ರಾಯಚೂರು | ಬಾಲ್ಯ ವಿವಾಹ ನಿಷೇಧ ಜಾಗೃತಿ ಸಂಚಾರಿ ರಥಕ್ಕೆ ಹಸಿರು ನಿಶಾನೆ
ಮಕ್ಕಳು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಲಿ: ನ್ಯಾ.ಹೆಚ್.ಎ.ಸಾತ್ವಿಕ್
ರಾಯಚೂರು : ಬಾಲ್ಯ ವಿವಾಹ ನಿಷೇಧ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಸಂಚಾರಿ ರಥ ವಾಹನಕ್ಕೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ. ಸಾತ್ವಿಕ್ ಅವರು ಜ.31ರಂದು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹವು ಸಮಾಜದ ಅತ್ಯಂತ ಕೆಟ್ಟ ಪಿಡುಗಾಗಿದ್ದು, ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತದೆ ಎಂದು ಹೇಳಿದರು. ಬಾಲ್ಯ ವಿವಾಹವು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹಕ್ಕೆ ಮುಂದಾದವರು, ನಡೆಸಿದವರು ಹಾಗೂ ಬೆಂಬಲ ನೀಡುವವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ–2006ರಂತೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯಿದೆ ಎಂದು ಎಚ್ಚರಿಸಿದರು.
ಹುಡುಗಿಗೆ 18 ವರ್ಷ ಹಾಗೂ ಹುಡುಗನಿಗೆ 21 ವರ್ಷ ತುಂಬುವವರೆಗೆ ಯಾವುದೇ ಕಾರಣಕ್ಕೂ ವಿವಾಹ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಹಾವಿನ ಮಾತನಾಡಿ, ಮಕ್ಕಳು ಶಿಕ್ಷಣದತ್ತ ಹೆಚ್ಚಿನ ಒತ್ತು ನೀಡಿ ಶ್ರಮಪಟ್ಟು ಓದಿ, ತಂದೆ-ತಾಯಿಗಳ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ನಂತರ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಿಂದ ನಗರದ ಸ್ಟೇಷನ್ ವೃತ್ತದವರೆಗೆ ಸಂಚಾರಿ ರಥ ವಾಹನದ ಮೂಲಕ ಬಾಲ್ಯ ವಿವಾಹ ವಿರೋಧಿ ಜಾಥಾ ನಡೆಯಿತು. ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಪ್ರತಿಜ್ಞೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನವೀನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುದರ್ಶನ್, ಕಾಲೇಜಿನ ಪ್ರಾಚಾರ್ಯ ಕುಂಟೆಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಮಾರ್ಗದರ್ಶಿ ಸಂಸ್ಥೆಯ ಆನಂದರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.