ಅಂಬೇಡ್ಕರ್ ವಿಚಾರಧಾರೆಗಳನ್ನು ಜನಮಾನಸದಲ್ಲಿ ಇಳಿಯುವಂತೆ ಹಾಡು ರಚಿಸುವುದು ಸರಳವಲ್ಲ: ಆರ್.ಮಾನಸಯ್ಯ
ಸಿಂಧನೂರು: ಅಂಬೇಡ್ಕರ್ ಸಿದ್ಧಾಂತ ಮತ್ತು ವಿಚಾರಗಳನ್ನು ಜನಮಾನಸದಲ್ಲಿ ಇಳಿಯುವಂತೆ ಹಾಡು ರಚಿಸುವುದು ಸರಳವಲ್ಲ, ಆದರೆ ಹಿರಿಯ ಬಂಡಾಯ ಸಾಹಿತಿ ದಾನಪ್ಪ ಅವರು ಇದನ್ನು ಸಾಧ್ಯ ಮಾಡಿದ್ದಾರೆ. ಈಗ ಅವರ ಪುತ್ರ ಪ್ರಶಾಂತ ದಾನಪ್ಪ ಅದೇ ಪರಂಪರೆ ಮುಂದುವರೆಸಿದ್ದಾರೆ ಎಂದು ಟಿ.ಯು.ಸಿ.ಐ.ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಸಿಂಧನೂರು ನಗರದ ಟೌನ್‌ಹಾಲ್‌ನಲ್ಲಿ ಮಸ್ಕಿ ಬೀದಿ ಸಾಲು ಪ್ರಕಾಶನ ಹಾಗೂ ಕ್ರಾಂತಿಕಾರಿ ಸಾಂಸೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಕಾಮ್ರಡ್ ಆರ್.ಹುಚ್ಚರಡ್ಡಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಾಂತ ದಾನಪ್ಪ ಅವರು ರಚಿಸಿದ 'ಅಂಬೇಡ್ಕರ್ ಯಾರು ಅಂಬೇಡ್ಕರ್ ?ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಹಿತ್ಯವೆಂದರೆ ದೇವರಸ್ತುತಿ, ನಿಸರ್ಗ, ಹೆಣ್ಣಿನ ವರ್ಣನೆಯೇ ಮುಖ್ಯವೆಂದು ಭಾವಿಸಿದ್ದ ಕಾಲಘಟ್ಟದಲ್ಲಿ ರಾಯಚೂರಿನಿಂದ ಚೆನ್ನಣ್ಣ ವಾಲೀಕಾರ ಬೆಂಗಳೂರಿನಿಂದ ಸಿದ್ದಲಿಂಗಯ್ಯ ಅವರು ಅಂಬೇಡ್ಕರ್ ಸಿದ್ಧಾಂತ ಮತ್ತು ಹೋರಾಟ ಪ್ರತಿಪಾದಿಸುವ ಕಾವ್ಯ ಸೃಜಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಪರಿಕಲ್ಪನೆ ತಂದುಕೊಟ್ಟರು. ತದನಂತರ ಸಿ.ದಾನಪ್ಪ ಬಾಬು ಭಂಡಾರಿಗಲ್ ಎರಡನೇ ತಲೆ ಮಾರಿನ ಕಾವ್ಯ ಬರೆದರೆ ಈಗ ಪ್ರಶಾಂತ ದಾನಪ್ಪ ಬರೆದ 'ಅಂಬೇಡ್ಕರ್ ಯಾರು ಅಂಬೇಡ್ಕರ್ ?ʼ ಕೃತಿಯ ಒಂದು ಪದ್ಯ ರಾಷ್ಟ್ರಮಟ್ಟದಲ್ಲಿ ಈಗಾಗಲೆ ಖ್ಯಾತಿ ಪಡೆದಿದೆ ಎಂದು ವಿವರಿಸಿದರು.
ರಾಯಚೂರಿನ ಜೆ.ಬಿ.ರಾಜು ಮಾತನಾಡಿ, ಹುಚ್ಚರೆಡ್ಡಿ ವೇದಿಕೆ ಮುಂದಿನ ಚಳವಳಿಗೆ ಸ್ಫೂರ್ತಿಯಾಗಲಿದೆ. ಅವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ ಹಾಗೂ ಪ್ರಸ್ತುತವಾಗಿವೆ ಎಂದರು.
ಹೋರಾಟಗಾರ ಎಚ್.ಎನ್.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಬೆಳ ಗುರ್ತಿ ಕೃತಿ ಪರಿಚಯಿಸಿದರು. ಎಂ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಜನಿ ಆರತಿ, ಶರಣಬಸವ ನಾಗಲಾಪೂರ, ಚಿದಾನಂದ ಬರಗೂರ, ಶರಣು ಕಲಾ ಬಳಗ ಗಂಗಾವತಿ ಮತ್ತು ಭರತ ದಿಂಗ್ರಿ ಅವರಿಂದ ಕ್ರಾಂತಿ ಹಾಡುಗಳು ಮೊಳಗಿದವು.
'ಉಸ್ತಾರ' ನಿರ್ದೇಶಕ ಡಾ.ನಾರ್ಜ.ಪಿ. ಎಸ್., ದಲಿತ ಸಮರ ಸೇನೆ ಸಂಸ್ಥಾಪಕ ಅಧ್ಯಕ್ಷ ಗಣೇಶ.ಎಸ್.ಕೊಳಗೇರಿ, ಹುಸೇನ ಬಾಷಾ ಸೂಫಿ, ಸಿ.ದಾನಪ್ಪ ಮಸ್ಕಿ, ಬಾಬು ಭಂಡಾರಿಗಲ್, ಅಂಬಣ್ಣ ಆರೋಲಿಕರ್, ರಂಗನಿರ್ದೇಶಕ ಕೆ.ಪಿ.ಲಕ್ಷ್ಮಣ, ಎಂ. ವಿರೂಪಾಕ್ಷಿ, ಡಿ.ಎಚ್.ಪೂಜಾರ, ಚಿನ್ನಮ್ಮ, ಡಾ.ರಾಜಶೇಖರ ನಾರನಾಳ, ದೊಡ್ಡಪ್ಪ ಮುರಾರಿ, ಮರಿಯಪ್ಪ ಜಾಲಿಹಾಳ, ಬಿ. ಬಸವಲಿಂಗಪ್ಪ, ಮೇರಿ ದಾನಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೌನೇಶ ಜಾಲವಾಡಿಗಿ ನಿರೂಪಿಸಿದರು.