ರಾಯಚೂರು | ಜಿಲ್ಲಾ ಉತ್ಸವದ ಅಂಗವಾಗಿ ಫೆ.7ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ
ರಾಯಚೂರು: ಜಿಲ್ಲೆಯಲ್ಲಿ ಫೆಬ್ರುವರಿ 5ರಿಂದ 7ರವರೆಗೆ ನಡೆಯಲಿರುವ ಎಡೆದೊರೆ ನಾಡು – ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಫೆ.7ರಂದು ಹಮ್ಮಿಕೊಳ್ಳಲಾಗಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸುವಂತೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಬುಧವಾರ (ಜ.28) ನಡೆದ ಗ್ಯಾರಂಟಿ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತು ವಿವಿಧ ತಾಲೂಕುಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಯಚೂರು ಜಿಲ್ಲೆ ಹಾಗೂ ತಾಲೂಕುವಾರು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇದುವರೆಗೆ ಸಾಧಿಸಿರುವ ಪ್ರಗತಿಯನ್ನು ವಿಡಿಯೋ ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಯಶೋಗಾಥೆಗಳು ಇತರರಿಗೆ ಪ್ರೇರಣೆಯಾಗಬೇಕು. ಯೋಜನೆಗಳ ಆಶಯವನ್ನು ಜನತೆಗೆ ತಿಳಿಸಿ ಅರ್ಹರು ಯೋಜನೆಯ ವ್ಯಾಪ್ತಿಗೆ ಬರುವಂತೆ ಮಾಡುವ ಉದ್ದೇಶದಿಂದಲೇ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಗ್ಯಾರಂಟಿ ಯೋಜನೆಗಳ ಸಾಧಕ ಫಲಾನುಭವಿಗಳನ್ನು ಗುರುತಿಸಿ, ಪ್ರತಿ ತಾಲೂಕಿನಿಂದ ಕನಿಷ್ಠ 25 ಸಾಧಕ ಮಹಿಳಾ ಫಲಾನುಭವಿಗಳನ್ನು ಸಮಾವೇಶಕ್ಕೆ ಆಹ್ವಾನಿಸಿ ಪ್ರಶಸ್ತಿ ನೀಡಿ ಗೌರವಿಸಬೇಕು. ಈ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆಗಳು ಆದ್ಯತೆ ನೀಡಿ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಫಲಾನುಭವಿಗಳ ಯಶೋಗಾಥೆಯ ವಿಡಿಯೋ ಪ್ರದರ್ಶನದ ಜೊತೆಗೆ ಅವರ ಅಭಿಪ್ರಾಯದ ವಿಡಿಯೋಗಳನ್ನು ಪ್ರದರ್ಶಿಸಬೇಕು. ಗ್ಯಾರಂಟಿ ಯೋಜನೆಗಳ ಕುರಿತು ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮವಹಿಸಬೇಕೆಂದರು.
ಜಿಲ್ಲೆಯ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳು ಹಾಗೂ ಸ್ಥಳೀಯ ಉತ್ಪನ್ನಗಳ ಪ್ರದರ್ಶನ–ಮಾರಾಟ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ತುರ್ವಿಹಾಳ, ಹನುಮಂತಪ್ಪ ಜಾಲಿಬೆಂಚಿ, ಸದಸ್ಯರಾದ ಲಕ್ಷ್ಮಣ ಜ್ಯೋತಿ, ಮೆಹೆಬೂಬ್ ಸಾಬ್, ವೆಂಕಟೇಶ್, ಆದನಗೌಡ, ಹೆಚ್. ಬಸವರಾಜ್, ಶೇಖರಪ್ಪ ಯಾದವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ್, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಜೀರ್ ಅಹಮದ್, ಜೆಸ್ಕಾಂ ಅಧಿಕಾರಿ ಚಂದ್ರಶೇಖರ ದೇಸಾಯಿ, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್ ಸಂಗೇಪಾಗ ಸೇರಿದಂತೆ ವಿವಿಧ ತಾಲೂಕುಗಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.