×
Ad

ರಾಯಚೂರು | ಉದ್ಯೋಗ ಖಾತ್ರಿ ಕಾಯ್ದೆ ಬದಲಾವಣೆ ವಾಪಸ್ ಪಡೆಯುವಂತೆ ಆಗ್ರಹಿಸಿ ಸಿಪಿಐ(ಎಂ) ವತಿಯಿಂದ ಪ್ರತಿಭಟನೆ

Update: 2026-01-31 19:45 IST

ರಾಯಚೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ, ಅದನ್ನು ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ, ಹಳೆಯ ಕಾಯ್ದೆಯನ್ನು ಪುನಃ ಜಾರಿಗೊಳಿಸುವಂತೆ ಒತ್ತಾಯಿಸಿ ಸಿ.ಪಿ.ಐ(ಎಂ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, 2004–05ರಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ಕಾಯ್ದೆಯ ಮೇಲೆ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಸೇರಿದಂತೆ ಶೇ.30ಕ್ಕೂ ಹೆಚ್ಚು ಗ್ರಾಮೀಣ ಜನರು ಜೀವನೋಪಾಯಕ್ಕಾಗಿ ಅವಲಂಬಿತರಾಗಿದ್ದರು ಎಂದು ಹೇಳಿದರು.

ಆದರೆ, 2025ರಲ್ಲಿ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯ ಹಕ್ಕುಸ್ವರೂಪವನ್ನು ರದ್ದುಗೊಳಿಸಿ ‘ವಿಕಸಿತ ಭಾರತ ರೋಜ್ಗಾರ ಮತ್ತು ಆಜೀವಿಕ ಮಿಷನ್ – ಗ್ರಾಮೀಣ ಖಾತ್ರಿ’ ಎಂಬ ಹೊಸ ಕಾಯ್ದೆಯನ್ನು ಜಾರಿಗೊಳಿಸಿದೆ, ಇದು ಕೂಲಿಕಾರರ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಕಾಯ್ದೆಯಿಂದ 125 ದಿನಗಳ ಉದ್ಯೋಗ ಖಾತರಿ ಇಲ್ಲದಂತಾಗಿದ್ದು, 60 ದಿನಗಳ ಕೃಷಿ ಕೆಲಸದ ನಿರ್ಬಂಧದಿಂದ ಅನೇಕ ಕೂಲಿಕಾರರು ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚ ಭರಿಸಬೇಕೆಂಬ ನಿಯಮದಿಂದ ಹಣ ಬಿಡುಗಡೆ ವಿಷಯದಲ್ಲಿ ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಹೊಣೆಗಾರಿಕೆ ತಳ್ಳಾಟ ನಡೆಯುವ ಸಾಧ್ಯತೆ ಇದ್ದು, ಇದರಿಂದ ಕೂಲಿಕಾರರಿಗೆ ಕೂಲಿ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರೋಪಿಸಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ಅನುಮೋದನೆ ಪಡೆದ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಮಾತ್ರ ಉದ್ಯೋಗ ಖಾತರಿ ಜಾರಿಗೊಳಿಸುವ ನಿಯಮ ಕೂಲಿಕಾರರ ಹಕ್ಕುಗಳನ್ನು ಕುಗ್ಗಿಸುತ್ತದೆ. ಕೂಲಿ ದರವನ್ನು ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸುವ ಅವಕಾಶವನ್ನೂ ಹೊಸ ಕಾಯ್ದೆ ತಳ್ಳಿಹಾಕುತ್ತಿದೆ. ಇದರಿಂದ ಕೂಲಿಕಾರರು ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಆದ್ದರಿಂದ 2025ರ ಹೊಸ ಕಾಯ್ದೆಯನ್ನು ಹಿಂಪಡೆದು, 2005ರ ಮನರೇಗಾ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ, ಜಿಲ್ಲಾ ಸಮಿತಿ ಸದಸ್ಯರಾದ ಹೆಚ್. ಪದ್ಮಾ, ಶ್ರೀಧರ, ಡಿ.ಎಸ್. ಶರಣಬಸವ, ಹೆಚ್. ಶರ್ಪುದ್ದೀನ್, ಹನುಮಂತ ಮಟಮಾರಿ, ಸತ್ಯಪ್ಪ, ವರಲಕ್ಷ್ಮೀ, ಮಹಾದೇವಿ, ಸುಜಾತ, ನರಸಮ್ಮ, ಸರೋಮ್ಮ, ರಂಗಮ್ಮ, ಮಹಾಂತಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News