ಸಂಪೂರ್ಣ ಹೊಂಡಮಯವಾದ ಹೊನ್ನಟಗಿ ರಸ್ತೆ; ಪ್ರಯಾಣಿಕರ ಪರದಾಟ
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಮತ್ತು ಮದರಕಲ್ ಮಾರ್ಗವಾಗಿ ಹೊನ್ನಟಗಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು ಕೆಸರು,ರಾಡಿಯಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಕಳೆದ ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ರಸ್ತೆ ಕಾಲುದಾರಿಯಾಗಿ ಮಾರ್ಪಟ್ಟಿದೆ. ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಪ್ರಯಾಣಿಕರ ಜೀವ ಹಿಂಡುತ್ತಿವೆ. ರಾತ್ರಿ ವೇಳೆ ರಸ್ತೆ ಕಾಣದೇ ಕಷ್ಟಪಡುವಂತಾಗಿದೆ. ಪಾದಚಾರಿಗಳು ನಡೆಯಲು ಆಗದೆ, ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಇನ್ನು ತುರ್ತು ಸಂಧರ್ಭದಲ್ಲಿ ಆಂಬುಲೆನ್ಸ್ ಹೋಗಲು ವಿಳಂಬವಾಗಿ ರೋಗಿಗಳ ಪ್ರಾಣಕ್ಕೆ ಕುತ್ತು ಬರುವಂತಾಗಿದೆ.
ಮದರಕಲ್, ಖಾನಾಪುರ, ಹೊನ್ನಟಗಿ, ಗೂಗಲ್ ಮತ್ತು ರಾಯಚೂರು ಬಸ್ ಓಡಾಡುವ ಈ ರಸ್ತೆ ಹೋಬಳಿ ಕೇಂದ್ರ ಗಬ್ಬೂರಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಜನರು ಓಡಾಡುತ್ತಾರೆ.
ಸುಮಾರು ಐದಾರು ಕಿ.ಮೀ. ಇರುವ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಜನ ಮತ್ತು ವಾಹನಗಳು ಅನಿವಾರ್ಯವಾಗಿ ಸಂಚರಿಸುವಂತಾಗಿದೆ. ಹಲವು ವರ್ಷಗಳಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾಭ್ಯಾಸಕ್ಕೆಂದು ಹೋಬಳಿ ಕೇಂದ್ರಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ, ರಸ್ತೆ ಹದಗೆಟ್ಟ ಹಿನ್ನೆಲೆ ಪ್ರತಿ ನಿತ್ಯ ಬಸ್ ತಡವಾಗಿ ತಲುಪುತ್ತವೆ.
ʼತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಯಿಂದ ಓವರ್ ಲೋಡ್ ಹೊತ್ತ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತಿವೆ. ಮಣ್ಣು ಭಾರವನ್ನು ಹೊತ್ತು ಸಾಗುವ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಮದರಕಲ್ ಗ್ರಾಮದ ಹತ್ತಿರ ರಸ್ತೆಯಲ್ಲಂತೂ ಬೃಹತ್ ಗುಂಡಿಗಳು ಬಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.