×
Ad

ರಾಯಚೂರು ಜಿಲ್ಲಾ ಉತ್ಸವದ ಹೊಸ ಸಮಿತಿ ಸದಸ್ಯರ ಸಭೆ ; ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಗೊಳಿಸಿ : ಡಿಸಿ ನಿತೀಶ್ ಕೆ. ಕೆ̤

Update: 2026-01-28 18:57 IST

ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ನೂತನವಾಗಿ ರಚಿಸಲಾದ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರು ಹಾಗೂ ಸಮನ್ವಯಾಧಿಕಾರಿಗಳ ಸಭೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ಜನವರಿ 28ರಂದು ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ರೈತ ಮುಖಂಡ ಚಾಮರಸ ಪಾಟೀಲ, ಕರ್ನಾಟಕ ಸಂಘದ ಅಧ್ಯಕ್ಷ ಕೆ. ಶಾಂತಪ್ಪ, ಹೋರಾಟಗಾರ ಬಸವರಾಜ ಕಳಸ ಸೇರಿದಂತೆ ಇತರರು ಮಾತನಾಡಿ, ಮೊದಲ ಸಾರ್ವಜನಿಕ ಸಭೆಯಲ್ಲಿ ವ್ಯಕ್ತವಾದ ಜನಾಭಿಪ್ರಾಯದಂತೆ ಜಿಲ್ಲಾಡಳಿತವು ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯರನ್ನು ಒಳಗೊಂಡಂತೆ ಹೊಸ ಸಮಿತಿಗಳನ್ನು ರಚಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಅಭಿಪ್ರಾಯಪಟ್ಟರು. ಸಮಿತಿಗಳ ಸದಸ್ಯರಾದ ನಾವು ಉತ್ಸವದ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಅಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಸಮಿತಿಗಳ ಸದಸ್ಯರು ಉತ್ಸವದ ಕುರಿತು ಹಲವು ಸಲಹೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ನಿತೀಶ್ ಕೆ ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವಕ್ಕೆ ಜಿಲ್ಲೆಯ ಎಲ್ಲ ಸಂಘ–ಸಂಸ್ಥೆಗಳು ಹಾಗೂ ನಾಗರಿಕರು ಕೈಜೋಡಿಸಿ ಸಹಕಾರ ನೀಡಬೇಕು ಎಂದು ಕೋರಿದರು.

ಉತ್ಸವದ ಸಿದ್ಧತೆ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದೆ. ಮೊದಲ ಸಾರ್ವಜನಿಕ ಸಭೆಯಲ್ಲಿ ಬಂದ ಎಲ್ಲ ಸಲಹೆಗಳನ್ನು ಪರಿಗಣಿಸಿ ಕಾರ್ಯಗತಗೊಳಿಸಲಾಗಿದೆ. ಉತ್ಸವಕ್ಕೆ ಕೇವಲ ವಾರದ ಸಮಯ ಮಾತ್ರ ಉಳಿದಿರುವುದರಿಂದ, ಆಯಾ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಕಾರ್ಯ ಹಂಚಿಕೆ ಮಾಡಿಕೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಭದ್ರತೆಗೆ ಸಿಸಿಟಿವಿ ಅಳವಡಿಕೆ :

ಉತ್ಸವದ ವೇಳೆ ಕಳ್ಳತನ ಹಾಗೂ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ರಾಯಚೂರು ಮಹಾನಗರ ಪಾಲಿಕೆ ಉಪ ಆಯುಕ್ತೆ ಸಂತೋಷ ರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News