ಟೋಲ್ ಗೇಟ್ ಬಂದ್ ಮಾಡಲು ಅಹೋರಾತ್ರಿ ಧರಣಿ ನಡೆಸಿದ ಶಾಸಕಿ ಕರೆಮ್ಮ ಜಿ ನಾಯಕ
ರಾಯಚೂರು: ದೇವದುರ್ಗ ವ್ಯಾಪ್ತಿಯಲ್ಲಿ ಬರುವ ಟೋಲ್ ಗೇಟ್ ಗಳು ಬಂದ್ ಮಾಡಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ಬಳಿ ಶಾಸಕಿ ಕರೆಮ್ಮ ಜಿ ನಾಯಕ ಅವರು ಶುಕ್ರವಾರ ರಾತ್ರಿ ಅಹೋರಾತ್ರಿ ಧರಣಿ ನಡೆಸಿದರು.
ಟೋಲ್ ಗೇಟ್ ಬಂದ್ ಮಾಡಲು ಒತ್ತಾಯಿಸಿ ನಿನ್ನೆ ಕೆಡಿಪಿ ಸಭೆಯಲ್ಲಿ ನೆಲದ ಮುಂದೆ ಧರಣಿ ನಡೆಸಿದ್ದರು ಇದಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲರು ಲೋಕೋಪಯೋಗಿ ಸಚಿವರ ಬಳಿ ಮಾತಾಡುವೆ ಎಂದು ಹೇಳಿ ತಾತ್ಕಾಲಿಕವಾಗಿ ಬಂದ್ ಮಾಡಲು ಡಿ.ಸಿ ಅವರಿಗೆ ಮೌಖಿಕ ಆದೇಶ ನೀಡಿದ್ದರು. ನಾನು ಮನೆಗೆ ಹೋಗುವ ಮೊದಲೇ ಬಂದ್ ಆಗದಿದ್ದರೆ ಹೋರಾಟ ಮಾಡುತ್ತೇನೆಂದು ಎಚ್ಚರಿಕೆಯೂ ನೀಡಿದ್ದರು.
ಆದರೆ ಯಥಾಪ್ರಕಾರ ಟೋಲ್ ಗೇಟ್ ಕಾರ್ಯ ನಿರ್ವಹಿಸುತ್ತಿರುವುದರಿಂದ ಕೊಟ್ಟ ಮಾತು ಉಳಿಸದ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕಿ ಕರೆಮ್ಮ ನಾಯಕ ಅಹೋರಾತ್ರಿ ಧರಣಿ ನಡೆಸಿದರು.
ದೇವದುರ್ಗ ತಾಲ್ಲೂಕು ಕಾಕರಗಲ್ ಟೋಲ್ ಗೇಟ್ ಬಳಿ ನೂರಾರು ಕಾರ್ಯಕರ್ತರು ಸೇರಿ ಜಮಾಯಿಸಿ ಹೆದ್ದಾರಿ ತಡೆದು ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಸಭೆಯಲ್ಲಿ ಟೋಲ್ ಗೇಟ್ ಶಾಶ್ವತವಾಗಿ ಮುಚ್ಚಬೇಕು ಎಂದು ಪಟ್ಟು ಹಿಡಿದಾಗ ಸಚಿವರು ಜಿಲ್ಲಾಧಿಕಾರಿಗೆ ತಿಳಿಸಿ ತಾತ್ಕಾಲಿಕವಾಗಿ ಮುಚ್ಚುತ್ತೇವೆ ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂಪಡೆಯಲಾಗಿತ್ತು. ಆದರೂ ಟೋಲ್ ಗೇಟ್ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕ ತೀವ್ರ ಆಕ್ರೋಶವಾಗಿದೆ. ಭರವಸೆ ಕೇವಲ ಮಾತಿನ ಮಟ್ಟಿಗೆ ಮಾತ್ರ. ನಾವು ಮತ್ತೆ ಮತ್ತೆ ಮನವಿ ಮಾಡಿದರೂ ಸ್ಪಂದನೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.