×
Ad

ಹಟ್ಟಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಆಗ್ರಹಿಸಿ ಮಹಿಳಾ ಆಯೋಗಕ್ಕೆ ಮನವಿ

Update: 2025-12-04 11:50 IST

ಲಿಂಗಸೂಗೂರು: ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ರಾಜಾರೋಷವಾಗಿ ಹೆಚ್ಚುತ್ತಿರುವ ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌, ಇಸ್ಪೀಟ್‌, ಗಾಂಜಾ ಮಾರಾಟ ಹಾಗೂ ಲಿಕ್ಕರ್‌ ಮಾಫಿಯಾ ಚಟುವಟಿಕೆಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿರುವುದರಿಂದ ಕೂಡಲೇ ಕಡಿವಾಣ ಹಾಕಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ‌ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರಿಗೆ ಹಟ್ಟಿ ಘಟಕದ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಪಟ್ಟಣದ ಹಲವು ಭಾಗಗಳಲ್ಲಿ ಇಂತಹ ಅಕ್ರಮ ದಂಧೆಗಳು ನಡೆಯುತ್ತಿರುವುದು ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಮಹಿಳೆಯರ ಸುರಕ್ಷತೆಗೂ ಗಂಭೀರ ಬೆದರಿಕೆಯಾಗಿದೆ. ಮಹಿಳೆಯರು ರಾತ್ರಿ ವೇಳೆಯಲ್ಲಿ ಸಂಚರಿಸುವುದಕ್ಕೂ ಭಯ ಅನುಭವಿಸುತ್ತಿದ್ದಾರೆ ಎಂದು ಸಂಘಟನಾಕಾರರು ಆತಂಕ ವ್ಯಕ್ತಪಡಿಸಿದರು.

ಈ ಅಕ್ರಮ ದಂಧೆಗಳ ನೇರ ಪರಿಣಾಮವಾಗಿ ಹಟ್ಟಿ ಪಟ್ಟಣದಲ್ಲಿ ಕಳ್ಳತನ, ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. ಮಟ್ಕಾ, ಬೆಟ್ಟಿಂಗ್‌, ಗಾಂಜಾ ಹಾಗೂ ಲಿಕ್ಕರ್ ಮಾಫಿಯಾಗಳ ಬಲೆಗೆ ಸಿಲುಕಿರುವ ಯುವಕರು ದಿನನಿತ್ಯದ ಖರ್ಚಿಗೆ ಹಣದ ಅವಶ್ಯಕತೆ ಬಿದ್ದಾಗ ಕಳ್ಳತನ, ರಾಬರಿ, ಕೊಲೆ-ಸುಲಿಗೆಗಳ ಕಡೆ ತಿರುಗುವುದು ಸಾಮಾನ್ಯ ಘಟನೆವಾಗುತ್ತಿದೆ ಎಂದು ಆರೋಪಿಸಿದರು.

ಪಟ್ಟಣದ ಪೋಲಿಸ್ ಠಾಣೆಯ ಕೂಗಳತೆ ದೂರದಲ್ಲೇ ಮುಖ್ಯ ರಸ್ತೆಯಲ್ಲಿ ‌ಮಟ್ಕಾ ಆಡುತ್ತಿದ್ದರೂ ಯಾವುದೇ ಕ್ರಮಗೊಂಡಿಲ್ಲ ಹಾಗೂ ತೊಂದರೆ ಹೇಳಿಕೊಂಡು ಠಾಣೆಗೆ ಬಂದ ಕುಟುಂಬಸ್ಥರ ಮೇಲೆಯೇ ಕೆಲವೊಮ್ಮೆ ಠಾಣೆಯ ಸಿಬ್ಬಂದಿ ದೌರ್ಜನ್ಯವೆಸಗಿರುವ ಘಟನೆಗಳು ಠಾಣೆಯಲ್ಲಿ ನಡೆದಿವೆ. ಕೂಡಲೇ ಪಟ್ಟಣದ ಶಾಂತಿ, ಮಹಿಳೆಯರ ಭದ್ರತೆ ಮತ್ತು ಯುವಕರ ಭವಿಷ್ಯಕ್ಕಾಗಿ ತಕ್ಷಣವೇ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ.

ಈ ವೇಳೆ ಸಾಹೇರಾ ಬೇಗಂ, ರಮೇಶ ವೀರಾಪುರ, ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News