ಸಿಂಧನೂರು | ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪಿಸಲು ಒತ್ತಾಯಿಸಿ ಎಸ್‌ವೈಎಂನಿಂದ ಮನವಿ
ಸಿಂಧನೂರು: ರಾಜ್ಯದ ಕೋಟ್ಯಂತರ ಯುವಜನರ ಹಿತರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಸುಧಾರಣೆಗಾಗಿ 'ಕರ್ನಾಟಕ ರಾಜ್ಯ ಯುವ ಆಯೋಗ'ವನ್ನು ತಕ್ಷಣವೇ ಸ್ಥಾಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ತಾಲೂಕು ಸಮಿತಿ ಶನಿವಾರ ಒತ್ತಾಯಿಸಿದೆ.
ಈ ಕುರಿತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಲಾಯಿತು.
ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಯುವಜನಸಂಖ್ಯೆಯಿದ್ದು, ಅವರು ಶಿಕ್ಷಣ, ನಿರುದ್ಯೋಗ, ಮಾನಸಿಕ ಒತ್ತಡ ಹಾಗೂ ಮಾದಕ ವ್ಯಸನದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. 2022 ರಿಂದ 2025ರ ನವೆಂಬರ್‌ವರೆಗೆ ರಾಜ್ಯದಲ್ಲಿ ದಾಖಲಾದ 9,450 ಆತ್ಮಹತ್ಯೆ ಪ್ರಕರಣಗಳಲ್ಲಿ ಬಹುಪಾಲು ಯುವಜನರದ್ದೇ ಆಗಿರುವುದು ಆತಂಕಕಾರಿ ವಿಷಯ ಎಂದು ಸಂಘಟಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
2022ರ ರಾಜ್ಯ ಯುವ ನೀತಿ ಜಾರಿಯಲ್ಲಿದ್ದರೂ, ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಲು ಮತ್ತು ಯುವಜನರ ಅಹವಾಲುಗಳನ್ನು ಆಲಿಸಲು ಕಾನೂನುಬದ್ಧ ಸಂಸ್ಥೆಯ ಕೊರತೆಯಿದೆ. ಕೇರಳ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಆಯೋಗ ರಚನೆಯಾಗಬೇಕು. ಮಾದಕ ವಸ್ತು ತಡೆ, ನಾಯಕತ್ವ ಅಭಿವೃದ್ಧಿ ಹಾಗೂ ಉದ್ಯೋಗ ಮಾರ್ಗದರ್ಶನ ನೀಡಲು ಈ ಆಯೋಗವು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಲಾಗಿದೆ.
ಯುವಜನರಲ್ಲಿ ಕಂಡುಬರುತ್ತಿರುವ ಶೇ. 30ರಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನೀಗಿಸಲು ಹಾಗೂ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರವು ಈ ಕೂಡಲೇ ಶಾಸನಾತ್ಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ವಸಿಮ್ ಹಾಗೂ ತಾಲೂಕು ಅಧ್ಯಕ್ಷ ಅಬುಲೈಸ್ ನಾಯಕ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ವಿದ್ಯಾರ್ಥಿ ಸಂಘಟನೆಯ ಚಾಂದ್‌ಪಾಷ, ಯುವ ಮುಖಂಡ ಸುಹೈಲ್ ದೇಸಾಯಿ, ಸಂಘಟನೆಯ ತಾಲೂಕು ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿಗಳಾದ ನಯಿಮ್ ಇರ್ಫಾನ್, ಮುಸ್ತಾಕ್, ಅಝರ್, ಶಬೀರ್, ಆಸಿಫ್, ಫಾರೂಕ್, ರಿಯಾಝ್, ಯಾಸೀನ್ ಮುಲ್ಲಾ ಇನ್ನಿತರರಿದ್ದರು.