×
Ad

ರಾಯಚೂರು | ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ

ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತಗಳಲ್ಲಿ ಜೀವ ಹಾನಿ : ಜಿಲ್ಲಾಧಿಕಾರಿ ನಿತಿಶ್ ಕೆ.

Update: 2026-01-31 21:04 IST

ರಾಯಚೂರು : ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಜೀವ ರಕ್ಷಣೆ ಮತ್ತು ಕುಟುಂಬದ ಭದ್ರತೆಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್.ಕೆ. ಅವರು ಹೇಳಿದರು.

ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಕಚೇರಿ ಹಾಗೂ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಹೆಲ್ಮೆಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅನೇಕ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ್ದ ಕಾರಣ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಹೆದ್ದಾರಿ ಹಾದು ಹೋಗುತ್ತಿರುವುದರಿಂದ ಲಾರಿ, ಟಿಪ್ಪರ್ ಸೇರಿದಂತೆ ಭಾರಿ ವಾಹನಗಳ ಸಂಚಾರ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಹೆಲ್ಮೆಟ್ ಧರಿಸದಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದರು.

ನಗರದ ಒಳಭಾಗದಲ್ಲಿ ಭಾರಿ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ರಿಂಗ್ ರಸ್ತೆಯ ಮೂಲಕ ವಾಹನ ಸಂಚಾರ ವ್ಯವಸ್ಥೆ ರೂಪಿಸುವ ಕಾರ್ಯ ಈಗಾಗಲೇ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು. ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಆದ್ದರಿಂದ ಕುಟುಂಬದ ಆಧಾರವಾಗಿರುವ ಪ್ರತಿಯೊಬ್ಬ ಚಾಲಕನು ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಲೇಬೇಕು ಎಂದು ಮನವಿ ಮಾಡಿದರು.

ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಎ. ಸಾತ್ವಿಕ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 500 ಹೆಲ್ಮೆಟ್‌ಗಳನ್ನು ವಿತರಿಸಲಾಗುತ್ತಿದೆ. ಹೆಲ್ಮೆಟ್ ಪಡೆದವರು ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್ ಪಡೆದವರ ಹೆಸರು ಮತ್ತು ವಿಳಾಸ ದಾಖಲಿಸಿಕೊಂಡಿದ್ದು, ಹೆಲ್ಮೆಟ್ ಧರಿಸದೆ ಸಿಕ್ಕಲ್ಲಿ ದಂಡದ ಜೊತೆಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮಹೋಪಾತ್ರ ಮಾತನಾಡಿ, ಯುವಕರು ಬೈಕ್ ವೀಲಿಂಗ್ ಮಾಡುತ್ತಿರುವುದು ಅಪಾಯಕಾರಿ ಪ್ರವೃತ್ತಿ. ಇಂತಹ ಸಾಹಸಗಳಿಂದ ಜೀವಕ್ಕೆ ಅಪಾಯ ಎದುರಾಗುತ್ತದೆ, ಯುವಕರು ಇದನ್ನು ತಕ್ಷಣವೇ ಬಿಡಬೇಕು ಎಂದರು. ರಸ್ತೆ ಅಪಘಾತ ಕಡಿವಾಣಕ್ಕಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಡಿವೈಎಸ್‌ಪಿ ಶಾಂತವೀರ ಮಾತನಾಡಿ, ಮೊಬೈಲ್ ರಕ್ಷಿಸಲು ಕವರ್ ಬಳಸುವಂತೆ ಜೀವ ರಕ್ಷಿಸಲು ಹೆಲ್ಮೆಟ್ ಬಳಸಬೇಕು. ರಸ್ತೆ ಅಪಘಾತಗಳಲ್ಲಿ ಶೇ.70ರಷ್ಟು ಸಾವುಗಳು ಹೆಲ್ಮೆಟ್ ಇಲ್ಲದ ಕಾರಣವೇ ಸಂಭವಿಸುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭಾವನೇಶ ಕುಮಾರ ಗುಪ್ತಾ, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಪ್ರಭಾರಿ ರಿಜಿಸ್ಟ್ರಾರ್ ಗುರುರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News