×
Ad

ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸಲು ತಳಮಟ್ಟದಿಂದ ಕೈಜೋಡಿಸಿದರೆ ಮಾತ್ರ ತಾಲೂಕು ಅಭಿವೃದ್ಧಿ ಕಾಣಲು ಸಾಧ್ಯ: ಶಾಸಕಿ ಕರೆಮ್ಮ ಜಿ. ನಾಯಕ

Update: 2025-12-04 00:30 IST

ದೇವದುರ್ಗ: ತಾಲೂಕಿನ ಪ್ರತಿ ಗ್ರಾಮ, ಹಳ್ಳಿ, ತಾಂಡಗಳಲ್ಲಿರುವ ಕನಿಷ್ಟ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಜನರಿಗೆ ನೀಡಲು ತಳಮಟ್ಟದಿಂದ ಅಂದರೆ ಗ್ರಾಮ ಪಂಚಾಯತ್ ಮಟ್ಟದಿಂದ ಕೈಜೋಡಿಸಿದರೆ ಮಾತ್ರ ತಾಲೂಕು ಅಭಿವೃದ್ಧಿ ಕಾಣಲು ಸಾಧ್ಯವೆಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.

ಅವರು ಮಂಗಳವಾರದಂದು ತಾಲೂಕ್ ಪಂಚಾಯತ್ ಆವರಣದಲ್ಲಿ ನಡೆದ ದೇವದುರ್ಗ ಮತ್ತು ಅರಕೇರ ಅವಳಿ ತಾಲೂಕಿನ 2026-27ನೇ ಸಾಲಿನ ತಾಲೂಕು ಪಂಚಾಯತ್ ವಾರ್ಷಿಕ ಕರಡು ಅಭಿವೃದ್ಧಿ ಯೋಜನಾ ಸಭೆಯಲ್ಲಿ ಮಾತನಾಡಿದರು.

ಅರಕೇರ ತಾಲೂಕಿನ 18 ಗ್ರಾಮ ಪಂಚಾಯತಗಳು ಮತ್ತು ದೇವದುರ್ಗ ತಾಲೂಕಿನ 15 ಗ್ರಾಮ ಪಂಚಾಯತಗಳ ಹಾಗು ದೇವದುರ್ಗ ಪುರಸಭೆ ವ್ಯಾಪ್ತಿಯ ವಿವಿಧ ಇಲಾಖೆಗಳ ವಿವಿಧ ಕಾಮಗಾರಿಗಳ ಕರಡು ಯೋಜನೆಗಳು ತಯಾರಿಸಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಆದರೆ ಪ್ರತಿ ಹಳ್ಳಿಯ, ಗ್ರಾಮ, ವಾರ್ಡ್‍ಗಳಲ್ಲಿ ಸಭೆಗಳನ್ನು ಮಾಡಿ ಕ್ರೀಯಾ ಯೋಜನೆ ರೂಪಿಸಿದ್ದರೂ ಪ್ರತಿ ಗ್ರಾಮದಲ್ಲಿ ಜನರು ನನಗೆ ಸಮಸ್ಯೆಗಳನ್ನು ನನಗೆ ಹೇಳುತ್ತಾರೆ. ಗ್ರಾಮಗಳ ಅಭಿವೃದ್ಧಿಗೆ ಸರಕಾರ ನೀಡಿದ ಹಣ ಖರ್ಚು ಆಗಿ ದಾಖಲೆಗಳಲ್ಲಿ ಮಾತ್ರ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾತಿಯ ಮಹಿಳಾ ಅಧ್ಯಕ್ಷರು ಮುಂದೆ ಬಂದು ಪ್ರತಿಹಳ್ಳಿಗೆ ಖುದ್ದಾಗಿ ಹೋಗಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಮಹಿಳಾ ಅಧ್ಯಕ್ಷರು ಪತಿ, ಅಣ್ಣ ಇತರರಿಗೆ ಅವಕಾಶ ನೀಡದೇ ನೀವು ಖುದ್ದಾಗಿ ಹೋಗಿ ಅವಶ್ಯಕತೆ ಇದ್ದರೆ ನನಗೆ ಸಂಪರ್ಕ ಮಾಡಿ. ನಾನು ನಿಮ್ಮ ಜತೆಯಲ್ಲಿ ಬರುತ್ತೇನೆಂದು ಮಹಿಳಾ ಅಧ್ಯಕ್ಷರಿಗೆ ಧೈರ್ಯ ಹೇಳಿದರು.

2026-27ನೇ ಸಾಲಿನ ದೇವದುರ್ಗ ವಿಧಾನಸಭಾ ಕ್ಷೇತ್ರದ ಅರಕೇರ ಮತ್ತು ದೇವದುರ್ಗ ತಾಲೂಕಿನಲ್ಲಿ ಈಗಾಗಲೇ ಗ್ರಾಮ ಪಂಚಾಯತಿಗಳ ವಾರ್ಷಿಕ ಕರಡು ಯೋಜನೆ ಮಾಡಲು ರಾಜ್ಯ ಸರಕಾರದ ಆದೇಶದನ್ವಯ ಕ್ರೀಯಾ ಯೋಜನೆ ಮಾಡಿದ್ದು, ಆದರೆ ಇನ್ನೂ ಹಲವಾರು ಸಮಸ್ಯೆಗಳಿದ್ದು, ಗ್ರಾಮಗಳಲ್ಲಿರುವ ಮಹಿಳಾ ಶೌಚಾಲಯಗಳು, ರಸ್ತೆ, ಶಾಲಾ ಕೌಂಪೌಂಡ್, ಸೇರಿದಂತೆ ಇಲಾಖೆಯ ಮಾನದಂಡ ಒಳಗೊಂಡ ಕ್ರೀಯಾ ಯೋಜನೆ ಮಾಡಿ ಜಿಲ್ಲಾ ಮತ್ತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು. ದೇವದುರ್ಗ ಮತ್ತು ಅರಕೇರ ತಾಲೂಕಿನ ತಹಶೀಲ್ದಾರರಾದ ನಾಗಮ್ಮ ಕಟ್ಟಿಮನಿ, ಅರಮೇಶ ಬಿರಾದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಹಟ್ಟಿ, ಅಣ್ಣರಾವು, ಅರಕೇರ ಆಡಳಿತಾಧಿಕಾರಿ ರಾಜೇಂದ್ರ ಕುಮಾರ ಮಾತನಾಡಿದರೆ, ಗ್ರಾಮ ಪಂಚಾಯತ ಅಧ್ಯಕ್ಷರು ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ:

ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದೇ ಇದ್ದರೆ ಬೇರೆ ತಾಲೂಕಿಗೆ ಹೋಗಿ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಇವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಕರಿಗುಡ್ಡ ಗ್ರಾಮ ಪಂಚಾಯತಿಯ ಪಿ.ಡಿ.ಒ. ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದ ಘಟನೆ ನಡೆಯಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News