×
Ad

ರಾಯಚೂರು ಸಿಟಿಗೆ ಕ್ವಾಲಿಟಿ ನೀರು ಪೂರೈಕೆಯಾಗಲಿ: ಸಚಿವ ಭೈರತಿ ಸುರೇಶ್ ‌ಸೂಚನೆ

ಪ್ರಗತಿ ಪರಿಶೀಲನಾ ಸಭೆ

Update: 2025-12-04 14:17 IST

ರಾಯಚೂರು:  ರಾಯಚೂರು ಸಿಟಿಗೆ ಕ್ವಾಲಿಟಿ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ಅವರು ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ‌ ಸೂಚನೆ ನೀಡಿದರು.

ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.3ರಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜನರ ಆರೋಗ್ಯ ತುಂಬಾ ಮುಖ್ಯ. ಜನತೆಗೆ ಶುದ್ಧ ಮತ್ತು ಸಕಾಲಕ್ಕೆ ನೀರು ಕೊಡುವುದು ನಮ್ಮ ಆದ್ಯ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ  ಯೋಚಿಸಿ ಪಾಲಿಕೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕನಿಷ್ಟ 40 ಲಕ್ಷ ರೂ.ಗಳನ್ನು ಕುಡಿಯುವ ನೀರಿನ ಲಿಕೇಜ್, ಪೈಪ್ ದುರಸ್ತಿಯಂತಹ ಬೇರೆ ಬೇರೆ ಕಾರ್ಯಗಳಿಗೆಂದೇ‌ ಮೀಸಲಿರಿಸಿ, ಶುದ್ಧ ನೀರು ಪೂರೈಕೆಗೆ ಒತ್ತು ಕೊಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕುಡಿಯುವ ನೀರು ಪರೀಕ್ಷೆಯ ಬಗ್ಗೆ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಈ ವೇಳೆ ಪ್ರತಿ ದಿನ ಮೂರು ಬಾರಿ ಪರೀಕ್ಷೆಗೊಳಪಡಿಸಿಯೇ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದೇವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಪ್ರಯೋಗಾಲಯ ಕೇಂದ್ರದಲ್ಲಿ ಸಹ ನೀರನ್ನು ಪರೀಕ್ಷಿಸಿ ಸಿಟಿಗೆ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ತೆರಿಗೆ ವಸೂಲಾತಿಯಲ್ಲಿ ಪ್ರಗತಿ ತೋರಿದ್ದೀರಾ ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಮಹಾನಗರ ಪಾಲಿಕೆಯಿಂದ ರಾಯಚೂರು ಸಿಟಿ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ನಡೆಸಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ತೋರಿದ್ದೇವೆ ಎಂದು ರಾಯಚೂರು ಪಾಲಿಕೆಯ ಆಯುಕ್ತ ಜುಬಿನ್‌ ಮೊಹಪಾತ್ರ ಅವರು ಸಚಿವರಿಗೆ ತಿಳಿಸಿದರು.

ಪೌರ ಕಾರ್ಮಿಕರ ನೇಮಕಾತಿಗೆ ಕ್ರಮ: ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಗೆಗೇರಿದ ಬಳಿಕ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಸ್ತಾವನೆಯ ಬಗ್ಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಚಿವರ ಗಮನಕ್ಕೆ ತಂದರು. ಸಭೆಯಲ್ಲಿಯೇ, ಬೆಂಗಳೂರಿಗೆ ದೂರವಾಣಿ ಕರೆ ಮಾಡಿದ ಸಚಿವರು, ಪ್ರಸ್ತಾವನೆಯ ಬಗ್ಗೆ ಕೂಡಲೇ ಗಮನ ಹರಿಸಿ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಕ್ರಿಯೆಯನ್ನು ಸಂಜೆಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ‌ ನೀಡಿದರು.

ಸಿಟಿಯಲ್ಲಿ ಒತ್ತುವರಿ ತಡೆಯಬೇಕು: ರಾಯಚೂರು ಸಿಟಿ ವ್ಯಾಪ್ತಿಯಲ್ಲಿನ ಕೆರೆ ಜಾಗ, ಸ್ಮಶಾನ ಜಾಗ ಸೇರಿದಂತೆ ಯಾವುದೇ ಸಾರ್ವಜನಿಕ ಜಾಗವು, ಯಾವುದೇ ವ್ಯಕ್ತಿಗಳಿಂದ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರೊಂದಿಗೆ ಚರ್ಚೆ: ಸದ್ಯ ರಾಯಚೂರಿಗೆ ಒಟ್ಟು 52 ಎಂಎಲ್ ಡಿ ಪ್ರಮಾಣದ ನೀರು ಪೂರೈಕೆಯಾಗುತ್ತಿದ್ದು, ಇದು ಸಾಕಾಗುತ್ತಿಲ್ಲ. ರಾಯಚೂರು ಸಿಟಿಗೆ ಹೆಚ್ಚುವರಿಯಾಗಿ 20 ಎಂಎಲ್ ಡಿಯಷ್ಟು ನೀರು ಬೇಕಿದೆ. 3.20 ಲಕ್ಷ ಜನತೆಗೆ ಅನುಕೂಲವಾಗುವಂತೆ ಸಮರ್ಪಕ ನೀರು ಪೂರೈಕೆಗೆ ಕಾರ್ಯಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ ಎಂದು ನಗರ ಶಾಸಕರಾದ ಡಾ.ಶಿವರಾಜ ಎಸ್ ಪಾಟೀಲ ಅವರು ಸಚಿವರೊಂದಿಗೆ ಚರ್ಚಿಸಿದರು.

ಮೈಸೂರು ನಂತರ ರಾಯಚೂರು ಸಿಟಿ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು 36 ಸ್ಲಂಗಳಿದ್ದು, ಇಲ್ಲಿ 35 ವಸತಿಗಳಿದ್ದು, ಈ ಸ್ಲಮ್ ನಿವಾಸಿಗಳಿಗೆ ಪಾಲಿಕೆಯಿಂದ ಇ ಖಾತಾ ಪೂರೈಕೆಗೆ ಪರಿಶೀಲನೆ ನಡೆಸಬೇಕಿದೆ ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ಶಾವಂತಗೇರಿ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News