ರಾಯಚೂರಿನಲ್ಲಿ ಸಚಿವರಿಂದ 2ನೇ ದಿನವೂ ಬರ ಅಧ್ಯಯನ

ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೆ ಸೂಕ್ತ ಪರಿಹಾರ: ಸಚಿವ ಡಾ.ಅಜಯ್ ಧರ್ಮಸಿಂಗ್

Update: 2026-08-08 16:37 IST

ರಾಯಚೂರು : ಜಿಲ್ಲೆಯಲ್ಲಿ ಬರ ಅಧ್ಯಯನ ಕೈಗೊಂಡಿರುವ ನೂತನ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ಎರಡನೇ ದಿನವೂ ಜಿಲ್ಲೆಯ ವಿವಿಧ ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು.

ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ಜಮೀನಿನಲ್ಲಿ ಬೆಳೆ ಹಾನಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಳೆಯ ಕೊರತೆ ಹಾಗೂ ಕೃಷಿ ಬಿಕ್ಕಟ್ಟಿನಿಂದಾಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದರು.

ಪ್ರತಿವರ್ಷ ಜಿಲ್ಲೆಯಲ್ಲಿ ಕನಿಷ್ಠ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. ಆದರೆ ಈ ಬಾರಿ ಕೇವಲ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಹತ್ತಿ ಹಾಗೂ 7 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬೆಳೆ ಸೇರಿದೆ ಎಂದು ತಿಳಿಸಿದರು.

ಮಸ್ಕಿಯಿಂದ ಸಿಂಧನೂರುವರೆಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ನೇರವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ರೈತರಿಗೆ ಸೂಕ್ತ ನೆರವು :

ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೂ ಸೂಕ್ತ ಪರಿಹಾರ ಹಾಗೂ ಅಗತ್ಯ ಕೃಷಿ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಯಾವುದೇ ತೊಂದರೆಯಾಗದಂತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಒದಗಿಸಲು ಬದ್ಧರಾಗಿದ್ದೇವೆ ಎಂದು ಸಚಿವರು ಭರವಸೆ ನೀಡಿದರು.

ವಿವಿಧ ಪ್ರದೇಶಗಳಿಗೆ ಭೇಟಿ :

ಶನಿವಾರ ಬೆಳಿಗ್ಗೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸರ್ಕಿಟ್ ಹೌಸ್‌ನಿಂದ ಬರ ಅಧ್ಯಯನ ಪ್ರವಾಸ ಮುಂದುವರಿಸಿದ ಸಚಿವರು, ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಹಾನಿಗೊಳಗಾದ ತೊಗರಿ ಬೆಳೆಯನ್ನು ಪರಿಶೀಲಿಸಿದರು.

ಬಳಿಕ ಗುಡದೂರು ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಹಾನಿಗೊಳಗಾದ ಸೂರ್ಯಕಾಂತಿ, ತೊಗರಿ ಹಾಗೂ ಹತ್ತಿ ಬೆಳೆಗಳ ಸ್ಥಿತಿಗತಿ ವೀಕ್ಷಿಸಿದರು. ಹಸಮಕಲ್ ಗ್ರಾಮದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆರೆಯನ್ನೂ ಪರಿಶೀಲಿಸಿದರು.

ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಹಾನಿಗೊಳಗಾದ ಹತ್ತಿ ಬೆಳೆ ಹಾಗೂ ಬನ್ನಿಗನೂರು ಗ್ರಾಮದಲ್ಲಿ ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳನ್ನು ವೀಕ್ಷಿಸಿದರು.

ನಂತರ ಮಾನ್ವಿ ತಾಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ಪೋತ್ನಾಳ ಗ್ರಾಮಕ್ಕೆ ತೆರಳಿ ತೇವಾಂಶ ಕೊರತೆಯಿಂದ ಹಾನಿಗೊಳಗಾದ ಹತ್ತಿ ಬೆಳೆಯನ್ನು ಪರಿಶೀಲಿಸಿದರು. ಬಳಿಕ ಮಾನ್ವಿ ಪ್ರವಾಸ ಮಂದಿರದಲ್ಲಿ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು, ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣ್ಣೆಪ್ಪ ಕಲಶೆಟ್ಟಿ, ಸಿಂಧನೂರು ತಹಶಿಲ್ದಾರ್ ಅರುಣ್ ಕುಮಾರ್ ದೇಸಾಯಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ಉಪ ನಿರ್ದೇಶಕ ನಹೀಂ ಹುಸೇನ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News