ಅರಕೇರಾ | ಹಸುವಿನ ಮೇಲೆ ಚಿರತೆ ದಾಳಿ
Update: 2025-11-02 20:12 IST
ಅರಕೇರಾ: ಹಸವಿನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಹಿರೇಗುಡ್ಡದಯ್ಯ ದೇವಸ್ಥಾನದ ಸಮೀಪದ ಸರ್ಕಾರಿ ಪ್ರೌಢಶಾಲೆಯ ಬಳಿ ನಡೆದಿದೆ.
ರೈತ ಭೀಮಣ್ಣ ಗುಂತಗೋಳ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಚಿರತೆ ಶನಿವಾರ ಮಧ್ಯರಾತ್ರಿ ದಾಳಿ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಎಚ್ಚರಿಕೆಯಿಂದ ಇರಲು ಹಾಗೂ ಮಕ್ಕಳನ್ನು ಶಾಲೆಗೆ ಹೋಗುವ ವೇಳೆ ಸುರಕ್ಷಿತವಾಗಿ ಕಳುಹಿಸಲು ಡಂಗೂರ ಸಾರಲಾಗಿದೆ.
ಚಲನವಲನ ಪತ್ತೆ ನಂತರ ಬೋನ್ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ದೇವದುರ್ಗ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಅಲಿವುದ್ದೀನ್ ತಿಳಿಸಿದ್ದಾರೆ.