ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ: ಸಂಸದ ಜಿ ಕುಮಾರ್ ನಾಯಕ್
ರಾಯಚೂರು: ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಬಡವರು, ಮಧ್ಯಮ ವರ್ಗದವರು, ರೈತರು, ಕಾರ್ಮಿಕರು ಹಾಗೂ ಯುವಜನತೆಗೆ ನೇರವಾಗಿ ಲಾಭವಾಗುವ ಯೋಜನೆಗಳಿಗೆ ಅಗತ್ಯ ಆದ್ಯತೆ ನೀಡಲಾಗಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯ ಅಸಮಾನತೆ ಎಂಬ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳಿಲ್ಲ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ್ ನಾಯಕ್‌ರವರು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಹತ್ವಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನರು ಈ ಬಾರಿ ಕೂಡ ಕೇಂದ್ರದ ಬಜೆಟ್ ನಿಂದ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಜಿಲ್ಲೆಗೆ ಮಂಜೂರು ಮಾಡಬೇಕಾದಂತಹ ಏಮ್ಸ್ ಆಸ್ಪತ್ರೆಯನ್ನು ಈ ಬಾರಿಯೂ ಕೂಡ ಬಜೆಟ್‌ನಿಂದ ಕೈಬಿಟ್ಟಿದ್ದು, ಈ ಭಾಗಗಳಲ್ಲಿ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಕೈಗಾರಿಕೆಗಳ ಸ್ಥಾಪಿಸುವ ಕುರಿತು ಯಾವುದೇ ರೀತಿಯ ವಿಶೇಷ ಘೋಷಣೆಗಳಿಲ್ಲ. ಇದು ಕೇವಲ ಹೆಸರಿಗಷ್ಟೇ ಮಹತ್ವಾಕಾಂಕ್ಷೆ ಜಿಲ್ಲೆ ಎಂಬುದು ಈಗ ದೃಢವಾಗಿದೆ ಎಂದು ಹೇಳಿದರು.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕುರಿತು ಸ್ಪಷ್ಟತೆ ಇಲ್ಲ. ಯುವಕರ ಉದ್ಯೋಗ ಸೃಷ್ಟಿಗೆ ಯಾವುದೇ ದೃಢ ಯೋಜನೆ ಇಲ್ಲ. ದೇಶದ ಜನರ ಹಿತಾಸಕ್ತಿಯನ್ನು ಕಾಪಾಡುವ ಬಜೆಟ್‌ನ್ನು ತರುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದು ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಮ್ಮ ಸಂಸದ ಜಿ ಕುಮಾರ್ ನಾಯಕ್ ಹೇಳಿದರು.