×
Ad

ರಾಯಚೂರು | ಎಸ್‌ಟಿ ಹಕ್ಕು ರಕ್ಷಣೆಗೆ ಆಗ್ರಹ: ಫೆ.2 ರಿಂದ ಎಸ್‌ಟಿ ಶಾಸಕರ ಮನೆ ಮುಂದೆ ಪ್ರತಿಭಟನೆ

Update: 2026-01-30 22:23 IST

ರಾಯಚೂರು : ಪರಿಶಿಷ್ಟ ಪಂಗಡದ ಜನರ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಫೆ.2ರಿಂದ 6ರವರೆಗೆ ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗೆದ್ದಿರುವ ಪರಿಶಿಷ್ಟ ಪಂಗಡದ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರು ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸಮಾನತೆ ಹಕ್ಕಿನಡಿ ಪರಿಶಿಷ್ಟ ಪಂಗಡದ 51 ಉಪಜಾತಿಗಳಿಗೆ ಮೀಸಲಾತಿ ನೀಡಲಾಗಿದ್ದರೂ, ಮೀಸಲಾತಿಯಿಂದ ಗೆದ್ದು ಶಾಸಕರಾದವರು ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸದೇನದಲ್ಲೂ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿಯ ದುರ್ಬಳಕೆ ನಡೆಯುತ್ತಿದ್ದು, ಇದ್ರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಹಿಂದುಳಿದ ವರ್ಗಗಳಲ್ಲಿರುವ ಕೆಲ ಜಾತಿಗಳಿಂದ ಸుమಾರು 2.5 ಲಕ್ಷಕ್ಕೂ ಹೆಚ್ಚು ಮಂದಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿ ಸ್ಥಗಿತಗೊಂಡಿದೆ. ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರೋತ್ಸಾಹ ಧನ ಹಾಗೂ ಸಹಾಯಧನ ನೀಡಲಾಗುತ್ತಿಲ್ಲ. ಪಿಎಚ್‌ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಹಾಗೂ ವಸತಿ ಭತ್ಯೆ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.

ಫೆ.2 ರಂದು ದೇವದುರ್ಗ ಶಾಸಕರ ಮನೆ ಮುಂದೆ, ಫೆ.3 ರಂದು ಸುರುಪುರ ಶಾಸಕರ ಮನೆ ಮುಂದೆ, 4 ರಂದು ರಾಯಚೂರು ಗ್ರಾಮೀಣ ಶಾಸಕರ ಮನೆ ಮುಂದೆ, 5 ರಂದು ಮಾನ್ವಿ, 6 ರಂದು ಮಸ್ಕಿ ಶಾಸಕ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ಎಸ್‌ಟಿ ನಿಗಮದಲ್ಲಿ ಹಣವಿಲ್ಲದ ಸ್ಥಿತಿ ನಿರ್ಮಿಸಿದೆ ಎಂದು ಆರೋಪಿಸಿದ ಅವರು, ಸಮಾಜದ ಕೆಲ ಶಾಸಕರೇ ಅನುದಾನದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು. ಪ್ರತ್ಯೇಕ ಸಚಿವಾಲಯ ಇದ್ದರೂ ಸಚಿವರಾಗಿದ್ದ ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭು ಹುಲಿನಾಯಕ, ರಾಚಣ್ಣ ನಾಯಕ, ಮಾನಸಯ್ಯ ನಾಯಕ, ದೊಡ್ಡಯ್ಯ ನಾಯಕ, ಶರಣಪ್ಪ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News