×
Ad

ಉತ್ಸವದಲ್ಲಿ ರಾಯಚೂರು ಸಿಟಿ ಸುಂದರವಾಗಿ ಕಾಣಲಿ: ಜುಬಿನ್ ಮೊಹಪಾತ್ರ

Update: 2026-01-28 22:46 IST

ರಾಯಚೂರು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವು ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ರಾಯಚೂರು ನಗರವು ಸುಂದರ ಹಾಗೂ ಸ್ವಚ್ಛವಾಗಿ ಕಾಣಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬ ಪೌರ ಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಹೇಳಿದರು.

ನಗರದ ಜೈಲ್‌ಖಾನ್ ಸಮೀಪದ ಮಹಿಳಾ ಸಮಾಜ ಮೈದಾನದಲ್ಲಿ ಜ.28ರಂದು ಆಯೋಜಿಸಿದ್ದ ಪೌರ ಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.

ಶುಚಿತ್ವ ಇದ್ದಲ್ಲಿ ಶಿಸ್ತು, ಶಿಸ್ತು ಇದ್ದಲ್ಲಿ ಶಾಂತಿ ಇರುತ್ತದೆ. ಈ ದೃಷ್ಟಿಕೋನದಿಂದ ಉತ್ಸವದ ಸಂದರ್ಭದಲ್ಲಿ ನಮ್ಮ ಮನೆ, ಮನೆಯ ಸುತ್ತಮುತ್ತಲಿನ ಪರಿಸರ, ರಸ್ತೆ, ಗಟಾರು, ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲೆಡೆ ಶುಚಿತ್ವಕ್ಕೆ ಒತ್ತು ನೀಡಬೇಕು. ಜಿಲ್ಲಾ ಉತ್ಸವಕ್ಕೆ ಆಗಮಿಸುವ ಅತಿಥಿಗಳಿಗೆ ರಾಯಚೂರು ನಗರವು ಸ್ವಚ್ಛ ಹಾಗೂ ಆಕರ್ಷಕವಾಗಿ ಕಾಣಬೇಕು. ಜನರಿಗೆ ಸ್ವಚ್ಛತೆಯ ಸಂದೇಶ ರವಾನೆಯಾಗಬೇಕು. ರಾಯಚೂರನ್ನು ಸ್ವಚ್ಛ ನಗರವೆಂದು ಜನರು ಮೆಚ್ಚುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪೌರ ಕಾರ್ಮಿಕರಿಗೆ ತಿಳಿಸಿದರು.

ಜಿಲ್ಲಾ ಉತ್ಸವಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇರುವುದರಿಂದ ಈಗಾಗಲೇ ನಗರದಲ್ಲಿ ಕಸ ಸಂಗ್ರಹ ಸ್ಥಳಗಳಲ್ಲಿ ನಿತ್ಯ ಕಸ ವಿಲೇವಾರಿ, ಮನೆಮನೆ ಕಸ ಸಂಗ್ರಹ, ಕಾರ್ಖಾನೆಗಳು, ಆಸ್ಪತ್ರೆಗಳಲ್ಲಿ ಕಸ ವಿಲೇವಾರಿ ಕಾರ್ಯ ನಡೆಯುತ್ತಿದೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಬೇಕು ಎಂದು ಸೂಚಿಸಿದರು.

ಉತ್ಸವಕ್ಕೂ ಮುಂಚಿತವಾಗಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಕಲಾವಿದರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಲಿರುವುದರಿಂದ ರಾಯಚೂರು ನಗರವನ್ನು ಸ್ವಚ್ಛ ನಗರವೆಂದು ಪರಿಚಯಿಸುವ ಅವಕಾಶ ಇದು ಎಂದರು.

ಪ್ರಮುಖವಾಗಿ ಮುಖ್ಯ ರಸ್ತೆಗಳು ಹಾಗೂ ರಾಜ ಕಾಲುವೆಗಳಲ್ಲಿ ದುರ್ವಾಸನೆ ಬರದಂತೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಎಲ್ಲಿಯೂ ಕಸ ಕಾಣದಂತೆ ನೋಡಿಕೊಳ್ಳಬೇಕು. ಉತ್ಸವ ನಡೆಯಲಿರುವ ಶ್ರೀ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ, ಜೈಲ್‌ಖಾನ್ ಬಳಿಯ ಮಹಿಳಾ ಸಮಾಜ ಆವರಣ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ವಾಲ್‌ಕಟ್ ಮೈದಾನ, ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಈಗಿನಿಂದಲೇ ಪ್ರತಿದಿನ ಶುಚಿತ್ವ ಕಾರ್ಯ ನಡೆಸಬೇಕು ಎಂದು ಆಯುಕ್ತರು ಸೂಚಿಸಿದರು. ಜೊತೆಗೆ ವಿವಿಧೆಡೆ ಫಾಗಿಂಗ್ ಕಾರ್ಯ ಕೈಗೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸಬೇಕು ಎಂದರು.

ಮೈಸೂರು, ಮಂಗಳೂರು ಸೇರಿದಂತೆ ಕೆಲವು ನಗರಗಳು ಸ್ವಚ್ಛತೆಗೆ ಹೆಸರುವಾಸಿಯಾಗಿವೆ. ಅವುಗಳ ಸಾಲಿನಲ್ಲಿ ರಾಯಚೂರು ಕೂಡ ಸೇರುವಂತೆ ಮಾಡಲು ಜಿಲ್ಲಾ ಉತ್ಸವ ಒಂದು ಉತ್ತಮ ಅವಕಾಶವಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ಜವಾಬ್ದಾರಿ ಹೊತ್ತರೆ ಮಾತ್ರ ರಾಯಚೂರು ಸ್ವಚ್ಛ ನಗರವಾಗಿ ಗುರುತಿಸಿಕೊಳ್ಳುತ್ತದೆ ಎಂದು ಹೇಳಿದರು.

ಪೌರ ಕಾರ್ಮಿಕರ ಕಾರ್ಯದಲ್ಲಿ ಸಮರ್ಪಕ ಮೇಲ್ವಿಚಾರಣೆ ವಹಿಸುವಂತೆ ಪಾಲಿಕೆಯ ಪರಿಸರ ಅಭಿಯಂತರರು ಹಾಗೂ ಪರಿಸರ ನಿರೀಕ್ಷಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ವಿಭಾಗದ ಅಭಿಯಂತರ ಜೈಪಾಲ್ ರೆಡ್ಡಿ, ಉಪ ಆಯುಕ್ತ ಮಲ್ಲಿಕಾರ್ಜುನ, ಪೌರ ಕಾರ್ಮಿಕರು ಹಾಗೂ ಮಹಾನಗರ ಪಾಲಿಕೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News