ರಾಯಚೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಅಗತ್ಯ: ನ್ಯಾ. ಮಾರುತಿ ಬಾಗಡೆ
ರಾಯಚೂರು, ಜ.30: ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅತ್ಯಾವಶ್ಯಕ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಬಾಗಡೆ ಅವರು ಹೇಳಿದರು.
ಜನವರಿ 30ರಂದು (ಶುಕ್ರವಾರ) ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ರೋಟರಿ ಕ್ಲಬ್, ರೋಟರಿ ಕ್ಲಬ್ ಕೃಷ್ಣ ತುಂಗಾ ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ–ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಫೋನ್ ಬಳಕೆ, ಅತಿವೇಗದ ಚಾಲನೆ ಇವುಗಳಿಂದ ಅನೇಕ ಸಾವು–ನೋವುಗಳು ಸಂಭವಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಯುವಕರು ಹಾಗೂ ಮಕ್ಕಳು ಅತಿವೇಗದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯಿಂದ ಆಕಸ್ಮಿಕ ಅಪಘಾತಗಳು ಸಂಭವಿಸಿ ಜೀವ ಹಾನಿ ಉಂಟಾಗುತ್ತಿದೆ ಎಂದು ಅವರು ಹೇಳಿದರು.
ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನ್ಯಾಯಾಲಯಕ್ಕೆ ಬರುವ ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಅಥವಾ ಅಂಗಾಂಗಗಳನ್ನು ಕಳೆದುಕೊಂಡಿರುವ ಪ್ರಕರಣಗಳೇ ಹೆಚ್ಚು. ಒಂದು ಸಾವಿರ ರೂ. ವೆಚ್ಚದ ಬಗ್ಗೆ ಯೋಚಿಸದೇ ಹೆಲ್ಮೆಟ್ ಖರೀದಿ ಮಾಡಿ ಧರಿಸಿದರೆ ಅಮೂಲ್ಯ ಜೀವ ಉಳಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೃಷ್ಣ ತುಂಗಾ ಅಧ್ಯಕ್ಷ ಪವನಕುಮಾರ್ ಕಿಶೋರ್ ಪಾಟೀಲ ಮಾತನಾಡಿ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ತಮ್ಮ ಜೀವದ ಜೊತೆಗೆ ಕುಟುಂಬದವರನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಬಿಸಿಲಿನ ಕಾರಣಕ್ಕೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಜೀವಕ್ಕಿಂತ ಬಿಸಿಲು ಮುಖ್ಯವಲ್ಲ. ಹೆಲ್ಮೆಟ್ ಧರಿಸುವ ಮೂಲಕ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಡಿ. ಮಹಾವರಕರ್, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹತ್ತಿಕಾಳ್ ಪ್ರಭು ಸಿದ್ದಪ್ಪ, ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಸಿದ್ದರಾಮಪ್ಪ ಕಲ್ಯಾಣರಾವ್, ಅಪರ ಹಿರಿಯ ವ್ಯವಹಾರ ನ್ಯಾಯಾಧೀಶ ಸುಧೀನ್ ಕುಮಾರ್ ಡಿ.ಜೆ., 2ನೇ ಹೆಚ್ಚುವರಿ ಹಿರಿಯ ಶ್ರೇಣಿ ವ್ಯವಹಾರ ನ್ಯಾಯಾಧೀಶೆ ಶ್ರೀಮತಿ ಶ್ವೇತಾ ಸಿಂಗ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಎ. ಸಾತ್ವಿಕ್, 3ನೇ ಅಪರ ಹಿರಿಯ ವ್ಯವಹಾರ ನ್ಯಾಯಾಧೀಶೆ ಶ್ರೀಮತಿ ಕೃಪಾ ಸಿ.ಎಲ್., ಪ್ರಧಾನ ವ್ಯವಹಾರ ನ್ಯಾಯಾಧೀಶ ಚನ್ನಬಸಪ್ಪ ಆರ್. ಕೂಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಗುರುನಾಥ ರೆಡ್ಡಿ, ವಕೀಲರಾದ ಶಿವಶಂಕರ್, ರೋಟರಿ ಕ್ಲಬ್ ಕೃಷ್ಣ ತುಂಗಾ ಸದಸ್ಯರಾದ ಸಂಪತ್ತು ಕುಮಾರ್, ತಿರುಮಲ್ಲ ರೆಡ್ಡಿ, ಕೇಶವರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.