×
Ad

ರಾಯಚೂರು ಜಿಲ್ಲಾ ಉತ್ಸವದ ಯಶಸ್ಸಿಗೆ ಮನೆಮನೆಗೆ ಆಹ್ವಾನ ನೀಡಬೇಕು : ಸಿಇಓ ಈಶ್ವರ್‌ ಕಾಂದೂ ಸೂಚನೆ

Update: 2026-01-28 22:40 IST

ರಾಯಚೂರು : ಫೆ.5ರಿಂದ ಆರಂಭವಾಗಲಿರುವ ರಾಯಚೂರು ಜಿಲ್ಲಾ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಗ್ರಾಮ ಪಂಚಾಯತ್‌ಗಳು ಮನೆಮನೆಗೆ ಆಹ್ವಾನ ನೀಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್‌ ಕಾಂದೂ ಅವರು ಸೂಚಿಸಿದರು.

ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಪಿಡಿಓಗಳೊಂದಿಗೆ ಸಭೆ ನಡೆಸಿ ಉತ್ಸವದ ಪೂರ್ವಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.

ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಜಿಲ್ಲಾ ಉತ್ಸವದ ಡಂಗುರ ಸಾರಬೇಕು. ಜಿಲ್ಲಾಡಳಿತದಿಂದ ಸಿದ್ಧಪಡಿಸಲಾದ ಆಹ್ವಾನ ಪತ್ರಿಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಮನೆಮನೆಗೆ ತಲುಪಿಸಬೇಕು. ಗ್ರಾಮ ಮಟ್ಟದಲ್ಲಿಯೂ ಉತ್ಸವವನ್ನು ಮನೆಯ ಉತ್ಸವದಂತೆ ಸಂಭ್ರಮಿಸುವಂತೆ ಪ್ರಚಾರ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.

ಪಂಚಾಯತ್ ಮಟ್ಟದಲ್ಲಿ ಜಾಥಾ ಹಾಗೂ ಪ್ರಚಾರ ಸಭೆಗಳನ್ನು ಆಯೋಜಿಸಬೇಕು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ಪಂಚಾಯತ್ ಸಿಬ್ಬಂದಿಗಳು ಸಂಗ್ರಹಿಸಿ, ಅವರನ್ನು ಉತ್ಸವಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಬೇಕು. ಈ ಕಾರ್ಯದಲ್ಲಿ ತಾಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.

ಉತ್ಸವದ ಅಂಗವಾಗಿ ಮಕ್ಕಳ ಉತ್ಸವ, ಆಹಾರ ಮೇಳಗಳು ನಡೆಯುತ್ತಿರುವುದರಿಂದ ಸ್ವಸಹಾಯ ಗುಂಪುಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗಮನಹರಿಸಬೇಕು. ನೆರೆ ಆಂಧ್ರಪ್ರದೇಶದ ಎರಡು ಜಿಲ್ಲೆಗಳು ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಆಹಾರ ಮಳಿಗೆಗಳು ಉತ್ಸವದಲ್ಲಿ ಭಾಗವಹಿಸಲಿದ್ದು, ಜನರಿಗೆ ಹೊಸ ಅನುಭವ ಮತ್ತು ಪರಿಚಯ ದೊರಕುವಂತಾಗಬೇಕು ಎಂದು ಹೇಳಿದರು.

ಸರ್ಕಾರದ ವಿವಿಧ ಯೋಜನೆಗಳ ಪ್ರಚಾರದೊಂದಿಗೆ ಉತ್ಸವವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕು. ಉತ್ಸವದಲ್ಲಿ ಭಾಗವಹಿಸುವ ಎಲ್ಲಾ ಫಲಾನುಭವಿಗಳ ನೊಂದಣಿ ಕಡ್ಡಾಯವಾಗಿದೆ ಎಂದು ಸಿಇಓ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಯೋಜನಾ ನಿರ್ದೇಶಕ ಡಾ. ಟಿ. ರೋಣಿ, ಲೆಕ್ಕಾಧಿಕಾರಿ ವಿಜಯಶಂಕರ್, ಹಿರಿಯ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಓಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News