ಸಿಜಿಕೆ ಒಂದು ಅದ್ಭುತ ಚೇತನ ಅವರೊಂದು ಪ್ರತೀಕ : ವೀರ ಹನುಮಾನ
ರಾಯಚೂರು, 28 : ಸಿಜಿಕೆ ಒಂದು ಅದ್ಬುತ ಚೇತನ ಅವರು ಎಲ್ಲರಿಗೂ ಪ್ರತೀಕವಾಗಿದ್ದರು. ಅವರು ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು 70-80 ರ ದಶಕದಲ್ಲಿ ಸಮುದಾಯದ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮ ಕೊಟ್ಟ ರಂಗ ದಿಗ್ಗಜ
ಅಂತ ವಿಶೇಷವಾದ ರಂಗ ನಿರ್ದೇಶಕರ ಹೆಸರಿನಲ್ಲಿ ರಂಗ ಪ್ರಶಸ್ತಿ ಕೊಡುತ್ತಿರುವುದು ಸಂತೋಷದ ವಿಷಯ ಎಂದು ಸಾಹಿತಿಗಳಾದ ವೀರ ಹನುಮಾನ ಅಭಿಪ್ರಾಯಪಟ್ಟರು.
ಶುಕ್ರವಾರದಂದು ಸಂಜೆ 7 ಗಂಟೆಗೆ ಮಾದರ ಚೆನ್ನಯ್ಯ ಗುರುಪೀಠದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಬೆಂಗಳೂರು ಹಾಗೂ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ (ರಿ) ರಾಯಚೂರು ವತಿಯಿಂದ ನಡೆದ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.. 1979 ರ ಇಸ್ವಿಯಲ್ಲಿ ಸಿಜಿಕೆ ಬರೆದು ನಿರ್ದೇಶಿಸಿದ ಬೆಲ್ಚಿ ಎಂಬ ಬೀದಿ ನಾಟಕವನ್ನು ರಾಜ್ಯಾದಂತ ಬೀದಿಯಲ್ಲಿ ಜನರ ಮಧ್ಯೆಯೇ ಪ್ರದರ್ಶನಗಳನ್ನು ಮಾಡುತ್ತಾ ಹೋದ್ವಿ. ಈ ನಾಟಕದ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಿಲ್ಚಿ ನಾಟಕವು ಉತ್ತರ ಪ್ರದೇಶದಲ್ಲಿ ಹನ್ನೊಂದು ಜನ
ದಲಿತರನ್ನು ಸುಟ್ಟು ಹಾಕಿದ ಘಟನೆ ಆಧರಿಸಿದ್ದು ಆಗಿತ್ತು. ಸಿಜಿಕೆ 90 ರ ದಶಕದಲ್ಲಿ ರಾಯಚೂರಿನಲ್ಲಿ ಮೂರು ದಿನದ ನಾಟಕೋತ್ಸವ ಮಾಡಿದಾಗ ನಾಟಕದ ಕುರಿತು ರಾತ್ರಿಯೆಲ್ಲಾ ನಮ್ಮೊಂದಿಗೆ ಚರ್ಚೆ ಮಾಡುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಂತರ ಮುಖ್ಯ ಅಥಿತಿಗಳಾದ ಶ್ರೀನಿವಾಸ ಮರಡ್ಡಿ ಯವರು ಮಾತನಾಡುತ್ತಾ ಇದೊಂದು ಆತ್ಮೀಯವಾದಂತ ಕ್ಷಣ ನಾವು ನಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾದ ಸಮಯ. ಕಲೆ ಕಲೆಗಾಗಿ ಅನ್ನುವ ಸಂದರ್ಭದಲ್ಲಿ ಕಲೆ ಬದುಕಿಗಾಗಿ ಕಲೆ ಸಮಾಜದ ಬದಲಾವಣೆಗಾಗಿ ಎನ್ನುವ ತತ್ವದಲ್ಲಿ ಸಿಜಿಕೆ ಸಮುದಾಯದ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ 70 ರ ದಶಕದಲ್ಲಿ ಸಾಂಸ್ಕೃತಿಕ ಚಳುವಳಿಯನ್ನು ಕಟ್ಟಿದಂತವರು. ಇವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೂ ರಂಗಭೂಮಿಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ ವ್ಯಕ್ತಿ.
ಇವತ್ತು ಎಲ್ಲವೂ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಕಲೆಯ ಮೂಲಕ ಜನರ ಮಧ್ಯೆ ಹೋಗಿ ಜನರ ಸಮಸ್ಯೆಗೆ ಸ್ಪಂದಿಸುತ್ತಾ ಜನರಲ್ಲಿ ಹೊಸ ಚೈತನ್ಯವನ್ನು ತುಂಬಬೇಕಾಗಿದೆ. ಸಿಜಿಕೆಯವರ ಆಶಯವೂ ಇದೇ ಆಗಿತ್ತು. ಇಂಥ ರಂಗ ದಿಗ್ಗಜರ ಹೆಸರಿನಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ
ಎಂದರು.
ರಮೇಶ್ ಆರೋಲಿ ಯಾವರು ಮಾತನಾಡುತ್ತಾ ...
ನಾಟಕದ ಹಿಂದೆ ಹೋದರೆ ತಲೆ ಮೇಲೆ ಚಾಪೆ ಹಾಸಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಇವತ್ತು ನಾಟಕದ ಹಿಂದೆ ಹೋದವರು ತಲೆಯ ಮೇಲೆ ಪೇಟ ಹಾಕಿಕೊಂಡಿದ್ದಾರೆ. ನಾನು ವಿಧ್ಯಾರ್ಥಿ ದಿನಗಳಲ್ಲಿ ನಾಟಕ ಮಾಡುವ ಆಸಕ್ತಿ ಇತ್ತು. ನಾನು ಬರೆದ ನಾಟಕ ತೀನ್ ಕಂದೀಲ್ ನಾಟಕದಲ್ಲಿ ಬರುವ ಯಲ್ಲಯ್ಯ ಪಾತ್ರವನ್ನು ಲಕ್ಷ್ಮಣ ಮಂಡಲಗೇರಾ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದರು. ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಪ್ರದರ್ಶನದ ದಿನ ರಾಯಚೂರಿನ ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರನ್ನು ನೋಡಿ ತುಂಬಾ ಸಂತೋಷವಾಗಿತ್ತು. ಅದೊಂದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಅಭಿಪ್ರಾಯಪಟ್ಟರು.
ಈ ವೇದಿಕೆಯಲ್ಲಿ ಅಧ್ಯಕ್ಷತೆ ಹಿರಿಯರಾದ ವಿ. ಎನ್. ಅಕ್ಕಿ, ಪ್ರಶಸ್ತಿ ಪುರಸ್ಕೃತರ ಪರಿಚಯ ರಂಗ ನಿರ್ದೇಶಕ ಪ್ರವೀಣ ರೆಡ್ಡಿ ಗುಂಜಹಳ್ಳಿ, ಮುಖ್ಯ ಅತಿಥಿಗಳಾದ ರಮೇಶ್ ಆರೋಲಿ, ಶ್ರೀನಿವಾಸ ಮರಡ್ಡಿ, ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಣ ಮಂಡಲಗೇರಾ, ಅರುಣ್ ಕುಮಾರ್ ಮಾನ್ವಿ,
ಪ್ರಾಸ್ತಾವಿಕ ಮಾತನಾಡಿದ ರಂಗಸ್ವಾಮಿ, ನಿರೂಪಣೆಯನ್ನು ಶಿವರಾಜ್ ಹೆಗ್ಗಸನಹಳ್ಳಿ ನಿರ್ವಸಿದರು. ರಂಗ ಕಲಾವಿದರಾದ ವೆಂಕಟ ನರಸಿಂಹಲು, ನಾಗರಾಜ ಸಿರವಾರ, ಅಂಬರೀಶ್ ರಾಠೋಡ್, ಸಾಗರ್ ಇಟೇಕರ್, ಮಹೇಶ್, ಗೋಪಿ, ವಿಮಲಾ ಶ್ರೀಕಾಂತ್ ಶಾಂತಮೂರ್ತಿ ಗಬ್ಬೂರು ರಂಗ ಗೀತೆಗಳನ್ನು ಹಾಡಿದರು..