಯಾಯಾಂಗ ಮತ್ತು ವಕೀಲರು ಈ ಬಗ್ಗೆ ಕಿವುಡಾಗಿರುವುದು ಆತಂಕ ಹುಟ್ಟಿಸಿದೆ. ನ್ಯಾಯಾಂಗದಲ್ಲಿ ಪಾರದರ್ಶಕತೆ ಇರಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ, ಅದನ್ನು ಆಚರಣೆಗೆ ತರಲು ಹಿಂಜರಿಯುತ್ತಾರೆ’’ ಎಂದು ಹೇಳಿಕೆ ನೀಡಿದರು. ಈ ನಾಲ್ವರು ಕೂಡ ಧೈರ್ಯಸ್ಥೆಯರೇ. ಏಕೆಂದರೆ, ಅವರು ಕೂಡ ನ್ಯಾ.ಪಂಚೋಲಿ ಅವರನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕೂಡ ‘‘ಅಪಾರದರ್ಶಕತೆಯು ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುತ್ತದೆ’’ ಎಂದು ನ್ಯಾ. ನಾಗರತ್ನ ಅವರನ್ನು ಬೆಂಬಲಿಸಿದ್ದರು.

ಮಹಿಳಾ ಪ್ರಾತಿನಿಧ್ಯದ ಪ್ರಶ್ನೆ ಮುನ್ನೆಲೆಗೆ

ನ್ಯಾ. ನಾಗರತ್ನ ಅವರ ಭಿನ್ನಮತವು ವಕೀಲ ವೃತ್ತಿಯಲ್ಲಿ ಮತ್ತು ಉನ್ನತ ನ್ಯಾಯಾಲಯ(ಸುಪ್ರೀಂ/ಹೈಕೋರ್ಟ್)ಗಳಲ್ಲಿ ಲಿಂಗ ಅಸಮಾನತೆ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಪ್ರಾಂತ ಮತ್ತು ಜಾತಿಗಳ ಪ್ರಾತಿನಿಧ್ಯದ ಮಾತು ಕೇಳಿಬರುತ್ತದೆ; ಆದರೆ, ಲಿಂಗ ಪ್ರಾತಿನಿಧ್ಯದ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ. ಈ ಸಂಬಂಧ ನ್ಯಾ. ನಾಗರತ್ನ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ 2025ರ ಪ್ರಕಾರ, ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಕಡಿಮೆಯಿದೆ. ಸುಪ್ರೀಂ ಕೋರ್ಟಿಗೆ ಈವರೆಗೆ ಕೇವಲ 11 ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ಈಗ ಇರುವ 34 ನ್ಯಾಯಮೂರ್ತಿಗಳಲ್ಲಿ ಕೇವಲ ಒಬ್ಬರು ಮಾತ್ರ ಮಹಿಳೆ; ಹೈಕೋರ್ಟ್‌ಗಳ 754 ನ್ಯಾಯಾಧೀಶರಲ್ಲಿ ಮಹಿಳೆಯರ ಪಾಲು 110(ಶೇ.14.6). ಆದರೆ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಪರಿಸ್ಥಿತಿ ಆಶಾದಾಯಕವಾಗಿದ್ದು, ಸುಮಾರು 7,852 ನ್ಯಾಯಾಧೀಶೆಯರು ಇದ್ದಾರೆ(ಫೆಬ್ರವರಿ 2025). ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು ಇದ್ದರೂ, ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಪಾತಾಳದಲ್ಲಿದೆ. ನ್ಯಾಯ ನೀಡಿಕೆ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಸುಧಾರಿಸಲು ನ್ಯಾಯಾಂಗದಲ್ಲಿ ಮಹಿಳೆಯರು ಹೆಚ್ಚು ಇರಬೇಕಿದೆ.

ನವೆಂಬರ್ 16, 2024ರಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ನ್ಯಾ. ಬಿ.ವಿ. ನಾಗರತ್ನ, ‘‘ತಮಗೆ ಒಪ್ಪಿಸಿದ ಪ್ರಕರಣಗಳಲ್ಲಿ ಕಕ್ಷಿದಾರನಿಗೆ ನಿಜವಾಗಿಯೂ ನ್ಯಾಯ ಸಿಗಬೇಕೆಂದರೆ, ನ್ಯಾಯಾಧೀಶರು ಧೈರ್ಯ ಮತ್ತು ಸ್ವತಂತ್ರ ಮನೋಭಾವದಿಂದ ವರ್ತಿಸಬೇಕು. ಇತ್ತೀಚೆಗೆ ಸುಪ್ರೀಂ ಕೋರ್ಟಿನಲ್ಲಿ ಕೂಡ ಭಿನ್ನ ಧ್ವನಿಗಳು ಕೇಳಿಬರುತ್ತಿವೆ. ನಾನು ಮತ್ತು ಸೋದರಿ ನ್ಯಾ. ಬೇಲಾ ತ್ರಿವೇದಿ ಸಂವಿಧಾನ ಪೀಠಕ್ಕೆ ಸಂಬಂಧಿಸಿದಂತೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಇದರರ್ಥ-ಮಹಿಳೆಯರು ಹೆಚ್ಚು ಸ್ವಾತಂತ್ರ್ಯ ಹೊಂದಿದ್ದಾರೆ ಎಂದಲ್ಲ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವಿಕೆ ಕೂಡ ಸ್ವಾತಂತ್ರ್ಯದ ಅಭಿವ್ಯಕ್ತಿ. ಭಿನ್ನಮತ ಎನ್ನುವುದು ನ್ಯಾಯಾಂಗ ಸ್ವಾತಂತ್ರ್ಯದ ಅತ್ಯುನ್ನತ ಮಾದರಿ’’ ಎಂದು ಹೇಳಿದ್ದರು. ಫೆಬ್ರವರಿ 2025ರಲ್ಲಿ ಮಧ್ಯಪ್ರದೇಶದ ಇಬ್ಬರು ಮಹಿಳಾ ಸಿವಿಲ್ ನ್ಯಾಯಾಧೀಶರ ಮರುನೇಮಕ ಆದೇಶ ನೀಡಿದ್ದ ಅವರು, ‘‘ಪೂರಕ ಪರಿಸರ ರೂಪಿಸಲು ಮತ್ತು ಮಾರ್ಗದರ್ಶನ ನೀಡಲು ಅಸಮರ್ಥವಾಗಿರುವಾಗ, ಮಹಿಳಾ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ ಹೆಚ್ಚಳವನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಈ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬರುವಂತೆ, ಉಳಿದುಕೊಳ್ಳುವಂತೆ ಹಾಗೂ ಉನ್ನತ ಸ್ಥಾನಕ್ಕೆ ಏರುವಂತೆ ಖಾತ್ರಿ ನೀಡಬೇಕಿದೆ’’ ಎಂದಿದ್ದರು.

ಹಲವು ಭಿನ್ನ ತೀರ್ಪು

ಸುಪ್ರೀಂ ಕೋರ್ಟಿನಲ್ಲಿ ಅವರು ಹಲವು ಪ್ರಮುಖ ಪ್ರಕರಣಗಳಲ್ಲಿ ಭಿನ್ನ ತೀರ್ಪು ನೀಡಿದ್ದಾರೆ. ಜನವರಿ 2023ರ ನೋಟು ಅಮಾನ್ಯ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಪೀಠ 4:1 ಬಹುಮತದಿಂದ ಅಮಾನ್ಯೀಕರಣವನ್ನು ಮಾನ್ಯ ಮಾಡಿತ್ತು. ಆದರೆ, ನ್ಯಾ. ನಾಗರತ್ನ ‘‘ಅಮಾನ್ಯೀಕರಣದ ಉದ್ದೇಶ ಘನವಾದದ್ದಾಗಿದ್ದರೂ, ಅದನ್ನು ಕಾರ್ಯಾಂಗದ ಅಧಿಸೂಚನೆ ಮೂಲಕ ಅನುಷ್ಠಾನಗೊಳಿಸಬೇಕಿತ್ತು. ಚಲಾವಣೆಯಲ್ಲಿರುವ ಶೇ.86ರಷ್ಟು ನೋಟುಗಳನ್ನು ಅಮಾನ್ಯಗೊಳಿಸುವ ಆದೇಶವು ಸಂಸತ್ತಿನಲ್ಲಿ ಅರ್ಥಪೂರ್ಣ ಸಂವಾದ ಮತ್ತು ಚರ್ಚೆ ಮೂಲಕ ಬಂದಿದ್ದರೆ, ಅದಕ್ಕೆ ಶಾಸನಾತ್ಮಕ ಮನ್ನಣೆ ಸಿಕ್ಕಂತೆ ಆಗುತ್ತಿತ್ತು’’ ಎಂದು ಹೇಳಿದ್ದರು. ಅದೇ ತಿಂಗಳು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲೂ ಭಿನ್ನ ಧ್ವನಿ ಹೊರಡಿಸಿದ್ದರು. ಪೀಠ 4:1ರ ಬಹುಮತದ ತೀರ್ಪಿನಲ್ಲಿ ‘‘ದ್ವೇಷಪೂರಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ವ್ಯಕ್ತಿಗಳ ಮೇಲೆ ಹೆಚ್ಚುವರಿ ಉತ್ತರದಾಯಿತ್ವ ಹೊರಿಸಲು ಇಲ್ಲವೇ ಕಾನೂನು ನಿರ್ಬಂಧ ಹೇರಲು ಆಗುವುದಿಲ್ಲ’’ ಎಂದು ಹೇಳಿತ್ತು. ಆದರೆ, ನ್ಯಾ.ನಾಗರತ್ನ, ‘‘ಸಾರ್ವಜನಿಕ ವ್ಯಕ್ತಿಗಳು ಜನರಿಗೆ ಉತ್ತರದಾಯಿಯಾಗಿದ್ದು, ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ತಮ್ಮ ಮಾತುಗಳ ಮೇಲೆ ಹಿಡಿತ ಹೊದಿರಬೇಕು’’ ಎಂದಿದ್ದರು. 26 ವಾರಗಳ ಭ್ರೂಣದ ಗರ್ಭಪಾತಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾ. ನಾಗರತ್ನ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರ ಪೀಠ ಗರ್ಭಪಾತಕ್ಕೆ ಅನುಮತಿ ನೀಡಲು ನಿರಾಕರಿಸಿತ್ತು(ಅಕ್ಟೋಬರ್ 2023). ಆದರೆ, ನ್ಯಾ. ನಾಗರತ್ನ ‘‘ಈಗಾಗಲೇ ಎರಡು ಮಕ್ಕಳು ಇರುವ ಮಹಿಳೆಯ ಸಾಮಾಜಿಕೋ-ಆರ್ಥಿಕ ಮತ್ತು ವೈದ್ಯಕೀಯ ಪರಿಸ್ಥಿತಿಯನ್ನು ಹಾಗೂ ಹಿತಾಸಕ್ತಿಯನ್ನು ಪರಿಗಣಿಸಬೇಕು. ಮತ್ತು ನ್ಯಾಯಾಲಯ ಆಕೆಯ ನಿರ್ಧಾರವನ್ನು ತನ್ನ ನಿರ್ಧಾರದಿಂದ ಬದಲಿಸಬಾರದು’’ ಎಂದು ಭಿನ್ನ ತೀರ್ಪು ನೀಡಿದ್ದರು.

ಮುಖ್ಯ ನ್ಯಾ. ಗವಾಯಿ ಅವರ ತಾಯಿ ಕಮಲಾತಾಯಿ, ‘‘ನಾವು ಬುದ್ಧನ ಅನುಯಾಯಿ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ’’ ಎಂದ ಸ್ಪಷ್ಟವಾಗಿ ಹೇಳಿದರು. ನ್ಯಾ. ಗವಾಯಿ ಅವರು ನವೆಂಬರ್ 23, 2025ರಲ್ಲಿ ನಿವೃತ್ತರಾಗಲಿದ್ದಾರೆ; ನ್ಯಾ. ನಾಗರತ್ನ ಅವರು ಅಕ್ಟೋಬರ್ 29, 2027ರವರೆಗೆ ಸುಪ್ರೀಂ ಕೋರ್ಟಿನಲ್ಲಿ ಇರಲಿದ್ದಾರೆ. ತಮ್ಮ ತೀರ್ಪುಗಳ ಮೂಲಕ ಭರವಸೆ ಮೂಡಿಸಿರುವ ಅವರು, ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೋರಾಟ ಮುಂದುವರಿಸುತ್ತಾರೆ ಹಾಗೂ ಸಂವಿಧಾನಕ್ಕೆ ಧಕ್ಕೆ ತರಲು ಬಿಡುವುದಿಲ್ಲ ಎಂದು ನಿರೀಕ್ಷಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News