ರಾಯಚೂರು | ಫೆ.2, 3ರಂದು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬ
ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳ ಸಹಯೋಗದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಫೆ.2 ಮತ್ತು 3ರಂದು ಮಕ್ಕಳ ಹಬ್ಬವನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಸದಸ್ಯ ಕೃಷ್ಣ ಶಾವಂತಗೇರಾ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ಮಕ್ಕಳ ಹಬ್ಬಕ್ಕೆ ಪ್ರತಿ ತಾಲೂಕಿನಿಂದ ಐದು ವಾಹನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಕ್ಕಳಿಗಾಗಿ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಕ್ಕಳ ಹಬ್ಬದ ಅಂಗವಾಗಿ ರೋಬೋಟಿಕ್ ಶೋ, ಕುದ್ರೋಳಿ ಗಣೇಶರಿಂದ ಜಾದೂ ಪ್ರದರ್ಶನ, ನಾಲ್ಕು ಹಂತಗಳಲ್ಲಿ ಮುಖವಾಡ ತಯಾರಿ, ಗೂಡುದೀಪ್ ನಿರ್ಮಾಣ, ಮಣ್ಣಿನ ಮೂರ್ತಿ ತಯಾರಿಕಾ ಕಾರ್ಯಾಗಾರಗಳು ಆಯೋಜಿಸಲಾಗಿದೆ. ಫೆ.2ರಂದು ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಸಂಜೆ 4 ಗಂಟೆಗೆ ಮಾವಿನ ಕೆರೆ ಬಳಿ ಕೆರೆ ಹಬ್ಬ ನಡೆಯಲಿದ್ದು, ಪಟಾಕಿ ಪ್ರದರ್ಶನ, ಗಾಳಿಪಟ ಹಾರಾಟ, ವಿವಿಧ ಪ್ರದರ್ಶನಗಳು ನಡೆಯಲಿವೆ. ಅಲ್ಲದೇ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರದರ್ಶಿಸಲ್ಪಡಲಿವೆ. ಅಶೋಕ ಪಳಲಿ ಅವರಿಂದ ಕೋಳಿ ನೃತ್ಯ, ವರ್ಚುವಲ್ ಶೋಗಳು ಹಾಗೂ ಮಕ್ಕಳಿಗೆ ಅನೇಕ ಆಟಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಮಕ್ಕಳಿಗಾಗಿ ಐಸ್‌ಕ್ರೀಂ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ಹಣ ಪಾವತಿಸಿ ಪಡೆಯಬಹುದಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಸಹಕಾರದೊಂದಿಗೆ ಎರಡು ದಿನ ಮಕ್ಕಳಿಗೆ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಮಕ್ಕಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಯಟ್ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಭಂಡಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ಹಕ್, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಕೇಶವರೆಡ್ಡಿ, ರಾಜಾ ಶ್ರೀನಿವಾಸ, ಎಸ್.ಕೆ. ನಾಗಿರೆಡ್ಡಿ, ಶೇಖರ ರಾಂಪೂರ, ರವಿ ಮನ್ಸಲಾಪುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.