ಮೋದಿಯವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ : ಸಚಿವ ಸಂತೋಷ್ ಲಾಡ್
ರಾಯಚೂರಿನಲ್ಲಿ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ
ರಾಯಚೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದಲ್ಲಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡುವ ಭರವಸೆ ನೀಡಿ ನಮ್ಮ ಸರ್ಕಾರದ ಯೋಜನೆಗಳನ್ನೇ ನಕಲು ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸಾರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕವಾಗಿ ಸಬಲರಾಗಿದ್ದಾರೆ. ರಾಜ್ಯದ ಜನರಿಗೆ ವರ್ಷಕ್ಕೆ 65 ಸಾವಿರ ರೂ., ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ತಲುಪುತ್ತಿದೆ. ಇಷ್ಟು ಪ್ರಮಾಣದ ಹಣ ಜನರ ಕೈಗೆ ತಲುಪಿಸುವ ಸರ್ಕಾರ ದೇಶದಲ್ಲಿ ಬೇರೆಡೆ ಇಲ್ಲ ಎಂದರು.
ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತಿದೆ ಎಂದು ಹೇಳುತ್ತಿದ್ದರೂ, ಬಿಹಾರ ಚುನಾವಣೆ ಗೆಲ್ಲಲು ಅದೇ ರೀತಿಯ ಭರವಸೆ ನೀಡಬೇಕಾಗಿದೆ ಎಂದು ಸಚಿವರು ವ್ಯಂಗ್ಯವಾಡಿದರು.
“ಮೋದೀಜೀ, ಝೂಟ್ ಮತ್ ಬೋಲೋ, ಖುದಾಕೆ ಪಾಸ್ ಜಾನಾ ಹೈ… ವಹಾ ನಾ ಹಾಥಿ ಹೈ, ನಾ ಘೋಡಾ ಹೈ, ಪೈದಲ್ ಹೀ ಜಾನಾ ಹೈ,” ಎಂದು ಸಚಿವ ಲಾಡ್ ಅವರ ಟೀಕೆ ಸಭಾಂಗಣದಲ್ಲಿ ನಗೆಯರಳಿಸಿತು.
ಮೋದಿಯವರ 4 ಟ್ರಿಲಿಯನ್ ಆರ್ಥಿಕತೆಯ ಕುರಿತ ಹೇಳಿಕೆಯನ್ನು ಪ್ರಶ್ನಿಸಿದ ಲಾಡ್, “ನಮ್ಮ ದೇಶದ ತಲಾ ಆದಾಯ ಕೇವಲ 2 ಲಕ್ಷ ರೂ. ಜಪಾನ್‌ನಲ್ಲಿ 30 ಲಕ್ಷ ರೂ., ಚೈನಾದಲ್ಲಿ 19 ಟ್ರಿಲಿಯನ್ ಎಕಾನಮಿ ಇದೆ. ಹೀಗಿದ್ದರೂ ನಮ್ಮದನ್ನು ‘ಟ್ರಿಲಿಯನ್ ಸಾಧನೆ’ ಎಂದು ಹೆಮ್ಮೆಯಿಂದ ಹೇಳುವುದು ಅರ್ಥಹೀನ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಆಶಾದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಮತ್ತು ಸಿನೆಮಾ ಕಾರ್ಮಿಕರ ಸುಂಕ ಅಧಿನಿಯಮ ಸೇರಿದಂತೆ ಹಲವು ನೂತನ ಯೋಜನೆಗಳು ಇಡೀ ದೇಶದ ಗಮನ ಸೆಳೆದಿವೆ ಎಂದರು.
101 ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಸುಮಾರು 30–40 ಲಕ್ಷ ಜನರಿಗೆ ಉಚಿತ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 25,45,607 ಕಾರ್ಮಿಕರು ನೋಂದಾಯಿತರಾಗಿದ್ದಾರೆ. ರಾಯಚೂರು ಜಿಲ್ಲೆಯ 58,240 ಕಾರ್ಮಿಕರಿಗೆ ಕಾರ್ಡ್ ವಿತರಿಸಲಾಗಿದೆ ಎಂದರು.
ರಾಜ್ಯದಲ್ಲಿ 5 ಲಕ್ಷ ಗಿಗ್ ಕಾರ್ಮಿಕರಿದ್ದು, ಅವರಿಗೆ ಸಾಮಾಜಿಕ ಭದ್ರತಾ ಯೋಜನೆ ನೀಡಲು ಕರಡು ಸಿದ್ಧವಾಗಿದೆ. ಇದು ದೇಶದ ಮೊದಲ ರಾಜ್ಯ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದರು.
ಪ್ರತಿ ಗಂಟೆಗೆ ಆರು ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರ ಮನವಿಗೆ ಸ್ಪಂದಿಸಿ, ರಾಯಚೂರಿನಲ್ಲಿ ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆ ಸ್ಥಾಪನೆಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ಹಂಪಯ್ಯ ನಾಯಕ ಸಾಹುಕಾರ್, ಜಿಲ್ಲಾಧಿಕಾರಿ ನಿತಿಶ್ ಕೆ., ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.