ಸಿರವಾರದ ಎನ್ ಹೊಸೂರು ಸೇತುವೆಯಲ್ಲಿ ಬೃಹತ್ ಗುಂಡಿ; ವಾಹನ ಸಂಚಾರಕ್ಕೆ ಸಮಸ್ಯೆ
ರಾಯಚೂರು: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿರವಾರ ತಾಲೂಕಿನ ಎನ್.ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ಸೇತುವೆ ಕುಸಿತದಿಂದಾಗಿ ಹಳ್ಳದ ಮೇಲೆ ತೆರಳುತ್ತಿದ್ದ ಗೊಬ್ಬರ ಚೀಲ ತುಂಬಿದ್ದ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ.
ಹಳ್ಳದ ಸೇತುವೆ ನಿರ್ಮಾಣಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಗುಂಡಿಗಳು, ರಸ್ತೆ ದುರಸ್ತಿಗೊಳಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಿರವಾರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಮಳೆಯಿಂದಾಗಿ ಗುಂಡಿಗಳು ಬಿದ್ದಿದ್ದು, ಹಳ್ಳವಾಗಿ ಮಾರ್ಪಟ್ಟಿದೆ. ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆಯಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಅಧಿಕಾರಿಗಳು ಮಳೆ ನಿಂತ ಮೇಲೆ ಮೊರಂ, ಜೆಲ್ಲಿ ಕಲ್ಲುಗಳಿಂದ ತೇಪೆ ಹಾಕುತ್ತಾರೆ. ಮಳೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
6 ವರ್ಷದಿಂದ ರಸ್ತೆ ದುರಸ್ತಿಗೊಳಿಸುತ್ತಿಲ್ಲ ಶಾಲೆಗೆ ಹೋಗುವ ಮಕ್ಕಳಿಗೆ,ದಿನ ಕೂಲಿಗರಿಗೆ, ಸಾರ್ವಜನಿಕರಿಗೆ ತೀರಾ ತೊಂದರೆಯಾಗಿದೆ. ಈ ಹಿಂದೆ ಸರ್ಕಾರ ತಾತ್ಕಾಲಿಕ ಕಾಮಗಾರಿಗೆ ಒಂದಿಷ್ಟು ಹಣವನ್ನು ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿಯನ್ನ ಮಾಡಿ ಅದರಲ್ಲಿಯೂ ಸಹ ಒಂದಿಷ್ಟು ಹಣವನ್ನು ಗುತ್ತಿಗೆದಾರರು ಲೂಟಿ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮನೋಹರ ಹೊಸಮನಿ ದೂರಿದರು.