×
Ad

ಸರಕಾರಿ ಆಸ್ಪತ್ರೆಗಳ ವೈದ್ಯರು ಕರ್ತವ್ಯ ಸ್ಥಳದಲ್ಲಿರದಿದ್ದರೆ ಶಿಸ್ತು ಕ್ರಮ: ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ

Update: 2025-01-22 15:19 IST

ರಾಯಚೂರು: ತಾಲೂಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸ್ಥಳದಲ್ಲೇ ಇದ್ದು ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ಲಕ್ಷ್ಯವಹಿಸಿದರೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡುರಾವ್ ಎಚ್ಚರಿಕೆ ನೀಡಿದ್ದಾರೆ.

ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದ ಮುಂದೆ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡುತ್ತಿದ್ದರು.

ರಾಜ್ಯದ ತಾಯಿ ಮತ್ತು ಮಗುವಿನ ಆರೋಗ್ಯ ನೋಡಿಕೊಳ್ಳುವುದು ಸರಕಾರ ಮತ್ತು ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಮಾತೃತ್ವ ಸುರಕ್ಷಾ ಅಭಿಯಾನ ಜಾರಿಗೆ ತರಲಾಗಿದೆ ಎಂದರು.

ತಾಲೂಕು ಆಸ್ಪತ್ರೆಗಳನ್ನು ಮಿನಿ ಆಸ್ಪತ್ರೆಗಳಾಗಿ ಪರಿವರ್ತನೆ: ಮಾತೃ ಸುರಕ್ಷಾ ಅಭಿಯಾನವನ್ನು ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕ ಕೇಂದ್ರಗಳಲ್ಲಿ ನಡೆಸಲಾಗುವುದು.

ತಾಲೂಕ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಮತ್ತು ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಜಿಲ್ಲಾ ಮಿನಿ ಆಸ್ಪತ್ರೆಗಳನಾಗಿ ಮಾಡುವ ಉದ್ದೇಶ ಸರ್ಕಾರಕ್ಕೆ ಹೊಂದಿದೆ ಎಂದು ಹೇಳಿದರು.

ಮಹತ್ವಾಕಾಂಕ್ಷಿ ಜಿಲ್ಲೆಯಾದ ರಾಯಚೂರಿಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕ ಆಸ್ಪತ್ರೆಗಳು 24/7 ಚಿಕಿತ್ಸೆ ನೀಡುವಂತಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಬೇಕಾದ ಅನುದಾನ ಸೇರಿದಂತೆ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿದ್ದು, ತಕ್ಷಣ ಕಾರ್ಯಗತ ಮಾಡಲು ಸೂಚನೆ ನೀಡಿದ್ದಾರೆಂದರು.

ಗರ್ಭಿಣಿಯರಿಗೆ ಸರಿಯಾದ ಮಾಹಿತಿ ಮತ್ತು ಚಿಕಿತ್ಸೆ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದು ಲಕ್ಷ ಗರ್ಭಿಣಿಯರಲ್ಲಿ ಸುಮಾರು 64 ಜನ ಮೃತರಾಗುತ್ತಿದ್ದಾರೆ. ಈ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್ ಮಾತನಾಡಿ, ಜಿಲ್ಲೆಗೆ ಜಿಲ್ಲಾ ಆಸ್ಪತ್ರೆ ಅವಶ್ಯಕವಾಗಿದ್ದು, ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ರಾಯಚೂರು ಹಿಂದುಳಿದ ಜಿಲ್ಲೆಯಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಅವಶ್ಯಕವಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಬಡ ಕುಟುಂಬಗಳಿಗೆ ಉತ್ತಮ ಸೇವೆ ನೀಡಬೇಕೆಂದು ಸಲಹೆ ನೀಡಿದರು.

ರಾಜ್ಯ ಸರಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆ ಶೇ.25ರಷ್ಟು ಅನುದಾನ ಖರ್ಚು ಮಾಡುತ್ತಿದೆ ಎಂದರು.

ವೇದಿಕೆ ಮೇಲೆ ಶಾಸಕರಾದ ಹಂಪಯ್ಯ ಸಾಹುಕಾರ, ಜಿಲ್ಲಾಧಿಕಾರಿ ನಿತೇಶ, ಜಿ.ಪಂ.ಸಿಇಓ ಪಾಂಡ್ವೆ ರಾಹುಲ್ ತುಕಾರಾಮ, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗೇರಿ,ಉಪಾಧ್ಯಕ್ಷ ಸಾಜೀದ್ ಸಮೀರ್,ಸದಸ್ಯ ಜಯಣ್ಣ, ಕಾಂಗ್ರೆಸ್ ಮುಖಂಡರಾದ ಮಹ್ಮದ್ ಶಾಲಂ, ನರಸಿಂಹಲು ಮಾಡಗೇರಿ, ಜಯಂತರಾವ್ ಪಂತಗೆ, ಜಿಲ್ಲಾ ಏಡ್ಸ್ ಮತ್ತು ನಿಯಂತ್ರಣ ಅಧಿಕಾರಿ ಡಾ.ಶಾಕೀರ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಸ್ವಾಗತಿಸಿದರು. ದಂಡಪ್ಪ ಬಿರಾದರ್ ಕಾರ್ಯಕ್ರಮ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News