×
Ad

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ : ರಾಯಚೂರಿನ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಹೆಣ್ಣು ಮಕ್ಕಳಿಗೆ ಉಡುಪು ವಿತರಣೆ

Update: 2026-01-28 21:11 IST

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಯಚೂರಿನ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಜನನವಾದ ಹೆಣ್ಣು ಮಕ್ಕಳಿಗೆ ಹೊಸ ಉಡುಪುಗಳು ಹಾಗೂ ಸಿಹಿ ಪದಾರ್ಥಗಳನ್ನು ತಾಯಂದಿರಿಗೆ ವಿತರಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿದರು.

ಇಂದಿನ ದಿನಗಳಲ್ಲಿ ಹೆರಿಗೆಯು ಕುಟುಂಬದ ಆರ್ಥಿಕ ಹೊರೆ ಎನ್ನುವ ತಪ್ಪು ನಂಬಿಕೆಯನ್ನು ದೂರಮಾಡಲು ಹಾಗೂ ಮಗು ಹುಟ್ಟಿದ ಬಳಿಕ ಹೆಣ್ಣು–ಗಂಡು ಎಂಬ ಭೇದ ತೊಲಗಿಸಲು ರಾಜ್ಯ ಸರ್ಕಾರವು ಮಹಿಳೆಯ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು. ರಾಯಚೂರು, ಮಾನ್ವಿ ಹಾಗೂ ಸಿಂಧನೂರುಗಳಲ್ಲಿ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಉಪಕರಣಗಳು ಹಾಗೂ ತಜ್ಞ ವೈದ್ಯರೊಂದಿಗೆ ತಾಯಿ–ಮಕ್ಕಳ ಆಸ್ಪತ್ರೆಗಳನ್ನು ಜಿಲ್ಲಾಡಳಿತದ ಮಾರ್ಗದರ್ಶನ ಮತ್ತು ಜನಪ್ರತಿನಿಧಿಗಳ ಬೆಂಬಲದೊಂದಿಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಗರ್ಭಿಣಿಯರಿಗೆ ಜನನಿ ಶಿಶು ಸುರಕ್ಷಾ ಯೋಜನೆ, ಸುಮನ್ ಹಾಗೂ ಲಕ್ಷ್ಯ ಕಾರ್ಯಕ್ರಮಗಳಡಿ ಸುರಕ್ಷಿತ ಹೆರಿಗೆಯ ಸೌಲಭ್ಯ ಒದಗಿಸಲಾಗುತ್ತಿದ್ದು, ಹೆರಿಗೆಯ ನಂತರ ತಾಯಿ ಹಾಗೂ ಮಗು ನಗುಮುಖದೊಂದಿಗೆ ಉಚಿತ ವಾಹನದ ಮೂಲಕ ಮನೆಗೆ ಮರಳುತ್ತಿದ್ದಾರೆ. ಇದು ತಾಯಿ ಮರಣ ಪ್ರಮಾಣ ಕಡಿಮೆ ಮಾಡುವ ಜೊತೆಗೆ ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ ಎಂದರು.

ಹೆಣ್ಣು ಮಕ್ಕಳ ಆರೋಗ್ಯಕ್ಕಾಗಿ ಬಾಲ್ಯದಲ್ಲಿಯೇ ಸಂಪೂರ್ಣ ಲಸಿಕೆ ನೀಡಲಾಗುತ್ತಿದ್ದು, ಹದಿಹರೆಯದ ಬಾಲಕಿಯರಲ್ಲಿ ರಕ್ತಹೀನತೆ ನಿವಾರಣೆಗೆ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯಡಿ ಕಬ್ಬಿಣಾಂಶ ಮಾತ್ರೆಗಳ ವಿತರಣೆ, ಶುಚಿ ನ್ಯಾಪ್‌ಕಿನ್ ಪೂರೈಕೆ ಹಾಗೂ ಸ್ನೇಹ ಕ್ಲಿನಿಕ್ ಮೂಲಕ ಹದಿಹರೆಯದ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಜೊತೆಗೆ 18 ವರ್ಷ ನಂತರ ಮದುವೆ ಮತ್ತು 20 ವರ್ಷಗಳ ಬಳಿಕ ಗರ್ಭಧಾರಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಗಾವಹಿಸಲಾಗುತ್ತಿದ್ದು, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ–1994ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗೆ ಮಾಹಿತಿ ನೀಡುವವರಿಗೆ ನೀಡುವ ಬಹುಮಾನವನ್ನು 50 ಸಾವಿರ ರೂ.ದಿಂದ 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಎನ್‌ಫೋರ್ಸ್ಮೆಂಟ್ ಅಧಿಕಾರಿ ಡಾ. ಶಿವಕುಮಾರ ನಾರಾ, ತಾಲೂಕು ಆರೋಗ್ಯಾಧಿಕಾರಿ ಡಾ. ಅಮೃತ ಹುಕ್ಕೇರಿ, ಎಂಸಿಎಚ್ ಆಡಳಿತ ವೈದ್ಯಾಧಿಕಾರಿ ಡಾ. ಪ್ರಜ್ವಲ್ ಕುಮಾರ್, ಪ್ರಸೂತಿ ತಜ್ಞೆ ಡಾ. ಶಾಲಿನಿ, ಮಕ್ಕಳ ತಜ್ಞೆ ಡಾ. ಮೋಹಿಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ, ಮುಖ್ಯ ಶುಶ್ರೂಷಣಾಧಿಕಾರಿ ಸಲೋಮಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ತಾಯಂದಿರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News