ಸಿಂಧನೂರು ಜಿಲ್ಲಾ ಕೇಂದ್ರಕ್ಕಾಗಿ ವಿಶೇಷ ಅಧಿವೇಶನದಲ್ಲಿ ಧ್ವನಿ ಎತ್ತಲು ಕರವೇ ರಾಮಕೃಷ್ಣ ಭಜಂತ್ರಿ ಒತ್ತಾಯ
ಸಿಂಧನೂರು: ಇದೇ ಜನವರಿ 22ರಿಂದ 31ರವರೆಗೆ ನಡೆಯುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ‘ಸಿಂಧನೂರು ಜಿಲ್ಲೆ’ ರಚನೆಗೆ ಕುರಿತು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಧ್ವನಿ ಎತ್ತಬೇಕು ಹಾಗೂ ಮಾಜಿ ಸಚಿವರು, ಶಾಸಕರು, ಸಂಸದರೂ ಕೂಡ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿಂಧನೂರು ತಾಲೂಕು ಕೇಂದ್ರ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಕಲಬುರಗಿ ಜಿಲ್ಲೆಗಳ ಮಧ್ಯಭಾಗದಲ್ಲಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದುವ ಮೂಲಕ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ವಿಶಿಷ್ಠತೆಯನ್ನು ಹೊಂದಿದ್ದು, ತಾಲೂಕಿನಲ್ಲಿ ವಿವಿಧ ರಾಜ್ಯಗಳ ವಿವಿಧ ಸಂಸ್ಕೃತಿಗಳ ಜನರು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಡಿಪ್ಲೊಮಾ ಕಾಲೇಜು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಅಗತ್ಯತೆ ಇದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಹಾಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಧ್ವನಿ ಎತ್ತುವುದರಿಂದ ಸರ್ಕಾರದ ಗಮನ ಸೆಳೆಯಬಹುದಾಗಿದೆ. ಅಲ್ಲದೇ ಮಾಜಿ ಸಚಿವರು, ಶಾಸಕರು ಹಾಗೂ ಸಂಸದರು ಸರ್ಕಾರಕ್ಕೆ ಪತ್ರ ಬರೆದು ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಬೇಕು ಎಂದು ರಾಮಕೃಷ್ಣ ಭಜಂತ್ರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಗೌಡ, ತಾಲೂಕು ಅಧ್ಯಕ್ಷ ಎಲ್.ರಾಜಾಸಾಬ್ ಗಾಂಧಿನಗರ, ನಗರ ಘಟಕದ ಅಧ್ಯಕ್ಷ ಆರ್.ಎಕ್ಸ್.ಸುರೇಶ, ತಾಲೂಕು ಉಪಾಧ್ಯಕ್ಷ ಬಸವರಾಜ, ಎಸ್.ಎಸ್.ಪಾಷಾ ಇನ್ನಿತರರು ಇದ್ದರು