ಹಟ್ಟಿ ಪಟ್ಟಣದಲ್ಲಿ ಆ.6ರಂದು ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಯಶಸ್ವಿಗೊಳಿಸಿ : ಸಚಿವ ಬೋಸರಾಜು
ರಾಯಚೂರು :ಹಟ್ಟಿ, ಲಿಂಗಸುಗೂರ ಮತ್ತು ಸಿರವಾರ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಹಾಗೂ ರಾಯಚೂರು ಜಿಲ್ಲೆಯ ಇನ್ನೀತರ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆ.6ರಂದು ಹಟ್ಟಿ ಪಟ್ಟಣದಲ್ಲಿ ನಿಗದಿಯಾದ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಾಯಚೂರು ಸಿಟಿಯಲ್ಲಿನ ತಮ್ಮ ಕಚೇರಿಯಲ್ಲಿ ಆ.5ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಇದ್ದೇವೆ. ಎಲ್ಲರು ಸೇರಿ ಆ.6ರಂದು ಹಟ್ಟಿಯಲ್ಲಿ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯು ಕರ್ನಾಟಕ ಸರ್ಕಾರದ ಚಿನ್ನ ಉತ್ಪಾದಿಸುವ ಏಕೈಕ ಕಂಪನಿಯಾಗಿದೆ. ಸಿಬ್ಬಂದಿಯ ಕಾರ್ಮಿಕರ ಕಲ್ಯಾಣಕ್ಕಾಗಿ ಕಂಪನಿಯು ಅನೇಕ ಯೋಜನೆಗಳನ್ನು ರೂಪಿಸಿದೆ.
ಮುಂದುವರೆದ ಭಾಗವಾಗಿ ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ ಎಂದು ಸಚಿವರು ತಿಳಿಸಿದರು.